For the best experience, open
https://m.samyuktakarnataka.in
on your mobile browser.

ಷರತ್ತು ರಹಿತ ಬಿಜೆಪಿಗೆ ಮರಳಿದ್ದೇನೆ

04:07 PM Jan 28, 2024 IST | Samyukta Karnataka
ಷರತ್ತು ರಹಿತ ಬಿಜೆಪಿಗೆ ಮರಳಿದ್ದೇನೆ

ದಾವಣಗೆರೆ: ನಾನು ಯಾವುದೇ ಷರತ್ತು ಹಾಕಿ ಬಿಜೆಪಿಗೆ ಬಂದಿಲ್ಲ. ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡಲು ನನ್ನದೊಂದು ಅಳಿಲು ಸೇವೆ ಇರಲಿ ಎಂಬ ಕಾರಣಕ್ಕಾಗಿ ಸ್ವಪಕ್ಷಕ್ಕೆ ಮರಳಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಬಿಜೆಪಿ ಸೇರ್ಪಡೆ ನಂತರ ಹುಬ್ಬಳ್ಳಿಗೆ ತೆರಳುವ ಮಾರ್ಗಮಧ್ಯೆ ದಾವಣಗೆರೆಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿಗೆ ಮರಳಬೇಕೆಂದು ಕಳೆದ ಐದಾರು ತಿಂಗಳಿಂದ ಕಾಯಕರ್ತರ ಪಡೆ ಮತ್ತು ಪಕ್ಷದ ವರಿಷ್ಠರ ಒತ್ತಡವಿತ್ತು. ಕೇಂದ್ರದ ನಾಯಕರು ಕೂಡ ನನ್ನೊಂದಿಗೆ ಚರ್ಚೆ ನಡೆಸಿದರು. ಹಾಗಾಗಿ ಬಿಜೆಪಿಗೆ ಮರಳಿದ್ದೇನೆ, ಸ್ವಪಕ್ಷಕ್ಕೆ ಮರಳಿರುವ ಬಗ್ಗೆ ಖಷಿಯಿದೆ ಎಂದು ತಿಳಿಸಿದರು.
ಯಾವುದೇ ಷರತ್ತು ಹಾಕಿ ನಾನು ಬಿಜೆಪಿಗೆ ಸೇರ್ಪಡೆಗೊಳ್ಳಲಿಲ್ಲ. ಪಕ್ಷದ ವರಿಷ್ಠರು ತೀರ್ಮಾನ ಕೈಗೊಂಡು ಯಾವುದೇ ಜವಾಬ್ದಾರಿ ನೀಡಿದರೂ ನಾನು ಅದನ್ನು ನಿಭಾಯಿಸುತ್ತೇನೆ ಎಂದರು.
ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷಗಳಿಂದ ದೇಶಕ್ಕೆ ಉತ್ತಮ ಆಡಳಿತ ನೀಡಿದ್ದಾರೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಮೂರನೇ ಬಾರಿಯೂ ಅವರು ಗೆಲುವು ಕಾಣಬೇಕು. ಅವರ ಕೈ ಬಲಪಡಿಸಬೇಕೆಂಬುದು ದೇಶದ ಜನರ ಕೂಗು. ಆದ್ದರಿಂದ ಪಕ್ಷ ಸಂಘಟಿಸಿ ಲೋಕಸಭಾ ಚುನಾವಣೆಯಲ್ಲಿ ೧೫೦ ಸ್ಥಾನಗಳಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಬೇಕೆಂಬ ಇಚ್ಛೆಯಿಂದಲೇ ನಾನು ಪಕ್ಷಕ್ಕೆ ಮರಳಿದೆ ಎಂದು ಹೇಳಿದರು.
ಶಾಮನೂರು ಶಿವಶಂಕರಪ್ಪ ಅವರು ಬಿ.ವೈ. ರಾಘವೇಂದ್ರ ಅವರು ಗೆಲ್ಲಲಿ ಎಂದು ಎದುರಾಳಿ ಪಕ್ಷದವರನ್ನು ಹಾರೈಸಿರುವುದು ಒಳ್ಳೆಯ ಬೆಳವಣಿಗೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.