For the best experience, open
https://m.samyuktakarnataka.in
on your mobile browser.

ದ್ರೌಪದಿಯಿಂದ ಸ್ತ್ರೀಧರ್ಮ ಉಪದೇಶ

12:40 AM Jan 25, 2024 IST | Samyukta Karnataka
ದ್ರೌಪದಿಯಿಂದ ಸ್ತ್ರೀಧರ್ಮ ಉಪದೇಶ

ಮಹಾಭಾರತದ ವನಪರ್ವದ ಉಪಪರ್ವ ದ್ರೌಪದಿ ಸತ್ಯಭಾಮಾ ಪರ್ವದಲ್ಲಿ ದ್ರೌಪದಿಯು ಎಲ್ಲ ಸ್ತ್ರೀಯರಿಗೆ ಉತ್ತಮ ತತ್ವಗಳನ್ನು ಉಪದೇಶಿಸಿದ್ದಾಳೆ.
ಇಲ್ಲಿ ದ್ರೌಪದಿಯು ಹೇಳಿದಂತೆ ಸ್ತ್ರೀಯರ ನಡೆದುಕೊಂಡರೆ ಅವರ ಜೀವನವು ಹಸನ್ಮುಖವಾಗುತ್ತದೆ. ಇಹಪರದಲ್ಲಿಯೂ ಸುಖವಾಗಿರುತ್ತಾರೆ. ಮುಖ್ಯವಾಗಿ ಭಗವಂತನು ಸಂಪ್ರೀತನಾಗುತ್ತಾನೆ. ಆತ್ಯಂತಿಕವಾಗಿ ಮೋಕ್ಷವು ದೊರಕುತ್ತದೆ ಮತ್ತು ಅವರ ಸಂಸಾರವು ಸುಖಮಯವಾಗುತ್ತದೆ.
ದ್ರೌಪದಿಯು ಉಪದೇಶಿಸಿದ ಮಾತುಗಳನ್ನು ಅಳವಡಿಸಿಕೊಳ್ಳುವುದರಿಂದ ಗಂಡ-ಮಕ್ಕಳು ಸುಖವಾಗಿರುತ್ತಾರೆ.
ಪಾಂಡವರ ವನವಾಸದ ಸಮಯವು ಮುಗಿಯುತ್ತಿದೆ. ಮುಂದೆ ಅಜ್ಞಾತವಾಸವು ಪ್ರಾರಂಭವಾಗಬೇಕು. ಈ ಸಂದರ್ಭದಲ್ಲಿ ಶ್ರೀಕೃಷ್ಣ ಪರಮಾತ್ಮನು ಪಾಂಡವರಿಗೆ ಸಾಂತ್ವನ ಮಾಡಲು ಹಾಗೂ ಮುಂದಿನ ಅಜ್ಞಾತವಾಸಕ್ಕೆ ಮಾರ್ಗದರ್ಶನ ಮಾಡಲು ಆಗಮಿಸುತ್ತಾನೆ. ಜೊತೆಯಲ್ಲಿ ಸತ್ಯಭಾಮೆಯನ್ನು ಕರೆದುಕೊಂಡು ಬರುತ್ತಾನೆ.
ಪಾಂಡವರು, ಬ್ರಾಹ್ಮಣರು ಕೃಷ್ಣ್ಣನ ಬಳಿ ಕುಳಿತು ಮಾತನಾಡುತ್ತಿದ್ದಾರೆ. ಆಗ ಸಾಕ್ಷಾತ್ ಲಕ್ಷ್ಮೀಸ್ವರೂಪಳಾದ ಸತ್ಯಭಾಮೆಯು ದ್ರೌಪದಿಯ ಜೊತೆಯಲ್ಲಿ ಮಾತನಾಡುತ್ತಾಳೆ. ಇಬ್ಬರೂ ಕೂಡ ಒಟ್ಟಿಗೆ ಆಶ್ರಮದ ಒಳಗೆ ಹೋಗುತ್ತಾರೆ. ಸುಪ್ರೀತರಾಗಿರುತ್ತಾರೆ. ಸಂತೋಷದಲ್ಲಿ ನಗುತ್ತಾರೆ.
ಸುಖಾಸೀನದಲ್ಲಿ ಕುಳಿತುಕೊಳ್ಳುತ್ತಾರೆ. ಪರಸ್ಪರವಾಗಿ ಪ್ರಿಯವಾದುದ್ದನ್ನೇ ಇಬ್ಬರು ಮಾತನಾಡುತ್ತಿದ್ದಾರೆ. ಒಬ್ಬರನ್ನೊಬ್ಬರು ನೋಡದೆ ಬಹಳ ಕಾಲವಾಗಿದೆ. ಕುರುವಂಶ ಹಾಗೂ ಯದುವಂಶಕ್ಕೆ ಸಂಬಂಧಪಟ್ಟ ಅನೇಕ ವಿಷಯಗಳನ್ನು ಮಾತನಾಡಿಕೊಳ್ಳುತ್ತಾರೆ. ಹೀಗೆಯೇ ಮಾತುಗಳು ಬೆಳೆದು ಸತ್ಯಭಾಮೆಯು ಏಕಾಂತದಲ್ಲಿ ಯಾಜ್ಞಸೇನೆಯನ್ನು ಕುರಿತು ಪ್ರಶ್ನಿಸುತ್ತಾಳೆ. ನಿನ್ನ ಗಂಡಂದಿರು ಸಾಮಾನ್ಯರಲ್ಲ. ಲೋಕಪಾಲಕರಾಗಿದ್ದಾರೆ. ವೀರಾಗ್ರಣಿಗಳಾಗಿದ್ದಾರೆ. ಅಂತಹ ಶ್ರೇಷ್ಠರಾದ ಪಾಂಡವರನ್ನು ಒಬ್ಬಳೇ ನೀನು ಹೇಗೆ ವಶಪಡಿಸಿಕೊಂಡಿರುವಿ? ಅವರು ನಿನ್ನ ಮೇಲೆ ಕೋಪಗೊಳ್ಳುವುದಿಲ್ಲ. ನಿನ್ನನ್ನು ಪ್ರತಿಯೊಬ್ಬರೂ ಪ್ರತ್ಯೇಕವಾಗಿ ಪ್ರೀತಿ ಮಾಡುತ್ತಾರೆ. ನಿನ್ನ ವಿಷಯದಲ್ಲಿ ಅವರಲ್ಲಿ ಪರಸ್ಪರ ಜಗಳವಿಲ್ಲ, ಪರಸ್ಪರವಾಗಿ ಅಸೂಯೆಯೂ ಇರುವುದಿಲ್ಲ. ಅವರೆಲ್ಲರೂ ನಿನ್ನ ಮುಖವನ್ನು ನೋಡಿ, ನಿನ್ನ ಇಂಗಿತವನ್ನು ಅರಿತು ಅಷ್ಟರಿಂದಲೇ ತಮ್ಮ ವರ್ತನೆಯನ್ನು ಸರಿ ಮಾಡಿಕೊಳ್ಳುತ್ತಾರೆ. ಏನು ಇದರ ರಹಸ್ಯ. ಗಂಡಂದಿರನ್ನು ವಶಮಾಡಿಕೊಳ್ಳಲು ನೀನು ಯಾವುದಾದರೂ ವ್ರತವನ್ನು ಮಾಡಿರುವಿಯೇ ಅಥವಾ ಅದಕ್ಕಾಗಿ ತಪಸ್ಸನ್ನು ಆಚರಿಸಿ ವರವನ್ನು ಪಡೆದುಕೊಂಡಿರುವಿಯೇ ಅಥವಾ ನಿನ್ನಲ್ಲಿ ಯಾವುದಾದರೂ ಔಷಧಿಗಳ ಪ್ರಯೋಗವಿದೆಯೇ ಮಂತ್ರ ಹಾಕಿರುವಿಯೇ, ಗಿಡ ಮೂಲಿಕೆಗಳ ಪ್ರಯೋಗ ವಿದೆಯೇ ಜಪ-ಹೋಮಗಳನ್ನು ಮಾಡಿರುವಿಯೇ ಇದರ ಮರ್ಮವನ್ನು ನನಗೆ ತಿಳಿಸು. ಕೃಷ್ಣನು ನನಗೆ ಯಾವಾಗಲೂ ವಶನಾಗಿರಬೇಕು. ಎಂದು ಕೇಳಿದಾಗ ದ್ರೌಪದಿ ವಾಮ ಮಾರ್ಗದಿಂದ ಗಂಡನನ್ನು ವಶಪಡಿಸಿಕೊಳ್ಳುವದು ಸಾಧುವಲ್ಲವೆಂದು ಉತ್ತರ ಕೊಡುತ್ತಾಳೆ ಕಾರಣ ಅದು ಶಾಶ್ವತವಾದ ಪರಿಹಾರವಲ್ಲ. ಗಂಡನಾದವನು ಕೊನೆಯವರೆಗೂ ಪತ್ನಿಯೊಂದಿಗೆ ಹೊಂದಿಕೊಂಡು ಪರಸ್ಪರ ಪ್ರೀತಿ ತೋರಿ ಬಾಳಬೇಕು. ಅಂದಾಗ ಸಂಸಾರ ಸುಗಮವಾಗುತ್ತದೆ ಎಂದು ದ್ರೌಪದಿ ಹೇಳುತ್ತಾಳೆ.