ದೀಪಾವಳಿ ಭವಿಷ್ಯದಲ್ಲಿ ಹಣದ ಸುರಿಮಳೆ
ಸಾಲ ಮಾಡುವುದರಲ್ಲಿ ಎತ್ತಿದ ಕೈ ಅನಿಸಿಕೊಂಡಿದ್ದ ತಿಗಡೇಸಿಗೆ ಹಣ ಇಸಿದುಕೊಳ್ಳಲು ನೆಪ ಹುಡುಕುತ್ತಿದ್ದ. ಈ ಹಿಂದೆ ಗೃಹಲಕ್ಷ್ಮೀ ಯೋಜನೆ ಜಾರಿಯಾದಾಗ… ಇನ್ನೂ ಸ್ವಲ್ಪ ದಿನಗಳಲ್ಲಿ ನಮ್ಮ ಮನೆಯಾಕೆಗೆ ಸರ್ಕಾರದ ಯೋಜನೆಯಿಂದ ಹಣ ಸಿಗಲಿದೆ ಸದ್ಯಕ್ಕೆ ಹತ್ತು ಸಾವಿರ ಕೊಡಿ ತಿಂಗಳು ತಿಂಗಳು ಕೊಟ್ಟು ಮುಟ್ಟಿಸುತ್ತೇನೆ ಎಂದು ಹೇಳಿ ಸಾಲ ಮಾಡಿದ್ದ. ಮುದಿಗೋವಿಂದಪ್ಪನ ಅಂಗಡಿಯಲ್ಲಿ ಅಲ್ಲಿ ಹಣ ಬಂದಕೂಡಲೇ ನಿಮ್ಮದು ಬಗೆಹರಿಸುತ್ತೇನೆ ಎಂದು ಉದ್ರಿ ಮಾಡಿದ್ದ. ಮನೆಯಲ್ಲಿನ ಉಪಹಾರ ತ್ಯಜಿಸಿದ್ದ ತಿಗಡೇಸಿ ಶೇಷಮ್ಮನ ಹೊಟೆಲ್‌ನಲ್ಲಿ ಉದ್ರಿ ಇಟ್ಟಿದ್ದ. ಲಾದುಂಚಿ ರಾಜ ಹೊಲ ಮಾರುತ್ತಿದ್ದಾನೆ ಎಂಬ ಸುದ್ದಿ ಗೊತ್ತಾದಕೂಡಲೇ ಮತ್ತೆ ಫಂಡೆತ್ತಲು ಆರಂಭಿಸಿದ್ದ. ರಾಜ ಹೊಲ ಮಾರಿದ ದುಡ್ಡು ಬಂದ ಕೂಡಲೇ ನಿಮ್ಮ ಸಾಲ ತೀರಿಸುತ್ತೇನೆ ಎಂದು ಇರಪಾಪುರ ಮಾದೇವನ ಹತ್ತಿರ ಹತ್ತರಬಡ್ಡಿಯ ಹಾಗೆ ಸಾಲ ಇಸಿದುಕೊಂಡು ಬಂದಿದ್ದ. ಓಸಿ ಭಾಷುನ ಹತ್ತಿರವೂ ಇದನ್ನೇ ಹೇಳಿ ಸಾಲ ಮಾಡಿದ್ದ. ಇವನು ಯಾರದ್ದೋ ಹೆಸರು ಹೇಳಿ ಹಣ ಇಸಿದುಕೊಳ್ಳುತ್ತಿದ್ದಾನೆ. ಟೆಸ್ಟ್ ಮಾಡೋಣ ಎಂದು ಲಾದುಂಚಿ ರಾಜನನ್ನು ಭೇಟಿಯಾಗಿ ಏನಪಾ ಹೊಲ ಮಾರುತ್ತೀಯಂತೆ… ತಿಗಡೇಸಿಗೆ ಎಷ್ಟು ದುಡ್ಡು ಕೊಡಬೇಕು ಎಂದು ಕೇಳಿದರು. ಅವನೇ ನನಗೆ ಕೊಡಬೇಕು ಎಂದು ಹೇಳಿದಾಗ… ಎಲ್ಲರೂ ಪೆಚ್ಚಾಗಿ ತಿಗಡೇಸಿಯ ಮನೆಗೆ ಬಂದರು. ಎಲ್ಲರನ್ನೂ ಕರೆದು ಕೂಡಿಸಿ ಏನ್ ಬಂದಿದ್ದು ಎಂದು ಕೇಳಿದ್ದೇ ತಡ ಎಲ್ಲರೂ ತಿಗಡೇಸಿ ಮೇಲೆ ಮುಗಿಬಿದ್ದರು. ನಮ್ಮ ಹಣ ಕೊಟ್ಟು ಮಾತಾಡು ಎಂದು ಜೋರು ಮಾಡಿದರು. ತಡೀರಿ.. ತಡೀರಿ ಎಂದು ಸನ್ನೆ ಮಾಡಿದ ತಿಗಡೇಸಿ.. ಈ ಬಾರಿ ದೀಪಾವಳಿ ಸಂಚಿಕೆಯ ವರ್ಷ ಭವಿಷ್ಯದಲ್ಲಿ ನನ್ನ ರಾಶಿಗೆ ಜನೆವರಿಯಿಂದ ಹಣದ ಸುರಿಮಳೆ ಎಂದು ಇದೆ. ಜನವರಿ ಬರಲಿ ಹಣ ಸುರಿಯಲಿ ನಿಮಗೆ ಎಷ್ಟು ಬೇಕೋ ಅಷ್ಟು ಆರಿಸಿಕೊಂಡು ಹೋಗಿ ಎಂದು ಹೇಳಿದ. ಅವರೆಲ್ಲರ ಮುಖ ಮುಖ ನೋಡಿಕೊಂಡರು. ತಿಗಡೇಸಿ ಮಾತ್ರ ಹೆಗಲಮೇಲಿದ್ದ ಟವಲನ್ನು ಮುಖಕ್ಕೆ ಇಟ್ಟುಕೊಂಡು ಮುಸಿ ಮುಸಿ ನಗುತ್ತಿದ್ದ.