ತಪ್ಪಿಸಿಕೊಂಡವರು….
ಕಲ್ಡೇರ್ ಮಹ್ಮದ್ ತೆಗೆದರೆ ಸಿನೆಮಾ ತೆಗೆಯಬೇಕು ಎಂದು ಸದಾ ಯೋಚಿಸುತ್ತಿದ್ದ. ಪಿಯುಸಿ ಫೇಲಾಗಿ ಊರು ಸೇರಿದ ಮೇಲೆ ಈ ಯೋಚನೆ ಆತನ ತಲೆಯಲ್ಲಿ ಓಡುತ್ತಿತ್ತು. ಎಲ್ಲರ ಎದುರಿಗೆ ನಾನು ಅದ್ಭುತ ಸಿನೆಮಾ ಮಾಡುತ್ತೇನೆ ನೋಡುತಿರಿ ಎಂದು ಹೇಳುತ್ತಿದ್ದ. ಇದಕ್ಕೆ ಹಣಬೇಕಲ್ಲವೇ ಅದಕ್ಕಾಗಿ ಡಾ. ತಿರ್ಮೂಲಿ ಮತ್ತು ಹುಜುರ್‌ಚಂದ್ರನಿಗೆ ಮನವಿ ಮಾಡಿದಾಗ ಅವರು ಫೈನಾನ್ಸ್ ಮಾಡಲು ಒಪ್ಪಿಕೊಂಡರು. ಎಲ್ಲ ಡಿಟೇಲ್ಸ್ ಕೊಡಿ ಎಂದು ಕೇಳಿದ್ದರು. ಎರಡುನೂರು ಪೇಜಿನ ನೋಟ್‌ಬುಕ್‌ನಲ್ಲಿ ಸಿನೆಮಾಕ್ಕೆ ಏನೇನು ಬೇಕು… ಏನೇನು ಬೇಡ… ಎಷ್ಟು ಖರ್ಚಾಗುತ್ತದೆ. ಲೊಕೇಶನ್ ಎಲ್ಲೆಲ್ಲಿ ಎಂದು ಮಮದ್ ಕೊಟ್ಟಿದ್ದ. ತಿರ್ಮೂಲಿ ಮತ್ತು ಹುಜುರ್‌ಚಂದ್ರ ಡಿಸ್‌ಕಸ್ ಮಾಡಿ ತಿಳಿಸುತ್ತೇವೆ ಡೋಂಟ್ ವರಿ ಅಂದಿದ್ದರು. ಈ ಮಾತೇ ಮಮದನಿಗೆ ಹೆಚ್ಚು ಆತ್ಮವಿಶ್ವಾಸ ತಂದಿತ್ತು. ಕೆಲವರು ಹೌದೂ ನಿನ್ನ ಸಿನೆಮಾದ ಕಥೆ ಏನು? ಹೀರೋ ಯಾರು ಹಿರೋಯಿನ್ ಯಾರು? ಖಳನಾಯಕ ಯಾರು? ಹಾಸ್ಯನಟನ ಪಾತ್ರಕ್ಕೆ ಯಾರನ್ನ ಆಯ್ಕೆ ಮಾಡಿದ್ದೀರಿ… ಕಾಲ್‌ಶೀಟ್ ಸಿಕ್ಕಿತಾ ಎಂದು ಕೇಳುತ್ತಿದ್ದರು. ಆಗ ಮಮದ ಕಥೆ ಹುಡುಕಲು ಆರಂಭಿಸಿದ. ಕಥೆಯನ್ನು ನಾನೇ ಹುಡುಕಬೇಕು ಅದರಲ್ಲೂ ಘಟನೆಗಳು ಸಿಕ್ಕರೆ ನನಗೆ ಸಂಭಾಷಣೆ ಬರೆಯುವುದಕ್ಕೆ ಅನುಕೂಲವಾಗುತ್ತದೆ ಎಂದು ಅಂದುಕೊಂಡ. ಅಂದಿನಿಂದ ಕಥೆ ಹುಡುಕಲು ಆರಂಭಿಸಿದ. ಅವತ್ತು ಲಾದುಂಚಿಗೆ ಹೋಗಿ ರಾಜನನ್ನು ಭೇಟಿಯಾಗಿ ಹಾಗೇ ಸುಮ್ಮನೇ ಮಾತನಾಡುತ್ತಿದ್ದ. ನಾನು ಜೀವನದಲ್ಲಿ ಏನೇನು ಅನುಭವಿಸಿದ್ದೀನಿ ಗೊತ್ತ? ಎಂದು ರಾಜ ಕೇಳಿದ…ಮಮದನ ತಲೆಯಲ್ಲಿ ರೊಂಯ್ಯನೇ ವಿಚಾರ ಹೊಳೆಯಿತು. ಇದನ್ನು ಕೇಳಿ ಕಥೆ ಮಾಡಿದರಾಯಿತು ಎಂದು ಅದೇನು ಮಾಮಾ ನಿನ್ನ ಕಥೆ ಅಂದ. ಅದಕ್ಕೆ ಈಗ್ಗೆ ಇಪ್ಪತ್ತೈದು ವರ್ಷಗಳ ಹಿಂದಿನ ಲವ್‌ಸ್ಟೋರಿ ನನ್ನದು ಎಂದು ಹೇಳುತ್ತ… ಅವತ್ತು ನಾನು ಮತ್ತು ಅವಳು ಇಬ್ಬರೂ ಸೇರಿ ಓಡಿ ಹೋದೆವು. ನಮ್ಮ ಮತ್ತು ಅವರ ಮನೆಯವರು ಹುಡುಕಲು ಬಂದಿದ್ದು, ನಂತರ ಎರಡೂ ಮನೆಯವರು ಮರ್ಯಾದೆಗೆ ಅಂಜಿ ಇಬ್ಬರೂ ಜಾತ್ರೆಗೆ ಹೋದಾಗ ತಪ್ಪಿಸಿಕೊಂಡಿದ್ದಾರೆ ಎಂದು ಸುದ್ದಿಹಬ್ಬಿಸಿದ್ದು, ಕಿಸೆಯಲ್ಲಿನ ಹಣ ಖರ್ಚಾಗಿ ವಾಪಸ್ ಊರಿಗೆ ಬಂದು ನಮ್ಮನ್ನು ಕಳ್ಳರು ಹಿಡಿದುಕೊಂಡು ಹೋಗಿದ್ದರು. ತಪ್ಪಿಸಿಕೊಂಡು ಬಂದೆವು ಎಂದು ಹೇಳಿದ್ದು, ಅವಳ ಮನೆಯವರು ರಾತ್ರೋರಾತ್ರಿ ನನ್ನನ್ನು ಹೊಲಕ್ಕೆ ಕರೆಯಿಸಿಕೊಂಡು ಹಣ್ಣುಗಾಯಿ ನೀರುಗಾಯಿ ಮಾಡಿದ್ದು, ನಂತರ ಆಕೆಯ ಮದುವೆ ಬೇರೆಕಡೆ ಆಗಿದ್ದು, ಈಗಲೂ ನನ್ನ ಮದುವೆ ಆಗದಿರುವುದು ಎಲ್ಲ ಹೇಳಿ ಬೀಡಿ ಹಚ್ಚಿದ. ಈ ಕಥೆಯನ್ನು ಪ್ರತ್ಯೇಕವಾಗಿ ಸಂಭಾಷಣೆ ಬರೆದು ತಿರ್ಮೂಲಿ ಹತ್ತಿರ ಡಿಸ್‌ಕಸ್‌ಗೆ ಹೋಗಿ ಕಥೆ ಹೇಳಿದಾಗ… ತಿರ್ಮೂಲಿ ಮಮದನ ಕಪಾಳಕ್ಕೆ ಫಟೀರನೇ ಹೊಡೆದ. ಯಾಕೆ ಸಾರ್ ಅಂದಾಗ… ತಪ್ಪಿಸಿಕೊಂಡ ಅವಳು ಬೇರೆ ಯಾರೂ ಅಲ್ಲ ನನ್ನ ತಂಗಿ… ನಡೀ ಅತ್ಲಾಗೆ ಇನ್ನೊಂದು ಸಲ ಬರಬೇಡ ಎಂದು ಹೊರಹಾಕಿದ.