ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ದೇಶನಿಷ್ಠೆಯೇ ಸಾಹಿತ್ಯದ ಸೌಂದರ್ಯ

12:30 AM Feb 01, 2024 IST | Samyukta Karnataka

ಭಾರತಾಂತರ್ಗತ ಕರ್ನಾಟಕದ ಧೀಮಂತಿಕೆಯನ್ನು ಕಾವ್ಯ, ಸಾಹಿತ್ಯ, ನಾಟಕಗಳ ಮೂಲಕ ವಿಶ್ವಕ್ಕೆ ಪರಿಚಯಿಸಿದ ಸಾಹಿತಿಗಳು ಅಸಂಖ್ಯ. ರಾಷ್ಟ್ರೀಯತೆಯ ತಳಹದಿಯ ಮೇಲೆ ಕನ್ನಡತನದ ಚಿಂತನೆಗಳನ್ನು ಬೆಳೆಸಲು ಪ್ರಯತ್ನಿಸಿ ಯಶಕಂಡವರು ಕೆಲವರು. ಇನ್ನೊಂದು ಭಾಷೆಯನ್ನು ದ್ವೇಷಿಸದೆ, ಎಲ್ಲೆಡೆಯೂ ಇರುವ ಒಳ್ಳೆಯತನವನ್ನು ಆಯ್ದು ಸಹೃದಯನಿಗೆ ಉಣಬಡಿಸುವ ಮೂಲಕ ವಸುಧಾ ಕುಟುಂಬದ ವಿಶಾಲತೆಗೆ ನೀರುಣಿಸಿದ ಮಹಾತ್ಮರಿಂದ ನಾಡು ಬೆಳಗಿದೆ. ವೇದ, ಪುರಾಣಗಳು ಸಾರುವ ಏಕತೆಯ ಸೂತ್ರದ ಆಧಾರದಲ್ಲೇ ಆಧುನಿಕ ಸಾಹಿತ್ಯ ರಚನೆಗಿಳಿದು ತನ್ಮೂಲಕ ದೇಶವನ್ನು ಒಗ್ಗೂಡಿಸಿದ ಪ್ರಾತಃಸ್ಮರಣೀಯ ಕನ್ನಡಕುಲತಿಲಕ ಕವಿಪುಂಗವರಲ್ಲಿ ಎ. ಆರ್. ಕೃಷ್ಣಶಾಸ್ತ್ರಿ ಮತ್ತು ದ. ರಾ. ಬೇಂದ್ರೆ ಅಗ್ರಗಣ್ಯರು. ಓದುಗನಲ್ಲಿ ಮೌಲ್ಯ, ಸಂಸ್ಕೃತಿ ಹಾಗೂ ನಾಡಪ್ರೇಮದ ಬದ್ಧತೆಯನ್ನು ಹುಟ್ಟುಹಾಕುವ ಸಾಹಿತ್ಯದ ಆಶಯವನ್ನು ಸಮಗ್ರವಾಗಿ ಅಭಿವ್ಯಕ್ತಗೊಳಿಸಿ ಪಶ್ಚಿಮದ ಗಾಳಿ ಬೀಸುತ್ತಿದ್ದ ಸಂಧಿಕಾಲದಲ್ಲಿ ರಾಷ್ಟ್ರೋನ್ನಯನದ ಬೀಜ ಬಿತ್ತಿದ ಉಭಯರು, ಬಹುತ್ವದ ನೆಲೆಯಲ್ಲಿ ವೈಶ್ವಿಕ ಆದರ್ಶಗಳ ಫಸಲು ತೆಗೆದವರು.
'ವಿದ್ಯಾರ್ಥಿಗಳು ವೀರರಸಯುಕ್ತ ಇತಿಹಾಸದ ಕಥೆಗಳನ್ನು ಓದಿ ಹೃದಯವನ್ನು ಅಮಿತೋತ್ಸಾಹ ಹಾಗೂ ಆತ್ಮವಿಶ್ವಾಸದ ತಾಣವನ್ನಾಗಿ ಬದಲಿಸಬೇಕು. ಆಲಸ್ಯ, ನನ್ನಿಂದಾಗದೆಂಬ ಔದಾಸೀನ್ಯವನ್ನು ಬಿಟ್ಟು ರಾಷ್ಟ್ರದ ಉನ್ನತಿಗೆ ನಾನೇನು ಮಾಡಬಹುದೆಂದು ಯೋಚಿಸಬೇಕು. ವೀರರೂ, ಧೀರರೂ ನಮ್ಮ ಪೂರ್ವಿಕರೆಂಬ ಅಭಿಮಾನದೊಂದಿಗೆ ತರುಣರು ಹೆಜ್ಜೆಯಿಡಬೇಕು. ಜೀವನವೆಂಬ ಸಂಗ್ರಾಮದಲ್ಲಿ ಅಚಲ ಸ್ಥೈರ್ಯವೊಂದೇ ಸಹಾಯಕ್ಕೆ ಬರುವುದೆಂಬುದನ್ನು ಮರೆಯದಿರಿ. ಪ್ರೀತಿ, ಏಕತೆಯ ಭಾವದಿಂದ ಸುಭದ್ರ ಭಾರತವನ್ನು ಕಟ್ಟಬೇಕೆಂಬ ಜೀವನದ ಗುರಿಯಿಂದ ಕೊಂಚವೂ ಅತ್ತಿತ್ತ ಚಲಿಸದಿರಿ' ಎಂಬ ಸಂದೇಶದಿಂದ ಯುವಮನದಲ್ಲಿ ಸ್ವದೇಶ-ಭಾಷೆ- ಸಂಸ್ಕೃತಿಯ ಪ್ರೇಮವನ್ನು ಬಡಿದೆಚ್ಚರಿಸಿದ ಕೃಷ್ಣಶಾಸ್ತ್ರಿಯವರು, ಭಾರತಾಮೃತದ ರಸಪಾಕವನ್ನುಣಿಸಿದ ಕನ್ನಡಕುಲ ಸಾರಥಿ',ಕನ್ನಡ ಕವಿಕುಲಗುರು' ಗೌರವಕ್ಕೆ ಪಾತ್ರರಾದ ಮಹಾನುಭಾವರು. ಸಂಸ್ಕೃತ ವಿದ್ವಾಂಸರೂ ಆದ ತಮ್ಮ ತಂದೆ ಅಂಬಳೆ ರಾಮಕೃಷ್ಣ ಶಾಸ್ತ್ರಿಗಳ ಗರಡಿಯಲ್ಲಿ ಬೆಳೆದ ಪ್ರತಿಭಾಶಾಲಿ ಕೃಷ್ಣಶಾಸ್ತ್ರಿ, ಸುಭಾಷಿತ, ಅಮರಕೋಷ, ವ್ಯಾಕರಣ, ರಾಮಾಯಣ, ಮಹಾಭಾರತವನ್ನು ಅಧ್ಯಯನಗೈದು ಸಾಕ್ಷಾತ್ ಸರಸ್ವತಿಯ ವರಪುತ್ರನಂತೆ ಕಂಗೊಳಿಸಿದರು. ಮೈಸೂರಿನಲ್ಲಿ ಶಿಕ್ಷಣ ಪೂರೈಸಿ ಮಹಾರಾಜಾ ಕಾಲೇಜಿನಲ್ಲಿ ಪದವಿ ಅಧ್ಯಯನಗೈದ ಅವರು ಗುರುಜನರ ಬದುಕು ಹಾಗೂ ಬೋಧನೆಯಿಂದ ಪ್ರಭಾವಿತರಾಗಿ ಅಧ್ಯಾಪಕ ವೃತ್ತಿಯನ್ನು ಆರಿಸಿದರು. ಸೆಂಟ್ರಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ತಮ್ಮ ಶಿಸ್ತುಬದ್ಧ ಬೋಧನಾಕ್ರಮ, ವಿದ್ಯಾರ್ಥಿಗಳ ಮೇಲಿನ ಪ್ರೀತಿಯಿಂದ ಜನಮನ್ನಣೆ ಗಳಿಸಿದ್ದಷ್ಟೇ ಅಲ್ಲದೆ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳ ಆಶ್ರಯದಾತರಾಗಿಯೂ ಶಿಷ್ಯಮಾನ್ಯರಾದರು. ಸಹಾಯ ಸ್ವೀಕರಿಸಲು ಸಂಕೋಚ ಪಡುವ ಮಕ್ಕಳಿಗೆ ಸಾಲದ ರೂಪದಲ್ಲಿ ವಿದ್ಯಾರ್ಥಿವೇತನ ನೀಡುವ ಅವರ ಔದಾರ್ಯದಿಂದ ಬದುಕು ಕಟ್ಟಿಕೊಂಡವರ ಸಂಖ್ಯೆ ಅಗಣಿತ. ತಾವು ಅನುವಾದ ಮಾಡಬೇಕೆಂದುಕೊಂಡಿದ್ದ ಕೃತಿಯನ್ನು ತಮ್ಮ ಶಿಷ್ಯ ಕೈಗೆತ್ತಿಕೊಂಡಿದ್ದಾನೆಂದು ತಿಳಿದಾಗ ಸಂಭ್ರಮಿಸಿ ಆನುಗ್ರಹಿಸಿದ ಶಾಸ್ತ್ರಿಗಳು ಶಿಷ್ಯಾದಿಚ್ಛೇತ್ ಪರಾಜಯಂ' ಸೂತ್ರವಾಕ್ಯಕ್ಕೆ ಅನ್ವರ್ಥ. ಆನಂದವರ್ಧನನ ಧ್ವನ್ಯಾಲೋಕದ ಪ್ರತಿ ಪದವನ್ನೂ ಅವಲೋಕಿಸಿ, ಅನುವಾದ ಕಾರ್ಯದ ತಪ್ಪುಗಳನ್ನು ತಿದ್ದಿ ಶಿಷ್ಯನ ಸಾಧನೆಯನ್ನು ಕಣ್ತುಂಬಿಕೊಂಡ ಶಾಸ್ತ್ರಿಗಳ ನಿರ್ಮಲ ಶಿಷ್ಯವಾತ್ಸಲ್ಯಕ್ಕೆ ಎಣೆಯಿಲ್ಲ. ವಿದೇಶೀಯರ ಆಳ್ವಿಕೆಯಡಿ ಕನ್ನಡಭಾಷೆ ಸೊರಗದಂತೆ ಕಳಕಳಿ ವಹಿಸಿದ ಶಾಸ್ತ್ರಿಗಳು ಕನ್ನಡ ಸಂಘವನ್ನು ಕಟ್ಟಿ ಭಾಷೆಯ ಸರ್ವತೋಮುಖ ಅಭಿವೃದ್ಧಿಗೆ ಕಟಿಬದ್ಧರಾದರು. ಕನ್ನಡ ಹಾಗೂ ಸಂಸ್ಕೃತದ ಕಾರ್ಯವನ್ನು ಭಗವದನುಗ್ರಹದ ಕ್ರಿಯೆಯೆಂದೇ ಭಾವಿಸಿ ಪ್ರಬುದ್ಧ ಕರ್ನಾಟಕ ಪತ್ರಿಕೆಯನ್ನೂ ಆರಂಭಿಸಿದರು. ಸಾಹಿತ್ಯದ ಜೊತೆಜೊತೆಗೆ ದೇಸೀಭಾವದ ವಿಕಾಸಕ್ಕೂ ಆಸರೆಯಾದ ಪತ್ರಿಕೆ, ಕನ್ನಡದ ಹೆಮ್ಮೆ. ಆಂಗ್ಲ-ಕನ್ನಡ ನಿಘಂಟು ರಚನೆಯಲ್ಲೂ ತೊಡಗಿದ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಮುಖವಾಣಿಯ ಸಂಪಾದಕತ್ವವನ್ನೂ ವಹಿಸಿದರು. ಎಲೆಮರೆಯ ಕಾಯಿಗಳನ್ನು ಮುನ್ನೆಲೆಗೆ ತಂದು ಹೊಸ ಪೀಳಿಗೆಯ ಬರಹಗಾರರನ್ನು ಸೃಷ್ಟಿಸಿದ ಶಾಸ್ತ್ರಿಯವರು ಕನ್ನಡ ಭುವನೇಶ್ವರಿಯ ತೇರೆಳೆಯಲು ಯುವಕರನ್ನು ಆಹ್ವಾನಿಸಿದರು. ಸಂಸ್ಕೃತ ನಾಟಕ, ಸರ್ವಜ್ಞಕವಿ, ಶ್ರೀಪತಿಕಥೆ, ನಿರ್ಮಲಭಾರತಿ, ಕಥಾಸರಿತ್ಸಾಗರ, ಕಥಾಮೃತ, ಭಾಸಕವಿ, ಶ್ರೀ ರಾಮಕೃಷ್ಣ ಪರಮಹಂಸ ಚರಿತ್ರೆ ಮೊದಲಾದ ಕೃತಿಗಳನ್ನು ರಚಿಸಿದ ಅವರ ಮಹಾಭಾರತ ನೀತಿಸುಧೆಯವಚನಭಾರತ' ಕನ್ನಡದ ಅತ್ಯುತ್ಕ್ರಷ್ಟ ಗ್ರಂಥಗಳಲ್ಲೊಂದು. ತಾವು ಕೊಂಡ ಮೊದಲ ಪುಸ್ತಕ ಆನಂದ ಮಠದಿಂದ ಪ್ರಭಾವಿತರಾಗಿ ಬರೆದ ಬಂಕಿಮಚಂದ್ರ' ಕೃತಿಯು ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಪಾತ್ರವಾಯಿತು. ಪುರಾಣದ ಸೊಬಗಿಗೆ ಕೊಂಚವೂ ಧಕ್ಕೆಯಾಗದಂತೆ ಹೆಣೆದ ವಚನ ಭಾರತವು ಇಂದಿಗೂ ಸಾಹಿತ್ಯಾಕಾಶದ ಧ್ರುವತಾರೆ. ದಕ್ಷಿಣದ ಜನರಿಗೆ ವಿಶ್ವಕವಿ ಬಂಕಿಮರನ್ನೂ, ಅವರ ಸಾಹಿತ್ಯದ ಘಮವನ್ನೂ ಪರಿಚಯಿಸಿದ ಪರಿ ಅತ್ಯುತ್ಕ್ರಷ್ಟ. ಕನ್ನಡ ಭಾಷೆಯ ಶ್ರೀಮಂತಿಕೆಗೆ ಸಂಸ್ಕೃತದ ಅಗತ್ಯತೆಯನ್ನು ಮನಗಂಡು, ಸಂಸ್ಕೃತ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಬೇಕೆಂಬ ಮಹದಾಶಯ ಹೊಂದಿದ್ದ ಅವರ ಕಂಚಿನಕಂಠದ ಕನ್ನಡ ಕೇಳುಗರಿಗೆ ಕರ್ಣಾನಂದಕರ. ಜೀವನದುದ್ದಕ್ಕೂ ಸಾಹಿತ್ಯಸೇವೆಯಲ್ಲಿಯೇ ತೊಡಗಿ, ಹಮ್ಮುಬಿಮ್ಮುಗಳಿಂದ ಮೈಲು ದೂರವಿದ್ದ ಎ.ಆರ್. ಕೃಷ್ಣಶಾಸ್ತ್ರಿ, ನವಪೀಳಿಗೆಯ ಜಿಜ್ಞಾಸುಗಳಿಗೆ ಮಾರ್ಗದರ್ಶಿ. ಮನಸ್ಸಿಗೆ ಆನಂದವನ್ನು ತಂದಿತ್ತು ಕೊಳೆ ಕಳೆಯುವ ಸಾಹಿತ್ಯವು ಜೀವನೋತ್ಸಾಹವನ್ನು ವರ್ಧಿಸುವ ಅಮೃತ. ಅಂತರಂಗದ ಬೆಳವಣಿಗೆಯ ಜೊತೆಜೊತೆಗೆ ದೇಶವನ್ನು ಪ್ರೀತಿಸುವ ಮನೋಧರ್ಮವನ್ನು ಬೆಳೆಸುವ ಸಾಹಿತ್ಯದ ಶಕ್ತಿ ಹೆಚ್ಚು' ಎಂಬ ಚೇತೋಹಾರಿ ನುಡಿಯಿಂದ ಭಾರತೀಯ ಚಿಂತನೆಗಳ ಭದ್ರ ತಳಪಾಯದಡಿ ಸಮೃದ್ಧ, ಸಶಕ್ತ ಸಾಹಿತ್ಯವಲಯ ಸೃಷ್ಟಿಸಿದ ಕರ್ನಾಟಕ ಸಾಹಿತ್ಯ ಚಕ್ರವರ್ತಿ, ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ಕವಿತಾಹೂರಣದಿಂದ ಹಬ್ಬದೂಟ ಬಡಿಸಿದ ಮೃದುಹೃದಯಿ. ತನ್ನ ಲೇಖನಿಯಿಂದ ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿ ಅವಿನಾಶಿ ಸಂಸ್ಕೃತಿಯ ಪ್ರಸಾರಕರಾಗಿ, ಆಜೀವ ಅಕ್ಷರ ಪರಿಚಾರಕರಾಗಿ ಸೇವೆಗೈದ ಧಾರವಾಡದಜ್ಜ ಬೇಂದ್ರೆ ತಮ್ಮ ವಿಶಿಷ್ಟ ಶೈಲಿಯಿಂದ ವಿಶ್ವಸಾಹಿತ್ಯದ ಗಮನಸೆಳೆದ ಮಹಾಮಹಿಮ. ವೇದವಿದ್ಯಾಪಾರಂಗತ ರಾಮಚಂದ್ರ ಭಟ್ ಬೇಂದ್ರೆಯವರ ವೈದಿಕ ಪರಂಪರೆಯ ಛತ್ರಛಾಯೆಯಡಿ ಧೀಮಂತ ವ್ಯಕ್ತಿತ್ವ ರೂಪಿಸಿದ ಯುಗದ ಮಹಾಕವಿ ಬೇಂದ್ರೆ ಅಂದರೆ ಜೀವನೋತ್ಸಾಹಕ್ಕೆ ಪರ್ಯಾಯ. ಬಾಲ್ಯದ ಶಿಕ್ಷಣದ ಬಳಿಕ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ಸಂಸ್ಕೃತ ಹಾಗೂ ಆಂಗ್ಲಭಾಷೆಯಲ್ಲಿ ಪದವಿ ಸಂಪಾದಿಸಿದ ಬೇಂದ್ರೆಯವರು, ರಾಷ್ಟ್ರೀಯ ನಾಯಕರ ಸ್ನೇಹ, ಪ್ರೀತಿಯ ಆಸರೆಯಡಿ ಬೆಳೆದರು. ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಹೊಸದಿಶೆಯಿತ್ತ ಪುಣೆಯ ಸಹವಾಸದಿಂದ ಸುಪ್ತ ದೇಶಪ್ರೇಮ ಜಾಗೃತವಾಗಿ ಮುಂದೆ ಅದು ಬರವಣಿಗೆಯ ಮೇಲೂ ಗಾಢಪ್ರಭಾವ ಬೀರಿತು. ಧಾರವಾಡದಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಬೇಂದ್ರೆ ಅದಾಗಲೇ ಸರಸ್ವತಿಯ ಸೇವಕನಾಗಿದ್ದರು. ಸಾಹಿತ್ಯ, ಸಂಸ್ಕೃತಿ, ಕಲಾಪ್ರಸಾರದ ಹಿನ್ನೆಲೆಯಲ್ಲಿ ಗೆಳೆಯರ ಗುಂಪನ್ನು ಕಟ್ಟಿ ಹಿರಿಕಿರಿಯ ಸಾಹಿತಿಗಳನ್ನು ಒಗ್ಗೂಡಿಸಿ ಆರಂಭಿಸಿದ ನವರಾತ್ರಿ ನಾಡಹಬ್ಬ ಇಂದು ನಾಡಿನಾದ್ಯಂತ ವಿವಿಧ ಆಯಾಮಗಳಲ್ಲಿ ವಿಸ್ತರಿಸಿರುವುದು ಅವರ ದೂರದೃಷ್ಟಿಗೆ ಸಾಕ್ಷಿ.
ನರಬಲಿ' ಬರಹಕ್ಕಾಗಿ ಬ್ರಿಟಿಷ್ ಸರಕಾರದಿಂದ ಗೃಹಬಂಧನಕ್ಕೊಳಗಾದ ಬೇಂದ್ರೆಯವರು ತಮ್ಮ ಸಿದ್ಧಾಂತದೊಡನೆ ರಾಜಿ ಮಾಡಿಕೊಂಡವರಲ್ಲ. ದೇಶ ನನ್ನದೆಂಬ ಭಾವಜಾಗೃತಿಯೇ ಸಾಹಿತ್ಯದ ಮೂಲಧ್ಯೇಯವೆಂದು ಘೋಷಿಸಿ ಸಾಹಿತ್ಯವಲಯದಲ್ಲೂ ಪೂರ್ಣವಾಗಿ ತೊಡಗಿಸಿದ ಅವರ ಮಾತು ಜೇನಿನಂತೆ. ಶ್ರೀ ಅರವಿಂದರ ಪ್ರಭಾವದಿಂದ ಆಂಗ್ಲಸಾಹಿತ್ಯ ಕೃಷಿಯಲ್ಲೂ ಹೆಸರು ಗಳಿಸಿ ಆಧುನಿಕ ಕವನಗಳಿಗೆ ಹೊಸ ಭಾಷ್ಯ ಬರೆದರು. ಜಾನಪದೀಯ, ವಚನ, ಕೀರ್ತನೆ ಇತ್ಯಾದಿ ಎಲ್ಲಾ ಶೈಲಿಗಳಲ್ಲೂ ಪ್ರಭುತ್ವ ಹೊಂದಿ ತಮ್ಮ ಕವನಗಳಲ್ಲಿ ಜನಸಾಮಾನ್ಯರ ಭಾವನೆ, ದೇಶಭಕ್ತಿ, ಸುಧಾರಣಾವಾದ, ತರ್ಕ, ಆಧ್ಯಾತ್ಮ, ಮಾನವತಾಭಾವ, ಪಾರಂಪರಿಕ ಅಭಿವ್ಯಕ್ತಿ, ಸಾಂಸ್ಕೃತಿಕ ಬೇರುಗಳ ಹುಡುಕಾಟಗಳನ್ನು ಸಮರ್ಥವಾಗಿ ನಿರೂಪಿಸಿದ ಪ್ರತಿಭಾಶಾಲಿ. ಸಖೀಗೀತ, ಉಯ್ಯಾಲೆ, ನಾದಲೀಲೆ, ಗಂಗಾವರತಣ, ಜೀವಲಹರಿ, ನಗೆಯ ಹೊಗೆ ಮೊದಲಾದ ಗದ್ಯ, ಪದ್ಯ, ನಾಟಕ, ಅನುವಾದ, ವೈಚಾರಿಕ ಸದ್ಗಂಥಗಳಿಂದ ಮನೆಮಾತಾದ ಬೇಂದ್ರೆ, ಸಾಮಾಜಿಕ ಭಾವನೆಗಳ ಧ್ವನಿಯಾಗಿ,ರಸವೆ ಜನನ-ವಿರಸ ಮರಣ-ಸಮರಸವೆ ಜೀವನ' ತತ್ವಕ್ಕೆ ಅನ್ವರ್ಥರಾಗಿ ಬದುಕಿದ ಭಾವಜೀವಿ. ನೀ ಹಿಂಗ ನೋಡಬ್ಯಾಡ ನನ್ನ, ಕುಣಿಯೋಣು ಬಾರಾ, ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ, ಇಳಿದು ನಾ ತಾಯಿ ಇಳಿದು ಬಾ, ಶ್ರಾವಣ ಬಂತು, ನಾನು ಬಡವಿ ಆತ ಬಡವ, ಮೂಡಲಮನೆಯ ಮುತ್ತಿನ ಮೊದಲಾದ ಅಳಿವಿಲ್ಲದ ಹಾಡುಗಳ ಸರದಾರರಾಗಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪೀಠವನ್ನಲಂಕರಿಸಿ ಕನ್ನಡದ ಮನಸ್ಸುಗಳನ್ನು ನಾಡುನುಡಿಯ ಕೈಂಕರ್ಯಕ್ಕಾಗಿ ಒಗ್ಗೂಡಿಸಿದ ಪದ್ಮಶ್ರೀ ಅಂಬಿಕಾತನಯದತ್ತ, ನಾಕುತಂತಿ ಕೃತಿಗಾಗಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿ `ಜ್ಞಾನಪೀಠ'ದ ಗೌರವವನ್ನು ನೂರ್ಮಡಿಗೊಳಿಸಿದರು. ವಿವಿಧ ಪ್ರದೇಶದ ಭಾಷಾ ಸೊಬಗನ್ನು ಕಾವ್ಯಪಂಕ್ತಿಗಳಲ್ಲಿ ಕಟ್ಟಿ ಓದುಗನ ಮನಸೂರೆಗೈದು ಅವರ್ಣನೀಯ ಸಾಹಿತ್ಯಾನಂದದ ಅನುಭೂತಿಯಿತ್ತ ಬೇಂದ್ರೆ, ಪ್ರಾಚೀನ ಪರಂಪರೆ ಹಾಗೂ ಆಧುನಿಕ ವ್ಯವಸ್ಥೆಯ ಕೊಂಡಿಯಾಗಿ ನಿಂತ ಋಷಿತುಲ್ಯ ಕವಿ. ಇಂದು ಎ. ಆರ್. ಕೃಷ್ಣಶಾಸ್ತ್ರಿಗಳ ಸ್ಮೃತಿದಿನವಾದರೆ, ನಿನ್ನೆ ಬೇಂದ್ರೆಯಜ್ಜನ ಜನ್ಮದಿನ. ಪವಿತ್ರ ಸಾಹಿತ್ಯವನ್ನು ಬೂಟಾಟಿಕೆಯ ಪ್ರದರ್ಶನದ ವೇದಿಕೆಯನ್ನಾಗಿಸಿ ಪ್ರಶಸ್ತಿಗಳ ಸುತ್ತ ಗಿರಕಿ ಹೊಡೆಯುವ ಪ್ರವೃತ್ತಿ ಹೆಚ್ಚುತ್ತಿರುವ ಈ ಕಾಲಕ್ಕೆ ಶಾಸ್ತ್ರಿ ಬೇಂದ್ರೆ ಜೋಡಿಯ ಬದುಕು ಸತ್ಪಥ ತೋರಿದರೆ ಮಹದುಪಕಾರವಾಗದೇ?

Next Article