For the best experience, open
https://m.samyuktakarnataka.in
on your mobile browser.

ನ್ಯಾಯಯುತ ಇತ್ಯರ್ಥಕ್ಕೆ ಸಿಬಿಐ ತನಿಖೆಯೊಂದೇ ಮಾರ್ಗ

11:06 AM Jun 01, 2024 IST | Samyukta Karnataka
ನ್ಯಾಯಯುತ ಇತ್ಯರ್ಥಕ್ಕೆ ಸಿಬಿಐ ತನಿಖೆಯೊಂದೇ ಮಾರ್ಗ

ಬೆಂಗಳೂರು: ಸಿಐಡಿ ತನಿಖೆ, ಎಸ್ ಐಟಿ ತನಿಖೆ ಅಂತ ಕಾಲಹರಣ ಮಾಡಿ, ಕೊನೆಗೆ ಪ್ರಕರಣವನ್ನ ಮುಚ್ಚಿ ಹಾಕುವ ನಿಮ್ಮ ಹುನ್ನಾರವನ್ನ ಅರಿಯದಷ್ಟು ಅಮಾಯಕರಲ್ಲ ಕರ್ನಾಟಕದ ಜನತೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹರಿಹಾಯ್ದಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯ ಆತ್ಮಹತ್ಯೆ ಹಾಗು 185 ಕೋಟಿ ಅವ್ಯವಹಾರ ಪ್ರಕರಣದಲ್ಲಿ ಬ್ರಹ್ಮಾಂಡ ಭ್ರಷ್ಟಚಾರ ನಡೆದಿರುವುದು ಅತ್ಯಂತ ಸ್ಪಷ್ಟವಾಗಿದ್ದರೂ ಸಚಿವ ಬಿ ನಾಗೇಂದ್ರ, ನಿಗಮದ ಅಧ್ಯಕ್ಷ ಹಾಗು ಭ್ರಷ್ಟ ಅಧಿಕಾರಿಗಳನ್ನು ರಕ್ಷಣೆ ಮಾಡಲು ಹೊರಟಿದೆ ಈ ಲಜ್ಜೆಗೆಟ್ಟ ಕರ್ನಾಟಕ ಕಾಂಗ್ರೆಸ್‌ ಸರ್ಕಾರ. ಸಿಎಂ ಸಿದ್ದರಾಮಯ್ಯನವರೇ, ಈ ಹಗರಣದಲ್ಲಿ ದಲಿತರ ದುಡ್ಡು ಲೂಟಿಯಾಗಿರುವುದು ಒಂದು ಕಡೆಯಾದರೆ, ಒಬ್ಬ ಅಮಾಯಕ ಹಾಗು ಪ್ರಾಮಾಣಿಕ ಅಧಿಕಾರಿಯ ಬಲಿಯಾಗಿದೆ.

ಹತ್ತಾರು ಕಂಪನಿಗಳಿಗೆ ನೂರಾರು ಕೋಟಿ ಮೌಲ್ಯದ ಅಂತರರಾಜ್ಯ ಹಣ ವರ್ಗಾವಣೆ ನಡೆದರುವ ಈ ಪ್ರಕರಣದ ನ್ಯಾಯಯುತ ಇತ್ಯರ್ಥಕ್ಕೆ ಸಿಬಿಐ ತನಿಖೆಯೊಂದೇ ಮಾರ್ಗ.

ಹಗರಣ ಇಷ್ಟು ಗಂಭೀರವಾಗಿದ್ದರೂ ಸಿಐಡಿ ತನಿಖೆ, ಎಸ್ ಐಟಿ ತನಿಖೆ ಅಂತ ಕಾಲಹರಣ ಮಾಡಿ, ಕೊನೆಗೆ ಪ್ರಕರಣವನ್ನ ಮುಚ್ಚಿ ಹಾಕುವ ನಿಮ್ಮ ಹುನ್ನಾರವನ್ನ ಅರಿಯದಷ್ಟು ಅಮಾಯಕರಲ್ಲ ಕರ್ನಾಟಕದ ಜನತೆ.

ನಿಮ್ಮ ನಾಟಕವನ್ನ ಸಾಕು ಮಾಡಿ ಈ ಕೂಡಲೇ ಈ ಪ್ರಕರಣವನ್ನ ಸಿಬಿಐಗೆ ವಹಿಸಿ. ಮೃತ ಅಧಿಕಾರಿಯ ಕುಟುಂಬಕ್ಕೆ, ಪರಿಶಿಷ್ಟ ಪಂಗಡ ಸುದಾಯಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿ. ಭ್ರಷ್ಟ ಸಚಿವ ಬಿ ನಾಗೇಂದ್ರ ಅವರನ್ನು ಸಂಪುಟದಿಂದ ಕಿತ್ತೊಗೆದು ನಿಮ್ಮ ಸರ್ಕಾರದ ಮರ್ಯಾದೆ ಉಳಿಸಿಕೊಳ್ಳಿ ಎಂದಿದ್ದಾರೆ.