For the best experience, open
https://m.samyuktakarnataka.in
on your mobile browser.

ಮುಂಗಾರು ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ

07:08 PM Jun 08, 2024 IST | Samyukta Karnataka
ಮುಂಗಾರು ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ

ಬಾಗಲಕೋಟೆ/ ಕುಳಗೇರಿ ಕ್ರಾಸ್: ಮಲಪ್ರಭಾ ನದಿಯ ಮೇಲ್ಬಾಗದಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ನದಿಯ ಒಡಲು ತುಂಬಿ ಹರಿಯುತ್ತಿದೆ. ಉತ್ತಮ ಮಳೆ ಸುರಿಯುತ್ತಿರುವ ಪರಿಣಾಮ ಬತ್ತಿದ ಕೊಳವೆ ಭಾವಿಗಳಿಗೆ ಮರುಜೀವ ನೀಡಿದಂತಾಗಿದೆ. ಮುಂಗಾರು ಮಳೆಯಿಂದ ಮಲಪ್ರಭಾ ನದಿಯ ಅಚ್ಚುಕಟ್ಟು ಪ್ರದೇಶದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಈ ಬಾರಿ ಬಿಸಿಲು-ಗಾಳಿಗೆ ಬೇಸತ್ತಿದ್ದ ಜನ ಮಳೆ ಇಲ್ಲದೆ ಪರದಾಡುತ್ತಿದ್ದರು. ಮಳೆ ಕೊರತೆಯಿಂದ ಆತಂಕ ವಾತಾವರಣ ನಿರ್ಮಾಣವಾಗಿತ್ತು. ಕೆಲವು ಗ್ರಾಮಗಳಲ್ಲಿ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು.

ನದಿಯ ಮೇಲ್ಬಾಗ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಬಾರಿ ಪ್ರಮಾಣದ ಮಳೆಯಿಂದಾಗಿ ನದಿಗೆ ನೀರು ಹರಿದುಬರುತ್ತಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು ನದಿಯ ಪಾತ್ರದಲ್ಲಿನ ಬಹುತೇಕ ರೈತರ ಬೆಳೆಗಳು ಜಲಾವೃತಗೊಂಡಿವೆ. ಗೋವನಕೊಪ್ಪ ಗ್ರಾಮದ ಮಲಪ್ರಭಾ ನದಿಯ ಹಳೆಯ ಸೇತುವೆ ಅಂಚಿನಲ್ಲಿ ನೀರು ಹರಿಯುತ್ತಿದೆ. ಕಾರಣ ಮುಂಜಾಗೃತ ಕ್ರಮಗಳನ್ನ ಕೈಗೊಂಡ ಎಎಸ್‌ಐ ಎಸ್.ಬಿ.ಅಮಲಿಹಾಳ, ಸಿಬ್ಬಂದಿ ರವಿ ಮರೆನ್ನವರ ನದಿಯ ಪಕ್ಕದಲ್ಲಿರುವ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ. ನದಿಯ ದಡದಲ್ಲಿ ಬಟ್ಟೆ ತೊಳೆಯುವುದು, ಜಾನುವಾರುಗಳ ಮೈ ತೊಳೆಯುವುದು ಸೇರಿದಂತೆ ನದಿಯಲ್ಲಿ ಇಜುವುದು ಮಾಡಬಾರದು ಎಂದು ಗ್ರಾಮಸ್ಥರಿಗೆ ಮುಂಜಾಗೃತವಾಗಿ ಎಚ್ಚರಿಕೆ ಹೇಳುತ್ತಿದ್ದಾರೆ.