For the best experience, open
https://m.samyuktakarnataka.in
on your mobile browser.

ತೋಳನಕೆರೆ ಪಾರ್ಕ್‌ಗೆ ಬೇಕಿದೆ ಕಾಯಕಲ್ಪ…!

07:00 AM May 30, 2024 IST | Samyukta Karnataka
ತೋಳನಕೆರೆ ಪಾರ್ಕ್‌ಗೆ ಬೇಕಿದೆ ಕಾಯಕಲ್ಪ…

ಹರ್ಷ ಕುಲಕರ್ಣಿ
ಹುಬ್ಬಳ್ಳಿ: ಕೋಟ್ಯಂತರ ರೂಪಾಯಿ ವ್ಯಯಿಸಿ ಅಭಿವೃದ್ಧಿ ಮಾಡಲಾಗಿರುವ ತೋಳನ ಕೆರೆ ನಿರ್ವಹಣೆ ಕೊರತೆಯಿಂದ ತನ್ನ ಸೊಬಗನ್ನು ಕಳೆದುಕೊಳ್ಳುತ್ತಿದೆ. ಹಾಳಾದ ವ್ಯಾಯಾಮ ಪರಿಕರ ಹಾಗೂ ದುರ್ವಾಸನೆ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಮಾರ್ಟ್‌ಸಿಟಿ ಯೋಜನೆಯಡಿ ಶಿರೂರು ಪಾರ್ಕ್ ರಸ್ತೆಯ ಅಂಚಿನಲ್ಲಿರುವ ೩೨ ಎಕರೆ ವಿಸ್ತೀರ್ಣದ ತೋಳನ ಕೆರೆಯನ್ನು ಅಂದಾಜು ೨೬ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು. ಇದೀಗ ಸೂಕ್ತ ನಿರ್ವಹಣೆ ಕೊರತೆಯಿಂದ ಬಹುಬೇಗನೇ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ.
ಕೆರೆ ಪ್ರದೇಶದಲ್ಲಿ ಅತ್ಯಾಕರ್ಷಕ ಉದ್ಯಾನ, ವಾಯು ವಿಹಾರಕ್ಕಾಗಿ ೧.೫ ಕಿಮೀ ಪಾದಚಾರಿ ಮಾರ್ಗ, ವಿವಿಧ ಜಾತಿಯ ಮರ, ತರಹೇವಾರಿ ಗಿಡಗಳು, ಹುಲ್ಲು ಹಾಸು, ಮನಮೋಹಕ ಪುಷ್ಪಗಳು, ಮಕ್ಕಳ ಆಟಿಕೆ ಪರಿಕರಗಳು ಮತ್ತು ವ್ಯಾಯಾಮ ಪರಿಕರಗಳು ಉದ್ಯಾನ್ಕಕೆ ಮೆರಗು ತಂದಿದ್ದವು.
ಸಾಂಸ್ಕೃತಿಕ ಸೇರಿದಂತೆ ಇತರ ಕಾರ್ಯಕ್ರಮಗಳಿಗಾಗಿ ೪೦೦ ಜನರ ಸಾಮರ್ಥ್ಯದ ತೆರೆದ ಸಭಾಂಗಣವನ್ನೂ ನಿರ್ಮಿಸಲಾಗಿದೆ. ಇಡೀ ಪ್ರದೇಶವನ್ನು ಕಣ್ಣುಂಬಿಕೊಳ್ಳಲು ೨ ಕಡೆ ವೀಕ್ಷಣಾ ಗೋಪುರ ಸಹ ನಿರ್ಮಿಸಲಾಗಿದೆ. ಆದರೆ, ಇವೆಲ್ಲವೂ ಅಳಿವಿನ ಅಂಚಿನಲ್ಲಿವೆ.
ಸೂಕ್ತ ನಿರ್ವಹಣೆಯ ಕೊರತೆಯಿಂದ ಪಾದಚಾರಿ ಮಾರ್ಗದಲ್ಲಿ ಹಾಕಲಾದ ಫೆವರ್ಸ್ ಕಿತ್ತುಹೋಗಿವೆ. ಕೆಲವೆಡೆ ಪಾದಚಾರಿ ಮಾರ್ಗದ ಅಕ್ಕಪಕ್ಕದ ಅಲಂಕಾರಿಕ ಗಿಡಗಳನ್ನು ಕತ್ತರಿಸದೇ ಇರುವುದರಿಂದ ರಸ್ತೆಗೆ ಚಾಚಿಕೊಂಡು, ವಾಯು ವಿಹಾರಿಗಳಿಗೆ ತೊಂದರೆ ಉಂಟಾಗುತ್ತಿದೆ.
ಉದ್ಯಾನದಲ್ಲಿ ಜನರ ಚಲನವಲನಗಳ ಮೇಲೆ ನಿಗಾ ಇಡಲು ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ, ಅವು ಕಾರ್ಯ ನಿರ್ವಹಿಸುತ್ತಿವೆಯೇ ಅಥವಾ ಅವುಗಳನ್ನು ನಿರಂತರ ಮಾನಿಟರ್ ಮಾಡಲಾಗುತ್ತಿದೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ. ಕೆಲವೆಡೆ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡಿದ್ದರೂ ಅಲ್ಲಿನ ಸಿಬ್ಬಂದಿ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಸಿಸಿ ಕ್ಯಾಮೆರಾ ಕಾರ್ಯನಿರ್ವಹಣೆಯ ಮೇಲೆ ಅನುಮಾನ ಮೂಡಿಸಿವೆ.
ಉದ್ಯಾನವನದ ಅವ್ಯವಸ್ಥೆ ಕುರಿತು ಯಾರಿಗೆ ಮಾಹಿತಿ ನೀಡಬೇಕು ಎಂಬ ಮಾಹಿತಿಯೇ ಇಲ್ಲ, ಇಲ್ಲಿನ ಸಿಬ್ಬಂದಿಗೆ ಹೇಳಿದರೂ ಕ್ಯಾರೆ ಎನ್ನುತ್ತಿಲ್ಲ ಎಂಬುದು ವಾಯುವಿಹಾರಿಗಳ ಆರೋಪ. ಉದ್ಯಾನವನದ ಕುಂದು-ಕೊರತೆಗಳ ಬಗ್ಗೆ ದೂರು ನೀಡಲು ಸಂಬಂಧಿಸಿದ ಅಧಿಕಾರಿಗಳ ದೂರವಾಣಿ ಫಲಕ ಹಾಕಬೇಕೆಂದು ಸ್ಥಳೀಯರ ಒತ್ತಾಯವಾಗಿದೆ. ಅಲ್ಲದೇ, ಸಾರ್ವಜನಿಕರೂ ಕೂಡ ತಮ್ಮ ಜವಾಬ್ದಾರಿಯನ್ನು ಮೆರೆಯಬೇಕಿದ್ದು, ಎಲ್ಲೆಂದರಲ್ಲಿ ತಿನಿಸುಗಳ ಪ್ಯಾಕೆಟ್, ಕಸ, ಪ್ಲಾಸ್ಟಿಕ್ ತ್ಯಾಜ್ಯ, ನೀರಿನ ಬಾಟಲಿಗಳ್ನು ಎಸೆಯದೇ ನಿಗದಿತ ಸ್ಥಳಗಳಲ್ಲಿ ಅವುಗಳನ್ನು ಹಾಕಬೇಕಿದೆ.

ಹಸಿರು ಬಣ್ಣಕ್ಕೆ ತಿರುಗಿದ ನೀರು…
ಕೆರೆ ನೀರಿನ ಶುದ್ಧೀಕರಣಕ್ಕಾಗಿ ಕೆರೆಯಲ್ಲಿ ಫ್ಲೋಟಿಂಗ್ ಏರಿಯೇಟರ್ ಅಳವಡಿಸಲಾಗಿದೆ. ಕೆರೆಗೆ ವಿವಿಧ ಪ್ರದೇಶಗಳಿಂದ ಹರಿದು ಬರುವ ಕೊಳಚೆ ನೀರಿಗೆ ಶುದ್ಧೀಕರಣ ಘಟಕ ಸ್ಥಾಪಿಸಿದರೂ ಕೆರೆ ನೀರು ಸಂಪೂರ್ಣವಾಗಿ ಹಸಿರು ಬಣ್ಣಕ್ಕೆ ತಿರುಗಿದೆ. ಅಲ್ಲದೇ ನೀರಲ್ಲಿ ಪಾಚಿ, ನಾನಾ ಬಗೆಯ ಗಿಡಕಂಟಿ ಹರಡಿಕೊಂಡಿವೆ. ಈ ಕೆರೆಯ ಸುತ್ತಲೂ ನಾಲ್ಕೈದು ಕಡೆ ಕೆರೆಗೆ ಇಳಿಯಲು ನಿರ್ಮಿಸಿದ ಮೆಟ್ಟಿಲುಗಳು ಹುಲ್ಲುಗಳಿಂದ ಆವೃತವಾಗಿ ಕಾಣದಂತೆ ಆಗಿವೆ. ಕೆಲವೇ ವರ್ಷಗಳಲ್ಲಿ ಕೆರೆ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿರುವುದನ್ನು ನೋಡಿ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನವರೆಗೂ ಪ್ರತಿದಿನ ವಾಯು ವಿಹಾರಕ್ಕೆ ತೋಳನ ಕೆರೆಗೆ ಬರುತ್ತಿದ್ದೆವು. ಆದರೆ, ಈಗ ಅಲ್ಲಿನ ಚಾಲನಾ ಪಥ ಸಂಪೂರ್ಣ ಹಾಳಾಗಿದೆ. ನೆಲಕ್ಕೆ ಅಳವಡಿಸಲಾಗಿದ್ದ ಪೆವರ್ಸ್ ಮೇಲೆದ್ದಿವೆ. ಇದರಿಂದ ವೃದ್ಧರು ಎಡವಿ ಬೀಳುವ ಸಾಧ್ಯತೆಗಳಿವೆ. ಅಲ್ಲದೇ, ಇಲ್ಲಿನ ಹಸಿರು ನೀರಿನಿಂದ ದುರ್ವಾಸನೆ ಹೆಚ್ಚಾಗಿದೆ. ಹೀಗಾಗಿ ಹಲವು ದಿನಗಳಿಂದ ತೋಳನ ಕೆರೆಗೆ ಬರುವುದನ್ನು ಬಿಟ್ಟಿದ್ದೇವೆ.

- ಮಹೇಶ ಹೊಸೂರು, ವಾಯು ವಿಹಾರಿ.

ವಾಕಿಂಗ್‌ಗೆ ಹೋದಾಗ ವಾಯು ವಿಹಾರಿಗಳು ಸಮಸ್ಯೆ ಹೇಳಿಕೊಂಡಿದ್ದಾರೆ. ಜಿಮ್ ಪರಿಕರಗಳು ಶೇ. ೮೦ ರಷ್ಟು ಹಾಳಾಗಿವೆ. ಈ ಬಗ್ಗೆ ಪಾಲಿಕೆ, ಸ್ಮಾರ್ಟ್ ಸಿಟಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ತೋಳನ ಕೆರೆ ಉದ್ಯಾನ ಸಂಪೂರ್ಣ ಹಾಳಾಗುವ ಮುನ್ನ ಅಧಿಕಾರಿಗಳು ಇಲ್ಲಿ ಭೇಟಿ ನೀಡಿ ಪರಿಶೀಲಿಸಬೇಕಿದೆ.

- ರಾಮಣ್ಣ ಬಡಿಗೇರ, ಪಾಲಿಕೆ ಸದಸ್ಯ.