ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ದೇವರು ಕೊಡುತ್ತಿರುವ ಮಳೆಗೆ ನಮ್ಮ ಬೆಲೆ..

05:00 AM Jul 02, 2024 IST | Samyukta Karnataka

ದೇವರ ಅನುಗ್ರಹದಿಂದ ಮಳೆ ಚೆನ್ನಾಗಿ ಬರುತ್ತಿದೆ. ದೇವರು ಕೊಟ್ಟ ಜಲಸಮೃದ್ಧಿಯನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಮುಂದಿನ ಸಮೃದ್ಧಿಗೆ ಅನುಕೂಲವಾಗುವಂತೆ ಮಾಡಿಕೊಳ್ಳಬೇಕಾಗಿದೆ.
ಕಳೆದ ಎರಡು ಮಳೆಗಾಲದಲ್ಲಿಯೂ ಅಗತ್ಯಕ್ಕಿಂತ ತುಂಬಾ ಕಡಿಮೆ ಮಳೆ, ಜೊತೆಯಲ್ಲಿ ಈ ಸಲದ ಬೇಸಿಗೆಕಾಲ ಹಿಂದೆಂದಿಗೂ ಕಾಣದಷ್ಟು ಗರಿಷ್ಠಮಟ್ಟದ ತಾಪಮಾನದಿಂದ ಕೂಡಿತ್ತು. ಹೀಗಾಗಿ ದೇಶದ ಅನೇಕ ಪ್ರದೇಶಗಳು ಭೀಕರ ಪರಿಸ್ಥಿತಿಯಲ್ಲಿ ಸಾಗುತ್ತಿರುವುದನ್ನು ಮಾಧ್ಯಮಗಳ ಮೂಲಕ ನಾವೆಲ್ಲ ಕಂಡಿದ್ದೇವೆ. ಈ ಸಲವೂ ಮಳೆ ಕಮ್ಮಿಯಾಗಬಹುದೆಂಬ ಆತಂಕ ಅನೇಕರಲ್ಲಿ ಇತ್ತು. ಆದರೆ ದೇವರ ಅನುಗ್ರಹದಿಂದ ಮಳೆ ಬಂದಿದೆ. ಈಗಿನ್ನೂ ಮಳೆಗಾಲದ ಆರಂಭದಲ್ಲಿದ್ದೇವೆ. ಮಳೆಗಾಲದ ಕೊನೆವರೆಗೆ ಉತ್ತಮವಾದ ಮಳೆ, ಇನ್ನು ಮೇಲೆ ಬರಬೇಕಷ್ಟೆ. ಸೂರ್ಯನು ಆರ್ದ್ರಾ ನಕ್ಷತ್ರವನ್ನು ಪ್ರವೇಶಿಸಿದ ನಂತರದಲ್ಲಿ ಭೂಮಿ ಅಕ್ಷರಶಃ ‘ಆರ್ದ್ರಾ’ವಾಗಲೇಬೇಕು.
ಈಗ ನೀರನ್ನು ನಾವು ಎಷ್ಟು ಉಳಿಸಿಕೊಳ್ಳಬೇಕೆಂಬ ವಿಷಯ. ಮಳೆ ನೀರಿನ ಕೊಯ್ಲು ಈಗ ಬೇಕು. ಭೂಮಿಗೆ ಬಿದ್ದ ನೀರು ಇಂಗುವಂತೆ ಮಾಡಬೇಕು. ಇಂಗು ಗುಂಡಿಗಳ ಮೂಲಕ ನೀರು ಭೂಮಿಯೊಳಗೆ ಇಳಿಯುವಂತೆ ಮಾಡಿದರೆ. ಭೂಮಿಯ ಅಂತರ್ಜಲ ಹೆಚ್ಚುತ್ತದೆ. ಮುಂದೆ ಬೇಸಿಗೆಯಲ್ಲಿ ನೀರಿನ ಕೊರತೆಯಾಗುವುದಿಲ್ಲ. ಭೂಮಿಯ ಮೆಲೆ ಬಿದ್ದ ನೀರಿನ ಎಷ್ಟೋ ಭಾಗ ಭೂಮಿಯೊಳಗೆ ಇಳಿಯದೆ ಹರಿದು ಹೋಗುತ್ತದೆ. ಇದಕ್ಕೊಂದು ಉದಾಹರಣೆ ಕೊಡಬಹುದು.
ಅಷ್ಟೇನೂ ಬುದ್ಧಿವಂತನಲ್ಲದ ವಿದ್ಯಾರ್ಥಿಗೆ ತುಂಬಾ ಸಲ ಪಾಠ ಹೇಳಿದರೂ ಮನಸ್ಸಿಗೆ ಅರ್ಥವಾಗದೆ ಹಾಗೆಯೇ ದಾಟಿ ಹೋಗುತ್ತದೆ. ನೀರನ್ನು ನಿಲ್ಲಿಸಿದಂತೆ ಅವನ ಮನಸ್ಸನ್ನು ಯಾವುದಾದರೂ ಉಪಾಯದಲ್ಲಿ ಪಾಠದ ವಿಷಯದಲ್ಲೇ ಕೆಲವು ಕಾಲ ನಿಲ್ಲಿಸಿದರೆ ಸ್ವಲ್ಪ ಸ್ವಲ್ಪ ಒಳಗೆ ಇಳಿಯುತ್ತದೆ, ಅರ್ಥವಾಗಲು ಶುರುವಾಗುತ್ತದೆ.
ನೀರು ಭೂಮಿಯೊಳಗೆ ಇಳಿಯುವಂತೆ ಮಾಡಲು ಗಿಡ-ಮರಗಳು ತುಂಬಾ ಅನುಕೂಲಕರ. ಮರದ ಎಲೆಗಳ ಮೇಲೆ ಬಿದ್ದ ನೀರು ನಿಧಾನವಾಗಿ ಹನಿ-ಹನಿಯಾಗಿ ಭೂಮಿಯ ಮೇಲೆ ಬೀಳುತ್ತದೆ. ಇದರಿಂದ ನೀರು ಭೂಮಿಯಲ್ಲಿ ಇಂಗುತ್ತದೆ. ಆದ್ದರಿಂದಲೇ ಗಿಡ-ಮರಗಳು ಇರುವ ಕಡೆ ಭೂಮಿಯ ಅಂತರ್ಜಲ ಉಳಿದುಕೊಳ್ಳುತ್ತದೆ. ಬೇಸಿಗೆಯಲ್ಲಿ ನೀರಿನ ಕೊರತೆ ಇರುವುದಿಲ್ಲ. ಮಲೆನಾಡಿನಲ್ಲಿ ಬೇಸಿಗೆಯಲ್ಲಿ ನೀರಿನ ಕೊರತೆ ಕಡಿಮೆಯಿರಲು ಇದೇ ಕಾರಣವೆನ್ನಬಹುದು. ಆದ್ದರಿಂದ ನಾವಿರುವ ಸ್ಥಳದಲ್ಲಿ ಗಿಡ-ಮರಗಳು ಹೆಚ್ಚು ಇರುವಂತೆ ನೋಡಿಕೊಳ್ಳೋಣ. ಮಳೆಗಾಲದ ಆರಂಭದಲ್ಲಿ ಪ್ರತಿ ವರ್ಷವೂ ಒಂದೆರಡು ಗಿಡಗಳನ್ನಾದರೂ ನೆಡುವ ಮೂಲಕ ಪ್ರಕೃತಿಗೆ ಬೆಂಬಲವಾಗಿ ನಿಲ್ಲೋಣ.
ಮರಗಳು ಇನ್ನೂ ಅನೇಕ ರೀತಿಯಲ್ಲಿ ಲೋಕಕ್ಕೆ ಉಪಕರಿಸುತ್ತವೆ. ಆದ್ದರಿಂದಲೇ ಅವುಗಳನ್ನು ಕಡಿಯುವುದು ಧರ್ಮದ ದೃಷ್ಟಿಯಿಂದ ಅಪರಾಧ. ಪ್ರಾಚೀನ ಧರ್ಮಶಾಸ್ತ್ರ ಗ್ರಂಥಗಳು ಮರ ಕಡಿದದ್ದರ ಬಗ್ಗೆ ಶಿಕ್ಷೆಗಳನ್ನು ವಿಧಿಸಿವೆ. ಯಾಜ್ನವಲ್ಕ್ಯ ಸಂಸ್ಕೃತಿಯು ೨೦ ‘ಪಣ’ದಿಂದ ೮೦ ‘ಪಣ’ದ ವರೆಗೆ ದಂಡವನ್ನು ವಿಧಿಸಿದೆ.
ದೇವಸ್ಥಾನ, ಸ್ಮಶಾನ, ಸೀಮಾಗಡಿ, ಪವಿತ್ರಸ್ಥಳ ಮತ್ತು ಧಾರ್ಮಿಕ ಸ್ಥಳಗಳಲ್ಲಿರುವ ಮರಗಳನ್ನು ಕಡಿದರೆ ಹಿಂದೆ ಹೇಳಿದ ದಂಡದ ಎರಡು ಪಟ್ಟು ದಂಡವನ್ನು ವಿಧಿಸಿದೆ. ಧರ್ಮಶಾಸ್ತ್ರಗಳೆ ನಮ್ಮ ದೇಶದ ಪ್ರಾಚೀನ ಕಾನೂನುಗಳು. ಕಾನೂನುಗಳು ಮರ ಕಡಿಯುವುದನ್ನು ನಿಷೇಧಿಸುವುದಕ್ಕೆ ಮರಗಳು ಅಮೂಲ್ಯವಾದ ಲೋಕೋಪಕಾರ ಮಾಡುತ್ತಿರುವುದೆ ಕಾರಣ. ಮರಗಳಿದ್ದರೆ ಹಿಂದೆ ಹೇಳಿದಂತೆ ಮಳೆನೀರಿನ ಸಹಜ ಕೊಯ್ಲು ಆಗುವುದಂತೂ ಖಚಿತ. ಆದ್ದರಿಂದ ಗಿಡ ನೆಡಬೇಕು. ದೇವರು ಕೊಡುತ್ತಿರುವ ಮಳೆಯ ಸಮೃದ್ಧಿಗೆ ನಾವು ಬೆಂಬಲಿಗರಾಗಬೇಕು.

Next Article