For the best experience, open
https://m.samyuktakarnataka.in
on your mobile browser.

ಅನರ್ಹತೆಗೆ ಸ್ಪೀಕರ್ ಮಾನದಂಡ

10:45 AM Jan 12, 2024 IST | Samyukta Karnataka
ಅನರ್ಹತೆಗೆ ಸ್ಪೀಕರ್ ಮಾನದಂಡ

ಸ್ಪೀಕರ್ ಸ್ಥಾನಕ್ಕೆ ಬರುವ ಬಹುತೇಕ ಮಂದಿ ರಾಜಕೀಯ ಪಕ್ಷಗಳ ಹಂಗಿನಲ್ಲಿಯೇ ನಿರ್ಧಾರಗಳನ್ನು ಕೈಗೊಳ್ಳುವ ಜಾಯಮಾನದವರು. ವಿವಾದಗಳ ಆರಂಭ ಆಗುವುದೇ ಇಲ್ಲಿಂದ.

ಸಮ್ಮಿಶ್ರ ರಾಜಕೀಯ ವ್ಯವಸ್ಥೆಯಲ್ಲಿ ಶಾಸನಸಭೆಗಳ ಅಧ್ಯಕ್ಷರ (ಸ್ಪೀಕರ್) ಪಾತ್ರ ನಿರ್ಣಾಯಕ. ಚುನಾಯಿತ ಸರ್ಕಾರಗಳನ್ನು ಉಳಿಸುವ ಹಾಗೂ ಉರುಳಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಣಯ ಕೈಗೊಳ್ಳುವ ಪರಮಾಧಿಕಾರವಿರುವ ಸ್ಪೀಕರ್ ವರ್ತನೆ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ಇರುವುದು ರಾಜ್ಯಾಂಗದ ಕಟ್ಟುನಿಟ್ಟುಗಳಿಗೆ ಒಂದು ಕಪ್ಪುಚುಕ್ಕೆ. ಶಾಸನಸಭೆಗಳು ಸಂವಿಧಾನದ ಮೂಲಕ ಸೃಷ್ಟಿಯಾದ ಸಂಸ್ಥೆಗಳು. ಸ್ಪೀಕರ್ ಸ್ಥಾನವೂ ಕೂಡಾ ಇದೇ ರೀತಿಯ ಇನ್ನೊಂದು ಸೃಷ್ಟಿ. ಸ್ಪೀಕರ್ ಕೈಗೊಳ್ಳುವ ತೀರ್ಮಾನಗಳು ಪ್ರಶ್ನಾತೀತ ಎಂಬ ನಂಬಿಕೆ ಇತ್ತೀಚಿನ ದಿನಮಾನಗಳಲ್ಲಿ ಹುಸಿಯಾಗುತ್ತಿರುವ ಬೆಳವಣಿಗೆ ಒಟ್ಟಾರೆ ಹತ್ತನೇ ಪರಿಚ್ಛೇದದ ಅನ್ವಯ ರೂಪುಗೊಂಡಿರುವ ಪಕ್ಷಾಂತರ ನಿಷೇಧ ಕಾಯ್ದೆಯ ಮರು ಪರಾಮರ್ಶೆಯ ಅಗತ್ಯವನ್ನು ಎತ್ತಿ ತೋರುತ್ತದೆ ಎಂಬುದಕ್ಕೆ ಮಹಾರಾಷ್ಟ್ರದ ಸ್ಪೀಕರ್ ಶಿವಸೇನೆಯ ಬಣಗಳಿಗೆ ಸಂಬಂಧಿಸಿದಂತೆ ಹೊರಡಿಸಿರುವ ಆದೇಶ ಒಂದು ಚರ್ಚೆಯ ವಸ್ತು. ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಮಾನ್ಯತೆ ಪಡೆದಿರುವ ಪಕ್ಷ ಎಂಬುದನ್ನು ಘೋಷಿಸುವ ಮೂಲಕ ಸರ್ಕಾರದ ಸಿಂಧುತ್ವವನ್ನು ಸ್ಪೀಕರ್ ರಾಹುಲ್ ನಾರ್ವೇಕರ್ ಎತ್ತಿಹಿಡಿದಿರುವುದು ಹೊಸ ರಾಜಕೀಯ ತಿಕ್ಕಾಟ ಹಾಗೂ ಕಾನೂನು ಸಂಘರ್ಷಕ್ಕೆ ನಾಂದಿಯಾಗಿದೆ.
ಅಧಿಕಾರದ ಸುತ್ತ ನಡೆಯುತ್ತಿರುವ ರಾಜಕೀಯ ಪ್ರದಕ್ಷಿಣೆಯ ನಾಟಕದಲ್ಲಿ ಯಾವ ಪಕ್ಷವೂ ಕೂಡಾ ಏಕತೆಯನ್ನು ಸಂರಕ್ಷಿಸಿಕೊಳ್ಳುವುದು ದೊಡ್ಡ ಸವಾಲು. ತಮಿಳುನಾಡಿನಲ್ಲಿ ಅಣ್ಣಾ ಡಿಎಂಕೆ, ಆಂಧ್ರಪ್ರದೇಶದಲ್ಲಿ ತೆಲುಗುದೇಶಂ, ಹರಿಯಾಣದಲ್ಲಿ ಲೋಕದಳ, ಮಣಿಪುರ ಮೊದಲಾದ ರಾಜ್ಯಗಳಲ್ಲಿ ಹಲವಾರು ಪಕ್ಷಗಳು ವಿಭಜನೆಗೊಂಡು ಬೇರೆ ಪಕ್ಷದ ಮೈತ್ರಿಯೊಂದಿಗೆ ಸರ್ಕಾರ ನಡೆಸಿರುವುದು ಇದುವರೆಗಿನ ಅನುಭವ. ಕರ್ನಾಟಕದಲ್ಲಿಯೂ ಕೂಡಾ ಜೆಡಿಎಸ್ ಇಬ್ಭಾಗವಾಗಿ ಬಿಜೆಪಿ ಮೈತ್ರಿಯೊಂದಿಗೆ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ೨೦೦೬ರಲ್ಲಿ ಅಧಿಕಾರಕ್ಕೆ ಬಂದದ್ದನ್ನು ಮರೆಯುವಂತಿಲ್ಲ. ಬಹುತೇಕ ಈ ಎಲ್ಲ ಪ್ರಸಂಗಗಳಲ್ಲಿ ಶಾಸಕರ ಅನರ್ಹಗೊಳಿಸುವ ಮನವಿಗಳು ಸ್ಪೀಕರ್ ಪರಿಶೀಲನೆಗೆ ಬಂದಿದ್ದರೂ ಏಕರೂಪದ ನಿರ್ಧಾರಗಳು ಹೊರಬಿದ್ದಿಲ್ಲ. ೨೦೧೯-೨೦ರಲ್ಲಿ ಕರ್ನಾಟಕದ ಸ್ಪೀಕರ್ ರಮೇಶ್ ಕುಮಾರ್ ನಿರ್ದಾಕ್ಷಿಣ್ಯವಾಗಿ ಕೈಗೊಂಡ ಕ್ರಮದಿಂದಾಗಿ ೧೭ ಮಂದಿ ಶಾಸಕರು ಅನರ್ಹಗೊಂಡು ಮತ್ತೆ ಚುನಾವಣೆಯಲ್ಲಿ ಗೆದ್ದು ಬರಬೇಕಾದ ಅನಿವಾರ್ಯತೆ ಸೃಷ್ಟಿಸಿಕೊಂಡಿದ್ದರು. ಈ ಪ್ರಕರಣಗಳು ಸುಪ್ರೀಂಕೋರ್ಟ್ವರೆಗೆ ಹೋಗಿ ಸ್ಪೀಕರ್ ಜವಾಬ್ದಾರಿ ಮತ್ತು ಕರ್ತವ್ಯದ ರೂಪುರೇಷೆಯ ಬಗ್ಗೆ ಚರ್ಚೆಗೆ ಅವಕಾಶವಾಗಿತ್ತು. ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ಪೀಠದ ನ್ಯಾಯಮೂರ್ತಿಗಳು ಅನರ್ಹಗೊಳಿಸುವ ಅಧಿಕಾರವನ್ನು ಸ್ಪೀಕರ್‌ಗೆ ಮಾತ್ರ ಸೀಮಿತಗೊಳಿಸದೆ ಅದಕ್ಕೊಂದು ಮಂಡಳಿಯನ್ನು ಸ್ಥಾಪಿಸುವ ಸಲಹೆಯನ್ನೂ ಕೂಡಾ ಮುಂದಿಟ್ಟಿದ್ದರು. ಆದರೆ ಅದಾದ ನಂತರ ಸರ್ಕಾರಗಳು ಹೊಸ ರೂಪ ಪಡೆದುಕೊಂಡವೇ ವಿನಃ ಕಾನೂನು ಮಾತ್ರ ಯಥಾವತ್ತಾಗಿಯೇ ಮುಂದುವರಿಯುತ್ತಿವೆ. ಇದರ ವಿಸ್ತರಣೆಯ ಭಾಗವಾಗಿ ಮಹಾರಾಷ್ಟçದ ಸ್ಪೀಕರ್ ಶಿವಸೇನೆಯ ಎರಡೂ ಬಣಗಳ ಶಾಸಕರನ್ನು ಅನರ್ಹಗೊಳಿಸುವ ಪ್ರಸ್ತಾಪವನ್ನು ತಿರಸ್ಕರಿಸಿ ಶಿಂದೆ ನೇತೃತ್ವದ ಶಿವಸೇನೆಯೇ ನಿಜವಾದ ಶಿವಸೇನೆ ಎಂದು ತೀರ್ಪು ಕೊಟ್ಟ ನಂತರ ಉದ್ಧವ್ ಠಾಕ್ರೆ ನೇತೃತ್ವದ ಬಣ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿರುವುದು ಹೊಸ ಬೆಳವಣಿಗೆಗೆ ಕಾರಣವಾಗಿದೆ.
ಶಾಸನಸಭೆಯ ನಿರ್ವಹಣೆ ಹಾಗೂ ನಿರ್ಣಯಗಳಿಗೆ ಸಂಬಂಧಿಸಿದಂತೆ ಸ್ಪೀಕರ್ ಕೈಗೊಳ್ಳುವ ಕ್ರಮ ಪ್ರಶ್ನಾತೀತ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಜರುಗಿವೆ. ಲೋಕಸಭೆಯ ಸ್ಪೀಕರ್ ಆಗಿದ್ದ ಇಂದ್ರಜಿತ್ ಗುಪ್ತ ಅವರು ಈ ವಿಚಾರದಲ್ಲಿ ಸ್ಪಷ್ಟವಾದ ನಿಲುವನ್ನು ಸಾದರಪಡಿಸಿ `ಸ್ಪೀಕರ್ ಕೈಗೊಳ್ಳುವ ಕ್ರಮ ಪ್ರಶ್ನಾತೀತ ನ್ಯಾಯಾಲಯಗಳೂ ಕೂಡಾ ಇದನ್ನು ಪ್ರಶ್ನಿಸುವಂತಿಲ್ಲ' ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿ ಹಾಗೆಯೇ ಕಲಾಪವನ್ನು ನಡೆಸಿದ್ದು ಒಂದು ದಾಖಲೆ. ಈಗಿರುವ ಸಮಸ್ಯೆ ಎಂದರೆ ಸ್ಪೀಕರ್ ಸ್ಥಾನಕ್ಕೆ ಬರುವ ಬಹುತೇಕ ಮಂದಿ ರಾಜಕೀಯ ಪಕ್ಷಗಳ ಹಂಗಿನಲ್ಲಿಯೇ ನಿರ್ಧಾರಗಳನ್ನು ಕೈಗೊಳ್ಳುವ ಜಾಯಮಾನದವರು. ವಿವಾದಗಳ ಆರಂಭ ಆಗುವುದೇ ಇಲ್ಲಿಂದ. ಬ್ರಿಟನ್ ಸಂಸತ್ತಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪೀಕರ್ ಆದವರು ಸ್ಪರ್ಧಿಸಿ ಗೆದ್ದು ಬರುತ್ತಾರೆ. ಆದರೆ, ಭಾರತದಲ್ಲಿ ರಾಜಕೀಯ ಪಕ್ಷದ ಚಿಹ್ನೆಯ ಮೂಲಕ ಗೆದ್ದು ಬರುವವರು ಸ್ಪೀಕರ್ ಆಗುತ್ತಾರೆ. ಈ ಗುಣಾತ್ಮಕ ವ್ಯತ್ಯಾಸ ಸ್ಪೀಕರ್ ನಿರ್ಧಾರಗಳಲ್ಲಿ ವ್ಯಕ್ತವಾಗುವುದರಿಂದ ಶಾಸಕರ ಅನರ್ಹತೆಗೆ ಕೈಗೊಳ್ಳುವ ಮಾನದಂಡ ಬೇರೆ ಬೇರೆಯಾಗಿರಲು ಕಾರಣವಾಗಿದೆ.