ದಸರಾ: 6ರಂದು ಹಾಫ್ ಮ್ಯಾರಥಾನ್
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವ ಅಂಗವಾಗಿ ಕ್ಷೇತ್ರದ ವತಿಯಿಂದ ಜಿಯೂಸ್ ಫಿಟ್ನೆಸ್ ಕೇಂದ್ರ, ಖೋಲೋ ಇಂಡಿಯಾ ಹಾಗೂ ಡೆಕತ್ಲಾನ್ ಸಹಭಾಗಿತ್ವದಲ್ಲಿ ಅ. 6ರಂದು ದಸರಾ ಹಾಫ್ ಮ್ಯಾರಥಾನ್ ಪಂದ್ಯಾಟ ನಡೆಯಲಿದೆ ಎಂದು ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದ್ದಾರೆ.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವನ್ ಸಿಟಿ ವನ್ ಸ್ಪಿರಿಟ್' ಧ್ಯೇಯದೊಂದಿಗೆ
ಎಲ್ಲಿ ಒಗ್ಗಟ್ಟಿದೆಯೂ ಅಲ್ಲಿ ಬಲವಿದೆ' ಎಂಬ ವಾಕ್ಯದೊಂದಿಗೆ ಈ ಪಂದ್ಯಾಟ ನಡೆಯಲಿದೆ. 21 ಕಿಮೀ, 10ಕಿಮೀ ಹಾಗೂ 5 ಕಿಮೀಗಳ ಮೂರು ವಿಭಾಗಗಳಲ್ಲಿ ಹ್ಯಾಪ್ ಮಾರಥಾನ್ ಆಯೋಜಿಸಲಾಗಿದೆ ಎಂದರು.
ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆಯಲಿರುವ ಹಾಫ್ ಮ್ಯಾರಥಾನ್‌ನಲ್ಲಿ ಪ್ರಥಮ ವಿಜೇತರಿಗೆ 25 ಸಾವಿರ ರೂ. ನಗದು ಬಹುಮಾನ, ದ್ವಿತೀಯ ಬಹುಮಾನ 15ಸಾವಿರ ರೂ. ಆಗಿರುತ್ತದೆ. 21 ಕಿಮೀ ಮ್ಯಾರಥಾನ್ ಬೆಳಗ್ಗೆ 5ಗಂಟೆಗೆ, 10 ಕಿಮೀ ಮ್ಯಾರಥಾನ್ 5.30ಕ್ಕೆ ಹಾಗೂ 5 ಕಿಮೀ ನಡಿಗೆ 6.30ಕ್ಕೆ ಕುದ್ರೋಳಿ ಕ್ಷೇತ್ರದಿಂದ ಆರಂಭಗೊಳ್ಳಲಿದೆ. ಹಾಫ್ ಮ್ಯಾರಥಾನ್ ಕ್ಷೇತ್ರದಿಂದ ಹೊರಟು ನಾರಾಯಣ ಗುರು ಸರ್ಕಲ್ ಆಗಿ, ಚಿಲಿಂಬ, ಪೈ ಸೇಲ್ಸ್ ದೇರೆಬೈಲ್, ಕರ್ನಾಟಕ ಬ್ಯಾಂಕ್, ಭಾರತ್ ಮಾಲ್, ಬಿಜೈನಿಂದ ಕದ್ರಿ ದೇವಸ್ಥಾನ ರಸ್ತೆ ಮಾರ್ಗವಾಗಿ, ಮಲ್ಲಿಕಟ್ಟೆ ಭಾರತ್ ಬೀಡಿ, ಕಂಕನಾಡಿ, ವೆಲೆನ್ಸಿಯಾ, ಮಂಗಳಾದೇವಿ, ಫಾರಂ ಮಾಲ್, ಕ್ಲಾಕ್‌ಟವರ್ ಆಗಿ ವೆಂಕಟ್ರಮಣ ದೇವಸ್ಥಾನದ ಬಳಿಯಿಂದ ಕ್ಷೇತ್ರಕ್ಕೆ ಹಿಂತಿರುಗಲಿದೆ.
ಮ್ಯಾರಥಾನ್‌ನಲ್ಲಿ ಭಾಗವಹಿಸುವವರ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ಸ್ವಯಂ ಸೇವಕರ ಜತೆಗೆ, ಫಿಸಿಯೋತೆರಪಿಸ್ಟ್‌ಗಳು, ಆ್ಯಂಬುಲೆನ್ಸ್‌ಗಳನ್ನು ನಿಗದಿತ ಸ್ಥಗಳಲ್ಲಿ ಸ್ಥಿತಗೊಳಿಸಲಾಗಿರುತ್ತದೆ. ಮ್ಯಾರಥಾನ್‌ನಲ್ಲಿ ಭಾಗವಹಿಸುವವರಿಗೆ ಲೋಕೇಷನ್ ದೃಷ್ಟಿಯಿಂದ ಮೈಕ್ರೋ ಚಿಪ್‌ಗಳನ್ನು ನೀಡಲಾಗುತ್ತದೆ. ಭಾಗವಹಿಸುವ ಎಲ್ಲರಿಗೂ ಪದಕ ಹಾಗೂ ಪ್ರಮಾಣ ಪತ್ರ, ಟೀಶರ್ಟ್‌ಗಳನ್ನು ಒದಗಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಈಗಾಗಲೇ 1200ರಷ್ಟು ಮಂದಿ ನೋಂದಣಿ ಮಾಡಿಕೊಂಡಿದ್ದು, ಸ್ಥಳದಲ್ಲೇ ನೋಂದಣಿಗೂ ಅವಕಾಶವಿರಲಿದೆ. ಸುಮಾರು 2000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸಹಿತ ಹಲವು ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ರಕ್ಷಿತ್, ಜಯರಾಂ ಶಾಂ ಸುಂದರ್, ರಾಜೇಶ್, ರವಿ, ಧನರಾಜ್, ಸುಖ್ ಪಾಲ್ ಪೊಳಲಿ, ರಕ್ಷಿತ್ ಉಪಸ್ಥಿತರಿದ್ದರು.