ತುಂಬಿ ಹರಿದ ಹುಲಿಕೇರಿ ಕೆರೆ
ಅಳ್ನಾವರ: ಅಳ್ನಾವರ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವ ಬೆಳಗಾವಿ ಕಂದಾಯ ವಿಭಾಗದಲ್ಲಿಯೇ ದೊಡ್ಡ ಕೆರೆ ಎನಿಸಿರುವ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಹುಲಿಕೇರಿ ಕೆರೆ ತುಂಬಿ ಹರಿಯುತ್ತಿದ್ದು ಜಲಪಾತದಂತೆ ಕಾಣುತ್ತಿದೆ.
ಕೆರೆ ಉಕ್ಕಿ ಹರಿಯುತ್ತಿರುವುದನ್ನು ಸುತ್ತಮುತ್ತಲಿನ ಗ್ರಾಮಸ್ಥರು, ಪ್ರಕೃತಿ ಪ್ರಿಯರು ದೂರದಿಂದಲೇ ಕಣ್ತುಂಬಿಕೊಳ್ಳುತ್ತಿದ್ದಾರೆ.
ಕಳೆದ ೨೦೧೯ರಲ್ಲಿ ಪ್ರವಾಹದಿಂದ ಕೆರೆಯ ಕಟ್ಟೆ ಒಡೆದು ಹೋಗಿ ಅನಾಹುತ ಸೃಷ್ಟಿಸಿದ ನಂತರ ಕಟ್ಟೆಯನ್ನು ಮರು ನಿರ್ಮಾಣ ಮಾಡಿದ ನಂತರ ಮೊದಲ ಬಾರಿಗೆ ತುಂಬಿ ಹರಿಯುತ್ತಿರುವ ಕೆರೆಯ ದೃಶ್ಯ ಮನಮೋಹಕವಾಗಿದೆ. ಸುತ್ತಮುತ್ತಲಿನ ಜನರಿಗೆ ಪ್ರವಾಸಿ, ಜಲಪಾತ ತಾಣವಾಗಿ ಮಾರ್ಪಟ್ಟಿದ್ದು ಜನರು ಕೆರೆಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಸುಮಾರು ಹತ್ತು ಕಿಲೋ ಮೀಟರ್ ಸುತ್ತಳತೆ ಹೊಂದಿರುವ ಕೆರೆ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ವಿಸ್ತರಿಸಿಕೊಂಡಿದೆ. ಎರಡು ಜಿಲ್ಲೆಗಳ ಹದಿನಾರು ಸಾವಿರ ಎಕರೆ ಜಮೀನಿಗೆ ನೀರು ಒದಗಿಸುವ ಸಾಮರ್ಥ್ಯ ಹೊಂದಿರುವ ಕೆರೆ ಇಪ್ಪತ್ತೈದು ಕಿಮೀ ಉದ್ದದ ಕಾಲುವೆ ಹೊಂದಿದೆ.
ಸತತ ಮಳೆಯಾಗುತ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿರುವ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು ಕೆರೆಯ ಹತ್ತಿರಕ್ಕೆ ಜನರು ಹೋಗದಂತೆ ನಿಗಾವಹಿಸಿದ್ದಾರೆ.