ಭೌತಿಕ ವರ್ಗಾವಣೆ ಪತ್ರಕ್ಕೆ ಕಡಿವಾಣ
03:56 PM May 29, 2024 IST | Samyukta Karnataka
ಬೆಂಗಳೂರು: ವರ್ಗಾವಣೆ ಪತ್ರ ಇ-ಮೇಲ್ ಮೂಲಕವೇ ಸಂಬಂಧಿಸಿದ ಶಾಲೆಗೆ ಕಳುಹಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆ ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಒಂದು ಶಾಲೆ ತೊರೆದು ಮತ್ತೊಂದು ಶಾಲೆಗೆ ಸೇರುವ ಮಕ್ಕಳು, ಒಂದು ಹಂತ ಪೂರೈಸಿ ಮತ್ತೊಂದು ಹಂತಕ್ಕೆ ಸಾಗುವ ಮಕ್ಕಳಿಗೆ ಇದುವರೆಗೂ ವರ್ಗಾವಣೆ ಪತ್ರವನ್ನು ಭೌತಿಕವಾಗಿ ನೀಡಲಾಗುತ್ತಿತ್ತು. ಇದರಿಂದ ಶಾಲೆ ತೊರೆಯುವ ಮಕ್ಕಳನ್ನು ನಿಖರವಾಗಿ ಪತ್ತೆ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಈ ಬಾರಿ ಯಾವುದೇ ಮಗು ಮತ್ತೊಂದು ಶಾಲೆಗೆ ಸೇರಿದ ನಂತರ ಆ ಶಾಲೆಯಿಂದ ಮಗು ಕಲಿತ ಹಿಂದಿನ ಶಾಲೆಗೆ ಇ-ಮೇಲ್ ಮೂಲಕ ಕೋರಿಕೆ ಪತ್ರ ಸಲ್ಲಿಸಬೇಕು. ಶಾಲೆಯ ಸಂಖ್ಯೆ ನಮೂದಿಸುವುದು ಕಡ್ಡಾಯ. ಆ ನಂತರವೇ ವರ್ಗಾವಣೆ ಪತ್ರ ಇ-ಮೇಲ್ ಮೂಲಕವೇ ಸಂಬಂಧಿಸಿದ ಶಾಲೆಗೆ ಕಳುಹಿಸಲಾಗುತ್ತದೆ. ಇಂತಹ ಪ್ರಕ್ರಿಯೆಗೆ ಒಂದು ವಾರದ ಗಡುವು ನೀಡಲಾಗಿದೆ ಎಂದಿದೆ.