ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ದೇಹದ ಅಡಿಪಾಯವಾದ ಪಾದಗಳ ರಕ್ಷಣೆ

04:00 AM Oct 22, 2024 IST | Samyukta Karnataka

…. ಎನ್ನ ಕಾಲೇ ಕಂಬ
ದೇಹವೇ ದೇಗುಲ
ಶಿರವೇ ಹೊನ್ನ ಕಳಸವಯ್ಯ.. ಎಂಬ ಬಸವಣ್ಣನವರ ವಚನದಲ್ಲಿ ವರ್ಣಿಸಿರುವಂತೆ ನಮ್ಮ ಇಡೀ ಬದುಕಿನ ದೇಹದ ಭಾರವನ್ನೇ ಹೊತ್ತು ನಮ್ಮ ಕ್ರಿಯಾಶೀಲತೆಗೆ ದೇಹವೆಂಬ ದೇವಾಲಯದ ಬಲಗಂಬಗಳೇ ಪಾದಗಳು. ಈ ಪಾದಗಳಿಗೆ ತೊಂದರೆಯಾದರೆ ಹೇಗೆ? ಹಾಗಾಗಿ ನಮ್ಮ ದೇಹದ ಸೇವಕರಾದ ಪಾದಗಳ ಆರೈಕೆ ಬಹಳ ಮುಖ್ಯ. ಇನ್ನು ಪಾದಗಳಿಗೂ ನಮ್ಮ ಕಣ್ಣಿಗೂ ನೇರ ಸಂಬಂಧವಿದೆ. ನಮ್ಮ ನರನಾಡಿಗಳಲ್ಲಿ ಹರಿಯುವ ರಕ್ತದ ಬಹು ಭಾಗ ನೇತ್ರಗಳಿಗೂ ತರ್ಪಣಗೈಯುತ್ತವೆ, ಆದುದರಿಂದ ಪಾದಗಳಿಗೆ ಮಾಡುವ ಎಲ್ಲಾ ಆರೈಕೆಗಳು ನೇತ್ರಗಳಿಗೂ ತಲುಪುತ್ತವೆ. ಆದ್ದರಿಂದ ಕಾಲಿಗೆ ಹಚ್ಚುವ ಎಣ್ಣೆ, ತುಪ್ಪ, ಹರಳೆಣ್ಣೆ, ಕಣ್ಣನ್ನು ತಂಪು ಮಾಡಿ ಸುಖದಾಯಕ ನಿದ್ರೆಗೆ ಆಸ್ಪದ ನೀಡುತ್ತದೆ. ಆದ್ದರಿಂದ ಕಣ್ಣಿನ ಚಿಕಿತ್ಸೆಗಳಲ್ಲಿ ಪಾದಗಳ ಆರೈಕೆಯು ಒಂದು ಭಾಗ ಎನ್ನಬಹುದು.
ಬಿಸಿಲಿನಲ್ಲಿ ನಡೆದು ಬಂದು ಆಯಾಸವಾದಾಗ ಪಾದಗಳನ್ನು ತಣ್ಣೀರಿನಿಂದ ತೊಳೆಯುವುದರಿಂದ ತಕ್ಷಣಕ್ಕೆ ಆಯಾಸ ಹಾಗೂ ಬಾಯಾರಿಕೆ ನಿವಾರಣೆಯಾಗುತ್ತದೆ. ಕಣ್ಣು ಮೊದಲು ಶಾಂತವಾಗಿ ಸುಸ್ಥಿತಿಗೆ ಮರಳುತ್ತದೆ. ನಿತ್ಯವೂ ಸ್ನಾನಕ್ಕೆ ಮುನ್ನ ಪಾದಗಳಿಗೂ ಕೊಬ್ಬರಿ ಎಣ್ಣೆ, ಹರಳೆಣ್ಣೆ ಅಥವಾ ತುಪ್ಪವನ್ನು ಹಚ್ಚುವುದು ದೈನಂದಿನ ಆರೈಕೆಯ ಒಂದು ಭಾಗ. ಹೀಗೆ ಎಣ್ಣೆಯನ್ನು ಸವರುವುದರಿಂದ ಪಾದಗಳು ಮೃದುವಾಗುತ್ತವೆ. ಎಣ್ಣೆ ಹಚ್ಚಿದ ಕೂಡಲೇ ಸಿಗುವ ಈ ಲಾಭಗಳು ದೃಷ್ಟಿಯ ಪೋಷಕವರ್ಧಕ, ಕಾಲು ಪಾದಗಳ ನೋವು, ಹಠಾತ್ ಹಿಡಿಯುವ ಸಯಾಟಿಕ್ ಎಂಬ ವಾತರೋಗವನ್ನು ತಡೆಯುತ್ತದೆ. ಪಾದಗಳ ಸ್ನಾಯುಗಳನ್ನು ಪೋಷಿಸುತ್ತದೆ.
ಕಾಲು, ಪಾದ ಗಂಟು ನೋವಿದ್ದಾಗ ಎಳ್ಳಣ್ಣೆ, ಕೊಬ್ಬರಿ ಎಣ್ಣೆಯನ್ನು ಪಾದಗಳಿಗೆ ಲೇಪನ ಮಾಡಿ ಅರ್ಧ ಗಂಟೆಯಷ್ಟು ಬಿಡುವುದರಿಂದ ನೋವು ಕಡಿಮೆಯಾಗಿ ಸುಖನಿದ್ರೆಗೆ ದಾರಿ ಮಾಡಿಕೊಡುತ್ತದೆ. ವಾರಕ್ಕೆ ಎರಡು ಬಾರಿ ಕಲ್ಲು ಉಪ್ಪು ಬೆರೆಸಿದ ಬಿಸಿ ನೀರಿನಲ್ಲಿ ೧೫ ನಿಮಿಷಗಳ ಕಾಲ ಎರಡು ಕಾಲನ್ನು ಅದ್ದಿ ಇಟ್ಟಲ್ಲಿ ಪಾದಗಳ ನರ ನಾಡಿಗಳಿಗೆ ವಿರಾಮ ದೊರೆಯುವುದರೊಂದಿಗೆ ಅಂಗಾಲು, ಬೆರಳ ಸಂದಿಗಳಲ್ಲಿರುವ ಬ್ಯಾಕ್ಟೀರಿಯಾಗಳು ಸತ್ತು, ಎಸಳು (ಕೆಸರುಹುಣ್ಣು)ಗಳಂತಹ ತೊಂದರೆಗಳು ಬಾಧಿಸದು.
ಆದರೆ ಡಯಾಬಿಟಿಕ್ ಗ್ಯಾಂಗ್ರಿನ್ ಅಥವಾ ಆಗಾಗ್ಗೆ ಉಂಟಾಗುವ ಉರಿ ಊತ ಇತ್ಯಾದಿಗಳಿಗೆ ಉಪ್ಪು ಬೆರೆಸಿದ ಬಿಸಿ ನೀರಿನಲ್ಲಿ ಕಾಲುಗಳನ್ನು ಅದ್ದುವುದರಿಂದ ರೋಗ ಉಲ್ಬಣವಾದೀತು (ಇಂತಹ ಸಂದರ್ಭದಲ್ಲಿ ವೈದ್ಯರ ಸಲಹೆ ಪಡೆಯುವುದು ಉತ್ತಮ) ಕಾಲು ಉಳುಕಿದಾಗ, ಪಾದಕ್ಕೆ ಏಟಾದಾಗ ತಣ್ಣೀರಿನಲ್ಲಿ ಕಾಲುಗಳನ್ನು ಮುಳುಗಿಸಬೇಕು. ಉತ್ತಮ ಗುಣಮಟ್ಟದ ಪಾದರಕ್ಷೆಗಳನ್ನು ಧರಿಸುವುದರಿಂದಲೂ ಆರೋಗ್ಯ ಲಾಭಗಳುಂಟು, ಆದರೆ ಚಪ್ಪಲಿಗಳ ವಿನ್ಯಾಸವು ರಕ್ಷಣಾತ್ಮಕವಾಗಿ ಇರಬೇಕು, ಹೈಹೀಲ್ಡ್ ಧರಿಸುವುದರಿಂದ ಸೊಂಟ ಕಾಲಿನ ಮೀನಖಂಡ ಮೊಣಕಾಲು, ಮಂಡಿ ನೋವು, ಗರ್ಭಶಾಯಗಳ ತೊಂದರೆಗಳು ಕಾಡಬಹುದು. ಉಷ್ಣವಲಯದಲ್ಲಿ ವಾಸಿಸುವ ಜನರಿಗೆ ಪಾದ ಮುಚ್ಚುವ ಶೂಗಳು ಆರೋಗ್ಯಕರವಲ್ಲ. ಇದರಿಂದ ದೇಹದ ಉಷ್ಣತೆ ಇನ್ನೂ ಹೆಚ್ಚುವುದು. ಅಂತೆಯೇ ಶೀತ ವಲಯದಲ್ಲಿ ವಾಸಿಸುವ ಜನರಿಗೆ ಪಾದ ತೆರೆದುಕೊಳ್ಳುವಂತಹ ಚಪ್ಪಲಿಗಳು ಆರೋಗ್ಯಕ್ಕೆ ಉತ್ತಮವಲ್ಲ. ವಾತ ಸಂಬಂಧದ ತೊಂದರೆಗಳು ಕಾಡಬಹುದು. ಹೆಚ್ಚಾಗಿ ದೇಹದ ಉಷ್ಣಾಂಶ ಏರಿಳಿತಗಳು ಕಣ್ಣು ದೃಷ್ಟಿಗೆ ಹಾನಿಕಾರ. ಕಾಲು ಮತ್ತು ಪಾದದ ನೋವಿಗೆ ಕ್ಯಾಲ್ಸಿಯಂ ಕೊರತೆಯು ಒಂದು ಕಾರಣವಾಗುತ್ತದೆ. ಕ್ಯಾಲ್ಸಿಯಂ ಇರುವಂತಹ ಆಹಾರ ಸೇವನೆ ಉತ್ತಮ.
ಲವಂಗ ಎಣ್ಣೆಯನ್ನು ಪಾದಗಳಿಗೆ ಮಸಾಜ್ ಮಾಡುವುದರಿಂದ ಪಾದದ ನೋವು ನಿವಾರಣೆಯಾಗುತ್ತದೆ. ಶುಂಠಿ ಕಷಾಯವನ್ನು ಕುಡಿಯುವುದರಿಂದ ಪಾದದ ನೋವು ಮತ್ತು ಉರಿಯೂತವನ್ನು ನಿವಾರಿಸಬಹುದು, ಅರಿಶಿನ ಹಾಲು ಕುಡಿಯುವುದರಿಂದ ನೋವು ನಿವಾರಕ ಜೊತೆಗೆ ದೇಹದಲ್ಲಿ ಕ್ಯಾಲ್ಸಿಯಂ ಹೆಚ್ಚಾಗುತ್ತದೆ. ಸಾಸಿವೆ ಬೀಜಗಳು ಪಾದದ ನೋವನ್ನು ನಿವಾರಿಸುತ್ತದೆ. ಈ ಬೀಜವನ್ನು ಸಣ್ಣ ಬಟ್ಟಲಿನಲ್ಲಿ ಪುಡಿ ಮಾಡಿ ಅವುಗಳನ್ನು ಬಿಸಿ ನೀರಿನ ಬಕೆಟ್‌ನಲ್ಲಿ ಬೆರೆಸಿ, ಪಾದಗಳನ್ನು ಈ ನೀರಿನಲ್ಲಿ ೧೫ ನಿಮಿಷಗಳ ಇರಿಸುವುದರಿಂದಲೂ ನೋವಿನಿಂದ ಪರಿಹಾರ ಪಡೆಯಬಹುದು.
ನೋವಾಗಿರುವ ಕಾಲಿನ ಮೇಲೆ ಐಸ್‌ಪ್ಯಾಕ್ ಅನ್ನು ೧೫ ರಿಂದ ೨೦ ನಿಮಿಷಗಳ ಕಾಲ ಇಟ್ಟು ಪ್ರತಿ ೨ ರಿಂದ ೩ ಗಂಟೆಗಳಿಗೊಮ್ಮೆ ಕೋಲ್ಡ್ ಥೆರಪಿ ಮಾಡುವುದರಿಂದ ರಕ್ತನಾಳಗಳು ಚಿಕ್ಕದಾಗುತ್ತವೆ ಮತ್ತು ಊತ ಕಡಿಮೆಯಾಗುತ್ತದೆ. ಪಾದಗಳಲ್ಲಿ ಸುಡುವ ಸಂವೇದನೆ ಅಥವಾ ಬಳಲಿಕೆ ಇದ್ದರೆ ಚರ್ಮದ ಕಾಯಿಲೆ ಸೋಂಕು ನರಗಳ ದೋಷದ ಸೂಚನೆಯಾಗಿದೆ, ವಿಟಮಿನ್ ಕೊರತೆಯಿಂದ ರಕ್ತಹೀನತೆಯಿಂದ ಸುಡುವ ಪಾದಗಳ ಸಿಂಡ್ರೋಮ್ ಉಂಟಾಗುತ್ತದೆ.
ಹಾಗಲಕಾಯಿ ಪೇಸ್ಟ್ ಅನ್ನು ಹಾಗಲಕಾಯಿ ಸೊಪ್ಪಿನೊಂದಿಗೆ ಲೇಪಿಸಿದರೆ ಸುಡುವ ಸಂವೇದನೆ ಉಪಯುಕ್ತ ಹಾಗೂ ರಕ್ತ ಪರಿಚಲನೆ ಮತ್ತು ಹರಿವು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದರ ಜೊತೆಗೆ ಅಗತ್ಯ ವ್ಯಾಯಾಮ, ಕೆಲವು ಕಾಲಿಗೆ ಸಂಬಂಧಿಸಿದ ಯೋಗಗಳಲ್ಲಿ ಸೇತುಬಂಧಾಸನ, ತ್ರಿಕೋನ ಆಸನಗಳು ಈ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಬರಿಗಾಲುಗಳಿಂದ ೧೫ ರಿಂದ ೨೦ ನಿಮಿಷ ಗಳ ಕಾಲ ಮಣ್ಣು ಭೂಮಿಯ ಮೇಲಿನ ನಡಿಗೆಯಿಂದ ನಮ್ಮ ದೇಹದ ಋಣಾತ್ಮಕ ಶಕ್ತಿ ಪಾದಗಳ ಮೂಲಕ ಭುವಿ ಸೇರಿ ಧನಾತ್ಮಕ ಶಕ್ತಿ ದೇಹ ಸೇರಿ ಉತ್ತಮ ಆರೋಗ್ಯಕ್ಕೆ ಎಡೆ ಮಾಡಿಕೊಡುತ್ತದೆ. ಸರಿಯಾದ ಸಮಯಕ್ಕೆ ಪಾದಗಳ ಆರೈಕೆಯ ದಿನಚರಿಯನ್ನು ಅನುಸರಿಸುವುದು ಮತ್ತು ಪಾದದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಜೊತೆಗೆ ಕಾಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಂಡುಹಿಡಿದು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದು ಅಷ್ಟೇ ಮುಖ್ಯ.

Next Article