For the best experience, open
https://m.samyuktakarnataka.in
on your mobile browser.

ಧರ್ಮ ಎಂದರೇನು? ಧರ್ಮೋ ರಕ್ಷತಿ ರಕ್ಷಿತಃ…

05:02 AM Sep 26, 2024 IST | Samyukta Karnataka
ಧರ್ಮ ಎಂದರೇನು  ಧರ್ಮೋ ರಕ್ಷತಿ ರಕ್ಷಿತಃ…

ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎನ್ನುವ ನಾಣ್ನುಡಿ ಪ್ರಚಲಿತವಾಗಿದ್ದರೂ, ಇದರಲ್ಲಿ ಧರ್ಮ ಎಂದರೆ ಏನು? ಯಾವುದು ಧರ್ಮ? ನಾವು ರಕ್ಷಣೆ ಮಾಡಬೇಕಾಗಿದ್ದು ಏನು? ಎಂಬುದನ್ನು ತಿಳಿಯುವುದು ಅವಶ್ಯ.
ನಾವು ಮಾಡುವ ಒಳ್ಳೆಯ ಕೆಲಸ ಮತ್ತು ನಂಬಿಕೆ, ಪ್ರೀತಿ, ಅಹಿಂಸೆ, ವಿಶ್ವಾಸ ಒಳ್ಳೆಯ ಸ್ವಭಾವ ಜೊತೆಗೆ ಮಾನವನ ಬದುಕಿಗೆ ಪೂರಕವಾದ ಮತ್ತು ಸಮಾಜದ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವ ಆಚರಣೆಗಳನ್ನು ಪಾಲಿಸುವುದನ್ನು ಧರ್ಮ ಎನ್ನುತ್ತೇವೆ..
ಧರ್ಮ ಎಂಬ ಶಬ್ದದ ಅರ್ಥ ಕಾಲಾಂತರದಲ್ಲಿ ಬದಲಾಗಿದೆ. ಧರ್ಮ ಶಬ್ದದ ಅರ್ಥವನ್ನು ಹಲವರು ಜಾತಿಯಾಗಿ ಅರ್ಥೈಸುತ್ತಾರೆ. ಆದರೆ ಅನಾದಿ ಕಾಲದಿಂದ ಉಪಯೋಗಿಸಲ್ಪಡುವ ಈ ಧರ್ಮ ಶಬ್ದದ ನಿಜ ಅರ್ಥ ಜಾತಿಯಲ್ಲ. ಧರ್ಮ ಎಂಬುದು ಒಂದು ನೀತಿಸಂಹಿತೆ. ಮನುಷ್ಯ ತಾನು ಸಮಾಜಜೀವಿಯಾದಾಗ, ಸಹಜೀವನ ನಡೆಸುವದು ಸರಿಯೆಂಬ ತಿಳಿವಳಿಕೆ ಬಂದಾಗ, ಆತನು ತನಗೆ ತಾನೇ ಹಾಕಿಕೊಂಡ
ನೀತಿಸಂಹಿತೆ ಅಥವಾ ಶಾಸನ. ಮನುಷ್ಯ ಉತ್ತಮವಾಗಿ, ಒಳ್ಳೆಯ ರೀತಿಯಲ್ಲಿ ಜೀವಿಸಲು ಒಂದು ಚೌಕಟ್ಟು ಹಾಕಿ ಸಮಾಜದಲ್ಲಿ ಸಹ ಜೀವನ ಬೆಳೆಸಲು ಸರಿ ತಪ್ಪುಗಳ ಮಾನದಂಡವನ್ನು ಮಾಡಿಕೊಂಡು, ಮಾನವನು ಆಯಾ ಪಾತ್ರಗಳಲ್ಲಿ ಮಾಡಬೇಕಾದ ಕರ್ತವ್ಯಗಳೇನು ಎಂಬ ವಿವರಗಳ ರೂಪರೇಷೆಯೇ ಧರ್ಮ. ಅದೇ ಧರ್ಮದ ಮೂಲ. ಇಲ್ಲಿಯೇ ಧರ್ಮದ ಜನನ.
ಉದಾಹರಣೆಗೆ ರಾಜಧರ್ಮ ಎಂದರೆ ಒಂದು ರಾಜ್ಯದ ರಾಜನಾದವನು ತನ್ನ ರಾಜ್ಯಭಾರ ಮಾಡುವಾಗ ಪಾಲಿಸಬೇಕಾದ ನೀತಿ ನಿಯಮಗಳೆ ರಾಜನಿಗೆ ದಾರಿದೀಪ. ಪಿತೃಧರ್ಮ ಎಂದರೆ ತಂದೆಯಾದವನು ತನ್ನ ಸಂತಾನಗಳ, ಕುಲದ ಒಳಿತಿಗಾಗಿ ಮಾಡಬೇಕಾದ ಕರ್ತವ್ಯಗಳು. ಹಾಗೆಯೇ ಪತಿಧರ್ಮ, ಪತ್ನಿಧರ್ಮ, ಪುತ್ರಧರ್ಮ, ಕ್ಷತ್ರಿಯ ಧರ್ಮ, ಮಾನವ ಧರ್ಮ ಇತ್ಯಾದಿ..
ಧರ್ಮವು ಕರ್ತವ್ಯ, ಹಕ್ಕುಗಳು, ಪಾತ್ರ, ವೃತ್ತಿ, ಧರ್ಮ, ಪದ್ಧತಿಗಳು ಮತ್ತು ಎಲ್ಲಾ ನಡವಳಿಕೆಗಳನ್ನು ಸೂಕ್ತ, ಸರಿಯಾದ ಅಥವಾ ನೈತಿಕವಾಗಿ ನೇರವಾಗಿ ಪರಿಗಣಿಸುವಂತಹ ವಿಚಾರಗಳನ್ನು ತಿಳಿಸಿಕೊಡುತ್ತದೆ. ಧರ್ಮದಿಂದ ಜೀವನ ನಡೆಸುವವನು ಎಂದಿಗೂ ಇನ್ನೊಬ್ಬರಿಗೆ ಕೆಡಕನ್ನು ಬಯಸುವುದಿಲ್ಲ.
ಪ್ರತಿಯೊಬ್ಬ ವ್ಯಕ್ತಿಯು ತಾನು ಇರುವ ಕಾಲ ದೇಶ ಸ್ಥಿತಿಯಲ್ಲಿ ಇರುವ ನಿಯಮಗಳನ್ನು ಪಾಲಿಸಿ, ಎಲ್ಲರೊಂದಿಗೆ ಬೆರೆತು, ತಾನು ಬದುಕಿ, ಉಳಿದವರನ್ನು ಬದುಕಲು ಸಹಕಾರಿಯಾಗಿರುವುದೇ ಮಾನವ ಧರ್ಮ. ಯಾರು ಈ ಕೆಲವು ಮೂಲಭೂತ ಕರ್ತವ್ಯಗಳನ್ನು ಮರೆತು, ಸ್ವಾರ್ಥಿಯಾಗಿ ಜೀವಿಸುತ್ತಾನೋ ಅವನನ್ನು ಅಧರ್ಮಿ ಎನ್ನಬಹುದು. ಹಾಗೆಯೇ ಸಮಾಜದ ನೀತಿ ನಿಯಮಗಳ ವಿರುದ್ಧವಾಗಿ ಕೃತ್ಯವೆಸಗುವವನನ್ನು ಅಂದರೆ ತನ್ನ ಕುಟುಂಬದ ಕ್ಷೇಮವನ್ನು ನೋಡಿಕೊಳ್ಳದ- ಮೋಸಮಾಡುವ, ಕಳ್ಳತನ, ಹಗೆತನ ಮಾಡುವ, ಇನ್ನೊಬ್ಬರಿಗೆ ಕೆಡಕು ಬಯಸುವವ ಅಧರ್ಮಿಯಾಗುತ್ತಾನೆ.
ಒಟ್ಟಿನಲ್ಲಿ ಧರ್ಮದ ರಕ್ಷಣೆ ಎಂದರೆ, ಉತ್ತಮವಾದ ನೀತಿಸಂಹಿತೆಯನ್ನು, ಒಳಿತನ್ನು, ಒಳ್ಳೆಯ ಸ್ವಸ್ಥ ಜೀವ, ಸಹಬಾಳ್ವೆ, ಶಾಂತಿಯನ್ನು ರಕ್ಷಿಸಿದರೆ, ಅವು ನಮ್ಮ ಜೀವನವನ್ನು ಉತ್ತಮಗೊಳಿಸುತ್ತವೆ.
ಭೂಮಿಯಲ್ಲಿ ಹುಟ್ಟುವ ಪ್ರತಿಯೊಬ್ಬ ಮಾನವನು ತಮ್ಮ ತಮ್ಮ ಧರ್ಮಾಚರಣೆ, ಕರ್ಮಾಚರಣೆಯನ್ನು ಇನ್ನೊಬ್ಬರಿಗೆ ತೊಂದರೆಯಾಗದಂತೆ ಮಾಡುತ್ತಾನೋ ಅವನೇ ಶ್ರೇಷ್ಠ. ಜಾತಿ, ಕುಲ, ಮತ, ಮಠ ಇವೆಲ್ಲವೂ ಮೀರಿ ಮನುಕುಲಕ್ಕೆ ಒಳಿತು ಮಾಡುವ ಸಲುವಾಗಿ, ಕಲಿಯುಗದಲ್ಲಿ ಕಲ್ಪವೃಕ್ಷ ಕಾಮಧೇನು, ಬೇಡಿದ ವರಗಳನ್ನು ನೀಡುವ ಶ್ರೀರಾಘವೇಂದ್ರಸ್ವಾಮಿಗಳು ಬಂದು ಮಂತ್ರಾಲಯದಲ್ಲಿ ನೆಲೆಸಿದ್ದಾರೆ. ಯಾರು ಧರ್ಮದಿಂದ ಜೀವನ ನಡೆಸಿ, ಒಳ್ಳೆಯದನ್ನು ಬೇಡುತ್ತಾರೋ ಅವರ ಕಷ್ಟಗಳನ್ನು ಕಳೆದು, ಅಭೀಷ್ಟೆಗಳನ್ನೂ ನೆರವೇರಿಸುತ್ತಾರೆ.