ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ದೇಶಕ್ಕೆ ಹೊಸ ಆಸೆ - ಹೊಸ ಭಾಷೆ

02:00 AM Jul 01, 2024 IST | Samyukta Karnataka

ಸುತ್ತಿ ಬಳಸಿ ಹೇಳುವ ಬದಲಿಗೆ ನೇರವಾಗಿ ಹೇಳುವ ಮಾತೆಂದರೆ, ಪ್ರಧಾನಿ ಸ್ಥಾನಕ್ಕಿಂತಲೂ ಪ್ರತಿಪಕ್ಷದ ನಾಯಕನ ಸ್ಥಾನದ ನಿರ್ವಹಣೆ ಎಂತಹವರಿಗೇ ಆದರೂ ದೊಡ್ಡ ಸವಾಲು. ಏಕೆಂದರೆ, ಪ್ರಧಾನಿಗಿರುವಂತೆ ಪ್ರತಿಪಕ್ಷದ ನಾಯಕನಿಗೆ ನಿಶ್ಚಿತ ಜವಾಬ್ದಾರಿ ಇಲ್ಲವೇ ಕರ್ತವ್ಯ ಇರುವುದಿಲ್ಲ. ಅಂದರೆ ದೇಶದಲ್ಲಿ ಜರುಗುವ, ಜರುಗಬಹುದಾದ ಸಂಗತಿಗಳ ಜಾಡು ಹಿಡಿದು ಅವುಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವ ಮೂಲಕ ಜನಕಲ್ಯಾಣ ಆಗುವಂತೆ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ. ಇದರ ಜೊತೆಗೆ ದೇಶದಲ್ಲಿ ಜವಾಬ್ದಾರಿಯುತ ಹಾಗೂ ದಕ್ಷ ಸರ್ಕಾರ ನಡೆಯುವಂತಿದ್ದರೆ ಅದರ ಪ್ರೇರಣೆಯಂತಿರುವುದು ಪ್ರತಿಪಕ್ಷದ ನಾಯಕತ್ವ ಎಂಬುದನ್ನು ಬಹುಜನ ಗುರುತಿಸಲಾರರೇನೋ. ಆದರೆ, ಧ್ರುವತಾರೆ ನೋಡಲು ಯಾರ ಮುಲಾಜೂ ಬೇಕಾಗಿಲ್ಲವಲ್ಲ.
ಇಂತಹ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರು ಪ್ರತಿಪಕ್ಷದ ನಾಯಕತ್ವವನ್ನು ವಹಿಸಿರುವುದು ಇಡೀ ಸಾಮಾಜಿಕ ವ್ಯವಸ್ಥೆಯಲ್ಲಿ ಹೊಸ ಕನಸುಗಳು ಮೂಡಲು ಕಾರಣವಾಗಿದೆ ಎಂಬುದಂತೂ ನಿಜ. ಏಕೆಂದರೆ, ರಾಹುಲ್ ಗಾಂಧಿಯವರು ತಮ್ಮ ಅವಿರತ ಹೋರಾಟ ಹಾಗೂ ಕರ್ತೃತ್ವ ಶಕ್ತಿಯಿಂದ ರೂಪಿಸಿಕೊಂಡಿರುವ ವ್ಯಕ್ತಿತ್ವ. ಭಾರತ ಜೋಡೋ ಯಾತ್ರೆಯ ನಂತರ ದೇಶದ ಉದ್ದಗಲಗಳಲ್ಲಿ ಜನರ ಕಷ್ಟ ಕಾರ್ಪಣ್ಯಗಳನ್ನು ಕಂಡಿದ್ದರಿಂದಲೋ ಏನೋ ಅವರ ಕಣ್ಣಾಲಿಗಳಲ್ಲಿ ವ್ಯಕ್ತವಾಗುವ ಕನಿಕರ, ಒಳಗೊಳ್ಳುವ ವಿಶಿಷ್ಟ ಭಾವದ ಜೊತೆಗೆ ಸಹಜ ಮಾತುಗಾರಿಕೆಯಲ್ಲಿ ತಮ್ಮನ್ನು ವಿಜೃಂಭಿಸಿಕೊಳ್ಳುವ ಬದಲು ದೇಶ ಕಟ್ಟುವ ಮಾರ್ಗೋಪಾಯಗಳನ್ನು ಸಂವಾದದ ರೀತಿಯಲ್ಲಿ ಚರ್ಚಿಸಿದ ರೀತಿಗೆ ಜನ ಮಾರುಹೋಗಿರುವ ಪರಿಣಾಮವೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿಜಯ ದುಂಧುಬಿ. ದೇಶ ಅರಿಯಲು ಮಹಾತ್ಮ ಗಾಂಧಿಯವರ ಮಾರ್ಗದಂತೆ ಭಾರತ್ ಜೋಡೋ ಯಾತ್ರೆ ರಾಹುಲ್ ಗಾಂಧಿಯವರಿಗೆ ಅನುಕೂಲ ಕಲ್ಪಿಸಿದರೆ ವಿವಿಧ ಗ್ರಂಥಗಳು ಹಾಗೂ ವಿದ್ವಾಂಸರ ಜೊತೆಗಿನ ಒಡನಾಟ ಲೋಕಜ್ಞಾನ ಹಾಗೂ ಲೋಕಾನುಭವ ಹೆಚ್ಚಿನ ಪ್ರಮಾಣದಲ್ಲಿ ಒದಗುವಂತಾಗಿರುವ ಪರಿಣಾಮವೇ ಅವರಲ್ಲಿ ಕಂಡುಬರುವ ಅಪರಿಮಿತ ಲೋಕನಿಷ್ಠೆ. ಇಂತಹ ವಿಭಿನ್ನ ವ್ಯಕ್ತಿತ್ವದ ರಾಹುಲ್ ಗಾಂಧಿಯವರು ಪ್ರತಿಪಕ್ಷದ ನಾಯಕತ್ವವನ್ನು ವಹಿಸಿಕೊಂಡ ದಿನವೇ ತಮ್ಮ ವ್ಯಕ್ತಿತ್ವ ಸಹಜ ನಡವಳಿಕೆಯಿಂದ ಸದನದ ಒಳಗೆ ಸದಸ್ಯರಿಗೆ ಹಸ್ತಲಾಘವ ಕೊಡುವ ಜೊತೆಗೆ ಸಿಬ್ಬಂದಿಗೂ ಕೂಡಾ ಶುಭಾಶಯ ವಿನಿಮಯ ಮಾಡಿಕೊಂಡದ್ದು ಅವರ ಸೂಜಿಗಲ್ಲಿನಂತಹ ಆಕರ್ಷಣೆಯ ವ್ಯಕ್ತಿತ್ವದ ದಿಕ್ಸೂಚಿ.
ನಿಜ. ಪ್ರತಿಪಕ್ಷದ ನಾಯಕತ್ವ ಮುಳ್ಳಿನ ಕಿರೀಟ. ಕಾಂಗ್ರೆಸ್ ಪಕ್ಷದ ನಾಯಕರಾಗುವುದು ಬೇರೆ. ಆಡಳಿತ ಪಕ್ಷ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳ ಮುಖಂಡರ ಜೊತೆ ಸಮಾಲೋಚಿಸಿ ಸಂವೇದನೆಯ ಮಾರ್ಗದ ಮೂಲಕ ಸದ್ಭಾವನೆಯ ದಾರಿಯಲ್ಲಿ ಸರ್ಕಾರ ಕೈಗೊಳ್ಳುವ ಅಥವಾ ಕೈಗೊಳ್ಳಲು ಉದ್ದೇಶಿಸಿರುವ ಕ್ರಮಗಳನ್ನು ಸಂವಿಧಾನ ಹಾಗೂ ಆತ್ಮಸಾಕ್ಷಿಯ ಬೆಳಕಿನಲ್ಲಿ ವಿಶ್ಲೇಷಿಸಿ ಶಾಸನಗಳಿಗೆ ಜೀವಂತಿಕೆ ಬರುವಂತೆ ಮಾಡುವ ಕ್ರಮದಲ್ಲಿ ಪ್ರತಿಪಕ್ಷದ ಪಾತ್ರ ಯಾವಾಗಲೂ ನಿರ್ಣಾಯಕ. ಹೀಗಾಗಿ ರಾಹುಲ್ ಗಾಂಧಿಯವರು ಪ್ರತಿಪಕ್ಷದ ನಾಯಕರಾಗಿ ದೇಶ ಹಾಗೂ ದೇಶವಾಸಿಗಳ ಕಣ್ಣು ಮತ್ತು ಕಿವಿಯಾಗಿ ತಮ್ಮ ಸಂವೇದನೆಯ ನಿಲುವನ್ನು ಬಾಯಿಯ ಮೂಲಕ ಹೊರಹಾಕುವ ಅವಕಾಶವನ್ನು ಬಳಸಿಕೊಳ್ಳುವುದು ನಿಜವಾದ ಅರ್ಥದಲ್ಲಿ ದೇಶೋದ್ಧಾರದ ಕಾಯಕ. ಪ್ರತಿಪಕ್ಷಗಳನ್ನು ಒಂದೇ ದಾರಿಗೆ ತರುವುದು ದೊಡ್ಡ ಕಷ್ಟ. ಆದರೆ, ಕನಿಷ್ಠ ಕಾರ್ಯಕ್ರಮ ಹಾಗೂ ಒಪ್ಪಿತ ವೈಚಾರಿಕತೆಯ ಮೂಲಕ ಒಂದು ವೇದಿಕೆಯನ್ನು ನಿರ್ಮಿಸಿದಾಗ ಕಷ್ಟದ ಜಾಗದಲ್ಲಿ ಸುಲಭದ ದಾರಿ ಸಿಕ್ಕುವುದು ಖಂಡಿತ. ಈ ಹಿಂದೆ ದೇಶದಲ್ಲಿ ಅಟಲ್ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಆಡ್ವಾಣಿ, ವೈ.ಬಿ. ಚವ್ಹಾಣ್ ಮೊದಲಾದವರು ಅಧಿಕೃತ ಪ್ರತಿಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿ ಯಶಸ್ಸು ಕಂಡಿದ್ದಾರೆ. ಅಧಿಕೃತ ಮನ್ನಣೆ ಇಲ್ಲದೇ ಇದ್ದರೂ ರಾಮ್ ಮನೋಹರ್ ಲೋಹಿಯಾ, ಜಾರ್ಜ್ ಫರ್ನಾಂಡಿಸ್, ಚಂದ್ರಶೇಖರ್, ಮಧು ಲಿಮೆಯೆ, ಪ್ರೊ. ಹಿರೇನ್ ಮುಖರ್ಜಿ, ಪಿಲೂ ಮೋದಿ ಮೊದಲಾದವರು ಪ್ರತಿಪಕ್ಷದ ನಾಯಕತ್ವದ ಮಹತ್ವವನ್ನು ದೇಶಕ್ಕೆ ತೋರಿಸಿಕೊಟ್ಟಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಒದಗಿದ ಮೊದಲನೇ ಅವಕಾಶದಲ್ಲಿಯೇ ಅಧಿಕೃತ ಘೋಷಣೆ ಇಲ್ಲದೇ ಇದ್ದರೂ ಪ್ರತಿಪಕ್ಷದ ನಾಯಕತ್ವದ ನಿರ್ವಹಣೆಯ ವಿವಿಧ ಆಯಾಮಗಳನ್ನು ಪ್ರದರ್ಶಿಸಿದ್ದಾರೆ. ಇಂತಹ ಚಾರಿತ್ರಿಕ ಹಿನ್ನೆಲೆ ಇರುವ ಸ್ಥಾನದಲ್ಲಿ ರಾಹುಲ್ ಗಾಂಧಿಯವರು ನಾಯಕತ್ವ ವಹಿಸಿರುವುದು ದೇಶದ ಜನರ ದೃಷ್ಟಿಯಲ್ಲಿ ಹೊಸ ಆಸೆ ಜೊತೆಗೆ ಹೊಸ ಭಾಷೆ ನಿರೀಕ್ಷಿಸುವಂತಾಗಿದೆ.
ನುರಿತ ಸಂಸದೀಯ ಪಟು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಸದೀಯ ಕಲಾಪದಲ್ಲಿ ಸರಿಗಟ್ಟುವುದು ಒಂದು ದೊಡ್ಡ ಸವಾಲು. ಆದರೆ, ರಾಹುಲ್ ಗಾಂಧಿಯವರು ಎಷ್ಟೋ ಬಾರಿ ಇಂತಹ ಸವಾಲುಗಳನ್ನು ತಮ್ಮ ಸಜ್ಜನಿಕೆ ಮತ್ತು ಸಹಜ ನಡವಳಿಕೆಯಿಂದ ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡಿರುವ ನಿದರ್ಶನಗಳಿವೆ. ಬ್ರಿಟನ್ ಮಾದರಿಯನ್ನು ಒಪ್ಪಿಕೊಂಡಿರುವ ಭಾರತದಲ್ಲಿ ಪ್ರತಿಪಕ್ಷದ ನಾಯಕ ಎಂದರೆ ಛಾಯಾ ಪ್ರಧಾನಿ ಎಂದೇ ಅರ್ಥ. ಸಂಸದೀಯ ಕಲಾಪದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಛಾಯಾ ಸಂಪುಟವನ್ನು ರಚಿಸಿ ಸದನದಲ್ಲಿ ವಿವಿಧ ಖಾತೆಗಳ ನಿರ್ವಹಣೆಯ ಹೊಣೆಯನ್ನು ಸಹೋದ್ಯೋಗಿ ಸಂಸದರಿಗೆ ವಹಿಸುವ ಮೂಲಕ ಒಟ್ಟಾರೆ ಕಲಾಪದಲ್ಲಿ ವೈವಿಧ್ಯತೆ ಹಾಗೂ ಬಹುತ್ವದ ಗಾಳಿ ಬೀಸಲು ಅವಕಾಶ ಕಲ್ಪಿಸಬಹುದು.
ದೇಶದ ಜನರ ನೆಚ್ಚಿನ ನಾಯಕ ರಾಹುಲ್ ಗಾಂಧಿಯವರು ಇದುವರೆಗೆ ಯಾವುದೇ ಸಾಂವಿಧಾನಿಕ ಹುದ್ದೆಯನ್ನು ನಿರ್ವಹಿಸಿದವರಲ್ಲ. ಪ್ರತಿಪಕ್ಷದ ಸ್ಥಾನವೇ ಅವರ ಮೊದಲ ಸಾಂವಿಧಾನಿಕ ಹುದ್ದೆ. ಹಾಗೆ ನೋಡಿದರೆ ಇದೊಂದು ಹೊಸ ದಾಖಲೆ. ಈ ಹಿಂದೆ ಚಂದ್ರಶೇಖರ್ ಅವರು ಯಾವುದೇ ಸಾಂವಿಧಾನಿಕ ಹುದ್ದೆಯ ಅನುಭವವಿಲ್ಲದೆ ಪ್ರಧಾನಿಯಾಗಿದ್ದನ್ನು ಸ್ಮರಿಸಬಹುದು.
ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರು ಕೂಡಾ ನೇರವಾಗಿ ಪ್ರಧಾನಿ ಸ್ಥಾನವನ್ನು ಅಲಂಕರಿಸಿದ್ದು ಈಗ ಇತಿಹಾಸದ ಭಾಗ. ಅಂತೆಯೇ ಅವರ ಮೊಮ್ಮಗ ರಾಜೀವ್ ಗಾಂಧಿಯವರು ಕೂಡಾ ಪ್ರಧಾನಿ ಸ್ಥಾನ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು ಚರಿತ್ರೆಯ ಭಾಗ. ಈಗ ನೆಹರು ಮರಿ ಮಗನೂ ನೇರವಾಗಿ ಪ್ರಧಾನಿ ಸ್ಥಾನಕ್ಕೆ ಸರಿಸಮನಾದ ಪ್ರತಿಪಕ್ಷ ನಾಯಕತ್ವ ವಹಿಸಿರುವುದು ಚರಿತ್ರೆ ಪುನರಾವರ್ತನೆಯಾಗುತ್ತಿದೆ ಎಂಬುದರ ದಿಕ್ಸೂಚಿ.

Next Article