ತಿಗಡೇಸಿ ಮಾತ್ರೆ-ವೈಕುಂಠ ಯಾತ್ರೆ
ಅನೇಕ ವರ್ಷಗಳಿಂದ ಕಂಪೌಂಡರ್ ಕೆಲಸ ಮಾಡುತ್ತಿದ್ದ ತಿಗಡೇಸಿ ಈಗ ಡಾಕ್ಟರ್ ಆಗಿದ್ದಾನೆ. ಯಾರೂ ಕೇಳದಿದ್ದರೂ ನಾನು ಆರ್‌ಎಂಪಿ ಎಂದು ಜನರ ಮುಂದೆ ಹೇಳುತ್ತಾನೆ. ಆತನ ಹತ್ತಿರದ ಗೆಳೆಯರು ಅಲ್ಲಯ್ಯ ಆರ್‌ಎಂಪಿ ಅಂದರೆ ಏನು ಅಂದರೆ ಅಯ್ಯೋ ಅಷ್ಟೂ ಗೊತ್ತಿಲ್ಲವೇ? ಇಷ್ಟು ದಿನ ನಾನು ಕಂಪೌಂಡರ್ ಆಗಿದ್ದೆ ಔಷಧ ಕೊಡುವುದು, ಇಂಜಕ್ಷನ್ ಕೊಡುವುದು ರೂಢಿ ಆಗಿದೆ…ಅದಕ್ಕೆ ಈಗ ಪ್ರಾಕ್ಟೀಸ್ ಮಾಡುತ್ತಿದ್ದೇನೆ ಅದಕ್ಕೆ ನಾನು ಆರ್‌ಎಂಪಿ ಎಂದು ಹೇಳುತ್ತಾನೆ. ಏನಾದರೂ ಕಾರ್ಯಕ್ರಮಗಳು ನಡೆದರೆ ಸಂಘಟಕರ ಕೈ ಕಾಲು ಹಿಡಿದು ತಾನು ಗೆಸ್ಟ್ ಆಗಿ ಹೋಗುತ್ತಾನೆ. ಅದರಲ್ಲಿ ಡಾ. ತಿಗಡೇಸಿ ಎಂದು ಹೆಸರು ಹಾಕಿಸಿಕೊಂಡು ಇನ್ವಿಟೇಶನ್ ಕಾರ್ಡನ್ನು ದವಾಖಾನೆಯಲ್ಲಿ ಜೋತು ಬಿಡುತ್ತಿದ್ದ. ತೋರಿಸಿಕೊಳ್ಳಲು ಬಂದ ಜನರನ್ನು ಬಹಳ ಹೊತ್ತಿನವರೆಗೆ ಕೂಡಿಸುತ್ತಿದ್ದ. ಅವರು ಸುಮ್ಮನೇ ಏನು ಕೂಡುವುದು ಎಂದು ಎಲ್ಲ ಕಾರ್ಡುಗಳನ್ನು ನೋಡುತ್ತಿದ್ದರು ಇದರಿಂದ ಭಯಂಕರ ಖುಷಿ ಆಗುತ್ತಿದ್ದ. ತಿಗಡೇಸಿ ತಿರುಕೇಸಿ ಎಂಬ ಕಂಪೌಂಡರ್‌ನನ್ನು ಇಟ್ಟುಕೊಂಡಿದ್ದ. ಅವನೂ ಸಹ ಮಾತ್ರೆ ಆರಿಸಿಕೊಡುವುದು, ತಿಗಡೇಸಿ ಇಲ್ಲದಾಗ ಇಂಜಕ್ಷನ್ ಕೊಡುವುದು ಕಲಿತಿದ್ದ. ಯಾರಾದರೂ ಕರೆ ಮಾಡಿ ಚಿಕಿತ್ಸೆ ಕೊಡಲು ಮನೆಗೆ ಬನ್ನಿ ಎಂದರೆ ತಿಗಡೇಸಿ..ಅಯ್ಯೋ ಇಲ್ಲಿ ನನಗೆ ಐವತ್ತು ಪೇಶಂಟ್‌ಗಳು ವೇಟ್ ಮಾಡುತ್ತಿದ್ದಾರೆ. ನನ್ನ ಅಸಿಸ್ಟಂಟ್ ಡಾಕ್ಟರ್‌ನನ್ನು ಕಳುಹಿಸುತ್ತೇನೆ ಎಂದು ತಿರುಕೇಸಿಯನ್ನು ಕಳಿಸುತ್ತಿದ್ದ. ದಿನದಿಂದ ದಿನಕ್ಕೆ ಕಮಾಯಿಯೂ ಹೆಚ್ಚಾಗತೊಡಗಿತು. ತಿರುಕೇಸಿ ನನ್ನ ಪಗಾರ ಏರಿಸಿ ಅಂದರೂ ತಿಗಡೇಸಿ ಆ ಕೆಲಸ ಮಾಡಲಿಲ್ಲ. ಬಹಳಷ್ಟು ಬಾರಿ ಕೇಳಿದರೂ ತಿಗಡೇಸಿ ಮಾತು ಕೇಳಿರಲಿಲ್ಲ. ಅವತ್ತೊಂದು ದಿನ ಮಾರ್ಗೆಪ್ಪ ಅನ್ನುವ ವ್ಯಕ್ತಿ ತೋರಿಸಿಕೊಳ್ಳಲು ಬಂದ. ಮೊದಲೇ ಆತನಿಗೆ ಸಮಸ್ಯೆ ಇತ್ತು. ತಿಗಡೇಸಿ ಮಾತ್ರೆ ಕೊಟ್ಟ. ದುರ್ದೈವಕ್ಕೆ ಮಾರ್ಗೆಪ್ಪ ಶಿವನಪಾದ ಸೇರಿದ. ಇದನ್ನೇ ಕಾಯುತ್ತಿದ್ದ ತಿರುಕೇಸಿ ಮಾರ್ಗೆಪ್ಪನ ಸಾವನ್ನು ತಿಗಡೇಸಿ ಮೇಲೆ ಹಾಕಿದ. ಅವರನ್ನು ಎತ್ತಿ ಕಟ್ಟಿದ. ತಿಗಡೇಸಿ ಮಾತ್ರೆ ವೈಕುಂಠ ಯಾತ್ರೆ ಎಂಬ ಹ್ಯಾಂಡ್‌ಬಿಲ್ ತಯಾರಿಸಿ ಮನೆಮನೆಗೆ ಹಂಚಿದ. ಜನರು ಸಿಟ್ಟಿಗೆದ್ದರು. ಮರುದಿನದಿಂದ ತಿಗಡೇಸಿ ನಾಪತ್ತೆಯಾದ ಅಂದಿನಿಂದ ತಿರುಕೇಸಿ ಡಾ. ತಿರುಕೇಸಿ ಆರ್‌ಎಂಪಿ ಎಂದು ಬೋರ್ಡುಹಾಕಿಕೊಂಡ.