ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ದೇವರ ಎದಿರೇಕೆ ವಿಐಪಿ ಕುಣಿತ…

12:15 AM Nov 07, 2024 IST | Samyukta Karnataka

ದೇವರಿಗಿಂತ ದೊಡ್ಡ ವಿಐಪಿ ಇದ್ದಾರಾ? ದೇವರೇ ದೊಡ್ಡವನು. ಎಲ್ಲರನ್ನೂ ಸಮಾನವಾಗಿ ಸೃಷ್ಟಿಸಿದವನು. ಅವನ ದರ್ಶನಕ್ಕೆ ಈ ವಿಐಪಿ-ವಿವಿಐಪಿ ಮಂದಿಯ ದಾಂಧಲೆ..!
ಮೊನ್ನೆ ನಡೆದ ಹಾಸನಾಂಬೆಯ ವಾರ್ಷಿಕ ಪೂಜೆ ಪುನಸ್ಕಾರ ದರ್ಶನಗಳಲ್ಲಿ ಈ ವಿಐಪಿಗಳ ದರ್ಶನ-ಪಾಸು-ಅವಕಾಶ ದೊಡ್ಡ ಗದ್ದಲ-ದಾಂಧಲೆ ಸೃಷ್ಟಿಸಿತು.
ಸುಮಾರು ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನ ರಾಜ್ಯದ ವಿವಿಧೆಡೆಯಿಂದ, ದೇಶದ ಎಲ್ಲೆಡೆ ಇರುವ ಹಾಸನಾಂಬೆಯ ಭಕ್ತರು ಪೂಜನೀಯ ಭಾವನೆಯಿಂದ ದರ್ಶನ ಪಡೆದು ಪುನೀತರಾಗಲು ಆಗಮಿಸಿದ್ದರು. ಆದರೆ ದರ್ಶನ ಸುಲಭವಾಗಲಿಲ್ಲ. ಹತ್ತಾರು ತಾಸು ಕ್ಯೂ ನಿಂತರೂ, ಮಕ್ಕಳು, ಮಹಿಳೆಯರು, ವೃದ್ಧರು ಮಾತೆಯ ಕಂಡು ಪೂಜಿಸಿ ಕಣ್ತುಂಬಿಕೊಳ್ಳಲು ಪರದಾಡಿದರು. ಪರಿತಪಿಸಿದರು.
ಆದರೆ ಅದೇ ವಿಐಪಿಗಳೆಂಬುವವರು ಕ್ಷಣಾರ್ಧದಲ್ಲಿ ಗರ್ಭಗುಡಿಯ ಮುಂದೆ ತೆರಳಿ ದರ್ಶನ ಪಡೆದು ಹದಿನೈದು ನಿಮಿಷದಲ್ಲಿ ಮರಳಿ ಹೋಗುತ್ತಿದ್ದರು!
ಈ ವಿಐಪಿಗಳ ಅಡಚಣೆ, ಅವರಿಂದ ಆಗುವ ತಾರತಮ್ಯ, ಅವರ ದರ್ಬಾರು, ಠೇಂಕಾರದಿಂದ ಅಸಹ್ಯಪಟ್ಟ ಸಾಮಾನ್ಯ ಜನ ಸಹಜವಾಗಿ ಗದ್ದಲ ಮಾಡಿ ಪ್ರಶ್ನಿಸಿದರು.
ಏನಿದು ವಿಐಪಿ ದರ್ಶನ? ಯಾಕಾಗಿ ದರ್ಶನ? ಯಾರು ವಿಐಪಿಗಳು? ಹಣದ ಥೈಲಿ ಇರುವವರೆಲ್ಲ ವಿಐಪಿಗಳೇ? ಸಾಮಾನ್ಯರಿಗೇಕೆ ದರ್ಶನ ಲಭ್ಯ ಇಲ್ಲ ಎಂದು ಪ್ರಶ್ನಿಸಿ ತಗಾದೆ ತೆಗೆದರು. ಇದು ಯಾವ ಮಟ್ಟಕ್ಕೆ ಹೋಯಿತೆಂದರೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಸಿಬ್ಬಂದಿ, ಶಾಸಕರು-ಸಚಿವರ ನಡುವೆಯೇ ಪರಸ್ಪರ ವಾಗ್ವಾದ ಮತ್ತು ಹಣಾಹಣಿಯೇ ನಡೆದು ಹೋಯಿತು. ವಿಐಪಿ ಎಂದು ಯಾರಿಗೆ ಹೇಳಬೇಕು? ಯಾರಿಗೆ ಪಾಸ್ ನೀಡುತ್ತಿದ್ದೀರಿ? ಜಿಲ್ಲಾಧಿಕಾರಿ ಪಿಎ ವಿಐಪಿ ಪಾಸ್ ನೀಡುವ, ವಿಐಪಿ ಮಂದಿಗೆ ನೇರ ದರ್ಶನ ವ್ಯವಸ್ಥೆ ಮಾಡುವ ಕಮಾಂಡ್ ಹೊಂದಿದವನಾದರೆ ಜನಸಾಮಾನ್ಯರ ಪರ ನಿಲ್ಲುವವರು ಯಾರು? ಭಕ್ತರ ಬೇಕು, ಬೇಡಗಳ, ಕಾನೂನು-ಸುವ್ಯವಸ್ಥೆ, ಜನರ ಪರಿಪಾಟಲು ಕೇಳುವವರು ಯಾರು? ಎಂಬ ದೊಡ್ಡ ವಾಗ್ವಾದವೇ ನಡೆಯಿತು.
ಅಂತೂ ಇಪ್ಪತ್ತು ಲಕ್ಷ ಭಕ್ತರಿಗೆ ಹಾಸನಾಂಬೆ ದರ್ಶನ ದೊರೆಯಿತು. ಸುಮಾರು ಹನ್ನೆರಡು ಕೋಟಿಗೂ ಅಧಿಕ ಹಣ ದೇವಿಗೆ ಸಮರ್ಪಣೆಯಾಯಿತು. ಆದರೆ ಪ್ರತಿ ವರ್ಷದಂತೆ ಈ ವರ್ಷವೂ ಹಾಸನಾಂಬೆಯ ಎದುರು ವಿಐಪಿ ಸಂಸ್ಕೃತಿಯ ಪರಾಕಾಷ್ಠೆ ಮೆರೆದು, ಸಾಮಾನ್ಯ ಭಕ್ತರಿಗೆ ಹತಾಶೆ, ಆಕ್ರೋಶ ಎಲ್ಲವೂ ಉಂಟಾದವು.
ಡಿಸಿ ಪಿಎ ಸೂಚಿಸಿದ ಅಥವಾ ಇನ್ಯಾರೋ ಪ್ರಭಾವಿ ವ್ಯಕ್ತಿ ಹೇಳಿದರೆಂದು ವಿಐಪಿ ಹೆಸರಿನಲ್ಲಿ ಯರ‍್ಯಾರೋ ಸುಲಭವಾಗಿ ದರ್ಶನ ಪಡೆದರು. ಅಲ್ಲದೇ ಪುಂಡು ಪೋಕರಿಗಳು, ಕ್ರಿಮಿನಲ್‌ಗಳು ಕೂಡ ವಿಐಪಿ ಪಾಸ್‌ನಲ್ಲಿ ಬಂದು, ಶಾಲು ಹೊದಿಸಿಕೊಂಡು ದೇವರ ಎದಿರು ಸನ್ಮಾನ ಸ್ವೀಕರಿಸಿದರು.
ಹಾಸನಾಂಬೆ ತಾಯಿಗಿಂತ ಇವರು ಮೇಲಾ? ಈ ಪ್ರಶ್ನೆ ಇನ್ನೂ ಅನುರಣಿಸುತ್ತಿದೆ. ಇದು ಈಗ ಹಾಸನದಲ್ಲಷ್ಟೇ ಅಲ್ಲ, ರಾಜ್ಯದೆಲ್ಲೆಡೆ ಎದ್ದಿದೆ. ಎಲ್ಲಿಯವರೆಗೆ ಎಂದರೆ ಈ ವಿಐಪಿ ದರ್ಶನ ಸಂಸ್ಕೃತಿಯನ್ನು ರದ್ದು ಕೋರಿ ಸರ್ವೋಚ್ಚ ನ್ಯಾಯಾಲಯದವರೆಗೂ ವಿಷಯ ಹೋಗಿದೆ.
ಕೇವಲ ಹಾಸನಾಂಬೆ ಮಾತ್ರವಲ್ಲ. ದೇಶದ ಪ್ರಸಿದ್ಧ ದೇವಾಲಯಗಳು, ಪವಿತ್ರ ಸ್ಥಳಗಳಲ್ಲಿ ಈ ವಿಐಪಿ ಸಂಸ್ಕೃತಿ ಮೆರೆದಾಡುತ್ತಿದೆ. ಕಳೆದ ಎರಡು ದಶಕಗಳಿಂದಲೂ ದೇಶದ ಹಲವು ದೇವಸ್ಥಾನಗಳಲ್ಲಿ, ಪುಣ್ಯ ಕ್ಷೇತ್ರಗಳಲ್ಲಿ ಇರುವ ಈ ವಿಐಪಿ ಪಾಸ್-ದರ್ಶನ ವಿವಾದ ಇದ್ದದ್ದೇ. ಇದನ್ನು ಜನ ಸಮಯ ಸಿಕ್ಕಾಗಲೆಲ್ಲ ಪ್ರಶ್ನಿಸುತ್ತಲೇ ಇದ್ದಾರೆ.
ಹಾಗಂತ ಎಲ್ಲಿಯೂ ಈ ವಿಐಪಿ ಸಂಸ್ಕೃತಿಗೆ ಕೊನೆ ಹಾಡಿಲ್ಲ. ಏಕೆಂದರೆ ವಿಐಪಿ ಸಂಸ್ಕೃತಿಯ ಹಿಂದಿರುವುದು, ಆ ದೇವರ, ಆಡಳಿತ ಮಂಡಳಿಗಳ ಪ್ರಮುಖರ ಪ್ರತಿಷ್ಠೆ ಮತ್ತು ಪ್ರಭಾವ ಹೆಚ್ಚಿಸಿಕೊಳ್ಳುವ ಕೆಟ್ಟ ಆಲೋಚನೆ. ಮತ್ತೊಂದು ಹಣ, ಸಂಪತ್ತು ಸುಲಭವಾಗಿ ಕೀಳುವ ತಂತ್ರ.
ಪ್ರತಿ ದೇವಸ್ಥಾನಗಳಲ್ಲೂ ವಿಐಪಿ ಅಥವಾ ನೇರ ಸಂದರ್ಶನದ ಪಾಸ್ (ಪ್ರವೇಶ ಪತ್ರ) ನೀಡಲಾಗುತ್ತದೆ. ಇದಕ್ಕೆ ಸಾವಿರ, ಐದು ಸಾವಿರ, ಹತ್ತು ಸಾವಿರ ರೂಪಾಯಿ ವಿಶೇಷ ಶುಲ್ಕ ನಿಗದಿಯಾಗಿರುತ್ತದೆ. ಹಾಸನಾಂಬೆ ದರ್ಶನದಲ್ಲೂ ಇದುವೇ ಇತ್ತೆನ್ನಿ.
ಆದರೆ ದೇವರೆದುರು ಎಲ್ಲರೂ ಸಮಾನರು ಎನ್ನುವ ಒಪ್ಪಿತ ಭಕ್ತಿ ಮತ್ತು ಧರ್ಮ ಸಮ್ಮತ ನಿರ್ಣಯದ ಜೊತೆಗೆ ದುಡ್ಡು ಕೊಟ್ಟರೆ ದೇವರ ತಕ್ಷಣದ ದರ್ಶನವಾಗುತ್ತದೆ.
ಇಂಥವು ಮುಂದುವರಿದರೆ ಜನಸಾಮಾನ್ಯ ಭಕ್ತರ ಪಾಡೇನು? ದೇವರು ತಾರತಮ್ಯ ಮಾಡುವುದಿಲ್ಲ ಎಂಬ ಮಾತು ಸುಳ್ಳಾದಂತಲ್ಲವೇ?
ಹಾಗೆಯೇ ಹಣವಿಲ್ಲದ, ಅದಕ್ಕೂ ಹೆಚ್ಚಾಗಿ ಭಕ್ತಿ ಭಾವನೆ, ದರ್ಶನದ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕೆಂಬ ಬಡ-ಸಾಮಾನ್ಯ ವ್ಯಕ್ತಿಯ ಹಕ್ಕು ಏನಾಯ್ತು ಎನ್ನುವುದು ಕೂಡ ಇಲ್ಲಿ ಮುಖ್ಯ.
ನಮ್ಮ ಭಾರತೀಯರಿಗೆ ಸರತಿ ಸಾಲಿನಲ್ಲಿ ನಿಲ್ಲುವುದು, ಕಾಯುವುದು ಹೊಸತೇನಲ್ಲ. ಟ್ರೈನ್, ಬಸ್ ಟಿಕೆಟ್‌ನಿಂದ ಹಿಡಿದು ಶಾಲಾ ಪ್ರವೇಶ, ರೇಷನ್, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಭೇಟಿ, ಚಿಕಿತ್ಸೆ, ಚಲನಚಿತ್ರ ಟಿಕೆಟ್‌ಗಾಗಿ ನೂರಾರು ಮೀಟರ್ ಕ್ಯೂ ನಿಲ್ಲುವುದು, ದಿನವಿಡೀ ಕಾಯುವುದು ಜನಸಾಮಾನ್ಯರ ಒಪ್ಪಿತ ಹೊಂದಾಣಿಕೆಯಾಗಿಬಿಟ್ಟಿದೆ. ಅಷ್ಟು ಸಹನೆಯೂ ಜನರಲ್ಲಿದೆ.
ಅದರಲ್ಲೂ ಆಧ್ಯಾತ್ಮಿಕತೆ ಮತ್ತು ಆರಾಧನೆ ನಮ್ಮ ಜನರ ನಂಬಿಕೆಯ ಮೂಲ ಬೇರು. ಮುಕ್ಕೋಟಿ ದೇವರನ್ನು ಪೂಜಿಸುವ ನಾವು, ವರ್ಷವಿಡೀ ದೇವರ ದರ್ಶನ, ಪೂಜೆ ಪುನಸ್ಕಾರ, ಹರಕೆ, ಪುಣ್ಯಸ್ನಾನಕ್ಕೆ ತೆರಳುತ್ತಲೇ ಇರುತ್ತೇವೆ. ಆದರೆ ಬಹುತೇಕ ಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ಕಂಡು ಬರುವ ದೃಶ್ಯ ಎಂದರೆ ಈ ಜನಸಾಮಾನ್ಯನಿಗೆ ಕಿಮ್ಮತ್ತು' ಕಡಿಮೆ. ಅದೇ ಫಾಸ್ಟ್ರ್ಯಾಕ್, ಸೂಪರ್ ಫಾಸ್ಟ್ರ್ಯಾಕ್ ಸರದಿ, ವಿಐಪಿ-ವಿವಿಐಪಿಗಳಿಗೆ ಹೆಚ್ಚಿನ ಆದ್ಯತೆ. ತಿರುಪತಿಯಂತೂ ಗೊತ್ತು... ಅಲ್ಲಿ ಶುಲ್ಕ ನಿಗದಿಯಾಗಿದೆ. ನೇರವಾಗಿ ಶ್ರೀನಿವಾಸನ ಎದುರು ಹೋಗಲು ಹೆಚ್ಚು ಶುಲ್ಕ ಕೊಟ್ಟವರಿಗೆ ಮಾತ್ರ ಸಾಧ್ಯ... ಇಲ್ಲವಾದರೆ ಎರಡು ದಿನವಾದರೂ ಭಾಗ್ಯವಿಲ್ಲ. ಶಿರಡಿ, ವಾರಾಣಸಿ, ಕುಂಭ ಮೇಳದ ಸಂದರ್ಭ, ಮದುರೈ ಮೀನಾಕ್ಷಿ, ಶಬರಿಮಲೈ ಅಯ್ಯಪ್ಪನ ಸಾನ್ನಿಧ್ಯ, ಕೇರಳದ ಅನಂತ ಪದ್ಮನಾಭನ ಸ್ಥಾನ... ಇಲ್ಲೆಲ್ಲ ಭಕ್ತಸಾಗರ ಸದಾ ಇದ್ದೇ ಇರುತ್ತದೆ. ಕನ್ಯಾಕುಮಾರಿಯಿಂದ ಕಾಶ್ಮೀರದ ವೈಷ್ಣವಿದೇವಿ ಮಂದಿರದವರೆಗೆ ಎಲ್ಲೆಡೆ ವಿಐಪಿ-ವಿವಿಐಪಿಭಕ್ತ' ಸಂಸ್ಕೃತಿಯ ಅಟ್ಟಹಾಸ-ಹಾವಳಿ ಢಾಳಾಗಿ ಕಾಣುತ್ತದೆ. ಇಲ್ಲಿ ಜನಜಂಗುಳಿಯೂ ಹೆಚ್ಚು. ಆದಾಯವೂ ಹೆಚ್ಚು. ವಿಐಪಿ ಸಂಸ್ಕೃತಿಯ ಕಾಟವೂ ಹೆಚ್ಚು !! ದೇವರ ದರ್ಶನಕ್ಕೆ ಅಂಗವಿಕಲರು, ವೃದ್ಧರು, ಅಬಲರು ಇವರ‍್ಯಾರಿಗೂ ನೇರ ಪ್ರವೇಶವಿಲ್ಲ. ಇಂಥವರನ್ನು ಮಾತನಾಡಿಸುವ ಪುರುಸೊತ್ತು ಇಲ್ಲ.
ಈ ದೇಶದಲ್ಲಿ ತಾವೂ ವಿಐಪಿಗಳೆಂದು ಕರೆಸಿಕೊಳ್ಳಲು, ಇದಕ್ಕಾಗಿ ಸಾಕಷ್ಟು ವ್ಯಯಿಸುವ ಜನಕ್ಕೆ ಕಡಿಮೆ ಇಲ್ಲ. ಪೈಪೋಟಿ ಇದೆ.
ವಾಹನಕ್ಕೆ ಕೆಂಪು ದೀಪ ಹಾಕಿಕೊಳ್ಳುವ ಮೂಲಕ ಆರಂಭವಾಗುವ ಈ ವಿಐಪಿ ಸಂಸ್ಕೃತಿ ಹುಟ್ಟಿ ಬೆಳೆದದ್ದೇ ಒಡೆದಾಳುವ ಸಂಸ್ಕೃತಿಯ ಬ್ರಿಟಿಷರಿಂದ.
ಸ್ವಾತಂತ್ರ್ಯಾನಂತರ, ಅದೂ ಕಳೆದ ಮೂರು ದಶಕಗಳಲ್ಲಿ ಈ ವಿಐಪಿ ಸಂಸ್ಕೃತಿ ಮಿತಿ ಮೀರಿ ಹೋಗಿದೆ. ಎಲ್ಲರ ವಾಹನಗಳಿಗೆ ಕೆಂಪು ದೀಪ, ಸೈರನ್; ಮಂತ್ರಿ ಮಹೋದಯರ ಓಡಾಟಕ್ಕೆ ಝೀರೋ ಟ್ರಾಫಿಕ್; ವಿವಿಐಪಿಗಳಿಗಂತೂ ಝಡ್ ಸೆಕ್ಯೂರಿಟಿ… ಈಗ ಹೇಗಾಗಿದೆ ಎಂದರೆ ಪ್ರತಿ ಶಾಸಕನಿಗೂ ಗನ್‌ಮ್ಯಾನ್ ಅಥವಾ ಪೊಲೀಸ್ ಭದ್ರತೆ… ಅಧಿಕಾರಿಗಳಿಗೂ ಅಷ್ಟೇ… ಎಲ್ಲರಿಗೂ ಗನ್‌ಮ್ಯಾನ್‌ಗಳು… ಖಾಸಗಿ ಭದ್ರತೆ ಪಡೆದವರೂ ಇದ್ದಾರೆ… !!
ನಾಲ್ಕು ವರ್ಷಗಳ ಹಿಂದೆ ಈ ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡುತ್ತೇವೆ ಎಂದು ಕೇಂದ್ರ ಸಂಪುಟದಲ್ಲಿ ವ್ಯಾಪಕ ಚರ್ಚೆ ನಡೆಸಿ, ಯಾವ ಮಂತ್ರಿ ಮಹೋದಯ-ಸಂಸದರಿಗೆ ಕೆಂಪು ದೀಪದ ಅವಶ್ಯಕತೆ ಇಲ್ಲ; ಪೊಲೀಸ್ ರಕ್ಷಣೆ, ಎಸ್ಕಾರ್ಟ್‌ಗಳು ಬೇಡ ಎಂದೆಲ್ಲ ಫರ್ಮಾನು ಹೊರಡಿಸಿತು. ನಿತಿನ್ ಗಡ್ಕರಿ ಪ್ರಥಮವಾಗಿ ಕೆಂಪು ದೀಪ ತೆಗೆಸಿದರು. ಅವರೇನೋ ಇಂದಿಗೂ ಅದನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಆದರೆ ಉಳಿದ ಮಂತ್ರಿಗಳು, ಸಂಸದರು, ವಿವಿಧ ಹುದ್ದೆಗಳಲ್ಲಿ ಇರುವ ರಾಜಕೀಯ ನಾಯಕರು…? ಊಹುಂ.
ಇಲ್ಲ. ವಿಐಪಿ ಸಂಸ್ಕೃತಿಯ ನಿರ್ಮೂಲನ ಅಷ್ಟು ಸುಲಭವಲ್ಲ. ಜನರೆದುರು ಧಿಮಾಕು ತೋರಿಸುವ ಜನಪ್ರತಿನಿಧಿಗಳು ಇದನ್ನು ಇನ್ನಷ್ಟು ಬೆಳೆಸುವ ಮನಸ್ಥಿತಿಯಲ್ಲಿದ್ದಾರೆ.
ಇದಕ್ಕೆ ಅಂತ್ಯ ಹೇಗೆ? ನಿಜ. ಪ್ರಮುಖ ವ್ಯಕ್ತಿಗಳಿಗೆ ನೇರ ತ್ವರಿತ ದರ್ಶನ ಸೌಲಭ್ಯ ಅತ್ಯಗತ್ಯ. ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು, ಮುಖ್ಯಮಂತ್ರಿಗಳು ಇಂಥ ಪ್ರಧಾನ ವರ್ಗದವರಿಗೆ ಈ ಸೌಲಭ್ಯ ಇರಲೇಬೇಕು. ಇವರುಗಳ ಸಮಯ ಮತ್ತು ಕೆಲಸದ ವಿಧಾನ ಭಿನ್ನ ರೀತಿಯದ್ದು. ಆದ್ದರಿಂದ ಇವರನ್ನು ಕಾಯುತ್ತ ನಿಲ್ಲಿ ಎನ್ನಲಾದೀತೇ?
ಎಷ್ಟು ನಕಾರಾತ್ಮಕವಾಗಿ ಬೆಳೆದು ನಿಂತಿದೆ ಎಂದರೆ, ಕೋವಿಡ್ ಸಂದರ್ಭದಲ್ಲಿ ಪ್ರಧಾನ ಮಂತ್ರಿಯೇ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಲು ನೋಂದಣಿ ಮಾಡಿಸಿಕೊಂಡು ತಮ್ಮ ಸರತಿಗಾಗಿ ಕಾಯುತ್ತಿದ್ದರೆ, ಮಂತ್ರಿಗಳು, ಸಂಸದರು, ಪ್ರಭಾವಿಗಳು, ತಮ್ಮ ಮನೆಗೆ ಬಂದು ವ್ಯಾಕ್ಸಿನೇಷನ್ ಮಾಡಿ ಎಂದು ವೈದ್ಯರನ್ನು ಕರೆಸಿಕೊಂಡು ಸುದ್ದಿಯಾಗಿದ್ದರು. ಈ ಸಂಬಂಧ ಹಲವು ರಾಜ್ಯಗಳಲ್ಲಿ ವೈದ್ಯರಿಂದ ಆಕ್ರೋಶವೂ ವ್ಯಕ್ತವಾಗಿತ್ತು. ಒಬ್ಬ ವಿಐಪಿ ಮನೆಗೆ ವ್ಯಾಕ್ಸಿನೇಷನ್‌ಗೆ ಹೋಗಿ ಬಂದರೆ, ವ್ಯಾಕ್ಸಿನೇಷನ್‌ಗೆ ಆಸ್ಪತ್ರೆಯಲ್ಲಿ ಕಾಯುತ್ತಿರುವ ನೂರಾರು ಸಾಮಾನ್ಯರ ಪಾಡೇನು ಎಂಬುದು ವೈದ್ಯರ ಸಹಜ ಬೇಸರವಾಗಿತ್ತು.
ರಾಜ್ಯದ ಮಂತ್ರಿ ಎಂ.ಬಿ. ಪಾಟೀಲ ಮಹಾಶಿವರಾತ್ರಿಯಂದು ವಿಜಯಪುರ ಶಿವನ ದರ್ಶನಕ್ಕೆ ಆಗಮಿಸಿದರು. ದರ್ಶನ ಪಡೆದು ಅವರು ಹೊರ ಬಂದಾಗ ಸರದಿಯಲ್ಲಿದ್ದ ಯುವತಿಯೊಬ್ಬಳು ನೇರವಾಗಿ ತಾವು ಏಕೆ ಅಷ್ಟು ಅವಸರವಾಗಿ ದರ್ಶನ ಪಡೆದದ್ದು? ತಾವು ಮಂತ್ರಿಯಾಗಿರಬಹುದು.. ದೇವರ ದರ್ಶನಕ್ಕೆ ಎಲ್ಲರೂ ಒಂದೇ ಅಲ್ಲವೇ ಎಂದು ಪ್ರಶ್ನಿಸಿಬಿಟ್ಟಳು.. ಅವಾಕ್ಕಾದ ಸಚಿವರು ತಮಗೆ ಅವಸರ ಇತ್ತು, ಬೇರೆ ಕೆಲಸವಿತ್ತು, ಆದ್ದರಿಂದ ತ್ವರಿತ ದರ್ಶನ ಪಡೆದೆ ಎನ್ನುತ್ತಲೇ ಕ್ಷಮೆಯಾಚಿಸಿದರು.
ಇದು ಒಬ್ಬ ಯುವತಿಯ ಪ್ರಶ್ನೆಯಲ್ಲ. ಕೋಟ್ಯಂತರ ಸಾಮಾನ್ಯರು ಇದರಿಂದ ಬೇಸತ್ತು ಹೋಗಿದ್ದಾರೆ. ಶಪಿಸುತ್ತಿದ್ದಾರೆ. ಮದ್ರಾಸು, ಕೇರಳ, ಮಹಾರಾಷ್ಟ್ರ ಮುಂತಾದ ನ್ಯಾಯಾಲಯಗಳಲ್ಲಿ ಈ ವಿಐಪಿ ದರ್ಶನದ ಸಂಸ್ಕೃತಿ ಬಗ್ಗೆ ಪ್ರಶ್ನಿಸಿದವರಿದ್ದಾರೆ. ಮದ್ರಾಸ್ ಹೈಕೋರ್ಟಿನ ಮಧುರೈ ಪೀಠ ಕೂಡ ಗಣ್ಯ ವ್ಯಕ್ತಿಗಳು ಮತ್ತು ಅವರ ಕುಟುಂಬದ ಸದಸ್ಯರಿಗೆ ದೇವಸ್ಥಾನದಲ್ಲಿ ವಿಐಪಿ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು, ಆದರೆ ಅವರ ಹೆಸರಿನಲ್ಲಿ ಅಂಧಾದುಂಧಿ ದರ್ಬಾರು ನಡೆದು ದೇವಸ್ಥಾನಗಳು ನಿಯಂತ್ರಣ ಕಳೆದುಕೊಳ್ಳಕೂಡದು ಎಂದಿದೆ. ಭಕ್ತರು ಧಾರ್ಮಿಕ ನಂಬಿಕೆಯ ಮೇಲೆ ದೇವರನ್ನು ಪೂಜಿಸುತ್ತಾರೆ. ವಿಐಪಿಗಳು ಸಹ ಭಕ್ತರಂತೆ ದರ್ಶನಕ್ಕೆ ಬರಬೇಕು. ಭಕ್ತರಲ್ಲಿ ತಾರತಮ್ಯ ಏಕೆ? ಎಂದು ಈ ಹಿಂದೆ ಮಧುರೈ ಹೈಕೋರ್ಟ್ ಪ್ರಶ್ನಿಸಿತ್ತು.
ಈಗ ಈ ವಿಐಪಿ ಸಂಸ್ಕೃತಿ, ದೇವರ ದರ್ಶನದ ಬಗ್ಗೆ ಪ್ರಶ್ನಿಸಿ ಇದು ಸಮಾನತೆ ಹಕ್ಕಿನ ಉಲ್ಲಂಘನೆ ಎಂದು ವಿಜಯಕಿಶೋರ ಗೋಸ್ವಾಮಿ ಸರ್ವೋಚ್ಚ ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ. ಕೇಂದ್ರ ಸರ್ಕಾರ, ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ರಾಜ್ಯಗಳನ್ನು ಪ್ರತಿವಾದಿಯನ್ನಾಗಿಸಿದ್ದಾರೆ. ವ್ಯಕ್ತಿಯ ಸ್ಥಿತಿ ಮತ್ತು ಆರ್ಥಿಕ ಸ್ಥಿತಿ ಆಧರಿಸಿ ದರ್ಶನ ನೀಡುವುದಾದರೆ ಸಮಾನತೆಯ ಹಕ್ಕಿನ ಉಲ್ಲಂಘನೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ. ಡಿಸೆಂಬರ್‌ನಲ್ಲಿ ಈ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ಬಹುಶಃ ಈ ವಿಐಪಿ ಸಂಸ್ಕೃತಿಗೆ ಒಂದು ಅಂತಿಮ ಮೊಳೆ ಹೊಡೆಯಬಹುದು ಎಂದು ಆಶಿಸಬಹುದೇನೋ? ಆದರೆ ದೇವಸ್ಥಾನಕ್ಕೂ, ಕಿರಾಣಿ ಅಂಗಡಿಗೂ ಹಣ ಗಳಿಕೆಯಲ್ಲಿ ಯಾವ ವ್ಯತ್ಯಾಸ ಇಲ್ಲದ ಇಂದಿನ ದಿನಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೂ ನುಸುಳುಕೋರರು ಇರುತ್ತಾರೆ ಎನ್ನಿ.
ಎಲ್ಲಿಯವರೆಗೆ ಜನ ವಿಐಪಿಗಳನ್ನು ತಮಗಿಂತ ಭಿನ್ನರು ಎಂದು ಪರಿಗಣಿಸುತ್ತಾರೋ, ಅಲ್ಲಿಯವರೆಗೆ ಇಂಥವರೆಲ್ಲ ಈ ಸಂಸ್ಕೃತಿಯನ್ನು ಕಾದಿಟ್ಟುಕೊಳ್ಳುತ್ತಾರೆ ಅಲ್ಲವೇ? ಕಿರು ಪಂಚೆಯ ತೊಟ್ಟು, ಜಗತ್ತಿಗೇ ಸರಳತೆ ಮತ್ತು ಸೌಹಾರ್ದತೆ ತೋರಿಸಿದ ಫಕೀರ ಗಾಂಧಿ ನಾಡಿನಲ್ಲಿ ವಿಜೃಂಭಿಸಿರುವ ವಿಐಪಿ ಸಂಸ್ಕೃತಿಯನ್ನು ಕೊನೆಗಾಣಿಸಲು ಬೇಕಿದೆ ಜನರ ಸಂಘಟನೆ, ಧ್ವನಿ ಮತ್ತು ಆಡಳಿತದ ಇಚ್ಛಾಶಕ್ತಿ…!!

Next Article