For the best experience, open
https://m.samyuktakarnataka.in
on your mobile browser.

ಕಟೀಲು, ಕರಂದ್ಲಾಜೆಯವರೇ ಜಿಲ್ಲೆಯ ಸ್ವಾಭಿಮಾನಿ ಜನತೆಗೆ ಉತ್ತರಿಸಿ

10:00 PM Feb 17, 2024 IST | Samyukta Karnataka
ಕಟೀಲು  ಕರಂದ್ಲಾಜೆಯವರೇ ಜಿಲ್ಲೆಯ ಸ್ವಾಭಿಮಾನಿ ಜನತೆಗೆ ಉತ್ತರಿಸಿ

ಮಂಗಳೂರು: ನಿಮ್ಮನ್ನು ಮಂಗಳೂರು, ಉಡುಪಿ ಜನ ಯಾಕೆ ಗೆಲ್ಲಿಸಬೇಕು ಕಟೀಲ್ ಅವರೇ, ಕರಂದ್ಲಾಜೆ ಅವರೇ, ಬನ್ನಿ ಜಿಲ್ಲೆಯ ಸ್ವಾಭಿಮಾನಿ ಜನತೆಗೆ ಉತ್ತರ ಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.
ಅಡ್ಯಾರಿನ ಸಹ್ಯಾದ್ರಿ ಮೈದಾನದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್ ಅವರೇ ಒಂದೇ ಒಂದು ದಿನ ರಾಜ್ಯದ ಪರವಾಗಿ ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತಿದಿಯೇನಪ್ಪಾ? ತಾಯಿ ಶೋಭಾ ಕರಂದ್ಲಾಜೆ ನೀನಾದ್ರೂ ರಾಜ್ಯದ ಪರವಾಗಿ ಒಂದೇ ಒಂದು ಮಾತಾಡಿದ್ದೀಯೇನಮ್ಮಾ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ನಿಮ್ಮನ್ನು ಮಂಗಳೂರು, ಉಡುಪಿ ಜಿಲ್ಲೆಯ ಸ್ವಾಭಿಮಾನಿ ಜನತೆ ಏಕೆ ಗೆಲ್ಲಿಸಬೇಕು ಎಂದು ಪ್ರಶ್ನಿಸಿದರು.
೨೦೧೩-೧೮ ರ ವರೆಗೂ ನಾವು ಕೊಟ್ಟ ಭರವಸೆಗಳಲ್ಲಿ ಶೇ೯೮ ರಷ್ಟನ್ನು ಈಡೇರಿಸಿದೆವು. ಈ ಬಾರಿ ಚುನಾವಣೆ ವೇಳೆ ೫ ಗ್ಯಾರಂಟಿಗಳ ಜತೆಗೆ ಹಲವು ಭರವಸೆ ನೀಡಿದ್ದೆವು. ಕೇವಲ ೮ ತಿಂಗಳಲ್ಲಿ ಐದಕ್ಕೆ ಐದೂ ಗ್ಯಾರಂಟಿ ಯೋಜನೆಗಳನ್ನೂ ಜಾರಿ ಮಾಡಿ ಇಡೀ ದೇಶಕ್ಕೆ ಕರ್ನಾಟಕ ಮಾದರಿ ಅಭಿವೃದ್ಧಿಯನ್ನು ಕೊಟ್ಟಿದ್ದೇವೆ. ನಾವು ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೇ ನಾವು ಕೊಟ್ಟ ಭರವಸೆಗಳನ್ನು ಈಡೇರಿಸಲು ಶುರು ಮಾಡಿದೆವು. ನಮ್ಮ ಮೊದಲ ಗ್ಯಾರಂಟಿ ಶಕ್ತಿ ಯೋಜನೆಯಿಂದ ೧೫೫ ಕೋಟಿ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಿದರು. ಬಿಜೆಪಿ ತನ್ನ ಇತಿಹಾಸದಲ್ಲಾಗಲೀ, ವರ್ತಮಾನದಲ್ಲಾಗಲೀ ಇಷ್ಟೊಂದು ಜನೋಪಯೋಗಿ ಕೆಲಸ ಮಾಡಿದ್ದರೆ ಒಂದೇ ಒಂದು ಉದಾಹರಣೆ ಕೊಡಿ ಎಂದು ಮುಖ್ಯಮಂತ್ರಿಗಳು ಜನರಿಗೆ ಕೇಳಿದರು. ಜನರು ಇಲ್ಲಾ ಇಲ್ಲಾ ಏನಿಲ್ಲ, ಯಾವುದೂ ಇಲ್ಲ ಎಂದು ಕೂಗಿದರು. ಅದೇ ರೀತಿ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳಲ್ಲೂ ಕೋಟಿ ಕೋಟಿ ಮಹಿಳೆಯರು ಗ್ಯಾರಂಟಿಗಳ ಲಾಭವನ್ನು ಪ್ರತೀ ತಿಂಗಳು ಪಡೆಯುತ್ತಿದ್ದಾರೆ. ನಿಮಗೆಲ್ಲಾ ಈ ಯೋಜನೆಯ ಅನುಕೂಲ ಸಿಗುತ್ತಿದೆಯಾ ಎಂದು ಮುಖ್ಯಮಂತ್ರಿಗಳು ಕೇಳಿದ್ದಕ್ಕೆ ಸಿಗುತ್ತಿದೆ , ಸಿಗುತ್ತಿದೆ ಎಂದು ಕೂಗಿ ಮುಖ್ಯಮಂತ್ರಿಗಳಿಗೆ, ಸರ್ಕಾರಕ್ಕೆ ಜಯಕಾರ ಹಾಕಿದರು.
ಬಡವರು, ಮಧ್ಯಮ ವರ್ಗದವರಿಗೆ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ ಬಳಿಕವೂ ರಾಜ್ಯದ ಆರ್ಥಿಕತೆಯನ್ನು ಸದೃಡವಾಗಿ ಪ್ರಗತಿ ಪಥದಲ್ಲಿ ಮುನ್ನಡೆಸುತ್ತಿದ್ದೇವೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.
ಕಾಂಗ್ರೆಸ್‌ನ ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಸ್ವತಃ ನರೇಂದ್ರ ಮೋದಿಯೇ ಹೇಳಿದ್ದರು. ದಿವಾಳಿ ಆಗಿರುತ್ತಿದ್ದರೆ ೩.೭೧ ಕೋಟಿ ರೂ.ಗಳ ಬಜೆಟ್ ಮಂಡಿಸಲು ಆಗುತ್ತಿತ್ತಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ರಾಜ್ಯ ಈಗ ಆರ್ಥಿಕವಾಗಿ ಸುಭದ್ರವಾಗಿದೆ. ಬಿಜೆಪಿ, ಮೋದಿ ಯಾಕೆ ಇಷ್ಟೊಂದು ಸುಳ್ಳು ಹೇಳುತ್ತಿದ್ದಾರೆಂದರೆ ಅವರಲ್ಲಿ ಬೇರೆ ಯಾವ ಬಂಡವಾಳವೇ ಇಲ್ಲ ಎಂದರು.
ತೆರಿಗೆ ಸಂಗ್ರಹದಲ್ಲಿ ದೇಶದಲ್ಲೇ ೨ನೇ ದೊಡ್ಡ ರಾಜ್ಯವಾಗಿ ೪.೩೦ ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ನೀಡುತ್ತಿದ್ದರೂ ನಮ್ಮ ಪಾಲಿನ ೫೦,೨೫೭ ಕೋಟಿ ರೂ. ಕೊಟ್ಟಿಲ್ಲ. ಕರ್ನಾಟಕಕ್ಕೆ ನರೇಂದ್ರ ಮೋದಿ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ಹೇಳಿದರೆ ಬಿಜೆಪಿಯವರಿಗೆ ಯಾಕೆ ಮೈ ಉರಿ? ರಾಜ್ಯದ ೭ ಕೋಟಿ ಕನ್ನಡಿಗರ ಹಿತರಕ್ಷಣೆಯ ಬದ್ಧತೆ ನಿಮ್ಮಲ್ಲಿ ಇದ್ದಿದ್ದರೆ ದೆಹಲಿಯಲ್ಲಿ ನಡೆದ ನಮ್ಮ ಚಳವಳಿಯಲ್ಲಿ ಭಾಗವಹಿಸಬೇಕಿತ್ತು. ಕೇಂದ್ರ ಬಿಜೆಪಿ ಸರ್ಕಾರದಿಂದ ಕನ್ನಡಿಗರಿಗೆ ಅನ್ಯಾಯ ಆಗಿದ್ದಷ್ಟೇ ಅಲ್ಲ, ಇಡೀ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗಿದೆ ಎಂದು ಸಿದ್ದರಾಮಯ್ಯ ದೂರಿದರು.

ಇಲ್ಲ…ಇಲ್ಲ…:
ಜಾತಿ-ಜಾತಿಗಳ ಮಧ್ಯೆ, ಧರ್ಮ-ಧರ್ಮಗಳ ಮಧ್ಯೆ ಕಿತ್ತಾಟ, ಜಗಳ ತಂದಿಟ್ಟಿರುವುದು ಬಿಟ್ಟರೆ ಜನ ಸಾಮಾನ್ಯರ ಬದುಕಿಗೆ ಅನುಕೂಲ ಆಗುವ ಒಂದೇ ಒಂದು ಕಾರ್ಯಕ್ರಮವನ್ನು ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಸರಕಾರದಿಂದ ಜಾರಿ ಆಗಿದೆಯಾ? ಡೀಸೆಲ್-ಪೆಟ್ರೋಲ್ ಬೆಲೆ ಕಡಿಮೆ ಆಯ್ತಾ ? ಅಡುಗೆ ಗ್ಯಾಸ್ ಬೆಲೆ ಕಡಿಮೆ ಆಗಿದೆಯಾ ? ಕಪ್ಪು ಹಣ ವಾಪಾಸ್ ಬಂದಿದೆಯಾ? ಅಚ್ಛೆ ದಿನ್ ಯಾರಿಗಾದರೂ ಬಂದಿದೆಯಾ? ಹೇಳಿ ಎಂದು ನೆರೆದಿದ್ದ ಜನಸ್ತೋಮಕ್ಕೆ ಮುಖ್ಯಮಂತ್ರಿಗಳು ಕೇಳಿದಾಗ, ಜನರು ಇಲ್ಲ, ಇಲ್ಲ, ಏನಿಲ್ಲ ಎಂದು ಕೂಗಿದರು.