For the best experience, open
https://m.samyuktakarnataka.in
on your mobile browser.

ನೇಣುಗಂಬದ ನೆರಳಲ್ಲಿ ನಿಮಿಷಾ

04:00 AM Jan 22, 2025 IST | Samyukta Karnataka
ನೇಣುಗಂಬದ ನೆರಳಲ್ಲಿ ನಿಮಿಷಾ

ಸೌದಿ ಅರೇಬಿಯಾ ಸಮೀಪದ ಯೆಮನ್ ದೇಶದ ಕಾರಾಗೃಹದಲ್ಲಿರುವ ಭಾರತದ ಕೇರಳ ಮೂಲದ ನರ್ಸ್ ನಿಮಿಷಾಪ್ರಿಯಾ ಮುಂದಿರುವುದೀಗ ನೇಣಿನ ಕುಣಿಕೆ! ಯೆಮನ್ ದೇಶದ ಪ್ರಜೆಯ ಹತ್ಯೆ ಪ್ರಕರಣದಲ್ಲಿ ಇದೇ ಜನವರಿ ತಿಂಗಳೊಳಗೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಈಕೆಯ ದುರಂತ ಕಥೆ ಇಲ್ಲಿಂದ ತೆರೆದುಕೊಳ್ಳುತ್ತದೆ…
ಇರುವುದು ಸ್ವಲ್ಪವೇ ಸಮಯ; ಸಮಸ್ಯೆಗಳು ಜಟಿಲ… ಹೀಗಿದ್ದರೂ ಮಗಳನ್ನು ಹೇಗಾದರೂ ಪಾರು ಮಾಡಬೇಕೆಂದು ನಿಮಿಷಾಳ ತಾಯಿ ಪ್ರೇಮಾಕುಮಾರಿ ಇಳಿವಯಸ್ಸನ್ನೂ ಲೆಕ್ಕಿಸದೆ ಯೆಮನ್ ದೇಶದಲ್ಲಿ ವರ್ಷದಿಂದಲೂ ಕಾನೂನು ಸಮರದ ಮುಂದೆ ಶಕ್ತಿಮೀರಿ ಹೋರಾಡುತ್ತಿದ್ದಾರೆ. ಇತ್ತ ಕೇರಳದಲ್ಲೂ ಎನ್‌ಜಿಓ, ಸಂಘ ಸಂಸ್ಥೆಗಳಿಂದ, ಸಾರ್ವಜನಿಕರಿಂದ ಸೇವ್ ನಿಮಿಷಾ' ಅಭಿಯಾನ ಆರಂಭವಾಗಿದ್ದು, ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಿದೆ. ವಿದೇಶಾಂಗ ಸಚಿವಾಲಯವೂ ಈಕೆ ಕುಟುಂಬಕ್ಕೆ ತನ್ನಿಂದ ಆಗಬಹುದಾದ ಎಲ್ಲ ನೆರವು ನೀಡಲು ಕ್ರಮ ಕೈಗೊಂಡಿದೆ. ಕೇರಳ ಮೂಲದ ಪಾಲಕ್ಕಾಡ್‌ನ ನಿಮಿಷಾಪ್ರಿಯಾ ೧೯೮೯ರಲ್ಲಿ ಜನಿಸಿದ್ದು, ಬಡತನದ ಕುಟುಂಬದವಳು. ಮೆರಿಟ್ ವಿದ್ಯಾರ್ಥಿನಿಯಾಗಿದ್ದ ಈಕೆಗೆ ನರ್ಸಿಂಗ್ ಅಭ್ಯಾಸ ಮಾಡಲು ಸ್ಥಳೀಯ ಚರ್ಚ್ ನೆರವಾಗಿತ್ತು. ೨೦೦೮ರಲ್ಲಿ ನರ್ಸಿಂಗ್ ಉದ್ಯೋಗ ಸಿಕ್ಕ ಸಂಭ್ರಮದಲ್ಲಿ ಯೆಮನ್ ದೇಶಕ್ಕೆ ಬಂದ ನಿಮಿಷಾಗೆ ಆ ದೇಶ ತನ್ನ ಪಾಲಿಗೆ ಯಮಲೋಕವನ್ನೇ ಸೃಷ್ಟಿಸಬಹುದೆಂಬ ಊಹೆಯೂ ಇದ್ದೀರಲಿಲ್ಲ. ಪರಿಸ್ಥಿತಿಗೆ ಸಿಲುಕಿ ೨೦೧೭ರಿಂದ ಅಲ್ಲಿಯ ಸನಾ ನಗರದ ಕಾರಾಗೃಹದಲ್ಲಿ ಬಂಧಿಯಾಗಿದ್ದಾಳೆ. ಅಂದಿನಿಂದ ಏಳು ವರ್ಷಗಳ ಕಾನೂನು ಹೋರಾಟ ಸಾಗಿದೆ... ೨೦೧೧ರಲ್ಲಿ ಕೇರಳದಲ್ಲಿ ಥಾಮಸ್ ಎಂಬುವರೊಂದಿಗೆ ವಿವಾಹವಾದ ನಿಮಿಷಾಳಿಗೆ ಹೆಣ್ಣುಮಗುವೂ ಇದೆ. ಯೆಮನ್ ದೇಶದಲ್ಲಿ ಎಲೆಕ್ಟಿçಷಿಯನ್ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಥಾಮಸ್ ಅವರಿಗೆ ಅಷ್ಟೇನೂ ಸಂಪಾದನೆ ಇರಲಿಲ್ಲವಾದ್ದರಿಂದ ಮಗಳೊಂದಿಗೆ ಕೇರಳದ ಪಾಲಕ್ಕಾಡ್‌ಗೆ ವಾಪಸ್ಸಾಗುತ್ತಾರೆ. ತನ್ನ ಕುಟುಂಬ, ಮಗಳ ಭವಿಷ್ಯದ ದೃಷ್ಟಿಯಿಂದ ನಿಮಿಷಾ ಯೆಮನ್ ದೇಶದಲ್ಲೇ ಕೆಲಸದಲ್ಲಿ ಮುಂದುವರಿಯುತ್ತಾಳೆ. ರಾಜಕೀಯ ದ್ವಂದ್ವಗಳಿಂದ ಆಂತರಿಕ ಯುದ್ಧ ಆರಂಭವಾಗಿದ್ದ ಸಂದರ್ಭ ರೆವ್ಯೂಲೇಷನ್ ಆಪರೇಷನ್ ರಹಾತ್ ಹೆಸರಿನಲ್ಲಿ ಸುಮಾರು ನಾಲ್ಕು ಸಾವಿರ ಮಂದಿ ಭಾರತೀಯ ಪ್ರಜೆಗಳನ್ನು ಭಾರತ ಸರ್ಕಾರ ಸ್ವದೇಶಕ್ಕೆ ಕರೆತಂದಿತ್ತು. ಇಂಥ ಕ್ಲಿಷ ಸಮಯದಲ್ಲಿ ನಿಮಿಷಾ ಅಲ್ಲಿಯೇ ಉಳಿಯಬೇಕಾಯಿತು. ಕಾರಣ, ಯೆಮನ್‌ನಲ್ಲಿ ಆಸ್ಪತ್ರೆ ತೆರೆಯಲು ಅದಾಗಲೇ ಲಕ್ಷಾಂತರ ಹಣವನ್ನು ವಿನಿಯೋಗಿಸಿದ್ದಳು. ಆದರೆ, ಅಲ್ಲಿ ಅನ್ಯ ದೇಶದವರಿಗೆ ಏನೇ ವ್ಯವಹಾರ ಮಾಡಬೇಕಾಗಿದ್ದರೂ ಯೆಮನ್ ದೇಶದ ಪ್ರಜೆಯ ಸಹಭಾಗಿತ್ವ ಬೇಕಾಗಿತ್ತು. ಆಗ ಪ್ರವೇಶ ಕೊಟ್ಟವನೇ ತಲಾಲ್ ಮೆಹದಿ. ೨೦೧೫ರಲ್ಲಿ ೧೪ ಹಾಸಿಗೆಗಳುಳ್ಳ ಆಸ್ಪತ್ರೆ ತೆರೆದಿದ್ದು, ಇಲ್ಲಿಂದಲೇ ನಿಮಿಷಾಳ ದುರಾದೃಷ್ಟದ ದಿನಗಳು ಆರಂಭವಾಯಿತು... ನಿಮಿಷಾಪ್ರಿಯಾ ಮಾಡಿಕೊಂಡಿದ್ದ ಒಪ್ಪಂದ ಪತ್ರ, ಮಹತ್ವದ ದಾಖಲೆಗಳು ಎಲ್ಲವೂ ಸಹಭಾಗಿತ್ವ ನೀಡಿದ್ದ ಮೆಹದಿ ಬಳಿ ಇತ್ತು. ಕ್ರಮೇಣ ಆಸ್ಪತ್ರೆಯಿಂದ ಬರುತ್ತಿದ್ದ ಪೂರ್ಣ ಆದಾಯವನ್ನೂ ಪಡೆಯಲು ಮುಂದಾದ. ವಿರೋಧಿಸಿದ ನಿಮಿಷಾಗೆ ದೈಹಿಕ, ಮಾನಸಿಕ ಕಿರುಕುಳ ಹೆಚ್ಚಾಯಿತು. ಸಹಿಸಲಾರದೆ ನಿಮಿಷಾ ತನ್ನನ್ನು ಭಾರತಕ್ಕೆ ಕಳುಹಿಸುವಂತೆ ಒತ್ತಾಯಿಸಿದ್ದಳು. ಅದಕ್ಕೂ ಒಪ್ಪದ ಮೆಹದಿ ನಿಮಿಷಾಪ್ರಿಯಾ ವಿವಾಹ ಭಾವಚಿತ್ರವನ್ನೇ ಫೋರ್ಜರಿ ಮಾಡಿ ತಾನೇ ನಿಮಿಷಾಪ್ರಿಯಾ ಪತಿ ಎಂದಾಗ ಹೆದರಿದ ನಿಮಿಷಾ ಅಲ್ಲಿಯ ಪೊಲೀಸ್ ಠಾಣೆಯಲ್ಲಿ ಮೆಹದಿ ವಿರುದ್ಧ ದೂರು ಸಲ್ಲಿಸಿದ್ದಳು. ಮೆಹದಿಯೂ ಮರು ದೂರು ದಾಖಲಿಸಿದ್ದ. ಪೊಲೀಸರು ನಿಮಿಷಾಳನ್ನೇ ಬಂಧಿಸಿ ಆರು ದಿನಗಳು ಸೆರೆಯಲ್ಲಿರಿಸಿದ್ದರು. ನಿಮಿಷಾಳ ವಿಚಾರವರಿತ ಅಲ್ಲಿಯ ಜೈಲರ್ ಮೆಹದಿಗೆ ಪ್ರಜ್ಞೆ ತಪ್ಪುವ ಇಂಜೆಕ್ಷನ್ ನೀಡಿ, ನಿನ್ನ ಪಾಸ್‌ಪೋರ್ಟ್ ತೆಗೆದುಕೊಂಡು ಸೌದಿ ಅರೇಬಿಯಾ ಮುಖಾಂತರ ಭಾರತಕ್ಕೆ ಓಡಿಹೋಗು... ಅದೊಂದೇ ನಿನಗಿರುವ ದಾರಿ ಎಂದಿದ್ದರು. ಜೈಲಿನಿಂದ ಬಿಡುಗಡೆಯಾದ ನಿಮಿಷಾ ಮೆಹದಿಗೆ ಪ್ರಜ್ಞೆ ತಪ್ಪಲು ಸೆಡೆಟಿವ್ ಇಂಜೆಕ್ಟ್ ಮಾಡಿದ್ದಳು. ಪ್ರಮಾದವಶಾತ್ ಸ್ಪಲ್ಪ ಓವರ್ ಡೋಸ್ ಆಗಿ ಮೆಹದಿ ಮೃತಪಟ್ಟ. ಕಂಗೆಟ್ಟ ನಿಮಿಷಾ ಅಲ್ಲಿಯ ತನ್ನ ಆಪ್ತ ಸ್ನೇಹಿತೆ ಅನಾನ್ ಸಲಹೆ ಕೇಳಿದ್ದಳು. ಮೆಹದಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನೀರಿನ ತೊಟ್ಟಿಗೆ ಹಾಕಿದ ನಿಮಿಷಾ (ಅನಾನ್ ಸಹ ಸಹಕರಿಸಿದ್ದಾಗಿ ತಿಳಿದುಬಂದಿದೆ) ಅಲ್ಲಿಂದ ಸೌದಿ ಅರೇಬಿಯಾ ಗಡಿಗೆ ಬಂದಿದ್ದಳು. ಆಗಲೇ ಅಲ್ಲಿ ಅವಳ ಬಂಧನವಾಯಿತು. ಬಳಿಕ ಆಕೆಯನ್ನು ಯೆಮನ್ ಟ್ರಯಲ್ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಅಲ್ಲಿಂದ ಮರ್ಡರ್ ಟ್ರಯಲ್ ಆರಂಭವಾಯಿತು. ಕೊಲೆ ಮಾಡಿ ತಪ್ಪಿಸಿಕೊಂಡು ಓಡಿ ಹೋಗುವ ಅಪರಾಧ ಮೇರೆಗೆ ೨೦೧೭ರಲ್ಲಿ ಆಕೆಯನ್ನು ಕಾರಾಗೃಹದಲ್ಲಿಡಲಾಯಿತು. ಅರೇಬಿಕ್ ಭಾಷೆ ಸರಿಯಾಗಿ ತಿಳಿಯದ ನಿಮಿಷಾಗೆ ನ್ಯಾಯಾಲಯದಲ್ಲಿ ನ್ಯಾಯ ಕೇಳಲು ಕಷ್ಟವಾಯಿತು. ಕೊನೆಗೆ ಮರಣದಂಡನೆ ಶಿಕ್ಷೆಗೂ ಗುರಿಯಾಗಬೇಕಾಯಿತು. ಟ್ರಯಲ್‌ ಕೋರ್ಟ್ ನೀಡಿದ ತೀರ್ಪನ್ನೇ ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಯೆಮನ್ ದೇಶದ ಅಧ್ಯಕ್ಷರು ಕ್ಷಮಾದಾನಕ್ಕೆ ಸಹಿ ಹಾಕಿದರೆ ನಿಮಿಷಾ ಮರಣದಂಡನೆಯಿಂದ ಪಾರಾಗಬಹುದೆಂಬ ಪ್ರಯತ್ನವೂ ವಿಫಲವಾಯಿತು. ಆದರೆ, ಶಿಕ್ಷೆಯಿಂದ ಪಾರಾಗಲು ಕಡೆಯ ಅವಕಾಶವೊಂದು ಇತ್ತು. ಅದೇನೆಂದರೆ ಇಸ್ಲಾಂ ಷರಿಯತ್ ಕಾನೂನು ಅನುಸಾರದಿಯಾ'(ಬ್ಲಡ್‌ಮನಿ) ಅನ್ನು ಹತ್ಯೆಗೊಳಗಾದ ಕುಟುಂಬದವರಿಗೆ ಪರಿಹಾರವಾಗಿ ನೀಡುವುದು, ಅವರು ಸ್ವೀಕರಿಸಿ ಕ್ಷಮಾದಾನಕ್ಕೆ ಒಪ್ಪಿದರೆ ನಿಮಿಷಾಪ್ರಿಯಾ ಮರಣದಂಡನೆ ಶಿಕ್ಷೆಯಿಂದ ಪಾರಾಗಬಹುದು ಎಂಬುದಾಗಿತ್ತು. ಮಗಳ ರಕ್ಷಣೆಗಾಗಿ ದೆಹಲಿ ಹೈಕೋರ್ಟ್ ಅನುಮತಿಯೂ ಪಡೆದು ತಾಯಿ ಪ್ರೇಮಾಕುಮಾರಿ ೨೦೨೪ರ ಏಪ್ರಿಲ್‌ನಲ್ಲಿ ಯೆಮನ್‌ಗೆ ಬರುತ್ತಾರೆ. ಈ ಕುಟುಂಬದ ಲಾಯರ್ ಸುಭಾಷ್ ಚಂದ್ರನ್, ಇವರಿಗೆ ಯೆಮನ್ ದೇಶದಲ್ಲಿ ಎಲ್ಲ ರೀತಿಯಿಂದಲೂ ನೆರವಾಗಲು ನಿಂತವರು ತಮಿಳುನಾಡು ಮೂಲದ ಶಾಮ್ಯುಯಲ್ ಜೆರೋ. ಇವರು ಹಲವು ವರ್ಷಗಳಿಂದ ಯೆಮನ್‌ನಲ್ಲಿದ್ದು, ಅಲ್ಲಿಯೇ ಉದ್ಯೋಗಿಯಾಗಿದ್ದಾರೆ. ಇವರೇ ನಿಮಿಷಾಪ್ರಿಯಾ ಪ್ರಕರಣವನ್ನು ಬೆಳಕಿಗೆ ತಂದವರು.
ಇಲ್ಲಿ ಯಾರು ಅಪರಾಧಿ, ನಿರ್ದೋಷಿ ಎಂಬ `ಸತ್ಯ' ಸಂಬಂಧಪಟ್ಟವರಿಗೆ ಮಾತ್ರ ತಿಳಿದಿದೆ. ಆದರೆ, ಅನ್ಯ ದೇಶಕ್ಕೆ ಹೋದಾಗ ಅಲ್ಲಿಯ ಕಾನೂನು ಮೀರಿದರೆ ಏನೆಲ್ಲಾ ಸಮಸ್ಯೆಗಳು, ಸಂಕಷ್ಟಗಳನ್ನು ಎದುರಿಸಬೇಕಾಗಬಹುದು ಎಂಬುದಕ್ಕೆ ಈ ಪ್ರಕರಣ ಕನ್ನಡಿ ಹಿಡಿಯುತ್ತದೆ.