ದಿಂಗಾಲೇಶ್ವರ ಶ್ರೀಗಳಿಗೆ ಪರೋಕ್ಷ, ನೇರವಾಗಿಯೇ ಕಾಂಗ್ರೆಸ್ ಬೆಂಬಲ
ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವ ದಿಂಗಾಲೇಶ್ವರ ಶ್ರೀಗಳನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿಸುವುದು ಅನುಮಾನ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ. ಈಗಾಗಲೇ ವಿನೋದ್ ಅಸೂಟಿ ಅವರಿಗೆ ಬಿಫಾರಂ ವಿತರಿಸಿರುವ ಹಿನ್ನೆಲೆಯಲ್ಲಿ ಈ ಹಂತದಲ್ಲಿ ಅಭ್ಯರ್ಥಿ ಬದಲಿಸಿದರೆ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದೆಂಬ ಕಾರಣಕ್ಕೆ ಎಚ್ಚರಿಕೆ ಹೆಜ್ಜೆ ಇಡಲು ಮುಖಂಡರು ತೀರ್ಮಾನಿಸಿರುವುದಾಗಿ ಹೇಳಲಾಗಿದೆ. ಬುಧವಾರ ಈ ಸಂಬಂಧ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಪಕ್ಷ ಕುರುಬ ಸಮುದಾಯದ ವಿನೋದ್ ಅಸೂಟಿ ಅವರಿಗೆ ಟಿಕೆಟ್ ಕೊಟ್ಟಿದ್ದು, ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು ಕ್ಷೇತ್ರದ ಪ್ರಸ್ತುತ ಬೆಳವಣಿಗೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದ್ದಾರೆ. ಬೆಂಬಲಿಸುವುದಾದರೆ ನಾವು ದಿಂಗಾಲೇಶ್ವರ ಶ್ರೀಗಳನ್ನು ಪರೋಕ್ಷವಾಗಿ ಅಲ್ಲ ನೇರವಾಗಿಯೇ ಬೆಂಬಲ ನೀಡುತ್ತೇವೆ. ಆದರೆ ಈಗಾಗಲೇ ನಮ್ಮ ಅಭ್ಯರ್ಥಿ ಘೋಷಣೆ ಮಾಡಿ ಬಿ ಫಾರಂ ನೀಡಿದ್ದೇವೆ. ಸ್ವಾಮೀಜಿಗಳು ಮುಂಚಿತವಾಗಿ ಈ ನಿರ್ಧಾರ ಮಾಡಿದ್ದರೆ ವಿಚಾರ ಬೇರೆ ಆಗುತ್ತಿತ್ತು. ನಮಗೆ ಶ್ರೀಗಳ ಬಗ್ಗೆ ಗೌರವವಿದೆ. ಅವರು ಸದಾ ಜಾತ್ಯತೀತ ತತ್ವದ ಮೇಲೆ ಕೆಲಸ ಮಾಡಿಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ.
ಮುಖಂಡರಾದ ವಿನಯ ಕುಲಕರ್ಣಿ, ಸಚಿವ ಸಂತೋಷ್‌ಲಾಡ್ ಕೂಡ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.