ತಲೆ ಕೆಡೆಸಿಕೊಳ್ಳಬೇಡಿ…!
ಮಾತು ಮಾತಿಗೂ ತಲೆ ಕೆಡೆಸಿಕೊಳ್ಳಬೇಡಿ ಎಂದು ಹೇಳುತ್ತಿದ್ದ ತಿಗಡೇಸಿಯ ಹಣೆಬರಹ ಯಾಕೋ ನೆಟ್ಟಗಿಲ್ಲ. ಅವತ್ತು ಮೂಡಾ ಪಾಡಾ ಎಂದು ಸಿಕ್ಕಾಪಟ್ಟೆ ಟೆನ್ಷನ್ನಲ್ಲಿದ್ದ ಮದ್ರಾಮಣ್ಣನವರಿಗೆ ಕರೆ ಮಾಡಿ, ಸಾಹೇಬ್ರೆ ನಮ್ಮ ಕೆಲಸ ಮಾಡಿಕೊಡಿ… ಈ ಬಾರಿ ಟಿಕೆಟ್ ಕೊಡಿ ನೀವು ಏನೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದ. ಪಂ. ಲೇವಣ್ಣರನ್ನು ಭೇಟಿಯಾಗಿ ಅದು ಇದು ಮಾತನಾಡಿ… ಸಾಹೇಬ್ರೆ ನೀವೇನೂ ತಲೆ ಕೆಡೆಸಿಕೊಳ್ಳಬೇಡಿ ಎಂದು ಹೇಳಿದ್ದ. ಪಕ್ಕದ ಮಹಾರಾಷ್ಟ್ರದ ಏಕನಾಥನು ಅದ್ಯಾರಿಗೋ ಮಾಡುವುದಕ್ಕೆ ಹೋಗಿ ತಿಗಡೇಸಿ ನಂಬರ್ಗೆ ಮಾಡಿಬಿಟ್ಟಿದ್ದ. ಆ ಕಡೆಯಿಂದ ಐ ಯಾಮ್ ಏಕನಾಥ್ ಅಂದದ್ದಕ್ಕೆ… ಓಹೋ ನೀವಾ… ಆಗಿದ್ದಾಗಲಿ ನೀವೇನೂ ತಲೆಕೆಡೆಸಿಕೊಳ್ಳಬೇಡಿ ಎಂದು ಹೇಳಿದ. ಅರೆ ಎಂದು ಆ ಕಡೆಯಿಂದ ಕಾಲ್ ಕಟ್ ಮಾಡಿದರು. ಸ್ವಲ್ಪ ಖಾಲಿ ಇದ್ದರೆ ಸಾಕು ಅದ್ಯಾರಿಗೋ ಕಾಲ್ ಮಾಡುತ್ತಿದ್ದ ಆ ಕಡೆಯಿಂದ ಹಲೋ ಅಂದರೆ ಸಾಕು.. ಓಹೋ ನೀವು ಇವರಲ್ಲವೇ ಎಂದಾಗ ಆ ಕಡೆಯಿಂದ ಹೌದು ಎಂದರೆ ಸಾಕು.. ನೀವು ಟೆನ್ಷನ್ ಮಾಡಿಕೊಂಡು ತಲೆ ಕೆಡೆಸಿಕೊಳ್ಳಬೇಡಿ ಎಂದು ಹೇಳುತ್ತಿದ್ದ. ಅವತ್ತು ಸುಮ್ಮನೇ ಕೂಡಲಾರದೇ ಆ ಗುಮಿರ್ ಅಮದ್ ಕಾನ್ ಗೆ ಕಾಲ್ ಮಾಡಿದ. ಆ ಕಡೆಯಿಂದ ಅಲೋ ಅಂದ ಕೂಡಲೇ ತಿಗಡೇಸಿಯು ಖುಷಿಯಿಂದ ನಾನ್ ಕಣ್ರೀ ಅಂದಾಗ… ಕಂಗಾಚುಲೇಸ್ಯನ್ ಅಂದರು ಗುಮೀರ. ಅರೆ ಇಸ್ಕಿ ನನಗ್ಯಾಕೆ ಹೀಗಂತಾನೆ ಎಂದು… ಹಲೋ ಬಾಸ್ ನಾನು ಅಂದಾಗ… ಅಬ್ಬಬ್ಬ… ಲಾಟರಿ.. ಲಾಟರಿ ಅಂದ. ಆದರೂ ತಿಗಡೇಸಿ… ಸಾಹೇಬ್ ನೀವೇನೂ ತಲೆ ಕೆಡೆಸಿಕೊಳ್ಳಬೇಡಿ ಎಂದು ಹೇಳಿ ಕಟ್ ಮಾಡಿದ. ಕ್ವಾರ್ಟರ್ ಕರಿಭೀಮಯ್ಯ ಮಾಡಬಾರದ ಬಿಜಿನೆಸ್ಸು, ಮಾಡಬಾರದ ಕೆಲಸ ಮಾಡಿ ಸಿಕ್ಕಾಪಟ್ಟೆ ಲಾಸ್ ಆಗಿದ್ದ. ಎಲ್ಲ ಜಂಜಡಗಳಿಂದ ಆತ ಸಿಕ್ಕಾಪಟ್ಟೆ ಡಿಪ್ರೆಷನ್ಗೆ ಬಂದಿದ್ದ. ಏನೇನೋ ಮಾತನಾಡುತ್ತಿದ್ದ. ಜನರೆಲ್ಲ ಆತನಿಗೆ ತಲಿ ಕೆಡಿಸಿಕೊಂಡಿದ್ದಾನೆ. ತಲಿ ಬರೋಬ್ಬರಿ ಇಲ್ಲ ಅನ್ನುತ್ತಿದ್ದರು. ಯರಾದರೂ ತಲಿ ಕೆಡಿಸಿಕೊಳ್ಳಬೇಡಿ ಅಂದಾಗ ಸಿಟ್ಟಿಗೆದ್ದು ಬಡಿಯುತ್ತಿದ್ದ. ಅವತ್ತೊಂದು ದಿನ ಎದುರಿಗೆ ಭೇಟಿಯಾದ ಕರಿಭೀಮಯ್ಯನಿಗೆ ನೀನು ತಲಿಕೆಡಿಸಿಕೊಳ್ಳಬೇಡ ಅಂದಾಗ ಕರಿಭೀಮಯ್ಯ ಸಿಕ್ಕಾಪಟ್ಟೆ ಸಿಟ್ಟಿಗೆದ್ದು ತಿಗಡೇಸಿಗೆ ಎಂಟು ದಿನ ಅಡ್ಮಿಟ್ ಆಗುವಂಗೆ ಬಡಿದ. ಅಂದಿನಿಂದ ತಿಗಡೇಸಿ ಬಾಯಿಂದ ತಲೆ ಕೆಡಿಸಿಕೊಳ್ಳಬೇಡಿ ಎಂಬ ಶಬ್ದ ಬರಲಿಲ್ಲ.