ದೇಶ ನಡೆಯುತ್ತಿರುವುದು ಸಂವಿಧಾನದ ಆಧಾರದ ಮೇಲೆ…
ಹುಬ್ಬಳ್ಳಿ: ದೇಶ ನಡೆಯುತ್ತಿರುವುದು ಭಗವದ್ಗೀತೆ, ಕುರಾನ್, ಬೈಬಲ್ ಆಧಾರದ ಮೇಲಲ್ಲ. ದೇಶ ನಡೀತಿರೋದು ಸಂವಿಧಾನದ ಆಧಾರದ ಮೇಲೆ ಎಂದು ಐಟಿ & ಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರ ಹಿಂದುತ್ವದ ಆಧಾರದ ಮೇಲೆ ನಡೆಯುತ್ತಿತ್ತು. ಆದರೆ, ಈಗಿನ ನಮ್ಮ ಸರ್ಕಾರ ಸಂವಿಧಾನ,
ಬಸವ ತತ್ವ,ಅಂಬೇಡ್ಕರ್ ತತ್ವ ಮೇಲೆ ನಡೆಯುತ್ತಿದೆ. ಯತೀಂದ್ರ ಸಿದ್ದರಾಮಯ್ಯ ಅವರನ್ನು, ವಿಜಯೇಂದ್ರ ಶ್ಯಾಡೋ ಸಿಎಂ ಅಪಹಾಸ್ಯ ಮಾಡುತ್ತಿದ್ದಾರೆ. ಕಳೆದ ಸರ್ಕಾರದಲ್ಲಿ ಯಾರು ಶ್ಯಾಡೋ ಸಿಎಂ ಎಂದು ಪ್ರಶ್ನಿಸಿದರು.
ಈ ಬಗ್ಗೆ ಬಸನಗೌಡ ಪಾಟೀಲ ಯತ್ನಾಳ ದಾಖಲೆ ಬಿಡುಗಡೆ ಮಾಡಲಿ. ಯಾವದೇ ದಾಖಲೆ ಇದ್ರೂ ನಾವು ಜಸ್ಟೀಸ್ ಮೈಕಲ್ ಕುನೋ ಅವರ ಸಮಿತಿ ಮೂಲಕ ತನಿಖೆ ಮಾಡಿಸಲಾಗುವುದು ಎಂದರು.
40 ಸಾವಿರ ಕೋಟಿ ಹಗರಣ ಇದೆ. ಕರೋನಾ ಸಮಯದಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಹೊಡೆದ ಬಿಜೆಪಿಗರಿಗೆ ಮನುಷ್ಯತ್ವ ಇದೆಯೇ ಎಂದು ಪ್ರಶ್ನಿಸಿದ ಖರ್ಗೆ, ಕೋವಿಡ್ ಬ್ರಷ್ಟಾಚಾರದಲ್ಲಿ ಕೇಂದ್ರಕ್ಕೂ ಪಾಲ ಹೋಗಿರಬಹುದು. 40 ಪರ್ಸೆಂಟ್ ಸರ್ಕಾರ ಎಂಬ ಬಿರುದು ಬಂದಿರೋದು ಬಿಜೆಪಿಯವರಿಂದ. ಕೇಂದ್ರ ನಾಯಕರು,ರಾಜ್ಯ ನಾಯಕರಿಗೂ ಪಾಲ ಹೋಗಿದೆ ಎಂದು ಆರೋಪಿಸಿದರು.
ಬಿಜೆಪಿಗರು ಬ್ರಿಟಿಷರ ಬೂಟು ನೆಕ್ಕೋರು ಎಂಬ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಯಿಸಿ, ಅದರಲ್ಲಿ ತಪ್ಪೇನಿದೆ ಎಂದು ಹೇಳಿವ ಮೂಲಕ ಹರಿಪ್ರಸಾದ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಅಲ್ಲದೆ, ಕ್ಷಮಾಪಣಾ ಪತ್ರ ಬರೆದಿದ್ದು ಯಾರೂ, ಬ್ರಿಟಿಷರ ಬಳಿ ಪೆನ್ಶನ್ ತಗೊಂಡಿದ್ದು ಯಾರೂ ಎಂದು ಪ್ರಶ್ನಿಸಿದರು.
ಬಿಜೆಪಿ ಮತ್ತು RSS ಗೆ ಸ್ವಂತ ಇತಿಹಾಸ ಇಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಶೂನ್ಯ. ಸಾವರಕರ್ ಗೆ ಹೇಗೆ ವೀರ ಎಂಬ ಬಿರುದು ಬಂತು. ಇದಕ್ಕೆ ಯಾರೂ ಉತ್ತರ ಕೊಡಲ್ಲ ಎಂದು ಹೇಳಿದರು.