ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ದಾನವೆಂಬ ಸತ್ಕಾರ್ಯದಲ್ಲೂ ವೈವಿಧ್ಯತೆ

07:00 AM Nov 17, 2024 IST | Samyukta Karnataka

ದಾನದ ವಿಷಯ ಬಂದೊಡನೆ ನಮಗೆ ಕುಂತಿ ಸುತ ಕರ್ಣನ ನೆನಪಾಗುತ್ತದೆ. ತಾನೇ ಜಗದ ಅತಿ ದೊಡ್ಡ ದಾನಶೂರನೆಂದು ಅಹಂಕಾರದಿಂದ ಮೆರೆಯುತ್ತಿದ್ದ ಬಲಿಚಕ್ರವರ್ತಿಯ ನೆನಪಾಗುತ್ತದೆ. ಈ ಕುಲಯುಗದಲ್ಲಿಯೂ ಕೂಡ ದಾನಶೂರರಿದ್ದಾರೆ. ಅನೇಕರು ಧರ್ಮಕ್ಕಾಗಿ, ಪುಣ್ಯದ ಗಳಿಕೆಗಾಗಿ, ಪಾಪ ಪ್ರಾಯಶ್ಚಿತ್ತಕ್ಕಾಗಿ ದಾನ ಮಾಡಿದರೆ, ಇನ್ನೂ ಕೆಲವರು ಹೆಸರಿಗಾಗಿ, ಸಾವಿನ ನಂತರವೂ ತಮ್ಮ ಹೆಸರನ್ನು ಶಾಶ್ವತವಾಗಿರಿಸಲು, ಪ್ರಶಸ್ತಿಗಾಗಿ, ಪ್ರಶಂಸೆಗಾಗಿ, ಪ್ರಸಿದ್ಧಿಗಾಗಿ ದಾನ ಮಾಡುವವರೂ ಇದ್ದಾರೆ. ತಾವು ಕೊಟ್ಟ ಫ್ಯಾನು, ಟ್ಯೂಬ್‌ಗಳ ಮೇಲೂ ಹೆಸರು ಬರೆಸುವವರಿದ್ದಾರೆ! ದಾನಿಗಳು ಮಾಡಿದ ದಾನ ಸಫಲವಾಗಬೇಕೆಂದರೆ ಫ್ಯಾನ್ ತಿರುಗುತ್ತಿರಬೇಕು. ದಾನಿಗಳ ಹೆಸರು ಇತರರಿಗೆ ಗೊತ್ತಾಗಬೇಕೆಂದರೆ ಫ್ಯಾನ್ ನಿಲ್ಲಬೇಕು! ಹಾಗೆ ನೋಡಿದರೆ ಬಲಗೈಯಿಂದ ಕೊಟ್ಟ ದಾನ ಎಡಗೈಗೆ ಗೊತ್ತಾಗಬಾರದೆಂದು, ದಾನವನ್ನು ಗೌಪ್ಯವಾಗಿಡಬೇಕೆಂದು ಹಿರಿಯರು ಹೇಳಿದ್ದಾರೆ. ಅನಾಮಿಕ ದಾನಿಗಳ ಸಂಖ್ಯೆಗೇನೂ ಕಡಿಮೆ ಇಲ್ಲ. ದಾನವೆಂಬ ಸತ್ಕಾರ್ಯದಲ್ಲಿಯೂ ವೈವಿಧ್ಯತೆ ಇದೆ. ಅಂತಹ ಕೆಲ ಉದಾಹರಣೆಗಳನ್ನು ನೋಡುವಾ.
ಇತ್ತೀಚೆಗೆ ಅಮೆರಿಕದ ಟೆಕ್ಸಾಸ್ ನಿವಾಸಿ ಅಲಿಸ್ಸಾ ಓಗ್ಲೇಟ್ರೀ ಅವರು ೨೬೪೫.೫೮ ಲೀಟರ್‌ನಷ್ಟು ತಮ್ಮ ಎದೆ ಹಾಲನ್ನು ದಾನ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಮಗು ಜನಿಸಿದಾಗ ಮತ್ತು ಪ್ರಾರಂಭಿಕ ಕೆಲವು ತಿಂಗಳು ಕಾಲ ಅದಕ್ಕೆ ತಾಯಿಯ ಹಾಲೇ ಆಹಾರ ಮತ್ತು ಆಧಾರ. ಅದಕ್ಕೆ ರೋಗ ನಿರೋಧಕ ಶಕ್ತಿಯೂ ಇರುತ್ತದೆ. ಅದು ಮಗುವಿಗೆ ಸುಲಭವಾಗಿ ಜೀರ್ಣವಾಗುವ ಮತ್ತು ಒಂದು ಸಮತೋಲನ ಆಹಾರವೂ ಹೌದು. ಆದರೆ ಪ್ರಸವವಾದ ಕೆಲವು ಮಹಿಳೆಯರಿಗೆ ಎದೆ ಹಾಲು ಬರುವುದಿಲ್ಲ ಅಥವಾ ಮಗುವಿಗೆ ಬೇಕಾದಷ್ಟು ಬರುವುದಿಲ್ಲ. ಇದರಿಂದ ನವಜಾತ ಶಿಶುಗಳು ತೊಂದರೆಗೊಳಗಾಗುತ್ತವೆ. ಇನ್ನೂ ಕೆಲವು ಮಹಿಳೆಯರಲ್ಲಿ ಇದು ವಿರುದ್ಧವಾಗಿರುತ್ತದೆ. ಅಂದರೆ ಹೆಚ್ಚಾದ ಹಾಲಿನಿಂದ ತಾಯಂದಿರಿಗೆ ತೊಂದರೆಯಾಗಿರುತ್ತದೆ. ಅಂತಹವರು ತಮ್ಮ ಎದೆ ಹಾಲನ್ನು ಶಿಶುಗಳಿಗಾಗಿ ಹಾಲಿಲ್ಲದೇ ಪರದಾಡುತ್ತಿರುವ ತಾಯಂದಿರಿಗೆ ದಾನ ಮಾಡುತ್ತಾರೆ. ೨೦೧೦ ರಿಂದ ಅಲಿಸ್ಸಾ ಸುಮಾರು ೩೦,೦೦೦ ತಾಯಂದಿರಿಗೆ ತಮ್ಮ ಎದೆ ಹಾಲನ್ನು ದಾನ ಮಾಡುವ ಮೂಲಕ ನೆರವಾಗಿದ್ದಾರೆ. ಒಂದು ಲೀಟರ್ ಹಾಲಿನಿಂದ ೧೧ ಅಕಾಲಿಕ ಶಿಶುಗಳಿಗೆ ಸಹಾಯವಾಗುತ್ತದೆ. ಹಣಕ್ಕಾಗಿ ಆಸೆಪಡದೆ ಉಚಿತವಾಗಿ ಈ ದಾನ ಮಾಡಿರುವ ಅಲಿಸ್ಸಾ ಗಿನ್ನೆಸ್ ದಾಖಲೆಯನ್ನು ಸ್ಥಾಪಿಸಿದ್ದಾರೆ.
ಆರೋಗ್ಯವಂತರು ಅವಶ್ಯಕ ರೋಗಿಗಳಿಗಾಗಿ, ಗರ್ಭಿಣಿಯರಿಗಾಗಿ, ಅಪಘಾತಕ್ಕೆ ಒಳಗಾಗದವರಿಗಾಗಿ, ಆಪರೇಷನ್ ಮಾಡಿಸಿಕೊಳ್ಳುವವರಿಗಾಗಿ ರಕ್ತದಾನ ಮಾಡುವ ಹವ್ಯಾಸ ಬೆಳೆಸಿಕೊಂಡವರಿದ್ದಾರೆ. ಥಲಸ್ಸೇಮಿಯಾ ರೋಗಿಗಳಿಗಂತೂ ನಿಯಮಿತವಾಗಿ ರಕ್ತವನ್ನು ಕೊಡಬೇಕಾಗುತ್ತದೆ. ಅವರಿಗೆ ರಕ್ತದಾನಿಗಳೇ ಗತಿ. ತಮ್ಮ ಜೀವಮಾನದಲ್ಲಿ ೪೦-೫೦ ಸಲ ರಕ್ತದಾನ ಮಾಡಿದವರೂ ಇದ್ದಾರೆ. ಮನೆಮಂದಿಯೇ, ಹತ್ತಿರದ ಸಂಬಂಧಿಗಳೇ, ಸ್ನೇಹಿತರೇ ರಕ್ತ ಕೊಡಲು ಮುಂದೆ ಬರದಿದ್ದರೂ ಅಪರಿಚಿತರು ಮುಂದೆ ಬಂದು ದಾನ ಮಾಡಿದ್ದು ಇದೆ.
ತಮ್ಮ ಸಾವಿನ ನಂತರ ಕಣ್ಣುಗಳನ್ನು ದಾನ ಮಾಡಬೇಕೆಂದು ಬರೆದಿಟ್ಟು ಸಾಯುವವರೂ ಇದ್ದಾರೆ. ನೇತ್ರದಾನ ಇದೀಗ ಸಾಮಾನ್ಯವಾಗಿದೆ. ಅಪಘಾತಗಳಲ್ಲಿ ಮರಣಿಸಿದವರ, ಮೆದಳು ನಿಷ್ಕ್ರಿಯರಾದವರ ದೇಹದ ಅಂಗಾಂಗಗಳನ್ನು ಸಂಬಂಧಿಕರು ದಾನ ಮಾಡುವ ಔದಾರ್ಯ ತೋರುತ್ತಿದ್ದಾರೆ. ಸತ್ತಾಗಲೂ ಜನರ ಉಪಯೋಗಕ್ಕೆ ಬರುವ, ಹತ್ತಾರು ಜನರ ಜೀವನಕ್ಕೆ ಆಸರೆಯಾಗುವ ಈ ರೀತಿ ನಿಜಕ್ಕೂ ಅನುಕರಣೀಯವಾದುದು. ಈ ರೀತಿ ಕಣ್ಣು, ಹೃದಯ, ಮೂತ್ರಪಿಂಡ, ಲಿವರ್ ಪ್ಲೇಟ್‌ಲೆಟ್ಸ್ ಇತ್ಯಾದಿಗಳ ದಾನಿಗಳು ಸಾವಿರಾರು ಜನರ ಜೀವ ರಕ್ಷಣೆಗೆ ಕಾರಣರಾಗಿದ್ದಾರೆ. ಇದು ಪುಣ್ಯಕೋಟಿಯ ನೀನ್ಯಾರಿಗಾದೆಯೋ ಎಲೆ ಮಾನವ?..'' ಎನ್ನುವ ಪ್ರಶ್ನೆಗೆ ಉತ್ತರಕೊಟ್ಟಂತೆ ಇದೆ. ಅನ್ನದಾನ, ವಸ್ತçದಾನ, ವಿದ್ಯಾದಾನಗಳಂತೂ ಭಾರತದಲ್ಲಿ ಅನಾದಿಕಾಲದಿಂದ ನಡೆದುಕೊಂಡು ಬಂದಿವೆ. ಧರ್ಮಛತ್ರಗಳಲ್ಲಿ ಉಚಿತ ವಸತಿಯೊಂದಿಗೆ ಉಚಿತ ಪ್ರಸಾದವನ್ನು ಒದಗಿಸುವ ಪುಣ್ಯ ಕಾರ್ಯವನ್ನು ಅನೇಕ ಮಠ, ಮಂದಿರ-ಆಶ್ರಮಗಳು ನಡೆಸಿಕೊಂಡು ಬಂದಿವೆ. ತಿರುಪತಿ, ಹೊರನಾಡು, ಧರ್ಮಸ್ಥಳ, ಉಡುಪಿ ಮತ್ತು ಮಂತ್ರಾಲಯ ಮುಂತಾದೆಡೆ ದಿನನಿತ್ಯ ಹತ್ತಾರು ಸಾವಿರ ಜನರಿಗೆ ಅನ್ನಪ್ರಸಾದವನ್ನು ನೀಡುತ್ತಿವೆ. ವಿಶೇಷ ಸಂದರ್ಭಗಳಲ್ಲಿ, ಶುಭ ಸಂದರ್ಭಗಳಲ್ಲಿ, ವಸ್ತ್ರದಾನ, ಹಣದಾನ, ದವಸ-ಧಾನ್ಯ ದಾನ, ಕಟ್ಟಡ ದಾನ, ಭೂಮಿ ದಾನ, ಮಾಡುವವರು ಸಾಕಷ್ಟು ಜನರಿದ್ದಾರೆ. ತಮ್ಮ ಕೈಯಿಂದ ಕೊಡಲಾಗದವರು ಶ್ರಮದಾನ, ಸಮಯದಾನ ಮಾಡಿ ತಮ್ಮ ತಮ್ಮ ಶ್ರದ್ಧೆಯನ್ನು ಮೆರೆದಿದ್ದಾರೆ. ತಮ್ಮ ಬಳಿ ಇರುವುದನ್ನೇ ದಾನ ಮಾಡಬೇಕಿಲ್ಲ. ಇದರಲ್ಲಿ ಯಾವುದು ಹೆಚ್ಚು ಯಾವುದು ಕಡಿಮೆ ಎಂದಿಲ್ಲ. ಸಮಯಕ್ಕೊದಗುವ, ಮರಳಿ ಕೇಳದ, ಪ್ರತಿಫಲವಾಗಿ ಏನನ್ನೂ ನಿರೀಕ್ಷಿಸದ ಧನ ಇತ್ಯಾದಿ ಸಹಾಯವನ್ನು ದಾನವೆನ್ನಲಾಗುತ್ತದೆ. ಮಾರ್ವಾಡಿಗಳು, ಗುಜರಾತಿ, ರಾಜಸ್ಥಾನಿ ವ್ಯಾಪಾರಿಗಳು ತಮ್ಮ ವ್ಯವಹಾರಗಳಲ್ಲಿ ಎಷ್ಟು ಕಟ್ಟುನಿಟ್ಟಾಗಿರುತ್ತಾರೋ ಅಷ್ಟೇ ದಾನ ಮಾಡುವಾಗ ಧಾರಾಳಿಗಳಾಗಿರುತ್ತಾರೆ. ಕೊಡುವವರ ಕೈಮೇಲಿದ್ದರೆ ತೆಗೆದುಕೊಳ್ಳುವವರ ಕೈ ಕೆಳಗಿರುತ್ತದೆ. ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಕಲ್ಲಿದ್ದಲು, ಬಂಗಾರ ಮತ್ತು ಅದಿರಿನ ಗಣಿಗಾರಿಕೆ ಉದ್ಯಮವನ್ನು ಓಸ್ವಾಲ್ ಜೈನ್ ಎಂಬುವವರು ನಡೆಸುತ್ತಿದ್ದರು. ಜರ್ಮನ್, ಜಪಾನ್ ಮತ್ತು ಆಸ್ಟ್ರೇಲಿಯಾಗಳಲ್ಲಿ ಅವರ ವ್ಯವಹಾರವಿತ್ತು. ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ತಮ್ಮಿಬ್ಬರು ಮಕ್ಕಳಿಗೆ ಬರೆದುಕೊಟ್ಟರು. ಅವರು ಸ್ವತಃ ಗಳಿಸಿದ್ದೇ ೩೦೦೦ ಎಕರೆ ಭೂಮಿಯನ್ನು ಮಾಗಡಿ ತಾಲೂಕಿನ ಪಾಲನಹಳ್ಳಿ ಮಠಕ್ಕೆ ದಾನ ಮಾಡಿ ತಾವು ಜೈನಸನ್ಯಾಸ ದೀಕ್ಷೆ ಪಡೆದುಕೊಂಡರು. ಜೊತೆಗೆ ತಾವು ನಡೆಸುತ್ತಿದ್ದ ವಿದೇಶಿ ವಹಿವಾಟುಗಳನ್ನು ಕಾಯ್ದೆಬದ್ಧವಾಗಿ ಮಠಕ್ಕೆ ಉಯಿಲು ಬರೆದುಕೊಟ್ಟರು. ಈ ಆದಾಯವನ್ನು ಶಾಲೆ, ಕಾಲೇಜು, ಆಸ್ಪತ್ರೆ, ಗೋಶಾಲೆ, ದೇವಸ್ಥಾನ ನಿರ್ಮಾಣ ಮತ್ತು ಬಡವರ ಸೇವೆಗಾಗಿ ಉಪಯೋಗಿಸುವಂತೆ ಕೋರಿದ್ದಾರೆ. ಕೆಲವರ್ಷಗಳ ಹಿಂದೆ ಸಾಫ್ಟ್ವೇರ್ ಇಂಜಿನಿಯರಿಂಗ್ ಉದ್ಯಮದ ಮೊದಲ ಪೀಳಿಗೆಯ ಉದ್ಯಮಿಯೊಬ್ಬರು ಸ್ವಯಂ ನಿವೃತ್ತರಾದರು. ಮುಂದಿನ ಪೀಳಿಗೆಗೆ ಒಪ್ಪಿಸಬೇಕೆಂದಿದ್ದ ತಮ್ಮ ವ್ಯವಹಾರವನ್ನು ಒಪ್ಪಿಸಿ ತಾವಿನ್ನು ಸಮಾಜಕ್ಕೆ ಸೇವೆ ಸಲ್ಲಿಸಿ ತಮಗಿರುವ ಋಣಭಾರವನ್ನು ಕಡಿಮೆ ಮಾಡಿಕೊಳ್ಳಬಯಸಿದರು. ೩ ಗುರುಕುಲಗಳಿಗೆ ಎರಡೆರಡು ಕೋಟಿ ರೂಪಾಯಿಗಳನ್ನು ದಾನವಾಗಿತ್ತರು. ಶಿಕ್ಷಣ ಸಂಸ್ಥೆಯೊಂದಕ್ಕೆ ಆಧಾರವಾಗಿ ನಿಂತರು. ಭಾರತೀಯರಿಗೊಂದು ಆದರ್ಶವಾದ, ಮೌಲ್ಯಯುತ ಜೀವನಕ್ಕೆ ನೈಜ ಮಾರ್ಗದರ್ಶಿಯಾದ ಶಿಕ್ಷಣವು ದೊರೆಯುವಂತೆ ಮಾಡುವ ಹಂಬಲ ಅವರದು. ಎಲ್ಲಿಯೂ ತಮ್ಮ ಹೆಸರು ಬರಬಾರದು ಎಂದು ಅವರ ಷರತ್ತು ಬೇರೆ. ದೂರದ ಸ್ಥಳಗಳಿಂದ, ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳು ಹಣ ತೆತ್ತು ಮಧ್ಯಾಹ್ನದ ಊಟ ಮಾಡಲು ಆಸಕ್ತರಾಗಿದ್ದರು. ಆದರೆ ಸಂಜೆವರೆಗೂ ಅವರು ವಿದ್ಯಾಲಯದಲ್ಲಿ ಇರಲೇಬೇಕಿತ್ತು. ಹಸಿವಾದವರಿಗೆ ಪಾಠ ಮಾಡುವುದು ಹೇಗೆ? ಕಳಕಳಿ ಇರುವ ಅಧ್ಯಾಪಕರು ಯೋಚಿಸಿದರು. ತಮ್ಮದೇ ಆದ ವ್ಯವಸ್ಥೆಯೊಂದನ್ನು ಹುಟ್ಟು ಹಾಕಿದರು. ಅಧ್ಯಾಪಕರುಗಳೇ ಸೇರಿ ತಾವೇ ಹಣ ಹಾಕಿ ಆಯ್ದ ಮಕ್ಕಳಿಗಾಗಿ ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆ ಮಾಡಿದರು. ಪ್ರತಿದಿನವೂ ೨೦೦-೩೦೦ ವಿದ್ಯಾರ್ಥಿಗಳಿಗೆ ಈ ರೀತಿ ಉಣಬಡಿಸಿದ `ಸಂತೃಪ್ತಿ' ಅವರದಾಗಿತ್ತು. ವಿದ್ಯಾದಾನದ ಜೊತೆಗೆ ಅನ್ನದಾನವೂ ಸೇರಿಕೊಂಡಿತ್ತು. ನೃಪತುಂಗ ವಿಶ್ವವಿದ್ಯಾಲಯದಲ್ಲಿ ೨೦೦೮ರಲ್ಲೇ ಪ್ರಾರಂಭವಾದ ಈ ಯೋಜನೆಗೆ ಅಧ್ಯಾಪಕರಿಂದ ಮಿಶ್ರ ಪ್ರತಿಕ್ರಿಯೆ. ತಾವಾಗಿಯೇ ಹುಡುಕಿಕೊಂಡು ಬಂದು ಹಣ ಸಹಾಯ ಮಾಡುವವರು ಇದ್ದಾರೆ. ದುಂಬಾಲು ಬಿದ್ದರೂ ಕೊಡದವರಿದ್ದಾರೆ. ತಮ್ಮದೂ ಒಂದಿಷ್ಟು ಸೇವೆ ಸಲ್ಲಲಿ ಎಂದು ಅತೀ ಕಡಿಮೆ ಸಂಬಳ ಪಡೆಯುವ ಜವಾನ, ಅಟೆಂಡರ್‌ಗಳೂ ತಾವಾಗಿಯೇ ತಮ್ಮಿಂದಾದಷ್ಟು ಹಣ ಸಹಾಯ ಮಾಡಿದ ನಿದರ್ಶನಗಳು ಸಾಕಷ್ಟಿವೆ. ವಿಶ್ವವಿದ್ಯಾಲಯ ಕಾರ್ಯಕ್ರಮಕ್ಕೆ ಆಹ್ವಾನದ ಮೇಲೆ ಬಂದ ಅತಿಥಿಗಳೂ ಈ ಸತ್ಕಾರ್ಯದ ಬಗ್ಗೆ ತಿಳಿದು ತಾವೂ ದೇಣಿಗೆ ಕೊಟ್ಟಿದ್ದೂ ಇದೆ. ನಾವೆಷ್ಟು ದಾನ ಮಾಡುತ್ತೇವೆ ಎನ್ನುವುದು ಮುಖ್ಯವಲ್ಲ. ಕೊಡುವ ಮನಸ್ಸು, ಕಳಕಳಿ ಎಷ್ಟಿದೆ ಎನ್ನುವುದು ಮುಖ್ಯ. ಸಮಾಜದಿಂದ ಪರೋಕ್ಷವಾಗಿಯೋ ಪ್ರತ್ಯಕ್ಷವಾಗಿಯೋ ಪಡೆದದ್ದನ್ನು ಸಮಾಜಕ್ಕೆ ಒಂದಿಲ್ಲ ಒಂದು ರೂಪದಲ್ಲಿ ಹಿಂತಿರುಗಿಸಬೇಕೆನ್ನುವುದು ಕೃತಜ್ಞತಾ ಭಾವ, ಋಣಮುಕ್ತರಾಗುವ ಕಾರ್ಯ. ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ, ಕೊಟ್ಟು ನಾ ಕೆಟ್ಟೆನೆನ್ನಬೇಡ, ಕೊನೆಯಲ್ಲಿ ಕಟ್ಟಿಹುದು ಬುತ್ತಿ ಎಂದು ಸರ್ವಜ್ಞನು ಹೇಳಿದ್ದಾನೆ. ನಮ್ಮ ಬದುಕಿಗೆ ಸಾಕಾಗುವಷ್ಟು ಇಟ್ಟುಕೊಂಡು ಉಳಿದದ್ದನ್ನು ಅವಶ್ಯವಿದ್ದರಿಗೆ, ಪುಣ್ಯ ಕಾರ್ಯಗಳಿಗೆ ದಾನ ಮಾಡಬೇಕು. ಆ ಪುಣ್ಯ ಒಂದಿಲ್ಲ ಒಂದು ರೂಪದಲ್ಲಿ ಒಂದಿಲ್ಲ ಒಂದು ದಿನ ಮನುಷ್ಯನ ಸಹಾಯಕ್ಕೆ ಬರುತ್ತದೆ. ಆದರೆ ಹೆಚ್ಚಾದದ್ದನ್ನು ಬಚ್ಚಿಟ್ಟರೆ ಅದು ಮತ್ತೊಬ್ಬರ ಪಾಲಾಗುತ್ತದೆ. ಆದ್ದರಿಂದ ಕೊಟ್ಟು ಕೆಟ್ಟನೆನ್ನಬೇಡ ಖಂಡಿತವಾಗಿ ನಿಮಗೆ ಬುತ್ತಿ ಕಟ್ಟಿಟ್ಟದ್ದೆಂದು ಕವಿ ಸತ್ಕಾರ್ಯಗಳಿಗೆ ಸಹಾಯ ಮಾಡುವಂತೆ ಧನವಂತರನ್ನು ಪ್ರೇರೇಪಿಸುತ್ತಾನೆ. ಹುರುನ್ ಇಂಡಿಯಾ ಕಂಪನಿ ತಯಾರಿಸಿದ ಹೆಚ್ಚು ದಾನ ಮಾಡುವವರ ಪಟ್ಟಿಯಲ್ಲಿ ಎಚ್‌ಸಿಎಲ್ ಟೆಕ್ನಾಲಜಿಸ್ ಕಂಪನಿಯ ಶಿವ ನಾಡಾರ್ ಐದು ವರ್ಷಗಳಲ್ಲಿ ೩ ಬಾರಿ ಮೊದಲಿಗರಾಗಿದ್ದಾರೆ. ೨೦೨೩-೨೪ನೇ ವರ್ಷದಲ್ಲಿ ಅವರು ಒಟ್ಟು ೨,೧೫೩ ಕೋಟಿ ರೂ. ದಾನ ಮಾಡಿದ್ದಾರೆ. ದೇಶದ ಅತ್ಯಂತ ಸಿರಿವಂತರಾದ ಉದ್ಯಮಿ ಗೌತಮ್ ಅದಾನಿ ರೂ. ೩೩೦ ಕೋಟಿ ಮತ್ತು ಮುಕೇಶ್ ಅಂಬಾನಿ ೪೦೭ ಕೋಟಿ ದಾನ ಮಾಡಿದ್ದಾರೆ. ಮಹಿಳೆಯರಲ್ಲಿ ರೋಹಿಣಿ ನೀಲೇಕಣಿ ಮತ್ತು ಮೈಂಡ್ಟಿçÃಯ ಸುಶ್ಮಿತಾ ಬಗ್ಚಿ ಮೊದಲೆರಡು ಅಗ್ರಸ್ಥಾನಗಳಲ್ಲಿದ್ದಾರೆ. ಯುವ ಉದ್ಯಮಿಗಳಲ್ಲಿ ನಿಖಿಲ ಕಾಮತ ರೂ. ೧೨೦ ಕೋಟಿ ದಾನ ಮಾಡಿ ಮೊದಲ ಸ್ಥಾನದಲ್ಲಿದ್ದಾರೆ. ಒಟ್ಟಾರೆ ಈ ವರ್ಷ ಶೈಕ್ಷಣಿಕ, ಆರೋಗ್ಯ ಹಾಗೂ ಗ್ರಾಮೀಣಾಭಿವೃದ್ಧಿ ಉದ್ದೇಶಗಳಿಗಾಗಿ ರೂ. ೪೬೩೭ ಕೋಟಿಗಳಷ್ಟು ದಾನದ ರೂಪದಲ್ಲಿ ಹರಿದಿದೆ. ಅನೇಕ ಶಾಲಾ-ಕಾಲೇಜುಗಳ ಹಿರಿಯ ವಿದ್ಯಾರ್ಥಿಗಳು ಕೃತಜ್ಞತಾಪೂರ್ವಕವಾಗಿ ತಾವು ಕಲಿತ ಶಿಕ್ಷಣ ಸಂಸ್ಥೆಗಳಿಗೆ ಉದಾರವಾಗಿ ದಾನ ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಒಂದಕ್ಷರವನ್ನೂ ಕಲಿಯದ ಅನಕ್ಷರಸ್ಥರು, ಗ್ರಾಮೀಣ ಭಾಗದ ಹೃದಯವೈಶಾಲ್ಯ ರೈತರು, ಜಾಮೀನುದಾರರು, ಮಕ್ಕಳಿರದ ವೃದ್ಧರು, ಮಹಿಳೆಯರು ಕೂಡ ಶಾಲಾ ಕಾಲೇಜು, ಮಠ-ಮಂದಿರ, ಕೆರೆ-ಬಾವಿ ಕಟ್ಟಲಿಕ್ಕೆ, ಅನಾಥಾಶ್ರಮ, ಅಬಲಾಶ್ರಮಗಳಿಗೆ ದಾನ ಮಾಡುವವರಿದ್ದಾರೆ. ಇದಕ್ಕೆಲ್ಲ ತಲೆತಲಾಂತರದಿಂದ ಅವರ ರಕ್ತದಲ್ಲಿ ಬಂದಿರುವಪರೋಪಕಾರಾರ್ಥಂ ಇದಂ ಶರೀರಂ'' ಎಂಬ ಸಂಸ್ಕöÈತಿಯೇ ಕಾರಣ. ನಮ್ಮ ದುಡಿಮೆಯಲ್ಲಿನ ಕೆಲವೊಂದಿಷ್ಟು ಭಾಗವನ್ನು ಸಮಾಜೋಪಯೋಗಿ ಕೆಲಸಕ್ಕೆ ಉಪಯೋಗಿಸಬೇಕೆನ್ನುತ್ತದೆ ಚಾಣಕ್ಯನ ಅರ್ಥಶಾಸ್ತç. ಹೀಗೆ ಗಳಿಸುವ ಪುಣ್ಯದಿಂದಾಗಿ ಮುಂದಿನ ಜನ್ಮಕ್ಕೂ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯೂ ಇದೆ. ಇದೊಂದು ರೀತಿಯ ಧರ್ಮಾಧಾರಿತ ಅರ್ಥಶಾಸ್ತ್ರ, ಅರ್ಥಪೂರ್ಣ ಶಾಸ್ತ್ರ.

Next Article