ದೋಸ್ತ್…ದೋಸ್ತ್ ನಾ ರಹಾ…..
ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ತಿರು ಕೇಸಿ ಮತ್ತು ತಿಗಡೇಸಿ ಎಂಬ ಗೆಳೆಯರು ಇದ್ದರು. ತಿರುಕೇಸಿಯ ಮನೆ ಪೂರ್ವಕ್ಕೆ ಮುಖಮಾಡಿ ಇತ್ತು. ಆತ ಚಿಕ್ಕವನಿದ್ದಾಗ ಕಟ್ಟೆಯ ಮೇಲೆ ಕೂಡುತ್ತಿದ್ದ. ಸೂರ್ಯನ ಬಿಸಿಲು ಡೈರೆಕ್ಟಾಗಿ ಮುಖದ ಮೇಲೆ ಬಿದ್ದು ಬಿದ್ದು ಆತ ಹಂಗೆ ಆಗಿದ್ದ. ಇನ್ನು ತಿಗಡೇಸಿ ಮನೆಯ ಮುಂದೆ ಯಾವುದೇ ಮರ ಇರಲಿಲ್ಲ. ಮುಂಜಾನೆದ್ದು ಜೋತು ಬೀಳುವುದಕ್ಕೆ ಆಗುತ್ತಿರಲಿಲ್ಲ ಹೀಗಾಗಿ ಆತ ಹಾಗೆ ಆಗಿದ್ದ. ಅವರು ಯಾವಾಗಲೂ ಜತೆಯಾಗಿಯೇ ಇರುತ್ತಿದ್ದರು. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಕದಲುತ್ತಿರಲಿಲ್ಲ. ಹಳ್ಳಕ್ಕೆ ಹೋದರೂ ಇಬ್ಬರು, ಊರಿಗೆ ಹೋದರೂ ಇವರಿಬ್ಬರು, ಸಿನೆಮಾ ನೋಡಲು ಸೈಕಲ್ ಮೇಲೆ ಹೋದರೂ ಇಬ್ಬರೇ ಹೋಗುತ್ತಿದ್ದರು. ನೋಡಿದವರು ವ್ಹಾರೆ ವ್ಹಾ ದೋಸ್ತಿ ಅನ್ನುತ್ತಿದ್ದರು. ತಿರುಕೇಸಿ ಅವರಪ್ಪ ಮಾತ್ರ ಮೆಲ್ಲಗಿನ ಧ್ವನಿಯಲ್ಲಿ ತಿಗಡೇಸಿ ನಮ್ಮ ಹುಡುಗನನ್ನು ಕೆಡೆಸಿಬಿಡುತ್ತಾನೆ ಎಂದು ಹೇಳುತ್ತಿದ್ದರು. ಸಂದರ್ಭ ಸಿಕ್ಕಾಗೆಲ್ಲ ಲೋ ತಿರುಕೇಸಿ ಆ ತಿಗಡೇಸಿ ಸರಿಯಿಲ್ಲವೋ…ಕಳ್ಳನನ್ನು ನಂಬಬಹುದು ಆದರೆ…..ಎಂದು ಮಾರ್ಮಿಕವಾಗಿ ಹೇಳುತ್ತಿದ್ದರು. ತಿಗಡೇಸಿಯ ಸೋದರ ಮಾವನೂ ಸಹ ಲೋ ತಿಗಡೇಸಿ ನನ್ನ ಅಳಿಯ ಆಗಿರುವುದಕ್ಕೆ ಒಂದು ಮಾತು ಹೇಳುತ್ತೇನೆ ಕೇಳು. ಬೇಕಿದ್ದರೆ ಬಿಳಿ, ಕೆಂಪು, ಗೋದಿ ಬಣ್ಣದವರನ್ನು ನಂಬು ಆದರೆ…….ಎಂದು ಬುದ್ಧಿ ಹೇಳುತ್ತಿದ್ದರು. ಆದರೆ ಇವರಿಬ್ಬರು ಮಾತ್ರ ಅವರು ಹೇಳಿದ್ದನ್ನ ಕಿವಿಗೆ ಹಾಕಿಕೊಳ್ಳದೇ ಹೆಗಲಮೇಲೆ ಕೈ ಹಾಕಿಕೊಂಡು ತಿರುಗುತ್ತಿದ್ದರು. ಇಬ್ಬರಿಗೂ ಫೇಮಸ್ ಆಗಬೇಕು ಎಂಬ ಹುಚ್ಚು ಹತ್ತಿತ್ತು. ತಿರುಕೇಸಿ ಸ್ವಲ್ಪ ಚಾಲೂ. ಹುಂಬ ತಿಗಡೇಸಿಯನ್ನು ಬಿಟ್ಟು ಬಿಟ್ಟು ತಾನೇ ಮುಂದೆ ಹೋಗತೊಡಗಿದ. ಬಾಲ್ಯದ ಗೆಳೆಯ ಎಂದು ಆತನಿಗೆ ಎಷ್ಟು ಪ್ರಿಫರನ್ಸ್ ಕೊಡಬೇಕೋ ಅಷ್ಟೇ ಮಾತ್ರ ಕೊಡುತ್ತಿದ್ದ. ಇಬ್ಬರೂ ಹರೆಯದ ವಯಸ್ಸು ಮೀರಿದ್ದರಿಂದ ತಮ್ಮ ತಮ್ಮವರ ಮಾತನ್ನು ನಂಬಿದರು. ಸಿಟ್ಟಿಗೆದ್ದ ತಿಗಡೇಸಿಯು ನಾನೇದಾರೂ ಅನ್ನಬೇಕು ಎಂದು ಕಾಯುತ್ತಿದ್ದ. ದೊಡ್ಡಾಟದ ಸಮಾರಂಭದಲ್ಲಿ ಅತಿಥಿಯಾಗಿದ್ದ ಅತ ಹಿಂದಿನದನ್ನು ನೆನಪಿಸಿಕೊಂಡು…ನನಗೆ ದೊಡ್ಡಾಟವೆಂದರೆ ಬಲು ಇಷ್ಟ…ನಾನೂ ಪಾರ್ಟ್ ಮಾಡಿದ್ದೆ ಅಂದಾಗ ಮಾತು ಹೇಳಿ ಎಂದು ಗಂಟುಬಿದ್ದರು. ಆಗ ತಿಗಡೇಸಿಯು…ಎಲಲಲಾ… ನೀನೆಲ್ಲಿದ್ದೀಯಪ್ಪ ನನಗೆ ಗೊತ್ತಿಲ್ಲೇನಪ್ಪ ನೀನು ಅದು ಅಂದ. ಜನರು ಚಪ್ಪಾಳೆ ಹೊಡೆದರು. ತಿರುಕೇಸಿಗೆ ಈ ಸುದ್ದಿ ಗೊತ್ತಾಯಿತು. ಆತನೂ ದಪ್ಪಿನಾಟಕ್ಕೆ ಗೆಸ್ಟ್ ಆಗಿ ಹೋದಾಗ…ನಾನು ರಾಜನ ಪಾತ್ರ ಮಾಡಿದ್ದೆ ಅಂದ. ಮಾತು ಹೇಳಿ ಎಂದು ಕೂಗಿದರು. ನೀನು ..ನೀನು ದಡ್ಡ. ನೀನು ಮಡ್ಡ ಆದರೂ ನೀನು ಗಿಡ್ಡ ಅಂದ ಅದಕ್ಕೂ ಜನರು ಚಪ್ಪಾಳೆ ಹೊಡೆದರು ಕಂಟ್ರಂಗಮ್ಮತ್ತಿ ಕಥೆ ಮುಗಿಸಿದಳು.