ದೇಹದ ಅಂದಕ್ಕೆ ಕಿರಿಕಿರಿ ಮಾಡುವ ಸೋರಿಯಾಸಿಸ್
ಭೂಮಿಯನ್ನು ಸೂರ್ಯನ ಪ್ರಖರತೆಯಿಂದ ಕಾಪಾಡುವ ಒಜೋನ್ ಪದರದಂತೆ ನಮ್ಮ ದೇಹದ ಎಲ್ಲಾ ಭಾಗಗಳನ್ನು ಹೊರಗಿನಿಂದ ಸಂರಕ್ಷಿಸುವ ಪದರವೆಂದರೆ ಚರ್ಮ. ಅಂತಹ ಚರ್ಮಕ್ಕೆ ಬರುವ ನಾನಾ ವಿಧದ ತೊಂದರೆಗಳಲ್ಲಿ ಸೋರಿಯಾಸಿಸ್ ದೀರ್ಘಕಾಲದ ಚರ್ಮ ಕಾಯಿಲೆಯೂ ಒಂದು. ಚರ್ಮದ ಮೇಲೆ ತುರಿಕೆಯಿಂದ ಕೂಡಿದ ಕೆಂಪು ಬಣ್ಣದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ತುರಿಕೆ, ಚಿಪ್ಪುಗಳುಳ್ಳ ತೇಪೆಗಳೊಂದಿಗೆ ದದ್ದುಗಳನ್ನು ಉಂಟುಮಾಡುತ್ತದೆ. ಸಾಮಾನ್ಯವಾಗಿ ಮೊಣಕಾಲುಗಳು, ಮೊಣಕೈಗಳು, ಬೆನ್ನು ಮತ್ತು ನೆತ್ತಿಯ ಮೇಲೆ ಉಂಟಾಗಿ ಮಕ್ಕಳಿಂದ ಹಿಡಿದು ಹದಿಹರೆಯದವರೆಗೆ ಎಲ್ಲಾ ವಯೋಮಾನದವರಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಮುಖ್ಯವಾಗಿ ತುರಿಕೆ ಅಥವಾ ನೋವನ್ನು ತರುತ್ತದೆ. ಪ್ಲೇಕ್ ಸೋರಿಯಾಸಿಸ್, ಪಸ್ಟುಲರ್ ಸೋರಿಯಾಸಿಸ್, ಹಾಲೋಪಿಯೊ ಅಕ್ರೊಡರ್ಮಟೈಟಿ, ಸೋರಿಯಾಟಿಕ್ ಸಂಧಿವಾತಗಳಂತಹ ವಿವಿಧ ರೀತಿಯ ಸೋರಿಯಾಸಿಸ್‌ಗಳಿದ್ದರೂ, ಪ್ಲೇಕ್ ರೂಪವು ಹೆಚ್ಚು ಪ್ರಚಲಿತವಾಗಿದೆ.
ಸೋರಿಯಾಸಿಸ್‌ನ ಲಕ್ಷಣಗಳು ಒಬ್ಬರಿಂದ ಇನ್ನೊಬ್ಬರಿಗೆ ಬದಲಾಗಬಹುದು. ಇದರ ಕೆಲವು ಸಾಮಾನ್ಯ ಲಕ್ಷಣಗಳೆಂದರೆ ಮೊಣಕೈಗಳು, ಮೊಣಕಾಲುಗಳು, ನೆತ್ತಿ, ಅಂಗೈಗಳು ಮತ್ತು ಪಾದಗಳ ಅಡಿಭಾಗದ ಮೇಲೆ ದಪ್ಪ, ಕೆಂಪು ಚರ್ಮದ ತೇಪೆಗಳು, ದಪ್ಪ ಉಗುರುಗಳು, ಚರ್ಮದ ಶುಷ್ಕತೆ, ಬಿರುಕು ಬಿಟ್ಟ ಚರ್ಮದಲ್ಲಿ ರಕ್ತಸ್ರಾವ ಅಥವಾ ತುರಿಕೆ, ನಿದ್ರೆಭಂಗ ಇತ್ಯಾದಿ. ಇದರಿಂದ ವಿವಿಧ ಸೋಂಕುಗಳು ಹೃದ್ರೋಗ, ಸಂಧಿವಾತ, ಕರುಳಿನ ಉರಿಯೂತ ಚರ್ಮದ ಬಣ್ಣ ಮತ್ತು ರಚನೆಯಲ್ಲಿ ಬದಲಾವಣೆ ಖಿನ್ನತೆ ಉಂಟಾಗುತ್ತದೆ.
ಸೋರಿಯಾಸಿಸ್‌ಗೆ ನಿಖರವಾದ ಕಾರಣ ತಿಳಿದಿಲ್ಲವಾದರೂ ಚರ್ಮದ ಕೋಶಗಳ ಅಸಹಜ ಬೆಳವಣಿಗೆಯಾಗಿದೆ. ಚರ್ಮದ ಆಳವಾದ ಪದರದಲ್ಲಿ, ದೇಹವು ಹೊಸ ಚರ್ಮದ ಕೋಶಗಳನ್ನು ಉತ್ಪಾದಿಸುತ್ತದೆ. ಈ ಚರ್ಮದ ಕೋಶಗಳು ಚರ್ಮದ ಪದರಗಳನ್ನು ಕ್ರಮೇಣವಾಗಿ ಹೊರ ಪದರವನ್ನು ತಲುಪುವವರೆಗೆ ಏರುತ್ತವೆ. ನಂತರ ಅವು ಕೊಳೆಯುತ್ತವೆ ಮತ್ತು ಬೀಳುತ್ತವೆ. ಸಾಮಾನ್ಯವಾಗಿ ಈ ಸಂಪೂರ್ಣ ಪ್ರಕ್ರಿಯೆಯು ಮೂರರಿಂದ ನಾಲ್ಕು ವಾರಗಳನ್ನು ತೆಗೆದುಕೊಳ್ಳುತ್ತದೆ, ಆದರೆ ಸೋರಿಯಾಸಿಸ್ ರೋಗಿಗಳಲ್ಲಿ ಇದು ಕೇವಲ ೩ ರಿಂದ ೭ ದಿನಗಳನ್ನು ತೆಗೆದುಕೊಳ್ಳುತ್ತದೆ. ಇದು ಚರ್ಮದ ಮೇಲ್ಮೈಯಲ್ಲಿ ವೇಗವಾಗಿ ಶೇಖರಗೊಳ್ಳುವ ಪಕ್ವವಾಗದ ಕೋಶಗಳಿಗೆ ಕಾರಣವಾಗುತ್ತದೆ.
ಸೋರಿಯಾಸಿಸ್ ದೇಹದ ತ್ವಚೆಯನ್ನು ಅತಿಯಾಗಿ ಒಣಗಿಸುತ್ತದೆ. ಇಂತಹ ಸಂದರ್ಭದಲ್ಲಿ ದೇಹವನ್ನು ಸ್ವಚ್ಛವಾಗಿಟ್ಟುಕೊಂಡು ಚರ್ಮಕ್ಕೆ ತುಪ್ಪವನ್ನು ಸವರಬೇಕು. ಚರ್ಮದಲ್ಲಿನ ತೇವಾಂಶವನ್ನು ಕಾಪಾಡುತ್ತದೆ. ಕಹಿಯಾದ ಕೆಲವೊಂದು ಗಿಡಮೂಲಿಕೆಗಳಾದ ಬೇವು, ಖಾದಿರ್, ಪಟೋಲ ಇತ್ಯಾದಿಗಳನ್ನು ಅರೆದು ಲೇಪಿಸಿಕೊಂಡಲ್ಲಿ ಅವುಗಳು ಗಾಯವನ್ನು ವಾಸಿ ಮಾಡಲು, ದೇಹವನ್ನು ವಿಷಕಾರಿ ಅಂಶಗಳಿಂದ ಮುಕ್ತವಾಗಿರುವಂತೆ ಮಾಡುತ್ತವೆ. ಇನ್ನು ದಿನನಿತ್ಯ ವ್ಯಾಯಾಮದಿಂದ ಉಂಟಾಗುವ ದೇಹದ ಬೆವರುವಿಕೆ ಸೋರಿಯಾಸಿಸ್ ರೋಗಿಗಳ ಚರ್ಮವನ್ನು ಮೃದುವಾಗಿಸಿ, ಚರ್ಮ ಒಣಗುವಿಕೆ ಹಾಗೂ ತುರಿಕೆಯನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ. ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಸಹಕರಿಸುತ್ತದೆ. ಆರೋಗ್ಯವು ನಾವು ತೆಗೆದುಕೊಳ್ಳುವ ಆಹಾರದ ಮೇಲೆ ಅವಲಂಬಿತವಾಗಿದೆ. ಇಂದಿನ ಆಹಾರದ ಜೊತೆಗೆ ನಾವು ಅವುಗಳನ್ನು ಬೆಳೆಯಲು ಬಳಸಿದ ರಸಾಯನಿಕಗಳು ಮತ್ತು ಕೀಟನಾಶಕಗಳನ್ನು ಕೂಡಾ ಸೇವಿಸುತ್ತೇವೆ. ಇದರಿಂದ ನಿಧಾನವಾಗಿ ದೇಹದ ಜೀವಕೋಶಗಳ ಕಾರ್ಯಗಳಲ್ಲಿ ಬದಲಾವಣೆ ಕಂಡುಬರಬಹುದು. ಈ ಬದಲಾವಣೆಗಳು ಹೆಚ್ಚಾಗಿ ರೋಗ ಕಾರಕವಾಗಿರುತ್ತವೆ. ಅಂತೆಯೇ ಸೋರಿಯಾಸಿಸ್ ನಂತಹ ರೋಗಗಳ ಉಂಟಾಗುವಿಕೆಯಲ್ಲಿ ಆಹಾರವೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ನಾವು ಸಾವಯವ ಆಹಾರವನ್ನು ಬಳಸಬೇಕು. ಇವು ದೇಹಕ್ಕೆ ಅತ್ಯಂತ ಉತ್ತಮ ಪೋಷಕಾಂಶಗಳನ್ನು ನೀಡುತ್ತದೆ. ಸಾವಯವ ಆಹಾರಗಳಲ್ಲಿ ನೈಸರ್ಗಿಕ ಪೌಷ್ಟಿಕಾಂಶದ ಅಂಶಗಳು ಸಮೃದ್ಧವಾಗಿರುವುದರಿಂದ ದೇಹದ ಧಾತುಗಳಿಗೆ ಸರಿಯಾದ ಪೋಷಣೆಯನ್ನು ನೀಡುವಲ್ಲಿ ಸಫಲವಾಗುತ್ತವೆ.
ಸೋರಿಯಾಸಿಸ್ ರೋಗಿಗಳು ಸೋಪು, ಶಾಂಪೂಗಳ ಬದಲಾಗಿ ಹೆಸರುಕಾಳಿನ ಹಿಟ್ಟು ಅಥವಾ ಕಡಲೆಹಿಟ್ಟನ್ನು ಸ್ವಲ್ಪ ಅಂಟುವಾಳ ಕಾಯಿಯ ಜೊತೆಗೆ ಸೇರಿಸಿ ಬಳಸಬಹುದು.ಸಮುದ್ರದ ಹೆಚ್ಚಿನ ಉಪ್ಪು ಸಾಂದ್ರತೆಯ ನೀರಿನಲ್ಲಿ ಸ್ನಾನ ಮಾಡುವುದು ಮತ್ತು ಸೂರ್ಯನ ಬೆಳಕಿಗೆ ಎಚ್ಚರಿಕೆಯಿಂದ ಒಡ್ಡಿಕೊಳ್ಳುವುದು ಸೋರಿಯಾಸಿಸ್ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.
ಈ ಎಲ್ಲಾ ಮನೆ ಮದ್ದುಗಳು ಸೋರಿಯಾಸಿಸ್ ತೀವ್ರತೆಯ ಲಕ್ಷಣಗಳನ್ನು ಕಡಿಮೆ ಮಾಡಬಲ್ಲುದೆ ಹೊರತು ಸೋರಿಯಾಸಿಸ್‌ಅನ್ನು ವಾಸಿ ಮಾಡಲಾರವು. ಔಷಧಗಳೊಂದಿಗೆ ಮನೆಮದ್ದುಗಳು ಸೋರಿಯಾಸಿಸ್‌ನ್ನು ಶೀಘ್ರ ಶಮನಗೊಳಿಸುವಲ್ಲಿ ಬಹು ಉಪಕಾರಿ.