ದೇವನ ಇರುವು
ಕುಂಭ ಸಹಸ್ರ ಉದಕದಲ್ಲಿ
ಬಿಂಬಿಸಿ ತೋರುವ ಸೂರ್ಯನೊಬ್ಬನಿಪ್ಪಂತೆ
ಕೋಟಿ ಕೋಟಿ ಆತ್ಮದಲಿ
ಪರಮಾತ್ಮ ನಿವುನಯ್ಯಾ
ಮೃಡಗಿರಿ ಅನ್ನದಾನೀಶನಾಗಿ…
ಈ ಜಗತ್ತಿಗೆ ಬೆಳಕನ್ನು ನೀಡುವ ರವಿಯು ಒಬ್ಬನೇ ಆದರೆ ಸಾವಿರಾರು ಕೊಡಗಳಲ್ಲಿ ನೀರನ್ನು ತುಂಬಿಸಿ ಇಟ್ಟರೆ ಅಲ್ಲಿನ ಎಲ್ಲ ಕೊಡಗಳಲ್ಲಿ ಕಾಣುಬರುವುದು ಸೂರ್ಯನ ಬಿಂಬವೂ ಕೂಡ ಸಾವಿರಾರು. ಎಲ್ಲರದಲ್ಲಿ ಆತನ ಪ್ರತಿಬಿಂಬಿ ಕಾಣುವದು ಸಹಜ. ಹಾಗೆ ದೇವರ ಇರುವು ಕೂಡ ಹಾಗೇಯೇ ಇದೆ ಎಂದು ತಿಳಿಯಬೇಕು.
ದೇವರು ಸರ್ವವ್ಯಾಪ್ತನಾಗಿದ್ದಾನೆ. ಅಣುರೇಣು ತೃಣಕಾಷ್ಟದಲ್ಲಿಯೂ ದೇವನಿದ್ದಾನೆ ಎಂದು ಪರಿಭಾವಿಸಬೇಕು. ಈ ಪ್ರಕೃತಿಯಲ್ಲಿ ಚೈತನ್ಯವಿದೆ. ಅದಕ್ಕೆಂದೇ ಚಲನಶೀಲತೆ ಪ್ರಕೃತಿಯ ಮೂಲಗುಣವಾಗಿದೆ. ಚೈತನ್ಯವಿಲ್ಲದೇ ಚಲನೆ ಬಂದಿತಾದರೂ ಹೇಗೆ? ಹಾಗೇಂದ ಮಾತ್ರಕ್ಕೆ ಜಡಗಳಲ್ಲಿ ದೇವರಿಲ್ಲ ಎನ್ನಕೂಡದು. ಜಡವಸ್ತುವಿಗೂ ಕೂಡ ಬದಲಾವಣೆಯ ಗುಣವಿದೆ. ಹೀಗಾಗಿ ಕಾಲಕ್ಕೆ ಒಳಗಾಗಿ ಬದಲಾಗುತ್ತಲೇ ಸಾಗುತ್ತದೆ.
ಹಾಗಾಗಿ ಸಕಲ ಚರಾಚರ ವಸ್ತುಗಳಲ್ಲಿಯೂ ದೇವರ ಅಸ್ತಿತ್ವವನ್ನು ನಾವು ಕಾಣಬೇಕು. ಇನ್ನು ಸಾಧಕನಾದ ಮನುಷ್ಯನೂ ಕೂಡ ದೇವರಾಗಬಲ್ಲವೆಂಬುದನ್ನು ಅನೇಕರು ತೋರಿಸಿಕೊಟ್ಟಿದ್ದಾರೆ. ಹಾಗೇ ಮಾನವರಲ್ಲಿನ ಆತ್ಮಚೈತನ್ಯವೂ ಕೂಡ ದೇವರೇ ಆಗಿದ್ದಾನೆ. ಅಂದ ಹಾಗೇ ಇಂದು ಮಾನವರ ಸಂಖ್ಯೆ ಗಣನೀಯವಾಗಿ ಬೆಳೆದಿದೆ. ೧೯೪೭ ರಲ್ಲಿ ಭಾರತ ಸ್ವಂತಂತ್ರವಾದ ಸಂದರ್ಭದಲ್ಲಿ ಕೇವಲ ೩೩ ಕೋಟಿಯತ್ತಂತೆ. ಆದರೆ ಇಂದಿನ ಜನಸಂಖ್ಯೆ ೧೪೦ಕೋಟಿಗೂ ಅಧಿಕವಾಗಿ ಬೆಳೆದಿರುವುದು ವಿದಿತವಾಗಿದೆ.
ಹೀಗೆ ಅದೆಷ್ಟು ಜನಸಂಖ್ಯೆ ಬೆಳೆದರೂ ಕೂಡ ಜೀವಾತ್ಮರಲ್ಲಿ ವ್ಯಕ್ತವಾಗುವದು ಪರಮಾತ್ಮನ ಚೈತನ್ಯ ಒಂದೇ ಅಲ್ಲವೇ ಅದನ್ನೇ ಬಸವಣ್ಣ ಮಹಾನುಭಾವರು ದೇವನೊಬ್ಬ ನಾಮ ಹಲವು ಎಂದರು. ಮಾನವನು ಸಾಮಾನ್ಯವಾಗಿ ತನಗೆ ಬೇಕಾದಂತೆ ದೇವನಿಗೆ ವಿವಿಧ ಆಕಾರ ಸ್ವರೂಪಗಳನ್ನು ನೀಡಿ ವಿಭಿನ್ನ ಹೆಸರುಗಳನ್ನು ಇತ್ತವನು ಮಾನವನಲ್ಲವೇ ಹಾಗೂ ಮನುಷ್ಯರಲ್ಲಿರುವ ಆತ್ಮ ಚೈತನ್ಯವು ಒಂದೇ ತೆರನಾಗಿದೆ. ಅವರವರ ಮಹತ್ ದೃಷ್ಟಿಕೋನಕ್ಕೆ ದಕ್ಕುವದು. ಅದಕ್ಕೇನೇ ಪರಮಾತ್ಮನೆಂದು ಕರೆದರು. ದೇವನೆಂದರು. ಇದು ಏಕಂ ಸತ್ ವಿಪ್ರಾ ಬಹುದಾ ವದಂತಿ' ಎಂಬ ಮಾತಿಗೆ ಪುಷ್ಟಿ ನೀಡುತ್ತದೆ. ದೇವರೆಂದರೆ ಅದೊಂದು ಆಚೆಗಿನ ವಸ್ತುವಲ್ಲ. ಅದು ನಮ್ಮೊಳಗಿನ ಅನುಭಾವ ಚೈತನ್ಯವೆಂದು ತಿಳಿಯಬೇಕು. ಕಾಣುವ ಬಾಹ್ಯವಸ್ತು ಖಂಡಿತವಲ್ಲ. ಕಾಣುವ ಕಾಣ್ಕೆಯಲ್ಲಿ ದೇವನಿದ್ದಾನೆ. ತನ್ನೊಳಗಿನ ಅನುಭಾವದಲ್ಲಿ ಭಗವಂತನ ಇರುವು ಇದೆ.