ದಾಸನಾಗೋ… ವಿಶೇಷನಾಗೋ…
ದೇವರಲ್ಲಿ ದಾಸ್ಯ ವೃತ್ತಿ ಚಿಂತನೆ ಮಾಡಿ, ದೇವರಲ್ಲಿ ಅವಿರತವಾದ ಭಕ್ತಿಯಿಂದ ಸೇವಕನಾಗಿ, ದೇವರ ಕಾರ್ಯಗಳಲ್ಲಿ ತೊಡಗಿಸಿಕೊಂಡು ದೇವರ ಆರಾಧನೆಗಾಗಿ ಜೀವನವನ್ನು ಮುಡುಪಾಗಿಡುವುದು ದಾಸ್ಯವೃತ್ತಿ. ದೇವರ, ತಂದೆ, ತಾಯಿ, ಗುರು ಹಿರಿಯರ ಸೇವೆ ಮಾಡುತ್ತಾ, ಸಂಸಾರದಲ್ಲಿ ಇದ್ದರೂ; ಮಮತೆಯನ್ನು ಬಿಟ್ಟು, ದೇವರಲ್ಲಿ ಮನಸ್ಸಿಟ್ಟು, ಲೋಕವಾರ್ತೆಗಳಲ್ಲಿ ಆಸಕ್ತಿ ಬಿಟ್ಟು, ಏಕಾಂತದಲ್ಲಿ ಜ್ಞಾನಿಗಳ, ಸಂತರ ಹಾಗು ಋಷಿ ಮುನಿಗಳ ಸೇವೆ ಮಾಡುತ್ತಾ ಸತ್ಸಂಗದಲ್ಲಿ ದೇವರ ಭಜಿಸಿ ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವವರು ದೇವರ ದಾಸರಾಗುತ್ತಾರೆ.
ಯಾರು ಸಮರ್ಪಣಾ ಭಾವದಿಂದ ಭಗವಂತನ ಸೇವೆ ಮಾಡುವರೋ, ಯಾರು ದಾಸ್ಯ ವೃತ್ತಿಯಲ್ಲಿ ಶ್ರೀಹರಿಯ ದಾಸನಾಗಿ, ಹರಿಯೇ ಪರದೈವ ಎಂದು ಭಾವಿಸಿ, ಆತನ ಸದ್ಗುಣ, ಸ್ವಭಾವ, ರಹಸ್ಯ ಮತ್ತು ಮಹಿಮೆಯನ್ನು ಅರಿತು ಸೇವೆ ಮಾಡುವರೋ, ಯಾರು ದೇವರು ಸರ್ವೋತ್ತಮ, ದೇವರು ನಮ್ಮೆಲ್ಲರ ರಕ್ಷಕ ಎಂದು ತಿಳಿದು ದೇವರ ಮಹಿಮೆಗಳನ್ನು ಕೊಂಡಾಡುತ್ತಾರೋ ಅವರು ಹರಿದಾಸರಾಗುತ್ತಾರೆ.
ತತ್ವಶಾಸ್ತçಗಳಲ್ಲಿ ಇರುವ ನಿಯಮಗಳನ್ನು, ವೇದ, ಪುರಾಣಗಳಲ್ಲಿರುವ ವಿಷಯಗಳ ಸಾರಾಂಶಗಳನ್ನು, ಸ್ಥೂಲವಾಗಿ, ಸೂಕ್ಷ್ಮವಾಗಿ ಪ್ರಾಕೃತ ಭಾಷೆಯಲ್ಲಿ ಬರೆದು ಜನಸಾಮಾನ್ಯರಿಗೂ ತಲುಪುವಂತೆ ಮಾಡಿದವರು ಹರಿದಾಸರು. ದೇವರ ಸೇವೆಯ ಜೊತೆ ದೇವರ ದಾಸರ ದಾಸ್ಯವನ್ನು ಬಯಸಿ ಭಗವಂತನ ಬಗ್ಗೆ ವಿಶೇಷ ಜ್ಞಾನವುಳ್ಳವರ ಸೇವೆ ಮಾಡುವುದು ಹರಿದಾಸರ ಲಕ್ಷಣ.
ದೇವರ ಮಹಿಮೆಗಳನ್ನು ಪದ, ಪದ್ಯ, ಸುಳಾದಿ ರೂಪದಲ್ಲಿ ರಚಿಸಿ, ತಾವೇ ಹಾಡುತ್ತಾ ಲೋಕ ಸಂಚಾರ ಮಾಡುತ್ತಾ, ಸತ್ಸಂಗದಲ್ಲಿ ದೇವರ ನಾಮಗಳನ್ನು ಹಾಡಿಸುತ್ತಾ, ಮೈಮರೆತು ಹರಿಯಲ್ಲಿ ಮನಸ್ಸನ್ನಿಟ್ಟು ಗೆಜ್ಜೆ ಕಟ್ಟಿ ತಾಳ, ತಂಬೂರಿ ವಿವಿಧ ವಾದ್ಯಗಳಿಂದ ದೇವರ ನಾಮಗಳನ್ನು ಹಾಡಿ, ಕೊಂಡಾಡಿ ದೇವರ ಮಹಿಮೆಗಳನ್ನು ಮನೆಮನೆಗೆ ತಲುಪಿಸಿದವರು ಹರಿದಾಸರು.
ದೇವರಲ್ಲಿ ನಾವು ದಾಸ್ಯವೃತ್ತಿ ಮಾಡಿದರೆ ದೇವರು ಏನನ್ನು ಮಾಡುತ್ತಾನೆ ಎಂದರೆ ಹರಿದಾಸರೇ ಹೇಳುತ್ತಾರೆ `ದಾಸನಾಗೋ ವಿಶೇಷನಾಗೋ' ಎಂದು. ದಾಸನಾಗಿ ವಿಶೇಷರಾದವರು ಯಾರು ಎಂದರೆ, ಭಕ್ತಪ್ರಹ್ಲಾದ ಕರೆದಲ್ಲಿಗೆ ಬಂದ, ಶಬರಿ ಎಂಜಲು ತಿನ್ನಲು ಅಂಜರಿಯಲಿಲ್ಲ, ಗಜೇಂದ್ರ ಮೊರೆ ಇಟ್ಟ ತಕ್ಷಣ ಬಂದ, ದ್ರೌಪದಿ ಕೃಷ್ಣಾ.. ಎಂದಾಗ ಬಂದ, ಪಾಂಡವರ ಮನೆಯಲ್ಲಿ ಸಾರಥಿಯಾಗಿ, ದೂತನಾಗಿ ಸೇವೆ ಮಾಡಿದ ಭಗವಂತ ತಾನು ಭಕ್ತರ ದಾಸನಲ್ಲವೇ ಎಂದು ಹರಿದಾಸರು ಕೊಂಡಾಡಿದ್ದಾರೆ. ಅಂದರೆ ನಾವು ದೇವರ ಸೇವೆಯಲ್ಲಿ ನಿರತರಾದರೆ, ದಾಸ್ಯವೃತ್ತಿ ಸ್ವೀಕರಿಸಿದರೆ, ದೇವರು ದಾಸರ ದಾಸನಾಗಿ ವಿಶೇಷವಾಗಿ ತನ್ನ ಭಕ್ತರನ್ನು ಇಹದಲ್ಲಿ ರಕ್ಷಣೆಯನ್ನು ಮಾಡುತ್ತಾನೆ ಪರದಲ್ಲಿ ಮುಕ್ತಿಯನ್ನು ದಯಪಾಲಿಸುತ್ತಾನೆ.