ತಿರುಪತಿ ಇಸ್ಕಾನ್ ದೇಗುಲಕ್ಕೆ ಬಾಂಬ್ ಬೆದರಿಕೆ
ತಿರುಪತಿ: ಆಂಧ್ರಪ್ರದೇಶದ ಮೂರು ಪ್ರಮುಖ ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದ ಬೆನ್ನಲ್ಲೇ ಭಾನುವಾರ ತಿರುಪತಿಯ ಇಸ್ಕಾನ್ ದೇಗುಲಕ್ಕೆ ಬಾಂಬ್ ಬೆದರಿಕೆ ಬಂದಿರುವುದು ತಿಳಿದು ಬಂದಿದೆ. ಐಸಿಸ್ ಭಯೋತ್ಪಾದಕರು ದೇವಾಲಯವನ್ನು ಸ್ಫೋಟಿಸುತ್ತಾರೆ ಎಂದು ಇಮೇಲ್‌ನಲ್ಲಿ ಬೆದರಿಕೆಯೊಡ್ಡಲಾಗಿದೆ. ಈ ಬಗ್ಗೆ ದೇವಾಲಯದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ತಿರುಪತಿ ಪೊಲೀಸರು, ಬಾಂಬ್ ನಿಷ್ಕ್ರಿಯ ಹಾಗೂ ಶ್ವಾನ ದಳದ ಜತೆ ಸ್ಥಳಕ್ಕೆ ಧಾವಿಸಿ ದೇಗುಲವನ್ನು ಪರಿಶೀಲಿಸಿದ್ದಾರೆ. ಯಾವುದೇ ಸ್ಫೋಟಕ ಅಥವಾ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಹಾಗಾಗಿ ಇದೊಂದು ಹುಸಿ ಬಾಂಬ್ ಬೆದರಿಕೆ ಇರಬಹುದು ಎಂದು ಪೊಲೀಸರು ಶಂಕಿ ವ್ಯಕ್ತಪಡಿಸಿದ್ದಾರೆ.
ಸತತ ಬಾಂಬ್ ಬೆದರಿಕೆ ಸಂದೇಶಗಳಿಂದ ತಿರುಪತಿಯಲ್ಲಿ ಜನ ಭಯಭೀತರಾಗಿದ್ದಾರೆ. ಬೆದರಿಕೆ ಹಾಕುತ್ತಿದ್ದವರ ಪತ್ತೆಗೆ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಶುಕ್ರವಾರ ಆಂಧ್ರಪ್ರದೇಶದ ಮೂರು ಪ್ರಮುಖ ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿತ್ತು. ಪರಿಶೀಲನೆ ಬಳಿಕ ಅವು ಹುಸಿ ಬೆದರಿಕೆಗಳು ಎಂಬುದು ಖಚಿತವಾಗಿತ್ತು.