ತಿನ್ನಿರಿ ಹೋಳಿಗೆ ತನ್ನಿರಿ ಜೋಳಿಗೆ
ಗೃಹಲಕ್ಷ್ಮೀ ಹಣದಲ್ಲಿ ಮಹಿಳೆಯರಿಗೆಲ್ಲ ಊರೂಟ ಹಾಕಿಸಿದ ಅಜ್ಜಿಯು ಈಗ ರಾತ್ರೋ ರಾತ್ರಿ ಫೇಮಸ್ ಆಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಂತೂ ಆಕೆಯನ್ನು ರಾಷ್ಟ್ರನಾಯಕಿ ಎಂಬಂತೆ ಬಿಂಬಿಸಿದ್ದಾರೆ. ಇದ್ದರೆ ಇರಬೇಕು ಇಂತಹ ಅಜ್ಜಿ ನೀವೆಲ್ಲ ಮೆಣಸಿನಕಾಯಿ ಬಜ್ಜಿ ಎಂಬ ಟ್ಯಾಗ್‌ಲೈನ್ ಇಟ್ಟುಕೊಂಡು ಲಾದುಂಚಿ ರಾಜ ಬರೆದ ಕವನದ ಸಾಲುಗಳನ್ನು ಹಲವರು ವಾಟ್ಸಪ್ ಸ್ಟೇಟಸ್‌ಗೆ ಇಟ್ಟುಕೊಂಡಿದ್ದಾರೆ. ದೂರದಿಂದ ವಿಮಾನದಲ್ಲಿ ಓಡಿಬಂದ ಮದ್ರಾಮಣ್ಣೋರು ವ್ಹಾರೆ ವ್ಹಾ… ಎಂದು ಬಾಯಿತುಂಬ ಹೊಗಳಿದ್ದಾರೆ. ಊರಿನ ಕಾಲೇಜು ಹುಡುಗಿಯರು ಆಕೆಯ ಜತೆ ಸೆಲ್ಫಿ ತೆಗೆಸಿಕೊಂಡು ಹೋಗುತ್ತಿದ್ದಾರೆ. ದೂರದ ಡೆಲ್ಲಿಯ ತಮ್ಮ ಮನೆಯ ಎಸಿ ರೂಮಿನಲ್ಲಿ ಕುಳಿತ ಅಮ್ಮೋರು… ಶಬ್ಬಾಷ್ ಅಜ್ಜಿಯೋರೆ ಎಂದು ಉದ್ಘರಿಸಿದ್ದಾರೆ. ಜಗತ್ತಿನಲ್ಲಿ ಯಾರು ಮಾಡಿದ್ದು ಸರಿಯಲ್ಲ… ನಾನೊಬ್ಬನೇ ಮಾಡಿದ್ದು ಸರಿ ಎಂಬ ಭ್ರಮೆಯಲ್ಲಿರುವ ಲಾದುಂಚಿ ರಾಜ… ಇವೆಲ್ಲ ಬರೀ ನಾಟಕ ಎಂದು ಅವರಿವರ ಮುಂದೆ ಹೇಳಿಕೊಂಡು ತಿರುಗಾಡಿದ. ಆದರೆ ಅವನ ತಿರುಬೋಕಿತನ ಗೊತ್ತಿದ್ದ ಎಲ್ಲರೂ ಅಷ್ಟೊಂದು ಮಹತ್ವ ಕೊಡಲಿಲ್ಲ. ಅಜ್ಜಿಯ ಫೇಮಸ್‌ಗಿರಿಗೆ ಬೆಚ್ಚಿಬಿದ್ದ ಮೇಕಪ್ ಮರೆಮ್ಮ… ಮದ್ರಾಮಣ್ಣೋರಿಗೆ ಕಾಲ್ ಮಾಡಿ… ಅಣ್ಣೋರೆ… ಅವಳು ಬರೀ ಹೋಳಿಗೆ ಹಂಚಿರಬಹುದು ನಾನು ಜಿಲೇಬಿ, ಮೈಸೂರುಪಾಕ್, ಪಾಕದಪುರಿ, ಉಂಡೆ, ಪಲಾವ್ ಎಲ್ಲವನ್ನೂ ಹಂಚಬೇಕು ಅಂತ ಮಾಡಿದ್ದೆ. ಆದರೆ ನೀವು ಗೃಹಲಕ್ಷ್ಮೀಯನ್ನು ಮಧ್ಯೆ.. ಮಧ್ಯೆ ನಿಲ್ಲಿಸಿದ ಕಾರಣ ನಾನು ಸಾಲಗಾರಳಾಗಿದ್ದೇನೆ. ನೀವು ಒಂದು ಕೆಲಸ ಮಾಡಿ.. ನನಗೆ ಈಗ ಇಂತಿಷ್ಟು ಅಂತ ಕೈಗಡ ಕೊಡಿ… ನಾನು ನಮ್ಮೂರು ಅಲ್ಲದೇ ಪಕ್ಕದ ಊರಿನ ಹೆಣ್ಣುಮಕ್ಕಳಿಗೂ ಊಟ ಹಾಕಿಸುವೆ. ಆಗ ನಿಮ್ಮನ್ನೂ ಕರೆಯುತ್ತೇನೆ ದೊಡ್ಡವರನ್ನೂ ಕರೆಯುತ್ತೇನೆ ಅಷ್ಟೇ ಏಕೆ… ಬಯ್ದಾಡೋ ಸುಮಾರಣ್ಣ… ಸೈಲೆಂಟ್ ಆಗಿರುವ ಸಿಟ್ಯೂರಪ್ಪ ಎಲ್ಲರನ್ನೂ ಕರೆಯಿಸಿ ತಿನ್ನಿರಿ ಹೋಳಿಗೆ ತನ್ನಿರಿ ಜೋಳಿಗೆ ಅಂದು ಅವರ ಹೊಟ್ಟೆ ಉರಿಸುವೆ. ಕೂಡಲೇ ನನಗೆ ಫೋನ್ ಪೇ ಅಥವಾ ಗೂಗಲ್ ಪೇ ಮೂಲಕ ಹಣ ಹಾಕಿದರೆ ಮುಂದಿನವಾರ ಗೃಹಲಕ್ಷ್ಮೀ ಹಣದಲ್ಲಿ ಭರ್ಜರಿ ಭೋಜನ ಹಾಕಿಸುವೆ ಎಂದು ಪುರುಸೊತ್ತಿಲ್ಲದೇ ಮಾತನಾಡುತ್ತಿದ್ದಳು. ಆ ಕಡೆಯಿಂದ ಯಾವುದೇ ಸೌಂಡ್ ಬರದಾದಾಗ ಹಲೋ.. ಹಲೋ ಅಂದಳು. ಆ ಕಡೆಯಿಂದ ಮದ್ರಾಮಣ್ಣೋರು ಫೋನು ಕಟ್ ಮಾಡಿ ಆಗಲೇ ತುಂಬಾ ಹೊತ್ತು ಆಗಿತ್ತು.