ವಿತರಣೆ ಮಾಡಲೂ ನಿಮ್ಮ ಕೈಯಲ್ಲಿ ಆಗುತ್ತಿಲ್ಲ
ರೈತರಿಗೆ ತಲುಪಬೇಕಾದ ಬರ ಪರಿಹಾರ ಇನ್ನೂ ತಲುಪಿಲ್ಲ ಎಂದು ಸ್ವತಃ ತಮ್ಮ ಕಾಂಗ್ರೆಸ್ ಪಕ್ಷದ ಶಾಸಕರೇ ಪತ್ರ ಬರೆದು ತಮ್ಮ ಬಂಡವಾಳ ಬಯಲು ಮಾಡಿದ್ದಾರೆ ನೋಡಿ
ಬೆಂಗಳೂರು: ಕೇಂದ್ರ ಸರ್ಕಾರ ನೀಡಿರುವ ₹3,454 ಕೋಟಿ ರೂಪಾಯಿ ಬರ ಪರಿಹಾರವನ್ನಾದರೂ ರೈತರಿಗೆ ವಿತರಣೆ ಮಾಡಿ ಅಂದರೆ ಅದೂ ನಿಮ್ಮ ಕೈಯಲ್ಲಿ ಆಗುತ್ತಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಟೀಕೆ ಮಾಡಿದರೆ, ಜನರ ಸಮಸ್ಯೆಗಳಿಗೆ ದನಿಯಾದರೆ, ಅಜ್ಞಾನ ಪ್ರದರ್ಶನ ಮಾಡುತ್ತಾರೆ, ಮನರಂಜನೆ ನೀಡುತ್ತಾರೆ ಎಂದು ಅಧಿಕಾರದ ಮದವೇರಿದ ಸರ್ವಾಧಿಕಾರಿಯಂತೆ ದರ್ಪದ ಮಾತಾಡುತ್ತೀರಲ್ಲ ಸಿಎಂ ಸಿದ್ದರಾಮಯ್ಯನವರೇ, ರೈತರಿಗೆ ತಲುಪಬೇಕಾದ ಬರ ಪರಿಹಾರ ಇನ್ನೂ ತಲುಪಿಲ್ಲ ಎಂದು ಸ್ವತಃ ತಮ್ಮ ಕಾಂಗ್ರೆಸ್ ಪಕ್ಷದ ಶಾಸಕರೇ ಪತ್ರ ಬರೆದು ತಮ್ಮ ಬಂಡವಾಳ ಬಯಲು ಮಾಡಿದ್ದಾರೆ ನೋಡಿ.
ನವಲಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎಚ್.ಕೋನರೆಡ್ಡಿ ಅವರು ತಮ್ಮ ಕ್ಷೇತ್ರದಲ್ಲಿ ಇನ್ನೂ ಕೆಲವು ರೈತರಿಗೆ ಬರ ಪರಿಹಾರ ವಿತರಣೆ ಆಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತೆ, ನಿಮ್ಮ ಸರ್ಕಾರಕ್ಕಂತೂ ರೈತರಿಗೆ ಬರ ಪರಿಹಾರ ನೀಡುವ ಯೋಗ್ಯತೆ ಇಲ್ಲ. ಕನಿಷ್ಠ ಪಕ್ಷ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ನೀಡಿರುವ ₹3,454 ಕೋಟಿ ರೂಪಾಯಿ ಬರ ಪರಿಹಾರವನ್ನಾದರೂ ರೈತರಿಗೆ ವಿತರಣೆ ಮಾಡಿ ಅಂದರೆ ಅದೂ ನಿಮ್ಮ ಕೈಯಲ್ಲಿ ಆಗುತ್ತಿಲ್ಲ. ರೈತರ ಕಷ್ಟಕ್ಕೆ ಸ್ಪಂದಿಸಲಾಗದ ಸರ್ಕಾರ ಇದ್ದರೆಷ್ಟು ಹೋದರೆಷ್ಟು. ಬರ ಪರಿಹಾರ ಸಮಯಕ್ಕೆ ಸರಿಯಾಗಿ ರೈತರ ಕೈಸೇರುವಂತೆ ನೋಡಿಕೊಳ್ಳಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಅದು ಬಿಟ್ಟು ರೈತರ ಬದುಕಿನ ಜೊತೆ ಚೆಲ್ಲಾಟವಾಡಬೇಡಿ ಎಂದಿದ್ದಾರೆ