ತಿರುಪತಿ ಲಡ್ಡು ವಿವಾದ: ತಪ್ಪಿತಸ್ಥರನ್ನು ದೇಶದಿಂದ ಗಡಿಪಾರು ಮಾಡಿ
ಹುಬ್ಬಳ್ಳಿ: ತಿರುಪತಿ ಸರ್ವಧರ್ಮದ ಶಕ್ತಿ ಕೇಂದ್ರವಾಗಿದ್ದು, ಅಲ್ಲಿನ ಪ್ರಸಾದ ಲಡ್ಡವಿನಲ್ಲಿ ಯಾರಾದರೂ ಮಾಂಸ, ಚರ್ಬಿ ಬೆರಕೆ ಮಾಡಿದ್ದರೆ ಅಂಥವರ ಮೇಲೆ ಕ್ರಮ ಕೈಗೊಂಡು ಶಿಕ್ಷೆ ವಿಧಿಸಬೇಕು. ಕಾನೂನು ಪ್ರಕಾರ ದಂಡ ಹಾಕಿ ದೇಶದಿಂದ ಉಚ್ಛಾಟಿಸಬೇಕು ಎಂದು ವರೂರ ನವಗ್ರಹ ಕ್ಷೇತ್ರದ ಶ್ರೀ ಗುಣಧರನಂದಿ ಸ್ವಾಮೀಜಿ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಾದದ ಹೆಸರಿನಲ್ಲಿ ಅನ್ಯಾಯ ಮಾಡುವವರಿಗೆ ಯಾವುದೇ ರೀತಿಯ ಕ್ಷಮೆಯಿಲ್ಲ. ಇಂತಹ ಹೀನ ಕೃತ್ಯ ಎಸಗಿದವರನ್ನು ದೇಶದಿಂದಲೇ ಗಡಿಪಾರು ಮಾಡಬೇಕು. ಈ ವಿಷಯವಾಗಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಕೆಲವರು ಸಾಕಷ್ಟು ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ತಕ್ಷಣ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಅವರನ್ನು ಕ್ಷಮಿಸುವುದಿಲ್ಲ. ನಾವು ಅಲ್ಪಸಂಖ್ಯಾತರು ಎಂದು ಏನು ಬೇಕಾದರೂ ಮಾತನಾಡಬಹುದೆಂದು ಅಂದುಕೊಂಡಿದ್ದರೆ ಸುಮ್ಮನಿರಲ್ಲ.. ಅಂತಹವರ ವಿರುದ್ಧ ಕಾನೂನು ಕ್ರಮಕ್ಕಾಗಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.