ದುಬೈ ಟೂರ್‌ಗೆ ೧೫ ಶಾಸಕರ ಸಿದ್ಧತೆ!
ಬೆಳಗಾವಿ: ಕಾಂಗ್ರೆಸ್‌ನಲ್ಲಿ ಔತಣಕೂಟ ರಾಜಕೀಯ ಸಭೆಗಳಿಗೆ ಬ್ರೇಕ್ ಬಿದ್ದಿರುವ ಬೆನ್ನಲ್ಲೇ ಇದೀಗ ರಾಜ್ಯದ ೧೫ ಶಾಸಕರು ದುಬೈ ಟೂರ್ ಹೋಗುವುದಕ್ಕೆ ಸಿದ್ಧತೆ ಮಾಡುತ್ತಿರುವ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಬೆಳಗಾವಿಯಲ್ಲಿ ಶುಕ್ರವಾರ ಉತ್ತರ ಶಾಸಕ ರಾಜೂ ಸೇಠ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದಾಗ ಈ ವಿಚಾರವನ್ನು ಹೇಳಿದ್ದಾರೆ. ಸತೀಶ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಹ ಅಭ್ಯರ್ಥಿ ಎಂಬುದರಲ್ಲಿ ಎರಡು ಮಾತಿಲ್ಲ; ಆದರೆ ಸದ್ಯ ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ ಅವರು ನೇಮಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇವಲ ಸತೀಶ ಜಾರಕಿಹೊಳಿ ಮಾತ್ರವಲ್ಲದೆ ರಾಜ್ಯದಲ್ಲಿ ಹಲವು ಹಿರಿಯ ಅರ್ಹ ನಾಯಕರು ಇದ್ದಾರೆ. ಮುಂದಿನ ಕೆಪಿಸಿಸಿ ಅಧ್ಯಕ್ಷರು ಯಾರು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದವರು ಹೇಳಿದರು.
ಗಾಂಧಿ ಭಾರತ ಕಾರ್ಯಕ್ರಮಕ್ಕೆ ಪಕ್ಷದ ಶಾಸಕರು, ನಾಯಕರು ಬರುತ್ತಿದ್ದಾರೆ. ಔತಣಕೂಟ ಏರ್ಪಾಡು ಮಾಡಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಅದೆಲ್ಲಾ ಏನಿಲ್ಲ. ನಾವು ಶಾಸಕರು ಪ್ರವಾಸದ ಸಿದ್ಧತೆಯಲ್ಲಿದ್ದೇವೆ ಎಂದರು.
೧೫ ಶಾಸಕರು ದುಬೈ ಹೋಗುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಟಿಕೆಟ್ ಸರಿಯಾದ ಕೂಡಲೇ ಹೋಗುತ್ತೇವೆ ಎಂದರು. ಆದರೆ ಟಿಕೆಟು ಯಾವಾಗ ಸರಿಯಾಗುತ್ತದೆ ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಡಲಿಲ್ಲ.