For the best experience, open
https://m.samyuktakarnataka.in
on your mobile browser.

ದೇಹ, ವಾಕ್, ಮನಸ್ಸಿನ ಶುದ್ಧತೆ

04:59 AM Oct 19, 2024 IST | Samyukta Karnataka
ದೇಹ  ವಾಕ್  ಮನಸ್ಸಿನ ಶುದ್ಧತೆ

ಸಾಮಾನ್ಯವಾಗಿ ಜನರು ಯೋಗ ಮಾಡಲೇಬೇಕೆ ಎಂದು ಕೇಳುತ್ತಿರುತ್ತಾರೆ. ಇವರಿಗೆ ಪತಂಜಲಿ ಮಹರ್ಷಿಗಳು ನೀಡಿದ ಉತ್ತರ, ಹೇಯಂ ದುಃಖಂ ಅನಾಗತಂ'.ಮುಂದೆ ಬರಲಿರುವ ದುಃಖದ ಬೇರನ್ನು, ದುಃಖದ ಕಾರಣವನ್ನು ಈಗಲೇ ಕತ್ತರಿಸಿಬಿಡಿ' ಎಂದು. ಇದೇ ಯೋಗದ ಉದ್ದೇಶ ಮತ್ತು ಇದನ್ನು ಮೂರು ರೀತಿಗಳಲ್ಲಿ ಮಾಡಬೇಕು. ಮೊಟ್ಟ ಮೊದಲನೆಯದಾಗಿ ದೇಹವನ್ನು ಹಠಯೋಗದ ಮೂಲಕ ಶುದ್ಧಿಗೊಳಿಸಬೇಕು. ದೇಹವು ಒತ್ತಡದಲ್ಲಿದ್ದಾಗ ಯೋಗಾಸನಗಳನ್ನು ಮಾಡಬೇಕು. ಆಸನಗಳಿಂದ ದೇಹದ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು. ಇಲ್ಲವಾದರೆ ಅನಾರೋಗ್ಯದಿಂದ ಬಹಳ ದುಃಖವುಂಟಾಗುತ್ತದೆ.
ಹಠಯೋಗವು ದೇಹದ ವಿಷಕಾರಿ ಪದಾರ್ಥಗಳನ್ನು ತೆಗೆದು ಹಾಕುವುದರಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು. ಮೌನದಿಂದ ವಾಕ್‌ಶುದ್ಧಿಯಾಗುತ್ತದೆ. ಸದಾ ಮಾತನಾಡುತ್ತಲೇ ಇದ್ದರೆ ನೀವೇನು ಹೇಳುತ್ತಿರುವಿರೆಂದೂ ನಿಮಗೆ ಗೊತ್ತಿರುವುದಿಲ್ಲ. ನೀವೇನು ಮಾಡುತ್ತಿರುವಿರೆಂಬ ಅರಿವನ್ನು ಕಳೆದುಕೊಳ್ಳುತ್ತೀರಿ. ಏನು ಹೇಳಬೇಕು, ಏನು ಹೇಳಬಾರದೆಂದೂ ನಿಮಗೆ ಗೊತ್ತಾಗುವುದಿಲ್ಲ. ಎಲ್ಲಾ ವೈರತ್ವ, ನಿಮ್ಮ ಸುತ್ತಲೂ ಇರುವ ಸಮಸ್ಯೆಗಳೆಲ್ಲವೂ ನಿಮ್ಮ ಮಾತಿನಿಂದಾಗಿಯೇ. ಇದು ನಿಮಗೆ ಗೊತ್ತೆ?.. ಇತರರಿಗೆ ನೋವಾಗುವಂತಹ ಮಾತನ್ನಾಡುತ್ತೀರಿ. ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುವವರ ಮೇಲೆ ನಿಮ್ಮ ಮಾತುಗಳು ಯಾವ ರೀತಿಯ ಪರಿಣಾಮವನ್ನು ಬೀರುತ್ತಿದೆಯೆಂಬ ಅರಿವೇ ಇರುವುದಿಲ್ಲ ನಿಮಗೆ.
ಎಲ್ಲವೂ ಮಾತುಗಳಿಂದಾಗಿಯೆ. ನಮ್ಮ ತೊಂಭತ್ತು ಪ್ರತಿಷತ್ ಸಮಸ್ಯೆಗಳೆಲ್ಲವೂ ಮಾತಿನಿಂದಾಗಿಯೇ. ಕೆಲವೊಮ್ಮೆ ಯಾರೋ ಕೆಲವು ಮಾತುಗಳನ್ನಾಡುತ್ತಾರೆ. ಅದು ನಿಮ್ಮ ಕಿವಿಯೊಳಗೆ ಬಿದ್ದು ನಿಮ್ಮ ಮೆದುಳು ಕುದಿಯಲು ಪ್ರಾರಂಭಿಸುತ್ತದೆ. ನೀವೇನು ಹೇಳುತ್ತಿರುವಿರೆಂದು ನಿಮಗೆ ಗೊತ್ತಾಗದಿದ್ದರೆ, ಬಹಳ ಮಾತನಾಡುತ್ತಿರುವಿರಿ ಎಂದರ್ಥ. ಮೌನವು ನಿಮಗೆ ವಾಕ್‌ಶುದ್ಧಿಯನ್ನು ತಂದುಕೊಡುತ್ತದೆ. ಕಡಿಮೆಯಾಗಿ ಮಾತನಾಡಿ ಮತ್ತು ಹೆಚ್ಚು ಅರಿವನ್ನಿಟ್ಟುಕೊಂಡು ಮಾತನಾಡಿ. ನೀವು ಬಳಸುವ ಪ್ರತಿಯೊಂದು ಪದವನ್ನೂ ಉದ್ದೇಶಪೂರ್ವಕವಾಗಿ ಬಳಸಿರಿ.
ಮೂರನೆಯದಾಗಿ, ಧ್ಯಾನದಿಂದ ಮನಸ್ಸಿನ ಶುದ್ಧಿಯಾಗುತ್ತದೆ. ಮನಸ್ಸಿನಲ್ಲಿರುವ ಎಲ್ಲ ಆಳವಾದ ಸಂಸ್ಕಾರಗಳನ್ನು ಧ್ಯಾನದಿಂದ, ಅರಿವಿನಿಂದ ಅಳಿಸಿ ಹಾಕಿಬಿಡಬಹುದು. ಕರ್ಮದ ಗತಿಯು ಬಹಳ ಅಪಾರ, ಅನಂತ ಮತ್ತು ವೈವಿಧ್ಯಮಯ. ಆದರೆ ನೀವು ಹೆಚ್ಚು ಕೇಂದ್ರೀಕೃತರಾದಷ್ಟೂ, ಹೆಚ್ಚು ಜಾಗೃತಿಯನ್ನು ಹೊಂದಿದಷ್ಟೂ ನಿಮ್ಮ ಕರ್ಮಗಳನ್ನು ಸುಟ್ಟುಬಿಡಬಲ್ಲಿರಿ. ಗತದಲ್ಲಿ ನಡೆದುದರ ಬಗ್ಗೆ ಪಶ್ಚಾತ್ತಾಪ ಪಡಬೇಡಿ. ಗತದ ಘಟನೆಗಳೆಲ್ಲವೂ ಅಡಿಪಾಯವನ್ನು ಹಾಕಿ ಗೋಡೆಗಳನ್ನು ಕಟ್ಟಿವೆ. ಈಗ ಅದರ ಮೇಲ್ಛಾವಣೆಯನ್ನು ಹಾಕಬೇಕಿದೆ ಅಷ್ಟೇ. ಯಾವುದೂ ವ್ಯರ್ಥವಾಗಲಿಲ್ಲ.