ಧರ್ಮಯುದ್ಧದ ಲಕ್ಷಣ
ಇತ್ತೀಚೆಗೆ ಧರ್ಮಯುದ್ಧ' ಎಂಬ ಶಬ್ದ ವಿಶ್ವದ ಬಹುತೇಕ ಕಡೆಗಳಲ್ಲಿ ಕೇಳಿಬರುತ್ತಿದೆ. ನಿಜವಾದ ಧರ್ಮಯುದ್ಧ ಯಾವುದು? ಭಗವದ್ಗೀತೆಯಲ್ಲಿ ಧರ್ಮದ ಲಕ್ಷಣಗಳು ಉಲ್ಲೇಖಗೊಂಡಿವೆ. ಅವುಗಳಲ್ಲಿ ಪ್ರಮುಖವಾದ ಒಂದನ್ನು ಇಲ್ಲಿ ನಿರೂಪಿಸೋಣ. ವಿಶ್ವರೂಪದರ್ಶನ ಅಧ್ಯಾಯದಲ್ಲಿ ಬಂದಿರುವ ಶ್ಲೋಕ:
ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ ಕರ್ಣಂ ತಥಾನ್ಯಾನ್ ಅಪಿ ಯೋಧವೀರಾನ್ | ಮಯಾ ಹತಾನ್ ತ್ವಂ ಜಹಿ ಮಾ ವ್ಯಥಿಷ್ಠಾ ಯುದ್ಧಸ್ವ ಜೇತಾಸಿ ರಣೇ ಸಪತ್ನಾನ್ ||' (೧೧.೩೪) ಈಗಾಗಲೇ ದ್ರೋಣರು, ಭೀಷ್ಮ, ಜಯದ್ರಥ, ಕರ್ಣ ಮುಂತಾದ ವೀರ ಯೋಧರು ನನ್ನಿಂದ ಹತರಾಗಿದ್ದಾರೆ. (ಇವರೆಲ್ಲ ಈಗ ನಡೆಯಲಿರುವ ಯುದ್ಧದಲ್ಲಿ ಮರಣ ಹೊಂದುವುದು ಭಗವಂತನ ಸಂಕಲ್ಪವಾಗಿದೆ.) ಆದ್ದರಿಂದ ಇವರನ್ನು ನೀನು ಸುಲಭವಾಗಿ ಸಂಹಾರ ಮಾಡುತ್ತೀಯೆ, ಯುದ್ಧದಲ್ಲಿ ಗೆಲ್ಲುತ್ತೀಯೆ. ಆದ್ದರಿಂದ ಚಿಂತೆ ಮಾಡದೆ ಯುದ್ಧ ಮಾಡು.' ಮಹಾಭಾರತ ಯುದ್ಧದಲ್ಲಿ ಅಧರ್ಮದ ಪಕ್ಷಕ್ಕೆ ಬೆಂಬಲವಾಗಿ ನಿಂತ ಅತ್ಯಂತ ಪರಾಕ್ರಮಿಗಳು ವಿಧಿಯ ಸಂಕಲ್ಪದಿಂದಲೇ ಹತರಾಗುತ್ತಾರೆ. ಈ ರೀತಿಯಲ್ಲಿ ಅಧರ್ಮದ ಪಕ್ಷಪಾತಿಗಳು ವಿಧಿಯ ಸಂಕಲ್ಪದಿಂದಲೇ ಹತರಾಗುವುದು ಅಥವಾ ಸೋಲುವುದು ಧರ್ಮಯುದ್ಧದ ಮುಖ್ಯವಾದ ಲಕ್ಷಣ. ಧರ್ಮಯುದ್ಧದಲ್ಲಿ ಮುಂದೆ ನಿಂತು ಯುದ್ಧ ಮಾಡುವವನಿಗೆ ದೈವೀ ಬೆಂಬಲ ಸಹಜವಾಗಿರುತ್ತದೆ. ಆ ದೈವೀ ಬೆಂಬಲವು ಧರ್ಮದ ಪಕ್ಷದ ಹೋರಾಟಗಾರನಲ್ಲಿ ಇರಬಹುದಾದ ಎಲ್ಲ ಕೊರತೆಗಳನ್ನೂ ತಾನು ತುಂಬಿಕೊಂಡು ಅವನನ್ನು ಗೆಲ್ಲಿಸುತ್ತದೆ. ಇದಕ್ಕೆ ಮಹಾಭಾರತ ಯುದ್ಧದಷ್ಟು ಉತ್ತಮ ಉದಾಹರಣೆ ಮತ್ತೊಂದು ಇರಲಿಕ್ಕಿಲ್ಲ. ಪಾಂಡವರು ಇದ್ದವರು ಐದೇ ಜನ, ಕೌರವರು ನೂರು ಜನ. ಕೌರವರಿಗೆ ಎಲ್ಲರ ವಿದ್ಯಾಗುರುಗಳಾದ ದ್ರೋಣಾಚಾರ್ಯರ ಬೆಂಬಲ, ಪಿತಾಮಹ ಭೀಷ್ಮರ ಸೇನಾಧಿಪತ್ಯದ ಬೆಂಬಲ. ಪಾಂಡವರಿಗೆ ಇಂತಹ ಬೆಂಬಲಗಳಿಲ್ಲ. ಪಾಂಡವರ ಸೇನೆ ಏಳು ಅಕ್ಷೋಹಿಣಿ, ಕೌರವರ ಸೇನೆ ಹನ್ನೊಂದು ಅಕ್ಷೋಹಿಣಿ. ಹೀಗೆ ಪಾಂಡವರಿಗೆ ಅನೇಕ ದೌರ್ಬಲ್ಯಗಳು ಮತ್ತು ಕೌರವರಿಗೆ ಅನೇಕ ಪ್ರಾಬಲ್ಯಗಳು ಇವೆ. ಇವೆಲ್ಲದರ ಮಧ್ಯದಲ್ಲಿ ಯುದ್ಧದ ಆರಂಭದ ಕ್ಷಣದಲ್ಲಿ ಅರ್ಜುನನಿಗೆ ಉಂಟಾದ ವಿಷಾದದ ಸ್ಥಿತಿ. ಆ ವಿಧಿಯ ಬೆಂಬಲವು ಇವೆಲ್ಲ ಕೊರತೆಗಳನ್ನು ಬೇರೆಬೇರೆ ಉಪಾಯಗಳಿಂದ ತುಂಬಿಕೊಂಡು ಪಾಂಡವರನ್ನೇ ಗೆಲ್ಲಿಸಿತು. ಇದು ಧರ್ಮಯುದ್ಧದ ಲಕ್ಷಣ. ಒಟ್ಟಾರೆ ದೈವೀ ಬೆಂಬಲದಿಂದ ನಡೆಯುವ ಯುದ್ಧವೇ ಧರ್ಮಯುದ್ಧ, ದೈವೀ ಪ್ರೇರಣೆಯಂತೆ ನಡೆಯುವ ಯುದ್ಧವೇ ಧರ್ಮಯುದ್ಧ. ಗೀತೆಯ ಪ್ರಸಿದ್ಧವಾದ ಶ್ಲೋಕ ಇದನ್ನೇ ಘೋಷಿಸುತ್ತದೆ:
ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ | ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ ||' (೧೮.೭೮)