ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ತಾಳಿದವನು ಫಡ್ನವೀಸ್ ಆದಾನು

03:00 AM Dec 09, 2024 IST | Samyukta Karnataka

ಅದು ೨೦೧೯ರ ಸಮಯ ಉದ್ಧವ್ ಠಾಕ್ರೆ ತನ್ನನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂದು ಬಿಜೆಪಿಯ ಬಹು ಕಾಲದ ಗೆಳೆತನಕ್ಕೆ ಸೋಡಾ ಚೀಟಿ ಕೊಟ್ಟು ಹೊರಟಿದ್ದರು. ಇತ್ತ ಫಡ್ನವೀಸ್ ಅಜಿತ್ ಪವಾರರೊಡನೆ ಸೇರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಅಜಿತ್ ದಾದಾ ಯು ಟರ್ನ್ ಹೊಡೆದು ಮತ್ತೆ ಶರದ್ ಪವಾರ್‌ರೊಂದಿಗೆ ಸೇರಿ ದಂಗು ಬಡಿಸಿದ್ದರು. ಆಗ ಅಂದು ಫಡ್ನವೀಸ್ ತುಂಬಿದ ಶಾಸನ ಸಭೆಯಲ್ಲಿ "ತೊರೆಗಳು ಹಿಂದೆ ಸರಿಯುತ್ತಿವೆ ಎಂದು ಕಿನಾರೆಯಲ್ಲಿ ಮನೆ ಕಟ್ಟಬೇಡ ನಾನು ಸಾಗರ ಮತ್ತೆ ಅಪ್ಪಳಿಸುತ್ತೇನೆ" ಎಂದು ಅಬ್ಬರಿಸಿದ್ದರು. ಅಂತೆಯೇ ದೇವೇಂದ್ರ ಸರಿತಾ ಗಂಗಾಧರ ಫಡ್ನವೀಸ್ ಇದೀಗ ಮತ್ತೊಮ್ಮೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆ ಮೂಲಕ ಮಹಾರಾಷ್ಟ್ರದ ಚಾಣಕ್ಯ ನಾನೇ ಎಂದು ಮತ್ತೆ ಸಾಬೀತುಪಡಿಸಿದ್ದಾರೆ. ಫಡ್ನವೀಸ್ ತಂದೆ ಗಂಗಾಧರ ರಾವ್ ಫಡ್ನವೀಸ್ ವಿಧಾನ ಪರಿಷತ್ ಸದಸ್ಯರು ಹಾಗೂ ಜನಸಂಘದ ನೇತಾರರು ಆಗಿದ್ದರು. ಅಲ್ಲದೆ ನಿತಿನ್ ಗಡ್ಕರಿ ಅವರ ರಾಜಕೀಯ ಗುರುಗಳು ಹೌದು. ಫಡ್ನವೀಸ್ ತನ್ನ ೧೭ನೇ ವಯಸ್ಸಲ್ಲಿ ಅವರ ತಂದೆಯನ್ನು ಕಳೆದುಕೊಳ್ಳಬೇಕಾಯಿತು. ಹೀಗಾಗಿ ತಂದೆಯ ರಾಜಕೀಯ ಪಟ್ಟುಗಳನ್ನು ಗಮನಿಸುವ ಸೌಭಾಗ್ಯ ಅವರದಾಗಲಿಲ್ಲ, ಆದರೆ ಅವರ ಬಹುಮುಖಿ ವ್ಯಕ್ತಿತ್ವಕ್ಕೆ ಯಾರಿಂದಲೂ ತಡೆ ಒಡ್ಡಲಾಗಲಿಲ್ಲ. ೧೯ನೇ ವಯಸ್ಸಿನಲ್ಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಪರ್ಕಕ್ಕೆ ಬಂದು ರಾಜಕೀಯದ ಒಳ ಮರ್ಮವನ್ನು ಅರಿಯುವ ಹೆಜ್ಜೆ ಇಟ್ಟಿದ್ದರು. ಪರಿಣಾಮವಾಗಿ ತನ್ನ ೨೨ನೇ ವಯಸ್ಸಿನಲ್ಲೇ ನಾಗ್ಪುರ್ ಕಾರ್ಪೊರೇಟರ್ ೨೭ನೇ ವಯಸ್ಸಿಗೆ ನಾಗ್ಪುರ್ ಮೇಯರ್ ಗಾದಿ ಅರಸಿ ಬಂದಿದ್ದವು. ೨೯ನೇ ವಯಸ್ಸಿಗೆ ಶಾಸಕನಾಗಿ ಆರಿಸಿ ಬಂದಿದ್ದರು. ಹೀಗೆ ರಾಜಕೀಯದ ಒಂದೊಂದೇ ಪಟ್ಟುಗಳನ್ನು ಕಲಿಯುತ್ತಿದ್ದಾಗ ಅವರಿಗೆ ಗುರುವಾಗಿ ನಿಂತದ್ದು ಗಡ್ಕರಿ ಎಂಬುದು ಗಮನಾರ್ಹ ಅಂಶ.
ಅದ್ಯಾರೋ ಮಹಾನುಭಾವರು ಹೇಳಿದ ನೆನಪು ಒಂದು ಹಂತದ ನಂತರ ಬೆಳೆಯುವ ಹಂಬಲ ಇರುವವನು ಗುರುವೆಂಬ ಗುರುವಿನ ನೆರಳಿನಿಂದಲೂ ದೂರ ಸಾಗಬೇಕಂತೆ ಬಹುಶಃ ಫಡ್ನವೀಸ್ ಇದನ್ನೇ ಮಾಡಿರಬಹುದು. ಮಹಾರಾಷ್ಟ್ರದಲ್ಲಿ ಗೋಪಿನಾಥ್ ಮುಂಡೆ ಹಾಗೂ ಗಡ್ಕರಿ ಬಣ ಎಂಬಂತೆ ಎರಡು ಬಣಗಳಾಗಿದ್ದವು. ಆಗ ಫಡ್ನವೀಸ್ ಯಾವ ಮಡಿವಂತಿಕೆಯೂ ಇಲ್ಲದೆ ಗೋಪಿನಾಥ್ ಮುಂಡೆ ಬಣಕ್ಕೂ ಹತ್ತಿರವಾಗಿದ್ದರು. ಖುದ್ದು ವಾಜಪೇಯಿ ಫಡ್ನವೀಸ್ ಕಾರ್ಯವೈಖರಿಯನ್ನು ಹೊಗಳಿದ್ದರು. ದಿನಕಳೆದಂತೆ ಫಡ್ನವೀಸ್ ಮಹಾರಾಷ್ಟ್ರದ ರಾಜ್ಯ ರಾಜಕೀಯದಲ್ಲಿ ಆವರಿಸಿಕೊಳ್ಳುತ್ತಿದ್ದರು, ಪರಿಣಾಮ ೨೦೧೪ರಲ್ಲಿ ಮುಖ್ಯಮಂತ್ರಿ ಗದ್ದುಗೆ ತಾನಾಗಿಯೇ ಒಲಿದು ಬಂದಿತ್ತು. ಆದರೆ ೨೦೨೨ರಲ್ಲಿ ಬದಲಾದ ಸನ್ನಿವೇಶದಲ್ಲಿ ಶಿಂದೆೆ ನೇತೃತ್ವದ ಶಿವಸೇನಾ ಹಾಗೂ ಬಿಜೆಪಿ ಮೈತ್ರಿ ಸರ್ಕಾರ ರಚನೆ ಆದಾಗ ಶಿಂದೆ ಮುಖ್ಯಮಂತ್ರಿ ಆದರು. ಆದರೆ ಆಗಲೇ ಐದು ವರುಷಗಳ ಕಾಲ ಮುಖ್ಯಮಂತ್ರಿ ಆಗಿದ್ದ ಫಡ್ನವೀಸ್‌ಗೆ ಉಪ ಮುಖ್ಯಮಂತ್ರಿ ಹುದ್ದೆ ಒಪ್ಪಿಕೊಳ್ಳುವ ನಿರ್ದೇಶನ ದೆಹಲಿಯಿಂದ ಬಂದಿತ್ತು. ಆಗ ದೆಹಲಿ ದೊರೆಗಳ ಆದೇಶವನ್ನು ಪಕ್ಷಕ್ಕಾಗಿ ರಾಜ್ಯಕ್ಕಾಗಿ ಮರು ಮಾತಾಡದೆ ಒಪ್ಪಿಕೊಂಡಿದ್ದರು. ಆಗ ಹಲವು ಪತ್ರಿಕೆಗಳು, ಅಂಕಣಕಾರರು ಉಪ ಮುಖ್ಯಮಂತ್ರಿ ಪದವಿಯನ್ನು ಒಪ್ಪಿಕೊಳ್ಳಬಾರದಿತ್ತು ಎಂದು ಬರೆದಿದ್ದವು. ಆದರೆ ದೆಹಲಿ ದೊರೆಗಳಿಗೆ ಫಡ್ನವೀಸ್ ಹೊರತಾದ ಸರ್ಕಾರ ಕೇವಲ ಶಿಂದೆ ಹಾಗೂ ಶಿವಸೇನಾ ಸರ್ಕಾರದ ವೈಭವೀಕರಣಕ್ಕೆ ಕಾರಣ ಆದೀತು ಎಂಬ ಭಯವಿತ್ತು. ೨೦೨೩ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಮಹಾಯುತಿ ಸರಕಾರದ ನೀರಸ ಪ್ರದರ್ಶನವನ್ನು ತಮ್ಮ ಹೆಗಲ ಮೇಲೆ ಯಾವ ಅಂಜಿಕೆಯೂ ಇಲ್ಲದೆ ಹೊತ್ತುಕೊಂಡಿದ್ದ ಫಡ್ನವೀಸ್ ಕೆಲವೇ ತಿಂಗಳಲ್ಲಿ ಲಡಕಿ ಬೆಹೆನ್ ಎಂಬ ವೋಟು ಬಾಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಾಳಿದವನು ಬಾಳಿಯಾನು ಎಂಬ ಗಾದೆಗೆ ಉಪಮೆಯಂತೆ ಮಹಾಯುತಿಯ ಗೆಲುವಿಗೆ ಕಾರಣವಾಗಿದ್ದಾರೆ.
ಹೀಗೆ ಫಡ್ನವೀಸ್ ರಾಜಕೀಯದ ಹಾದಿಯಲ್ಲಿ ತಾಳುವಿಕೆಯ ಮಹತ್ವವನ್ನು ಸಾರಿ ಸಾರಿ ಹೇಳುತಿದ್ದರೆ ಇತ್ತ ಕಾಂಗ್ರೆಸ್ ಮಾತ್ರ ಸಂವಿಧಾನ ಸಂಕಷ್ಟದಲ್ಲಿದೆ ಎಂಬ ಘೋಷವಾಕ್ಯವನ್ನೇ ವೇದವಾಕ್ಯ ಎಂದು ತಿಳಿದು ಲೋಕಸಭೆಯ ಫಲಿತಾಂಶ ವಿಧಾನಸಭೆಯಲ್ಲೂ ಮರುಕಳಿಸಬಹುದು ಎಂದು ನಂಬಿ ಕುಳಿತಂತ್ತಿತ್ತು. ಅದೇನೇ ಇರಲಿ ಭಾರತದ ಸಂವಿಧಾನ ಸಂಕಷ್ಟದಲ್ಲಿದೆಯೋ ಇಲ್ಲವೋ ಕಾಂಗ್ರೆಸ್‌ನ ಸಂವಿಧಾನ ಸಂಕಷ್ಟದಲ್ಲಿರುವುದು ಸುಳ್ಳಲ್ಲ ಎಂಬುದು ಮಹಾರಾಷ್ಟ್ರದ ಚುನಾವಣೆಯ ನಂತರ ಮತ್ತೊಮ್ಮೆ ಸಾಬೀತಾಗಿದೆ. ಆದ್ದರಿಂದ ಕಾಂಗ್ರೆಸ್ ತನ್ನ ಪಕ್ಷದ ಸಂವಿಧಾನವನ್ನು ಮೊದಲು ಗಟ್ಟಿಗೊಳಿಸಬೇಕು. ತನಗಲ್ಲದ್ದಿದ್ದರೂ ರಾಷ್ಟ್ರಕ್ಕಾಗಿ ರಾಷ್ಟ್ರದ ಹಿತದೃಷ್ಟಿಯಿಂದ ಪ್ರಬಲ ವಿರೋಧ ಪಕ್ಷವಿರುವುದು ರಾಷ್ಟ್ರಕ್ಕೆ ಒಳಿತು. ಆ ಕಾರಣಕ್ಕಾದರೂ ಕಾಂಗ್ರೆಸ್ ತನ್ನ ಕಾರ್ಯವೈಖರಿಯ ಬಗ್ಗೆ ಚುನಾವಣೆಗಳ ಬಗ್ಗೆ ಗಮನ ಕೊಡಬೇಕು. ಹಾಗಾಗದಿದ್ದರೆ ಮತದಾರ ಮುಂದೊಂದು ದಿನ ಕಾಂಗ್ರೆಸ್ ಪಕ್ಷ ಕಾಯಂ ಸಂಕಷ್ಟದಲ್ಲಿರುವ ಪಕ್ಷ ಎಂಬ ಫಲಕವನ್ನು ದಯಮಾಡಿಸುವ ಸಂಭವ ಅಲ್ಲಗಳೆಯುವಂತಿಲ್ಲ. ಇಲ್ಲದಿದ್ದರೆ ಹರಿಯಾಣದಲ್ಲಿ ಹರಿವಾಣದ ತಟ್ಟೆಯಲ್ಲಿ ಗೆಲುವೆಂಬ ಗಿಫ್ಟ್ ಅನ್ನು ಮತದಾರ ಕೊಡಬೇಕೆಂದಿದ್ದರೂ ಅದನ್ನು ಪಡೆದುಕೊಳ್ಳುವ ಪರಿಯಲ್ಲಿ ವಿಫಲವಾಗುತ್ತಿರಲಿಲ್ಲ. ಕಾಂಗ್ರೆಸ್ ಅದೇ ಅಪ್ಪ ಹಾಕಿದ ಆಲದ ಮರಕ್ಕೆ ಜೋತುಬಿದ್ದು ಓಲೈಕೆ ರಾಜಕಾರಣದ ಹಿಂದೆ ಬೆನ್ನು ಬಿದ್ದಿದ್ದೆ. ಅದೇ ರಾಜಕಾರಣವನ್ನು ವಿರೋಧಿಗಳು ಮಾಡಿಯಾರು ಎಂಬುದನ್ನು ಮರೆತಂತಿದೆ.
ಕಾಂಗ್ರೆಸ್ ನಾಯಕರು ಚುನಾವಣೆಗಳು ಬಂದಾಗ ಟೆಂಪಲ್ ರನ್‌ಗಳನ್ನೂ ಮಾಡಿ ತಾವು ಪ್ರತಿಪಾದಿಸುವುದು ಸಾಫ್ಟ್ ಹಿಂದುತ್ವ ಎಂಬಂತೆ ತೋರ್ಪಡಿಸಿಕೊಳ್ಳಲು ಪ್ರಯತ್ನಿಸುವುದು. ಆದರೆ ರಾಮ ಮಂದಿರದಂತಹ ವಿಷಯಗಳಲ್ಲಿ ನೆಲದ ಭಾವನೆಯನ್ನು ಅರ್ಥಮಾಡಿಕೊಳ್ಳದೆ ಬಹುಸಂಖ್ಯಾತರ ಭಾವನೆಗಳಿಗೆ ವ್ಯತಿರಿಕ್ತವಾಗಿ ವರ್ತಿಸುವುದು. ಹೀಗೆ ತಮ್ಮಲ್ಲೇ ತಮ್ಮ ನಿಲುವಿನ ಬಗ್ಗೆ ವಿರೋಧಾಭಾಸಗಳನ್ನು ಹೊಂದುವುದು ಇದು ಮೊದಲಿನಿಂದಲೂ ನಡೆದು ಬಂದ ಪ್ರಕ್ರಿಯೆ. ಅಸಲಿಗೆ ಚುನಾವಣೆಗಳ ಮೇಲೆ ಜಾತಿಯ ಭೂತ ಹಾಗೂ ಸಂಪನ್ಮೂಲಗಳ ಸುರಿ ಮಳೆ ಆಗುವಾಗ ಮತದಾರನಿಗಾದರೂ ಯಾರು ಏನು ಮಾಡಿದರೆಂಬ ನೆನಪಿರುವುದಿಲ್ಲ. ಆದರೆ ಕಾಂಗ್ರೆಸ್ ತನ್ನ ವರ್ತನೆಯಿಂದ ತಾನೊಬ್ಬ ಸನಾತನ ಧರ್ಮದ ಹಾಗೂ ಸಂತರ ವಿರೋಧಿಯೆಂದು ತನ್ನ ಕ್ರಿಯೆಗಳ ಮೂಲಕವೇ ಮತ್ತೆ ಮತ್ತೆ ಸಾಬೀತುಪಡಿಸಿ ಮತದಾರರನ್ನು ತನ್ನ ಪಕ್ಷದ ನಿಲುವೇನು ಎಂದು ಸದಾ ಜಾಗೃತಾವಸ್ಥೆಯಲ್ಲಿ ಇಟ್ಟಿರುತ್ತದೆ. ಉದಾಹರಣೆಗೆ ಮೊನ್ನೆ ಮೊನ್ನೆ ಪೇಜಾವರದ ಶ್ರೀ ವಿಶ್ವ ಪ್ರಸನ್ನ ತೀರ್ಥರು ವಿಶ್ವ ಹಿಂದೂ ಪರಿಷದ್ ಏರ್ಪಡಿಸಿದ್ದ ಸಂತ ಮಾರ್ಗದರ್ಶಕ ಮಂಡಳಿಯ ಸಭೆಯಲ್ಲಿ ಭಾಗವಹಿಸಿದ್ದರು. ಆ ಸಭೆಯಲ್ಲಿ ಕೆಲವು ನಿರ್ಣಯಗಳನ್ನು ವಿಶ್ವ ಹಿಂದೂ ಪರಿಷತ್ ತೆಗೆದುಕೊಂಡಿತ್ತು. ಅವುಗಳಲ್ಲಿ ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿರುವ ತಿದ್ದುಪಡಿ ಮಸೂದೆಯನ್ನು ಸಂಪೂರ್ಣವಾಗಿ ಬೆಂಬಲಿಸುವುದು, ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಿಗೊಳಿಸುವುದು ಹಾಗೂ ಪ್ರಚೋದಿತ ಮತಾಂತರವನ್ನು ತಡೆಯುವುದು ಹೀಗೆ ಈ ಮೂರು ನಿರ್ಣಯಗಳನ್ನು ತೆಗೆದುಕೊಂಡು ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದರು. ಆದರೆ ಶ್ರೀಗಳು ಸಂವಿಧಾನವನ್ನೇ ಬದಲಾಯಿಸಬೇಕೆಂಬ ಹೇಳಿಕೆಯನ್ನು ಕೊಟ್ಟಿದ್ದಾರೆ ಎಂಬಂತೆ ಬಿಂಬಿಸಲಾಯಿತು. ಇದು ಯಾವ ನ್ಯಾಯ? ಅಸಲಿಗೆ ಶ್ರೀಗಳು ಹೇಳಿದ್ದು ನಮ್ಮನ್ನು ಗೌರವಿಸುವ ಸರ್ಕಾರ ಬರಬೇಕು. ಹಾಗೆ ನೋಡಿದರೆ ಶ್ರೀಗಳು ಎಲ್ಲೂ ಸಂವಿಧಾನವನ್ನು ಬದಲಾಯಿಸಬೇಕೆಂದು ಹೇಳಲಿಲ್ಲ. ಅವರು ಕೊಟ್ಟ ವಿನಂತಿ ಪತ್ರದಲ್ಲಿದ್ದ ಬೇಡಿಕೆಗಳನ್ನು ಶಾಸನ ಸಭೆಯಲ್ಲಿ ಕೆಲವು ನಿರ್ಣಯಗಳನ್ನು ಹೊರಡಿಸಿಯೂ ಜಾರಿ ಮಾಡಬಹುದು, ಹೀಗೆ ಆಡದ ಮಾತಿಗೆ ಶ್ರೀಗಳ ಮೇಲೆ ವೃಥಾ ಆರೋಪ ಮಾಡಲಾಯಿತು.
ಹಾಗೆ ನೋಡಿದರೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಹೇರಿದ ಸಂವಿಧಾನದ ೪೨ನೇ ತಿದ್ದುಪಡಿ ಕಾಯಿದೆಯನ್ನು ಮಿನಿ-ಸಂವಿಧಾನ ಎಂದೇ ಕರೆಯುತ್ತಾರೆ. ಅಂದರೆ ತಿದ್ದುಪಡಿಗಳು ಒಂದು ಮಿನಿ ಸಂವಿಧಾನದಷ್ಟೇ ಇದ್ದವು ಎಂದು ಅರ್ಥ. ಆದ್ದರಿಂದ ಸಂವಿಧಾನ ಬದಲಾಯಿಸಿದ್ದು ಯಾರು ಎಂದು ಬಿಡಿಸಿ ಹೇಳುವ ಅವಶ್ಯಕತೆಯಿಲ್ಲ. ಸಂವಿಧಾನ ಬದಲಾವಣೆಗೂ ತಿದ್ದುಪಡಿಗೂ ಅಪಾರ ವ್ಯತಾಸವಿದೆ. ಇಲ್ಲಿಯವರೆಗೆ ೧೦೬ ಬಾರಿ ಸಂವಿಧಾನದ ತಿದ್ದುಪಡಿಯಾಗಿದೆ, ಹಾಗೆಂದ ಮಾತ್ರಕ್ಕೆ ಇಡೀ ಸಂವಿಧಾನವನ್ನೇ ಬದಲಾಯಿಸಿದ್ದಾರೆಂದಲ್ಲ. ಅಷ್ಟಾಗಿಯೂ ಪೇಜಾವರ ಶ್ರೀಗಳ ಬೇಡಿಕೆಯಲ್ಲಿ ತಪ್ಪೇನಿದೆ? ವಕ್ಫ್ ಕಾಯ್ದೆ ತಿದ್ದುಪಡಿಗೆ ಬೆಂಬಲ ಎಂದಿದ್ದಾರೆ ಪ್ರಜಾಪ್ರಭುತ್ವದ ತಳಹದಿಯಲ್ಲಿ ರಚಿತವಾಗುವ ನೀತಿ ನಿಯಮಗಳಲ್ಲಿ ಸರ್ಕಾರ ಹಾಗೂ ಉಚ್ಚ ನ್ಯಾಯಾಲಯಕ್ಕೂ ಮೀರಿದ ಮಂಡಳಿ ಇರಲು ಸಾಧ್ಯವೇ? ಈ ಜಾಗ ನಮ್ಮದು ಎಂದು ನೋಟಿಸ್ ಕೊಡುವ ಸಂಸ್ಥೆ ಹಾಗೂ ಆ ನೋಟಿಸ್ ಅನ್ನು ಪ್ರಶ್ನೆ ಮಾಡಬೇಕೆಂದು ಉದ್ದೇಶಿಸಿದರೆ ನ್ಯಾಯಾಲಯಕ್ಕೂ ಹೋಗದೆ ಅದೇ ಸಂಸ್ಥೆ ಬಳಿಯೇ ನ್ಯಾಯ ಕೇಳಲು ಹೋಗಬೇಕೆಂದರೆ ಅದು ಎಷ್ಟು ಸರಿ? ಪೇಜಾವರ ಶ್ರೀಗಳ ಕುರಿತು ಈ ಹೇಳಿಕೆಗಳು ಕಾಂಗ್ರೆಸ್ ಪಕ್ಷಕ್ಕೆ ಹೊಸದಲ್ಲ ಕಳೆದ ಒಂದು ತಿಂಗಳ ಹಿಂದೆ ಶ್ರೀಗಳು ಪೂಜಿಸುವ ಹರಿಯ ಹೆಸರಿಟ್ಟುಕೊಂಡ ಮಾಜಿ ಮಂತ್ರಿಯೊಬ್ಬರು ಶ್ರೀಗಳಿಗೆ ನೀವು ಕಾವಿ ಕಳಚಿ ರಾಜಕೀಯಕ್ಕೆ ಬನ್ನಿ ಎಂದಿದ್ದರು. ತನ್ನ ಜೀವನವನ್ನೇ ಹರಿ ಸೇವೆಗಾಗಿ ಮುಡಿಪಾಗಿಟ್ಟಿರುವ ಶ್ರೀಗಳಿಗೆ ಈ ಪಾಟಿ ಸವಾಲು ಹಾಕುವುದು ಎಷ್ಟು ಸರಿ. ಮಂತ್ರಿ ಮಾಗಧರು ಒಮ್ಮೆ ಖಾದಿ ತೆಗೆದು ಹೊರಬಂದು ಸಾಮಾನ್ಯ ಜನರ ಕಷ್ಟ ಕಾರ್ಪಣ್ಯದತ್ತ ಗಮನ ಕೊಡಲಿ. ಕಳಚಿ ಬರಬೇಕಾದ್ದು ಕೇವಲ ಖಾದಿ ಹಾಗೂ ಅದಕ್ಕಂಟಿಕೊಂಡ ಅಧಿಕಾರ. ಹಣ, ಐಶ್ವರ್ಯ ಆಸ್ತಿ ಅಂತಸ್ತು ಎಲ್ಲವೂ ಹಾಗೆಯೇ ಇಟ್ಟುಕೊಳ್ಳಬಹುದು. ಆದರದು ಆಗದು ಅಲ್ಲವೇ ಅಂದ ಮೇಲೆ ಹರಿಯೇ ಸರ್ವಸ್ವ ಎಂದು ತಮ್ಮ ಜೀವನವನ್ನೇ ಹರಿ ಸೇವೆಗೆ, ಧರ್ಮ ಪ್ರಚಾರಕ್ಕೆ ಮುಡಿಪಾಗಿಟ್ಟ ಶ್ರೀಗಳಿಗೆ ಖಾವಿ ಕಳಚಿಟ್ಟು ರಾಜಕೀಯ ಮಾಡಿ ಎನ್ನುವುದು ಶೋಭೆ ತರುವ ಮಾತೆ? ಒಂದು ಹಂತದಲ್ಲಿ ಮಹಾರಾಷ್ಟ್ರದಲ್ಲಿ ಸಾಧು ಸಂತರ ಬಗ್ಗೆ ಆಡಿದ ಇಂತಹ ಮಾತುಗಳೇ ಇಂದು ಕಾಂಗ್ರೆಸ್ ಹಾಗೂ ಮಿತ್ರ ಪಕ್ಷವನ್ನು ದಯನೀಯ ಸ್ಥಿತಿಗೆ ತಂದು ನಿಲ್ಲಿಸಿದೆ. ಇನ್ನಾದರೂ ಕಾಂಗ್ರೆಸ್ ಪಾಠ ಕಲಿಯಬೇಕು ಇಲ್ಲದಿದ್ದರೆ ಮಹಾರಾಷ್ಟ್ರದಲ್ಲಾದ ಮತ ಪಂಥಗಳ ಧ್ರುವೀಕರಣ ಯಾವ ರಾಜ್ಯದಲ್ಲಾದರೂ ಆಗಬಹುದು.

Next Article