ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಧರ್ಮೋ ರಕ್ಷತಿ ರಕ್ಷಿತಃ

01:30 AM Jan 20, 2025 IST | Samyukta Karnataka

ಧರ್ಮವನ್ನು ಟೀಕಿಸಿದವರು ರಾತ್ರಿ ಬೆಳಗಾಗುವುದ ರೊಳಗೆ ಜನಪ್ರಿಯರಾಗುವುದು ಈಗಿನ ಕಾಲದ ಪವಾಡ. ಟೀಕಿಸಲು ಧರ್ಮವನ್ನು ಅರಿಯಬೇಕಾದದ್ದಿಲ್ಲ ಎಂಬುದು ಟೀಕಾಕಾರರ ನಂಬಿಕೆ ಇರಬೇಕು. ಅರಿತು ಟೀಕಿಸಿದರೆ ಅದಕ್ಕೆ ಅರ್ಥವೂ ಉಂಟು ಬೆಲೆಯೂ ಉಂಟು. ಇಂತಹ ಟೀಕಾಕಾರರನ್ನು ಪರಿಗಣಿಸದೆ ಆನೆ ನಡೆದದ್ದೇ ದಾರಿ ಎಂಬ ರೀತಿಯಲ್ಲಿ ಸಾಗುವುದೇ ನಿಜವಾದ ಗುರಿ ಮುಟ್ಟುವ ಕಾಯಕ.
ಸನಾತನ ಧರ್ಮ ನಿಂದನೆಯೇ ಸ್ವಯಂಘೋಷಿತ ನವ ಪ್ರಗತಿಪರರ ಪಂಚಾಂಗವಾಗುತ್ತಿರುವ ಕಾಲದಲ್ಲಿ ಬ್ರಾಹ್ಮಣರ ಸಮ್ಮೇಳನ ಅಧ್ಯಯನ ಹಾಗೂ ಅಧ್ಯಾಪನದ ಮಾರ್ಗದ ಮೂಲಕ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಧರ್ಮದ ಪ್ರಸ್ತುತತೆಯ ವಿವಿಧ ಆಯಾಮಗಳ ಸಂವಾ ದಕ್ಕೆ ವೇದಿಕೆಯಾದದ್ದು ನಿಜಕ್ಕೂ ಇಡೀ ಬ್ರಾಹ್ಮಣ ಸಮುದಾಯ ಹೆಮ್ಮೆ ಪಡಬೇಕಾದ, ಅಭಿಮಾನದಿಂದ ಸಂತೋಷಪಡಬೇಕಾದ ಹಾಗೆ ಇಡೀ ಸಮಾಜಕ್ಕೆ ಹೊಸ ಬೆಳಕನ್ನು ತೋರಿಸುವಂತಾಗಿರುವುದು ಒಂದು ದೊಡ್ಡ ಸಾಧನೆ.
ಸಮ್ಮೇಳನಗಳು ಹೊಸದಲ್ಲ. ಬ್ರಾಹ್ಮಣರ ಸಮ್ಮೇಳನವೂ ಇದೇ ಮೊದಲಲ್ಲ. ಆದರೆ, ಈ ಬಾರಿಯ ವಿಶ್ವಾಮಿತ್ರ ನಾಮಾಂಕಿತ ಸಮ್ಮೇಳನ ಕಣ್ಮನ ಸೆಳೆಯುವುದು ಅದರ ಅಚ್ಚುಕಟ್ಟುತನ, ಅದರ ಭವ್ಯತೆ, ಧರ್ಮಗುರುಗಳ ಘನ ಉಪಸ್ಥಿತಿಯಿಂದಾಗಿ ದೈವೀಕ ಕಳೆ, ವಿದ್ವಾಂಸರ ಪಾಲ್ಗೊಳ್ಳುವಿಕೆಯಿಂದಾಗಿ ಜ್ಞಾನದಾಸೋಹದ ಜೊತೆಗೆ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಕೇವಲ ಕನ್ನಡ ನಾಡಿನಿಂದ ಮಾತ್ರವಲ್ಲ ನೆರೆ ರಾಜ್ಯಗಳಿಂದಲೂ ಆಗಮಿಸಿರುವ ವಿಪ್ರ ಬಂಧುಗಳ ಹಾಜರಿಯಿಂದಾಗಿ ಈ ಬಾರಿಯ ಸಮ್ಮೇಳನಕ್ಕೆ ಒಂದು ರೀತಿಯಲ್ಲಿ ಬಂಗಾರದ ಚೌಕಟ್ಟು ಸಿಕ್ಕಂತಾಗಿದೆ. ಇದರ ಎಲ್ಲದರ ಕೀರ್ತಿ ಅಖಿಲ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿಯವರ ಸಂಘಟನಾ ಚಾತುರ್ಯ ಹಾಗೂ ದೂರದೃಷ್ಟಿಯೊಂದಿಗೆ ಧರ್ಮ ರಾಜ್ಯವನ್ನು ಸಂಸ್ಥಾಪಿಸುವ ಮಹದಾಸೆ ಮುಖ್ಯ ಕಾರಣ. ಇದಕ್ಕಾಗಿ ಶ್ರೀ ಹಾರನಹಳ್ಳಿಯವರು ಹಾಗೂ ಅವರ ಇಡೀ ತಂಡ ಅಭಿನಂದನೆಗೆ ಅರ್ಹರು.
ಬ್ರಾಹ್ಮಣ ಸಮಾಜಕ್ಕೆ ಸಂಘಟನೆಯ ಅಗತ್ಯವಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ. ಬಹುಶಃ ಸಂಸ್ಕಾರ ಅಕ್ಷರವಂತಿಕೆಯ ಮೂಲಕ ಸ್ವಾವಲಂಬನೆ ಸಾಧಿಸಿಕೊಂಡಿರುವುದು ಇಂತಹ ಮಾತಿಗೆ ಕಾರಣವಿರಬೇಕು. ಆದರೆ, ರೂಪಾಂತರಗೊಳ್ಳುತ್ತಿರುವ ಈಗಿನ ಕಾಲ ಘಟ್ಟದಲ್ಲಿ ನೆಲೆಯನ್ನು ಉಳಿಸಿಕೊಂಡು ಮುನ್ನಡೆಯಲು ಪರಸ್ಪರ ಸೌಹಾರ್ದತೆ ಹಾಗೂ ಸಹಕಾರ ಅತ್ಯಗತ್ಯ. ಧರ್ಮಾಚರಣೆ ಮನೆಯಿಂದಲೇ ಆರಂಭವಾಗಬೇಕು ಎಂಬ ಮಾತಿನಂತೆ ಬ್ರಾಹ್ಮಣ ಸಮುದಾಯ ಸಂಘಟನೆಯ ಹಾದಿಗೆ ಮುಖ ಮಾಡಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಶಿಕ್ಷಣವಿದ್ದರೆ ಹಸಿವು ಕಾಡಲಾರದು ಎಂಬ ಮಾತು ಈಗ ಸವಕಲು. ಏಕೆಂದರೆ, ಶಿಕ್ಷಣವಿರುವ ಯುವಜನತೆ ಹಸಿವಿನ ಮಡಿಲಿಗೆ ಬೀಳುತ್ತಿರುವುದು ನಮ್ಮ ಕಣ್ಣೆದುರಿಗೇ ಇದೆ. ಇಂತಹ ಹತಭಾಗ್ಯರಿಗೆ ಹೊಸ ಬೆಳಕನ್ನು ನೀಡುವುದು ಸಮುದಾಯದ ಕರ್ತವ್ಯ. ಹೀಗಾಗಿಯೇ ಸಂಘಟನೆ ಅನಿವಾರ್ಯ ಅಗತ್ಯ.
ಟೀಕೆ ಟಿಪ್ಪಣಿಗಳು ಏನೇ ಇರಲಿ, ಜಾತಿ ಧರ್ಮವನ್ನು ಮೀರಿ ನಿಲ್ಲುವುದು ಅಸಾಧ್ಯ. ಔದ್ಯಮಿಕ ಕ್ಷೇತ್ರದಿಂದ ಹಿಡಿದು ರಾಜಕಾರಣದವರೆಗೆ ಎಲ್ಲೆಲ್ಲೂ ಪೈಪೋಟಿ ಹಾಗೂ ನೂಕು ನುಗ್ಗಲಿನ ವಾತಾವರಣವೇ ಕಂಡುಬರುತ್ತಿರುವ ಸಂದರ್ಭದಲ್ಲಿ ಯೋಗ್ಯತೆ ಆಧಾರದ ಮೇಲೆ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಸ್ಪಷ್ಟ ಮಾತುಗಳಲ್ಲಿ ಹೇಳಬೇಕೆಂದರೆ ಇಂತಹ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದೇ ಯೋಗ. ಈಗಿನ ಕಾಲದಲ್ಲಿ ಇದು ಕೇವಲ ಸ್ವಯಾರ್ಜಿತವಾಗದು-ಪಿತ್ರಾರ್ಜಿತವೂ ಆಗಲಾರದು. ಸಮುದಾಯದ ಸಹಕಾರದ ಮೂಲಕ ಆರ್ಜಿತವಾಗುವ ಈ ಅವಕಾಶಗಳು ಹೆಚ್ಚಾದಷ್ಟೂ ಬ್ರಾಹ್ಮಣ ಸಮುದಾಯದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿ ಸಮಗ್ರವಾಗಿ ಆರೋಗ್ಯಕರ ಸಮಾಜದ ಬಲವರ್ಧನೆಯ ನಾಯಕತ್ವ ವಹಿಸುವುದು ಖಂಡಿತ.
ಬದಲಾದ ಸಾಮಾಜಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬ್ರಾಹ್ಮಣರು ಸೇರಿದಂತೆ ಸಾವಿರಾರು ವರ್ಷಗಳ ಅಕ್ಷರವಂತಿಕೆ ಇತಿಹಾಸವಿರುವ ವರ್ಗದ ಜನರ ಜವಾಬ್ದಾರಿಯೇ ಹೆಚ್ಚು. ಜವಾಬ್ದಾರಿಯೇ ಕರ್ತವ್ಯವಾಗಿ ಮಾರ್ಪಾಡಾಗಬೇಕಾಗಿರುವುದು ಈಗಿನ ಅಗತ್ಯ. ಇಂತಹ ಹಿನ್ನೆಲೆಯ ವರ್ಗದವರು ಸಮಾಜದ ಉಳಿದ ವರ್ಗಗಳ ಕಡೆ ಔದಾರ್ಯದ ದೃಷ್ಟಿಕೋನ ಕಾರ್ಯರೂಪಕ್ಕೆ ತರುವುದೇ ಮಾರ್ಪಾಟಾಗುವ ಜವಾಬ್ದಾರಿಯ ಮುಖ. ಇದಕ್ಕೆ ಸಂವಾದಿಯಾಗಿ ಉಳಿದ ವರ್ಗದವರು ಕೂಡಾ ಔದಾರ್ಯದ ದೃಷ್ಟಿಕೋನಕ್ಕೆ ಪೂರಕವಾಗಿ ಸ್ಪಂದಿಸಿ ಸಂವೇದನಾಶೀಲ ಸಮಾಜದ ನಿರ್ಮಾಣದ ಮೂಲಕ ಭಾರತದ ಸರ್ವಾಂಗೀಣ ಶಾಂತಿ ಹಾಗೂ ಸಮೃದ್ಧಿಯ ವಾತಾವರಣದ ನಾಂದಿಗೆ ಹೆಜ್ಜೆ ಹಾಕುವುದು ಕಾಲದ ಅಗತ್ಯ. ಸಮ್ಮೇಳನಗಳು ಯಾವುದೇ ಸ್ವರೂಪದಲ್ಲಿರಲಿ ಎಲ್ಲರ ಗುರಿಯೂ ಕೂಡಾ ಇದೇ ಆದಾಗ ಲವಲವಿಕೆಯ ವಾತಾವರಣ ಸೃಷ್ಟಿಯಾಗುವ ಕಾಲ ದೂರವಿರಲಾರದು.
ಬ್ರಾಹ್ಮಣ ಎಂದು ಹೇಳಿಕೊಳ್ಳಲು ಸಂಕೋಚ ಬೇಡ. ಹಾಗೆಯೇ ಬ್ರಾಹ್ಮಣ್ಯವೇ ಸರ್ವಶ್ರೇಷ್ಠ ಎಂಬ ಸಂಕುಚಿತ ಭಾವನೆಯೂ ಬೇಡ. ನಾವು ಬ್ರಾಹ್ಮಣ್ಯವನ್ನು ಬಿಟ್ಟರೂ ನಮ್ಮನ್ನು ಬ್ರಾಹ್ಮಣ್ಯ ಎಂದೆಂದಿಗೂ ಬಿಡುವುದಿಲ್ಲ ಎಂಬ ಮಾತು ಲೋಕಪ್ರಸಿದ್ಧ. ಈಗಿನ ಕಾಲಕ್ಕೆ ಹೆಚ್ಚು ಹೊಂದುವಂತದ್ದು. ಎಲ್ಲಾ ಜಾತಿ ವರ್ಗಗಳ ಜನರೊಡನೆ ಬೆರೆತು ಒಂದಾಗಿ ಮೊದಲು ಕನ್ನಡಿಗರಾಗಿ ನಂತರ ಭಾರತೀಯರಾಗಿ ರೂಪುಗೊಳ್ಳುವ ಮನಸ್ಥಿತಿ ಪಡೆಯುವುದೇ ನಿಜವಾದ ಬ್ರಾಹ್ಮಣ್ಯದ ಧನ್ಯತಾ ಭಾವ. ಉಜ್ವಲ ರಾಷ್ಟçಭಕ್ತಿ, ರಾಷ್ಟçಪ್ರೇಮ ಹಾಗೂ ಸಾಂವಿಧಾನಿಕ ನಿಷ್ಠೆ ಎಂಬುದರ ಸಾಪೇಕ್ಷ ಅರ್ಥವೇ ಇದು.
ಈ ಹಿನ್ನೆಲೆಯಲ್ಲಿ ಬ್ರಾಹ್ಮಣರ ಜವಾಬ್ದಾರಿ ಹಾಗೂ ಕರ್ತವ್ಯಗಳು ಹೆಚ್ಚಾಗಿರುವ ಅಂಶವನ್ನು ಮನದಟ್ಟು ಮಾಡಿಕೊಂಡು ಕೇವಲ ರೂಪದರ್ಶಿಗಳಾಗುವ ಬದಲು ಮಾರ್ಗದರ್ಶಿಗಳಾಗುವ ದಾರಿಯಲ್ಲಿ ಸಾಗುವುದೇ ಮುಂದಿರುವ ಛಲದ ಸಂಕಲ್ಪಶೀಲ ವಿಶ್ರಾಮಿತ್ರ ಬ್ರಾಹ್ಮಣ ಮಹಾಸಮ್ಮೇಳನ ಬ್ರಾಹ್ಮಣರಿಗೆ ಏಕತೆ, ಸಂಘಟನೆ ಹಾಗೂ ಕೌಶಲ್ಯದ ಮುಂದಿರುವ ಅಗ್ನಿಪರೀಕ್ಷೆ ಎಂಬ ಸಂದೇಶ.

Next Article