ಸೋರುತಿಹುದು ಶಾಲೆಗಳ ಮಾಳಿಗೆ….!
ರವೀಶ ಪವಾರ
ಧಾರವಾಡ: ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿ ಶಾಲೆಗಳನ್ನು ಉಳಿಸಿ ಎಂದೆಲ್ಲ ಹೇಳುತ್ತಾರೆ. ಆದರೆ, ಶಾಲೆಗಳನ್ನೇ ಉದ್ಧಾರ ಮಾಡದೇ ಮಕ್ಕಳನ್ನು ಕಳುಹಿಸಿ ಎಂದರೆ ಪಾಲಕರಾದರೂ ಹೇಗೆ ಕಳಿಸ್ಯಾರು…
ಬರುವ ದಿ.೨೯ರಿಂದ ಶಾಲೆಗಳು ಪ್ರಾರಂಭವಾಗುತ್ತವೆ. ಆದರೆ, ಇದಕ್ಕೂ ಪೂರ್ವದಲ್ಲಿಯೇ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಿಗೆ ಕಾಯಕಲ್ಪ ಕಲ್ಪಿಸಬೇಕಾಗಿದ್ದ ಶಿಕ್ಷಣ ಇಲಾಖೆ ಕೈಚೆಲ್ಲಿ ಕುಳಿತಿರುವುದು ಶಿಕ್ಷಣ ಪ್ರೇಮಿಗಳಿಗೆ ಮಾತ್ರವಲ್ಲದೇ ಕನ್ನಡ ಶಾಲೆ ಉಳಿವಿಗಾಗಿ ಧ್ವನಿ ಎತ್ತುವ ಪ್ರತಿಯೊಬ್ಬರಿಗೆ ಬೇಸರ ಮೂಡಿಸಿದೆ.
ಧಾರವಾಡ ಜಿಲ್ಲೆಯ ೮೫೩ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ೬,೬೩೫ ಕೊಠಡಿಗಳ ಪೈಕಿ ಬರೋಬ್ಬರಿ ೯೫೨ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಪ್ರತಿ ವರ್ಷ ಶಾಲಾ ಪ್ರಾರಂಭೋತ್ಸವದ ಸಂದರ್ಭದಲ್ಲಿ ಈ ಮಾತುಗಳು ಸರ್ವೇ ಸಾಮಾನ್ಯವಾಗಿ ಕೇಳಿಬರುತ್ತದೆ. ಆದರೆ, ಅವುಗಳಿಗೆ ಶಾಶ್ವತ ಕಾಯಕಲ್ಪ ಕಲ್ಪಿಸಬೇಕು ಎಂಬ ಕಿಂಚಿತ್ತು ಇಚ್ಛಾಶಕ್ತಿ ಮಾತ್ರ ಸ್ಥಳೀಯ ಜನಪ್ರತಿನಿಧಿಗಳಿಗೆ ಇಲ್ಲದಿರುವುದು ನೋವಿನ ಸಂಗತಿ ಎನ್ನುತ್ತದೆ ಪೋಷಕ ವಲಯ.
ಜಿಲ್ಲೆಗೆ ವಿದ್ಯಾಕಾಶಿ ಗರಿ…
ಧಾರವಾಡ ಜಿಲ್ಲೆ ಎಂದರೆ ಮೊದಲಿನಿಂದಲೂ ವಿದ್ಯಾಕಾಶಿ ಎಂಬ ಹೆಸರನ್ನೇ ಉಳಿಸಿಕೊಂಡು ಬಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಫಲಿತಾಂಶದಲ್ಲಿ ಹಿಂದಕ್ಕೆ ಬಿದ್ದಿರುವುದು ವಿದ್ಯಾಕಾಶಿ ಎಂಬ ಹೆಸರಿಗೆ ಕಪ್ಪು ಚುಕ್ಕೆ ಆದಂತಾಗಿದೆ. ಸರಕಾರಿ ಶಾಲೆಯ ಮಕ್ಕಳು ಉತ್ತಮ ಫಲಿತಾಂಶ ತೆಗೆದಾಗ ಮಾತ್ರವೇ ಶಾಲೆಗಳು ನೆನಪಾಗುತ್ತವೆ. ಬಳಿಕ ಯಾರೊಬ್ಬರೂ ಶಾಲೆಗಳತ್ತ ಮುಖ ಮಾಡುವುದಿಲ್ಲ ಎನ್ನುವುದು ಸ್ಥಳೀಯರ ಆರೋಪ.
ಮಳೆಗಾಲದಲ್ಲಿ ಶಾಲೆಗಳ ಸ್ಥಿತಿ ಹೇಗಿದೆ ಎಂದು ಯೋಚಿಸುವ ಶಿಕ್ಷಣ ಇಲಾಖೆಯು ಮುಂಜಾಗೃತೆ ಕ್ರಮವಾಗಿ ಏನು ಮಾಡಬಹುದು ಎಂಬುದರ ಬಗ್ಗೆ ಗಮನ ಹರಿಸುತ್ತಿಲ್ಲ. ಜಿಲ್ಲೆಯಲ್ಲಿ ತಾಲೂಕುವಾರು ಶಾಲೆಗಳ ಸ್ಥಿತಿಗತಿ ಹೇಗಿದೆ ಎಂಬುದರ ಬಗ್ಗೆ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಗೆ ಈಗಲೂ ಮಾಹಿತಿ ತಲುಪಿಲ್ಲ. ಏನೇ ಕೇಳಿದರೂ ಬಿಇಒಗಳಿಂದ ಮಾಹಿತಿ ಪಡೆಯಲಾಗುತ್ತಿದೆ ಎಂಬ ಸಿದ್ಧ ಉತ್ತರ ಹೇಳುವುದೇ ಅಧಿಕಾರಿಗಳ ಕೆಲಸವಾಗಿದೆ.
ಶೌಚಾಲಯಗಳಿಗೆ ನೀರಿಲ್ಲ…
ಜಿಲ್ಲೆಯಲ್ಲಿಯ ಎಲ್ಲ ಸರಕಾರಿ ಶಾಲೆಗಳಿಗೆ ನರೇಗಾ ಯೋಜನೆಯಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಅವುಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡುವ ವ್ಯವಸ್ಥೆ ಇಲ್ಲದಾಗಿದೆ. ಇದರಿಂದ ಸಾಕಷ್ಟು ಕಡೆಗಳಲ್ಲಿ ಹೊಸ ಶೌಚಾಲಯ ಕೀಲಿ ಹಾಕಿರುವ ಸ್ಥಿತಿಯಲ್ಲಿಯೇ ಇವೆ. ಶಾಲೆಗಳು ಪ್ರಾರಂಭವಾಗುವ ಸಂದರ್ಭದಲ್ಲಿ ಎಚ್ಚೆತ್ತಿರುವ ಅಧಿಕಾರಿಗಳು ಜೆಜೆಎಂ ಯೋಜನೆಯಡಿ ನಲ್ಲಿಯ ಸಂಪರ್ಕ ಕಲ್ಪಿಸಲು ಮುಂದಾಗುತ್ತಿದ್ದಾರೆ.
ಜಿಲ್ಲೆಯ ಮೂರು ತಾಲೂಕಿಗೆ ೮೦ ಲಕ್ಷ ರೂ.ಗಳ ಅನುದಾನ ಬಂದಿದೆ. ಚುನಾವಣಾ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಕೊಠಡಿಗಳ ದುರಸ್ತಿ ಕಾರ್ಯ ಕೈಗೊಂಡು ಒಂದು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು.
- ಎಸ್.ಎಸ್. ಕೆಳದಿಮಠ, ಡಿಡಿಪಿಐ, ಧಾರವಾಡ