ರಾಜ್ಯವನ್ನು ದಿವಾಳಿ ಸ್ಥಿತಿಗೆ ತಂದ ಕಾಂಗ್ರೆಸ್
ಔರಾದ್ (ಬೀದರ): ಕಾಂಗ್ರೆಸ್ ದಿವಾಳಿಯಾಗಿದೆ. ಅವರಿಗೆ ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ. ಭ್ರಷ್ಟಾಚಾರದಲ್ಲಿ ತೊಡಗಿ ಕರ್ನಾಟಕ ರಾಜ್ಯವನ್ನು ದಿವಾಳಿ ಸ್ಥಿತಿಗೆ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಇಲ್ಲಿಯ ಹೊರವಲಯದಲ್ಲಿ ಗುರುವಾರ ಬಿಜೆಪಿಯಿಂದ ಆಯೋಜಿಸಲಾದ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್‌ನ್ನು ಬೇರು ಸಮೇತ ಕಿತ್ತು ಹಾಕಬೇಕಾಗಿದೆ. ಅದಕ್ಕೆ ಎಲ್ಲ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ಕಾಂಗ್ರೆಸ್‌ನ ಭ್ರಷ್ಟಾಚಾರಗಳು ತಿಳಿಸಬೇಕು. ಜತೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಅನುಷ್ಠಾನಕ್ಕೆ ತಂದಿರುವ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಕಾಂಗ್ರೆಸ್ ಸುಳ್ಳು ಅಪಪ್ರಚಾರ ಮಾಡುತ್ತಿದೆ. ಮತದಾರರು ಬಿಜೆಪಿಗೆ ಬೆಂಬಲಿಸಿ ಪಾಠ ಕಲಿಸಬೇಕು. ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಿಂದ ಚುನಾವಣೆ ಎದುರಿಸಲಾಗುತ್ತಿದೆ. ರಾಜ್ಯದ ೨೮ ಕ್ಷೇತ್ರದಲ್ಲಿಯೂ ಸುತ್ತಾಡಿದ್ದೇನೆ. ಎಲ್ಲ ಕಡೆಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮಾತನಾಡಿ, ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಮಾಡಿದ್ದೇನೆ. ಯಡಿಯೂರಪ್ಪ ಅವರು ನನಗೆ ಅನೇಕ ಸಲಹೆ ನೀಡಿದ್ದಾರೆ ಎಂದು ಸ್ಮರಿಸಿದರು. ರೈತರಿಗಾಗಿ, ಮಹಿಳೆಯರಿಗಾಗಿ, ಯುವಕರಿಗಾಗಿ ಸರ್ಕಾರದ ಮುಖಾಂತರ ಕೆಲಸ ಮಾಡಿದ್ದೇನೆ ಎಂದರು.
ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಶಾಸಕ ಅವಿನಾಶ ಜಾಧವ್ ಸೇರಿದಂತೆ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡರು.