ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ದಿಟದ ನಾಡಿನ ವಿಕಾಸಕ್ಕೆ ದಿಟ್ಟ ನುಡಿ ತೋರಣ

02:30 AM Dec 09, 2024 IST | Samyukta Karnataka

ಕರುನಾಡಿನ ಕಂಪಿನಲ್ಲಿ ಸತ್ಯದ ಜೊತೆಗೆ ಸತ್ವ ಹಾಗೂ ತತ್ವಗಳು ಬೆಸಗೊಂಡಿರುವ ಪರಿಣಾಮವಾಗಿ ಅದಕ್ಕೊಂದು ನಿಜ ನಾಡಿನ ಅಭಿಮಾನ ಹಾಗೂ ಗೌರವ. ಇಂತಹ ನಿಜ ನಾಡಿನ ಸಂಸ್ಥಾಪನೆಗೆ ಜರುಗಿಹೋಗಿರುವ ಇತಿಹಾಸದ ಪುಟದ ಭಾಗಗಳಾಗಿ ಹೋಗಿರುವ ಪ್ರಸಂಗಗಳು ಅದೆಷ್ಟೋ ಏನೋ. ಇವಿಷ್ಟರ ಒಳಗೊಂಡು ಅನೇಕ ನಿಷ್ಠ ವಿಚಾರಧಾರೆಗಳೊಂದಿಗೆ ಮೈತಳೆದ ಕರ್ನಾಟಕ ವಿಧಾನಮಂಡಲ ಕನ್ನಡಿಗರ ಕನಸಿನ ಸೃಷ್ಟಿ. ಹೀಗಾಗಿಯೇ ಸೋಮವಾರದಿಂದ ಬೆಳಗಾವಿಯಲ್ಲಿ ಒಂಭತ್ತು ದಿನಗಳ ಕಾಲ ನಡೆಯಲಿರುವ ಈ ಶಾಸನಸಭೆಯ ಅಧಿವೇಶನದ ಮಹತ್ವವನ್ನು ಮನಗಂಡಿರುವ ಕನ್ನಡಿಗರು ಹಲವು ಆಶೋತ್ತರಗಳನ್ನು ಕಟ್ಟಿಕೊಂಡಿದ್ದರೆ ಅದು ಅಸಹಜ ಪ್ರಕ್ರಿಯೇನೂ ಅಲ್ಲ. ಏಕೆಂದರೆ, ಕನಸುಗಳೇ ನಾಳಿನ ಸಮಾಜದ ನಿರ್ಮಾಣದ ಬೆಳ್ಳಿಗೆರೆಗಳು.
ಶಾಸನಸಭೆಗೆ ಯಾವತ್ತಿಗೂ ಕೂಡಾ ರಾಜಕೀಯ ಹಂಗಾಗಲಿ ಇಲ್ಲವೇ ಗುಂಗಾಗಲೀ ಇರುವುದಿಲ್ಲ. ಶಾಸನಸಭೆ ಎಂಬುದು ಒಂದು ದೇವರ ಗುಡಿ. ಪರಸ್ಪರ ಒಪ್ಪಂದದ ಮೇರೆಗೆ ರೂಪುಗೊಂಡಿರುವ ನಿಯಮವಳಿಯ ಚೌಕಟ್ಟಿನಲ್ಲಿ ಜನಕಲ್ಯಾಣದ ರೂಪುರೇಷೆಗಳನ್ನು ವೈಯಕ್ತಿಕ ನೆಲೆಗಟ್ಟಿನಲ್ಲಿ ಆಲೋಚಿಸಿ ಸಾಮೂಹಿಕ ನೆಲೆಗಟ್ಟಿನಲ್ಲಿ ನಿರ್ಧಾರಗಳನ್ನು ಕೈಗೊಳ್ಳುವ ಈ ಗುಡಿಯಲ್ಲಿ ಎಲ್ಲರೂ ಸರಿಸಮಾನರು. ವಿಕಾಸದ ದಾರಿಗಳು ಬೇರೆ ಇರಬಹುದು. ಆದರೆ, ಗುರಿ ಮಾತ್ರ ಒಂದೇ. ಬಹುಶಃ ರಾಜಕೀಯ ಭಿನ್ನಮತಕ್ಕೆ ಎಡೆಮಾಡಿಕೊಡುವ ಈ ದಾರಿ ಮತ್ತು ಗುರಿಯ ನಡುವೆ ಸ್ಪಷ್ಟತೆಯನ್ನು ಮೂಡಿಸುವುದೇ ಶಾಸನಸಭೆಯ ಸಂಧಾನ ಮತ್ತು ಅನುಸಂಧಾನದ ಮಾರ್ಗ. ಜನತಂತ್ರ ಜಗತ್ತಿಗೆ ಕನ್ನಡ ನಾಡು ಧಾರೆ ಎರೆದುಕೊಟ್ಟಿರುವ ಬಸವಣ್ಣ ಪರಿಕಲ್ಪನೆಯ ಅನುಭವ ಮಂಟಪದ ವಿಸ್ತರಣೆ ಹಾಗೂ ಹೊಸ ವಿನ್ಯಾಸದ ರೂಪವೇ ಎಲ್ಲಾ ದೇಶಗಳ ಹಾಗೂ ರಾಜ್ಯಗಳ ಶಾಸನಸಭೆ. ಹೀಗಾಗಿ ಕನ್ನಡ ನಾಡಿನ ಶಾಸನಸಭೆ ಕಾಯಕತ್ವದ ಮಹತ್ವವನ್ನು ಹೇಳಿಕೊಟ್ಟು ಮಾಡಿ ತೋರಿಸುವ ನಾಯಕತ್ವದ ತತ್ವಮಿತ್ರ. ಇದರಿಂದ ಒದಗಿಬರುವ ಜವಾಬ್ದಾರಿಯನ್ನು ಅರಿತು ವರ್ತಿಸಬೇಕಾದ ಹೊಣೆಗಾರಿಕೆ ಚುನಾಯಿತ ಪ್ರತಿನಿಧಿಗಳದು.
ಬೆಳಗಾವಿಯಲ್ಲಿ ಶಾಸನಸಭೆಯ ಅಧಿವೇಶನ ನಡೆಯುವುದು ಚಳಿಗಾಲದಲ್ಲಿ ಮಾತ್ರ. ಪೂರ್ಣಾವಧಿಯ ಅಧಿವೇಶನ ಸುವರ್ಣ ಸೌಧದಲ್ಲಿ ನಡೆಯಬೇಕೆಂಬ ಹಕ್ಕೊತ್ತಾಯ ಉತ್ತರ ಕರ್ನಾಟಕ ಜನರಿಂದ ಹಲವಾರು ವರ್ಷಗಳಿಂದ ಮಾರ್ದನಿಗೊಳ್ಳುತ್ತಿದೆ. ಅಧಿವೇಶನವನ್ನು ರಾಜಧಾನಿಯಿಂದ ಹೊರಗೆ ನಡೆಸುವುದು ಅಂದುಕೊಂಡಷ್ಟು ಸುಲಭವಲ್ಲ. ಇಡೀ ಆಡಳಿತ ವ್ಯವಸ್ಥೆಯೇ ಶಾಸನಸಭೆ ನಡೆಯುವ ಸ್ಥಳಕ್ಕೆ ಸ್ಥಳಾಂತರಗೊಂಡಾಗ ಕಾನೂನಿನ ಆಡಳಿತದಲ್ಲಿ ವ್ಯತ್ಯಾಸವಾಗುವ ಅಪಾಯಗಳನ್ನು ಗುರುತಿಸಿಯೇ ಇಂತಹ ನಿರ್ಧಾರಗಳನ್ನು ಕೈಗೊಳ್ಳಬೇಕು. ಸಂಸತ್ತಿನ ಅಧಿವೇಶನವನ್ನು ದಕ್ಷಿಣ ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ನಡೆಸಬೇಕೆಂಬ ಹಕ್ಕೊತ್ತಾಯ ದಶಕಗಳಿಂದಲೂ ಕೇಳಿಬರುತ್ತಿದೆ. ಆದರೆ, ಅದು ಕಾರ್ಯರೂಪಕ್ಕೆ ಬರುವ ಸಾಧ್ಯತೆಗಳು ಈಗಿನ ಮಟ್ಟಿಗೆ ಕಂಡುಬರುತ್ತಿಲ್ಲ. ೨೦೦೬ರ ಸುಮಾರಿನಲ್ಲಿ ಕರ್ನಾಟಕ ಸರ್ಕಾರ ದಿಟ್ಟ ಮನಸ್ಸು ಮಾಡಿ ಬೆಳಗಾವಿಯಲ್ಲಿ ಅಧಿವೇಶನ ವರ್ಷಕ್ಕೊಮ್ಮೆ ನಡೆಸಬೇಕೆಂಬ ನಿರ್ಧಾರ ಕೈಗೊಂಡ ನಂತರ ಹೀಗೊಂದು ರೀತಿಯಲ್ಲಿ ಅದೊಂದು ವಾಡಿಕೆಯೇ ಆಗಿಹೋಗಿದೆ. ಕೊರೊನಾ ಸಂದರ್ಭವೂ ಸೇರಿದಂತೆ ಹಲ ವರ್ಷ ಈ ಅಧಿವೇಶನ ನಡೆಯಲು ಸಾಧ್ಯವಾಗಲಿಲ್ಲ. ಈ ಬಾರಿಯ ಅಧಿವೇಶನಕ್ಕೆ ಹೊಸ ಹುಮ್ಮಸ್ಸು ಮತ್ತು ವಿಶ್ವಾಸ ಮೂಡಿ ಬರಲು ಕಾರಣಗಳು ಅನೇಕ.
ನಿಜ. ರಾಜಕೀಯಕ್ಕೆ ಯಾವಾಗಲೂ ಕಾರಣಗಳು ಬೇಕಿಲ್ಲ. ಅದೊಂದು ವಿನಾಕಾರಣದ ಪ್ರಕ್ರಿಯೆ. ಸೋಲು ಗೆಲುವಿನ ಸರಮಾಲೆಯ ನಡುವೆ ಜನಕಲ್ಯಾಣದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಪ್ರಸ್ತಾಪ ಮಾಡುವಾಗ ಮಾನವ ಸಹಜ ಕೋಪತಾಪಗಳು ಮಾತಿನಲ್ಲಿ ಕಂಡುಬರಬಹುದು. ಇದೂ ಕೂಡಾ ಸಹಜ ಪ್ರಕ್ರಿಯೆಯೇ. ವಿಕಾಸದ ದಾರಿ ಗುರುತಿಸುವಾಗ ಯೋಚನಾಲಹರಿಗಳ ಮುಖಾಮುಖಿಯೇ ಈ ಕೋಪತಾಪಗಳ ಗರ್ಭಗುಡಿ. ಸಹಜವಾಗಿಯೇ ಬೆಳಗಾವಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಕಲ್ಯಾಣಕ್ಕೆ ಸಂಬಂಧಿಸಿದ ವಿಚಾರಗಳ ಪ್ರಸ್ತಾಪವಾಗಿ ಪರಿಹಾರಗಳನ್ನು ಜನ ನಿರೀಕ್ಷಿಸುವರು. ಹೀಗಾಗಿ ಉಭಯ ಸದನಗಳ ಸಭಾಪತಿಗಳು ಈ ನಿರೀಕ್ಷೆಗೆ ಅನುಗುಣವಾಗಿ ಹೆಚ್ಚಿನ ಕಾಲಾವಕಾಶವನ್ನು ಈ ಭಾಗದ ವಿಚಾರಗಳ ಪ್ರಸ್ತಾಪಕ್ಕೆ ಮೀಸಲಿಡುವ ನಿರ್ಧಾರಕ್ಕೆ ಬಂದಿರುವುದು ಸ್ವಾಗತಾರ್ಹ ಬೆಳವಣಿಗೆ. ಈ ಅವಕಾಶಗಳನ್ನು ಬಳಕೆ ಮಾಡಿಕೊಂಡು ಕಲಾಪ ಸುಸೂತ್ರವಾಗಿ ಜರುಗುವಂತೆ ನೋಡಿಕೊಳ್ಳುವುದು ಸಭಾಸದರ ಜವಾಬ್ದಾರಿ. ಆಡಳಿತ ಪಕ್ಷವಾಗಲೀ ಇಲ್ಲವೇ ಪ್ರತಿಪಕ್ಷವಾಗಲೀ ಈ ಸೂಕ್ಷ್ಮವಾದ ಹೊಣೆಗಾರಿಕೆಯನ್ನು ಬದ್ಧತೆ ಮತ್ತು ಸಿದ್ಧತೆಯಿಂದ ನಿರ್ವಹಿಸುವ ಮನಸ್ಥಿತಿಯನ್ನು ಹೊಂದಿರುವುದು ಅಪೇಕ್ಷಣೀಯ ಕ್ರಮ.
ಬೆಳಗಾವಿ ಅಧಿವೇಶನ ಬಂತು ಎಂದರೆ ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಮಹಾರಾಷ್ಟ್ರದ ಪರ ಇರುವ ಪಟ್ಟಭದ್ರ ಶಕ್ತಿಗಳಿಗೆ ಏನೋ ಒಂದು ರೀತಿಯ ಆವೇಗ. ಅಧಿವೇಶನಕ್ಕೆ ತಂಟೆ ತಕರಾರು ಎತ್ತುವ ರೀತಿಯಲ್ಲಿ ಮರಾಠಿಗರ ಸಮಾವೇಶವನ್ನು ಬೆಳಗಾವಿಯಲ್ಲಿ ನಡೆಸಲು ಮುಂದಾಗುವುದು ದುಸ್ಸಾಹಸ ಎಂದು ಸಾಬೀತಾಗಿದ್ದರೂ ಒಂದು ಶಾಸ್ತ್ರದ ರೀತಿಯಲ್ಲಿ ಪರಿಪಾಲಿಸಿಕೊಂಡು ಬರುತ್ತಿರುವುದು ನಿಜಕ್ಕೂ ಕನ್ನಡಿಗರ ಮಟ್ಟಿಗೆ ಒಂದು ಪ್ರಾರಬ್ಧ. ಇನ್ನು ನನೆಗುದಿಗೆ ಬಿದ್ದಂತೆ ಕಾಣುತ್ತಿರುವ ಮಹದಾಯಿ ಜಲವಿವಾದಕ್ಕೆ ಖಚಿತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಾಸ್ತವ ನೆಲಗಟ್ಟಿನ ಯೋಜನೆಗೆ ಕೇಂದ್ರ ಸರ್ಕಾರದ ಸಮ್ಮತಿ ಪಡೆಯುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು ಈಗಿನ ಅನಿವಾರ್ಯತೆ. ಕರ್ನಾಟಕಕ್ಕೆ ತಾಗಿಕೊಂಡಂತಿರುವ ಮಹಾರಾಷ್ಟ್ರದ ಗಡಿ ಭಾಗಗಳಲ್ಲಿ ಕನ್ನಡ ಭಾಷೆಯ ಶಾಲೆಗಳಿಗೆ ಆಗುತ್ತಿರುವ ತೊಂದರೆ ಹಾಗೂ ಮರಾಠಿ ಪ್ರಾಬಲ್ಯವನ್ನು ಹೆಚ್ಚಿಸಲು ಕೆಲ ಪಟ್ಟಭದ್ರರು ಮಾಡುತ್ತಿರುವ ಸನ್ನಾಹಗಳಿಗೆ ಸರಿಯಾದ ಪಾಠ ಕಲಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಕೂಡಾ ಅಗಲೇಬೇಕಾದ ಕೆಲಸ.
ಉತ್ತರ ಕರ್ನಾಟಕದಲ್ಲಿ ತೋಟಗಾರಿಕೆ ಬೆಳೆಗಳು ಹೆಚ್ಚು. ಕಬ್ಬು, ತೊಗರಿ, ಜೋಳ, ಹೆಸರು, ಅಲಸಂದಿ, ಈರುಳ್ಳಿ ಮೊದಲಾದ ಕೃಷಿ ಉತ್ಪನ್ನಗಳಿಗೆ ಸರಿಯಾದ ರೀತಿಯಲ್ಲಿ ಬೆಲೆ ಸಿಗದೇ ರೈತರು ವರ್ಷಂಪ್ರತಿ ದುಸ್ಥಿತಿಗೆ ಒಳಗಾಗುತ್ತಿರುವ ಸನ್ನಿವೇಶವನ್ನು ಊಹಿಸುವುದೂ ಕಷ್ಟ. ಇನ್ನು ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಉಳಿಸಿಕೊಂಡು ಬರುತ್ತಿರುವ ಬಾಕಿ ಹಣದ ಪಾವತಿಗೆ ಜರೂರು ಕ್ರಮವೂ ಕೂಡಾ ಅತ್ಯಗತ್ಯ. ನಿರ್ಣಾಯಕ ರೀತಿಯಲ್ಲಿ ಸರ್ಕಾರ ಈ ಕ್ರಮಗಳನ್ನು ಕೈಗೊಳ್ಳದೇ ಹೋದರೆ ಸಹಜವಾಗಿಯೇ ರೈತರ ಕೋಪ ನೆತ್ತಿಗೇರುವುದು ಖಚಿತ.
ರಾಜಕೀಯ ವೈಚಾರಿಕತೆ ಬಹಳ ಮುಖ್ಯ. ಆದರೆ, ವೈಚಾರಿಕತೆಗೆ ಶರಣಾಗುವುದು ಅಷ್ಟಾಗಿ ಒಳ್ಳೆಯ ಬೆಳವಣಿಗೆಯಲ್ಲ. ಸಮುದಾಯದ ಕಲ್ಯಾಣದ ದಾರಿಯಲ್ಲಿ ವೈಚಾರಿಕತೆಯ ವಿನ್ಯಾಸದ ನಡುವೆಯೂ ಸಂಧಾನ ಮಾರ್ಗದಲ್ಲಿ ಹೊಂದಾಣಿಕೆ ಮಾರ್ಗಗಳನ್ನು ಕಂಡುಕೊಂಡಾಗಲಷ್ಟೆ ವೈಚಾರಿಕತೆಯ ಸ್ಪಷ್ಟನೆಗೆ ಅವಕಾಶ. ಇಲ್ಲವಾದರೆ ವೈಚಾರಿಕತೆ ಕೇವಲ ನಿಘಂಟಿನ ಶಬ್ದವಾಗಿ ಉಳಿದು ಮಾತಿನ ಸತ್ವ ಮತ್ತು ಸತ್ಯಗಳು ಮರೆಯಾಗುವ ಎಲ್ಲಾ ಸಾಧ್ಯತೆಗಳು ಹಾಗೂ ಅಪಾಯಗಳು ಇದ್ದೇ ಇವೆ. ಈ ಹಿನ್ನೆಲೆಯಲ್ಲಿ ಈ ಅಧಿವೇಶನ ಜನ ನಿರೀಕ್ಷಿಸಿದಂತೆ ಯಶಸ್ಸು ಪಡೆಯಲು ಆಡಳಿತ ಮತ್ತು ಪ್ರತಿಪಕ್ಷಗಳು ಯೋಚನೆಗಳ ಬೆಳಕಿನಲ್ಲಿ ಜನಕಲ್ಯಾಣದ ದಾರಿಯ ಯೋಜನೆಗಳಿಗೆ ಒಮ್ಮತದ ದಾರಿಗೆ ಬಂದು ಗುರಿಯ ದಾರಿ ಮುಟ್ಟುವುದು ಅಪೇಕ್ಷಣೀಯ.

Next Article