For the best experience, open
https://m.samyuktakarnataka.in
on your mobile browser.

ದತ್ತ ಜಯಂತಿ: ಲಕ್ಷಾಂತರ ಭಕ್ತರಿಂದ ದತ್ತ ಪಾದುಕೆಯ ದರ್ಶನ

08:57 PM Dec 26, 2023 IST | Samyukta Karnataka
ದತ್ತ ಜಯಂತಿ  ಲಕ್ಷಾಂತರ ಭಕ್ತರಿಂದ ದತ್ತ ಪಾದುಕೆಯ ದರ್ಶನ

ಬೆಳಗಾವಿ(ಯಕ್ಸಂಬಾ): `ದಿಗಂಬರಾ ದಿಗಂಬರಾ ಶ್ರೀಪಾದ ವಲ್ಲಭ ದಿಗಂಬರಾ' ಎಂಬ ನಾಮಸ್ಮರಣೆ ಹಾಗೂ ಜಯಮೋಕ್ಷ ಹಾಕುತ್ತಾ ಲಕ್ಷಾಂತರ ಭಕ್ತರು ಸುಕ್ಷೇತ್ರ ನರಸಿಂಹವಾಡಿಯಲ್ಲಿ ಮಂಗಳವಾರ ದತ್ತ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧಡೆಯಿಂದ ಆಗಮಿಸಿದ ಲಕ್ಷಾಂತರ ಭಕ್ತರು ಶ್ರೀ ದತ್ತ ದರ್ಶನಕ್ಕೆ ಸೋಮವಾರ ಸಾಯಂಕಾಲದಿಂದಲೇ ಆಗಮಿಸುತ್ತಿರುವುದು ಕಂಡುಬಂತು. ಹಲವು ಭಕ್ತರು ಪಾದಯಾತ್ರೆಯ ಮೂಲಕವೂ ಆಗಮಿಸಿದ್ದರು. ಮಂಗಳವಾರ ನಸುಕಿನ ಜಾವದಿಂದ ಸಾಯಂಕಾಲದವರೆಗೆ ಕೊರೆಯುವ ಚಳಿಯಲ್ಲಿಯೇ ಕೃಷ್ಣಾ ಮತ್ತು ಪಂಚಗಂಗಾ ನದಿಯ ಸಂಗಮ ಸ್ಥಾನದಲ್ಲಿ ಮಿಂದು ಪಾವನರಾದರು.
ಮುಂಜಾನೆ ಶ್ರೀ ದತ್ತ ಪಾದುಕೆಗೆ ಕಾಕಡಾರತಿ, ಶಡೋಪಚಾರ, ಪಂಚಾಮೃತ ಅಭಿಷೇಕ, ಮಹಾಪೂಜೆ ಮತ್ತು ಮಹಾಪ್ರಸಾದ. ಕೀರ್ತನೆ, ತೊಟ್ಟಿಲು ಸೇವೆ, ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಆಗಮಿಸಿದ ಭಕ್ತರಿಗಾಗಿ ಸುಲಭ ದರ್ಶನ ಮತ್ತು ಮುಖ್ಯ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ದತ್ತ ಮಂದಿರ ಪರಿಸರದಲ್ಲಿ ಸುಮಾರು ೩೦ ಕಡೆಗಳಲ್ಲಿ ಸಿ.ಸಿ. ಕ್ಯಾಮರಾ ಮತ್ತು ಟಿವಿ ವ್ಯವಸ್ಥೆ ಮಾಡಲಾಗಿತ್ತು. ಬಂದ ಭಕ್ತರಿಗೆ ಮಹಾಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ, ಆರೊಗ್ಯದ ವ್ಯವಸ್ಥೆ, ಸುಲಭ ಶೌಚಾಲಯ ವ್ಯವಸ್ಥೆ ಮಾಡಿದ್ದರು.
ಅಹಿತಕರ ಘಟನೆ ಸಂಭವಿಸದಂತೆ ಸಾಂಗಲಿ ಮತ್ತು ಕೊಲ್ಲಾಪುರ ಜಿಲ್ಲೆಯ ಪೊಲೀಸರು ಬಿಗಿಬಂದೋಬಸ್ತ್ ಕೈಗೊಂಡಿದ್ದರು. ಶ್ರೀ ನರಸಿಂಹಸರಸ್ವತಿ ಸ್ವಾಮೀಜಿ ದತ್ತ ದೇವಸ್ಥಾನ ಕಮಿಟಿಯ ಸದಸ್ಯರು, ಗ್ರಾಪಂ ಸದಸ್ಯರು, ಎನ್‌ಸಿಸಿ ವಿದ್ಯಾರ್ಥಿಗಳು, ಕಾರ್ಯಕರ್ತರು ಮುಂತಾದವರು ದತ್ತ ಜಯಂತಿ ಯಶಸ್ವಿಗೆ ಶ್ರಮಿಸಿದರು. ಎಲ್ಲಿ ನೋಡಿದಲ್ಲೆಲ್ಲಾ ದತ್ತ ನಾಮಸ್ಮರಣೆ ಕೇಳಿಬರುತ್ತಿತ್ತು.