ಬಿಜೆಪಿಯಲ್ಲಿ ಮೂವರು ಬಲಿ ಕಾ ಬಕ್ರಾ
ಚಿಕ್ಕೋಡಿ: ರಂಜಾನ್ ತಿಂಗಳಲ್ಲಿ ಬಿಜೆಪಿ ನಾಯಕರು ಮೂವರನ್ನು ಬಲಿ ಕಾ ಬಕ್ರಾ ಮಾಡುವುದಕ್ಕೆ ಸಿದ್ದತೆ ಮಾಡಿದ್ದಾರೆ ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ ಬಿಜೆಪಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಮೂರು ಬಲಿಕಾ ಬಕರಾ ಕುರಿಗಳು ತಯಾರು ಮಾಡಲಾಗಿದೆ. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್, ತುಮಕೂರು ವಿ.ಸೋಮಣ್ಣ, ಕೊಪ್ಪಳದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ್ ಕ್ಯಾವಟರ್ ಅವರು ಬಲಿಕಾ ಬಕರಾ ಆಗುತ್ತಾರೆ ಎಂದು ಭವಿಷ್ಯ ನುಡಿದರು.
ಬಿಜೆಪಿ ಯಾವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ ಮಾಡುತ್ತದೆ ಗೊತ್ತಿಲ್ಲ. ನಾನು ೨೫ ವರ್ಷ ಬಿಜೆಪಿಯಲ್ಲಿ ಇರುವುದರಿಂದ ನನಗೂ ಸದ್ಯದ ಆ ವ್ಯವಸ್ಥೆ ನೋಡಿ ಮುರುಕು ಹುಟ್ಟಿದೆ. ಮನಸ್ಸಿಗೆ ಒಂದು ರೀತಿ ಘಾಸಿಯಾಗುತ್ತದೆ. ಆದರೆ ನಾನು ಕಾಂಗ್ರೆಸ್ ಪಕ್ಷದಲ್ಲಿ ಇರುವುದರಿಂದ ಈ ಪಕ್ಷ ಬೆಳೆಸುತ್ತೇನೆ. ರಾಜ್ಯದಲ್ಲಿ ಕನಿಷ್ಠ ೨೦ ಸ್ಥಾನ ಗೆಲ್ಲುತ್ತೇವೆ ಎಂದು ಶಾಸಕ ಸವದಿ ವಿಶ್ವಾಸ
ವ್ಯಕ್ತಪಡಿಸಿದರು.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹಲವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅಲ್ಲಿ ವಿ.ಸೋಮಣ್ಣ ಅವರಿಗೆ ಟಿಕೆಟ್ ಕೊಡಲಾಗಿದೆ. ಇದರಿಂದ ಅಲ್ಲಿ ಹಲವು ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಅಸಮಾಧಾನ ಹೋಗಲಾಡಿಸಲು ಯಡಿಯೂರಪ್ಪನವರು ಸಂಧಾನಕ್ಕೆ ಹೊಗಿದ್ದರು. ಆ ಸಂದರ್ಭದಲ್ಲಿ ಮಾಧ್ಯಮದವರು `ಮಾಧುಸ್ವಾಮಿ ಪ್ರಚಾರಕ್ಕೆ ಹೋಗುತ್ತಾರಾ' ಎಂಬ ಪ್ರಶ್ನೆಗೆ ಬಿಎಸ್‌ವೈ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ. ಇದರಿಂದ ರಂಜಾನ್ ತಿಂಗಳಲ್ಲಿ ಬಲಿ ಕಾ ಬಕ್ರಾಗಳು ತಯಾರಾಗಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು.