ತಿರುಬೋಕಿ ಮನೆಯಲ್ಲಿ ಊಟ…
ತಿರುಬೋಕಿ ಮತ್ತು ತಿರುಕೇಸಿ ಇಬ್ಬರೂ ಭಯಂಕರ ದೋಸ್ತರು. ಇವರಿಬ್ಬರ ದೋಸ್ತಿ ಕಂಡು ಬಹಳಷ್ಟು ಜನರಿಗೆ ಹೊಟ್ಟೆಕಿಚ್ಚು ಇತ್ತು. ಇಬ್ಬರಿಗೂ ರಾಜಕೀಯ ಹುಚ್ಚು ಹೆಚ್ಚಿತ್ತು ಹಾಗಾಗಿ ಇಬ್ಬರೂ ರಾಜಕೀಯ ಸೇರಿದರು. ಅವರೊಂದು ಪಕ್ಷ ಇವರೊಂದು ಪಕ್ಷ. ವಯಸ್ಸಿನಲ್ಲಿ ದೊಡ್ಡವನಾದ ತಿರುಬೋಕಿ ತಾನಿರುವ ಪಕ್ಷವನ್ನು ಬಿಟ್ಟು ಇನ್ನೊಂದು ಪಕ್ಷಕ್ಕೆ ಹೋದ. ಸ್ವಲ್ಪ ದಿನಗಳಲ್ಲಿ ತಿರುಕೇಸಿಯೂ ಅದೇ ಪಕ್ಷಕ್ಕೆ ಸೇರಿದ. ಇಬ್ಬರೂ ಪಕ್ಷಕ್ಕಾಗಿ ಊರೂರು ತಿರುಗಾಡಿದರು. ತಿರುಬೋಕಿಯ ಹೆಸರು ಮೇಲ್ಮಟ್ಟಕ್ಕೆ ಇತ್ತಾದ್ದರಿಂದ ಮೂರನೇ ಮಹಡಿ ಏರಿ ಕುರ್ಚಿ ಹಿಡಿದ. ತಿರುಕೇಸಿಯೂ ಸಹ ಮಂತ್ರಿಯಾಗಿ ತನ್ನ ಮಂದಿಯನ್ನು ಹತ್ತಿರತ್ತಿರ ಮಾಡಿಕೊಳ್ಳುತ್ತಿದ್ದ. ನೋಡ ನೋಡುತ್ತಿದ್ದಂತೆ ತಿರುಬೋಕಿಯು ಡೆಲ್ಲಿ ದಾರಿ ಹಿಡಿದು ದೊಡ್ಡ ಕುರ್ಚಿಯ ಮೇಲೆ ಕುಳಿತುಕೊಂಡ. ತಿರುಕೇಸಿ ಇಲ್ಲಿಯೇ ತಿರುಗಾಡಿ.. ನಾನಂಗೆ.. ನೀನಂಗೆ… ಅವರಂಗೆ… ಇವರಿಂಗೆ ಎಂದು ಹೇಳುತ್ತ ಅಡ್ಡಾಡುತ್ತಿದ್ದ. ಅವರಂಗೆ ಅಂದದ್ದು ನನಗೇನೇ ಅಂದುಕೊಂಡ ತಿರುಬೋಕಿ ಸಾಹೇಬರು ಒಂದು ದಿನ ಎದ್ನಡಿ ಎಂದು ಬೈದರು. ಆಗ ಹೆಗಲ ಮೇಲೆ ಟವಲ್ ಹಾಕಿಕೊಂಡು ಎದ್ದುಹೋದ ತಿರುಕೇಸಿಯು ಸ್ವಲ್ಪದಿನ ಸುಮ್ಮನಿದ್ದು ಆಮೇಲೆ ಬೇರೆಯವರ ಹತ್ತಿರ ಓಡೋಡಿ ಹೋದ..ಅವರೂ ಸಹ ಬಾರೋ.. ಬಾರೋ ಎಂದು ಕರೆದು ಕೂಡಿಸಿಕೊಂಡರು. ಆಗ ತಿರುಬೋಕಿ-ತಿರುಕೇಸಿಯು ನಾನೊಂದು ತೀರ-ನೀನೊಂದು ತೀರ ಎಂಬಂತಾದರು. ಹುಚ್ಚುಲುಗನು ತಿರುಬೋಕಿ-ತಿರುಕೇಸಿ ಬೇರೆ.. ಬೇರೆ ತೀರ… ಹೋಗೋಣ ಬಾರಾ ಎಂದು ತನ್ನ ಪತ್ರಿಕೆಯಲ್ಲಿ ಬರೆಯುತ್ತಿದ್ದ. ಒಂದು ದಿನ ಹುಚ್ಚುಲುಗ ತಿರುಬೋಕಿನ್ನು ಭೇಟಿ ಮಾಡಿ.. ಸಾರ್.. ನಿಮ್ಮ ಮತ್ತು ಅವರ ಹೆಸರು ಬೇರೆ.. ಬೇರೆ ಇತ್ತು. ನಿಮ್ಮನ್ಯಾಕೆ ತಿರುಬೋಕಿ-ತಿರುಕೇಸಿ ಎಂದು ಕರೆಯುತ್ತಾರೆ ಹೇಳಿ ಎಂದು ಗಂಟುಬಿದ್ದ… ಆಗ ತಿರುಬೋಕಿ ಸಾಹೇಬರು… ನೋಡಪ್ಪ ಈ ತಿರುಕೇಸಿಯನ್ನು ಕೈ ಹಿಡಿದು ನಡೆಸಿದವನು ನಾನು. ಲುಂಗಿ ಉಡಲು ಕಲಿಸಿದವನು ನಾನು.. ಹೇಗೆ ಮಾತನಾಡಬೇಕು ಎಂದು ಹೇಳಿಕೊಟ್ಟವನು ನಾನು… ಅವನು ನನಗೇ ಹೀಗೆ ಮಾಡಿದ ನೋಡು ಅಂದ. ಅದಕ್ಕೆ ಹುಚ್ಚುಲುಗನು ಸಾರ್.. ನಾನು ಇಷ್ಟು ದೊಡ್ಡ ಸ್ಥಾನಕ್ಕೆ ಬರಲು ಬೇರೆಯೇ ಇದೆ ಅಂತಾರಲ್ಲ ಅದು ಏನು ಎಂದು ಕೇಳಿದ… ಅದಕ್ಕೆ ತಿರಬೋಕಿಯು ಅಯ್ಯೋ ಅದಾ… ಅವತ್ತು ಮಣ್ಣೆತ್ತಿನ ಅಮವಾಸ್ಯೆ ಇತ್ತು. ನಾನು ತಿರುಕೇಸಿಯನ್ನು ಊಟಕ್ಕೆ ಕರೆದಿದ್ದೆ. ಊಟವಾದ ಮೇಲೆ ಸುಮ್ನೆ ತಮಾಷೆಗೆ ಅಂತ ನಾನು… ನೋಡು ತಿರುಕೇಸ್ಯಾ… ನಾನು ಇನ್ನೂ ಚಿಕ್ಕವನಿದ್ದೆ ನಮ್ಮ ತಾತನ ಸೋದರತ್ತೆಯು ನನ್ನ ಕರೆದು.. ನೋಡೋ ಪುಟ್ಟಾ… ಮಣ್ಣೆತ್ತಿನ ಅಮವಾಸ್ಯೆ ದಿನ ಯಾವನಾದರೂ ತಿರಕೇಸಿಗೆ ಊಟ ಮಾಡಿಸು ನೀನು ದೊಡ್ಡ ವ್ಯಕ್ತಿ ಆಗುತ್ತಿ ಅಂದಿದ್ದಾಳೆ ನೀನು ಬಂದದ್ದು ಒಳ್ಳೆಯದಾಯಿತು ಅಂದೆ. ಅದಕ್ಕೆ ತಿರುಕೇಸಿಯು ಅಯ್ಯೋ ನಮ್ಮ ಅಜ್ಜಿಯ ಸೋದರ ಮಾವನು ನನಗೂ ಹೇಳಿದ್ದ. ಯಾವನಾದರೂ ತಿರುಬೋಕಿ ಮನೆಯಲ್ಲಿ ಅದೇ ದಿನ ಊಟ ಮಾಡಿದರೆ ನೀನು ಆ ಕುರ್ಚಿಯ ಮೇಲೆ ಕೂಡುತ್ತಿ ಎಂದು ಹೇಳಿದ್ದ.. ಅದಕ್ಕಾಗಿ ನಿಮ್ಮ ಮನೆಯಲ್ಲಿ ಊಟ ಮಾಡಿದೆ ಎಂದು ಹೇಳಿದ. ಆ ಮಾತು ಇಂದು ನಿಜವಾಗಿದೆ ನೋಡು.