For the best experience, open
https://m.samyuktakarnataka.in
on your mobile browser.

ಧರ್ಮ- ರಾಜಕಾರಣ ವಿಧಾನಸೌಧದ ಮುಂಬಾಗಿಲವರೆಗೆ….

06:00 AM Jul 04, 2024 IST | Samyukta Karnataka
ಧರ್ಮ  ರಾಜಕಾರಣ ವಿಧಾನಸೌಧದ ಮುಂಬಾಗಿಲವರೆಗೆ…

ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಿ...' ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದು ಮಠಾಧೀಶರು ಅಣತಿ ಹಾಗೂ ತೀರ್ಮಾನ ನೀಡುವಂತಾಯಿತು ! ರಾಜಕಾರಣ ಮತ್ತು ಧರ್ಮ ಎರಡೂ ಪ್ರತ್ಯೇಕ ಕ್ಷೇತ್ರಗಳು. ಇವೆರಡಕ್ಕೂ ಪ್ರತ್ಯೇಕ ಕಟ್ಟುಪಾಡುಗಳಿವೆ. ಕೆಂಪೇಗೌಡರ ೫೫೫ನೇ ಜನ್ಮದಿನೋತ್ಸವದ ವೇಳೆ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ಸಿದ್ದರಾಮಯ್ಯನವರೇ, ತಾವು ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ.ಶಿವಕುಮಾರ ಅವರಿಗೆ ಅನುಗ್ರಹಿಸಿ; ನೀವು ಈಗಾಗಲೇ ಈ ಹುದ್ದೆಯನ್ನು ಅನುಭವಿಸಿದ್ದೀರಿ... ಇನ್ನು ನೀವೇ ಡಿ.ಕೆ.ಶಿವಕುಮಾರ ಅವರಿಗೆ ಅಧಿಕಾರ ಬಿಟ್ಟುಕೊಡಿ ಎಂದು ಹೇಳಿರುವುದು ಮಠ ಮತ್ತು ಜಾತಿ ರಾಜಕಾರಣ ವಿಧಾನಸೌಧದ ಮೂರನೇ ಮಹಡಿಯನ್ನು ನಿಯಂತ್ರಿಸಲು ಹೊರಟಂತಾಯಿತೇ..?ಎಂಬ ವ್ಯಾಖ್ಯಾನ ಸಹಜ. ವಿಚಿತ್ರ ಎಂದರೆ ಇದೇ ವೇದಿಕೆಯಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಇಬ್ಬರೂ ಇದ್ದರು. ಆ ಕ್ಷಣದಲ್ಲಿ ಅವರಿಬ್ಬರೂ ಮೌನವಾಗಿದ್ದರು ! ಆದರೆ ರಾಜ್ಯ ರಾಜಕೀಯದಲ್ಲಿ ಸ್ವಾಮಿಗಳ ಮಾತು ಮಿಂಚು, ಅಷ್ಟೇ ಟೀಕೆಯನ್ನೂ ಹುಟ್ಟಿಸಿತು. ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದು ಆ ಪಕ್ಷದ ಶಾಸಕರ, ಬಹುತಮತದ ನಿರ್ಧಾರ. ಇತ್ತೀಚೆಗೆ ಹೈಕಮಾಂಡ್ ಕಪಿಮುಷ್ಠಿಯಲ್ಲಿ ಪಕ್ಷ ಹಾಗೂ ರಾಜಕಾರಣ ಸಿಲುಕಿರುವುದರಿಂದ ಈವರೆಗೂ ಆಯಾ ಪಕ್ಷಗಳ ಹೈಕಮಾಂಡೇ ಈ ನಿರ್ಧಾರ ಕೈಗೊಳ್ಳುತ್ತಿರುವುದು ವಿಧಿತ. ಆದರೆ ಈಗ ಮಠಾಧೀಶರೊಬ್ಬರು ನೀವು ಮುಖ್ಯಮಂತ್ರಿಗಳಾಗಿ ಅನುಭವಿಸಿದ್ದೀರಿ, ಮುಂದೆ ಇಂಥವರನ್ನು ಮುಖ್ಯಮಂತ್ರಿ ಮಾಡಿ ಎಂದು ಅಣತಿ ರೂಪದಲ್ಲಿ ಕೋರಿಕೊಳ್ಳುವುದಿದೆಯಲ್ಲ, ಇದು ಕರ್ನಾಟಕದ ರಾಜಕಾರಣದ ಇಂದಿನ ಅಣಕ ಮತ್ತು ದಾರುಣ. ನಿಜ. ರಾಜಕಾರಣ ಮತ್ತು ಧರ್ಮ ಇವೆರಡಕ್ಕೂ ಅವುಗಳದ್ದೇ ಆದ ಪಾವಿತ್ರö್ಯ, ಪ್ರತ್ಯೇಕ ಕಟ್ಟುಪಾಡುಗಳಿವೆ. ಇವೆರಡರ ನಡುವೆ ಲಕ್ಷ್ಮಣ ರೇಖೆ ಇದೆ. ಚೌಕಟ್ಟು ಮತ್ತು ಕಾರ್ಯಸೂಚಿ ಕೂಡ ಪ್ರತ್ಯೇಕವೇ. ಆದರೆ ಇತ್ತೀಚಿನ ದಶಕಗಳಲ್ಲಿ ಕರ್ನಾಟಕವಷ್ಟೇ ಅಲ್ಲ, ದೇಶದ ರಾಜಕಾರಣದಲ್ಲೂ ಕೂಡ ಜಾತಿ, ಧರ್ಮ ಮತ್ತು ರಾಜಕಾರಣ ಹೊಕ್ಕು ಬಳಕೆಯ, ಬಯಸಿ ಬಿಸಾಕುವ, ಬಿಸಾಕಿದ್ದನ್ನು ಮತ್ತೆ ಎತ್ತಿಕೊಳ್ಳುವ ದುಸ್ಥಿತಿ, ತಂತ್ರಗಾರಿಕೆ ನಡೆಯುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ಪರಸ್ಪರ ಹಸ್ತಕ್ಷೇಪ ನಡೆಯುತ್ತಿರುವುದರಿಂದಲೇ ಮತದಾರ ಮತ್ತು ಆತನ ಅಣತಿ ಬೆಪ್ಪುತಕ್ಕಡಿಯಂತಾಗುತ್ತಿದೆ. ಈಗಂತೂ ದೇಶದ ಹಲವೆಡೆ ಮಠಾಧೀಶರು, ಕಾವಿಧಾರಿಗಳು, ಧರ್ಮದ ಮುಖ್ಯಸ್ಥರು ಎನ್ನುವವರೇ ಸಂಸದರು, ಶಾಸಕರು, ಮಂತ್ರಿಗಳು, ಮುಖ್ಯಮಂತ್ರಿಗಳೂ (ಯೋಗಿ ಆದಿತ್ಯನಾಥ, ಹಿಂದೆ ಉಮಾ ಭಾರತಿ) ಆಗಿದ್ದಾರೆ. ಕರ್ನಾಟಕದಲ್ಲಿ ಮಠಾಧೀಶರು ರಾಜಕಾರಣಕ್ಕೆ, ವಿಧಾನಸಭೆಗೆ ಪ್ರವೇಶಿಸುವ ಉತ್ಸಾಹ, ಹವಣಿಕೆ ನಡೆದರೂ ಸಾಧ್ಯವೇನಾಗಿಲ್ಲ. ಆದರೆ ಎರಡು ದಶಕದಿಂದ ಈಚೆಗಂತೂ ರಾಜ್ಯ ರಾಜಕಾರಣವನ್ನು ಪರೋಕ್ಷವಾಗಿ ಮಠ-ಮಾನ್ಯಗಳೇ ನಿಯಂತ್ರಿಸುತ್ತಿರುವುದು, ಅದಕ್ಕೆ ರಾಜಕೀಯ ಪಕ್ಷಗಳು ತಲೆ ಬಾಗುತ್ತಿರುವುದು ವಿಪರ್ಯಾಸವೇ. ನಾಡಪ್ರಭು ಕೆಂಪೇಗೌಡ ಸಮಾರಂಭದಲ್ಲಿ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳ ಬಹಿರಂಗ ಆಶಯ ಅನಿರೀಕ್ಷಿತ ಎನ್ನಿಸಿದರೂ, ಅಷ್ಟೇ ಆತಂಕ ಹುಟ್ಟಿಸುವಂತದ್ದು. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಒಪ್ಪಿ ಅಪ್ಪಿಕೊಂಡಿರುವ ಈ ನಾಡಲ್ಲಿ ಸರ್ವ ಜಾತಿ ಜನಾಂಗಗಳ, ಧರ್ಮ ಸಮೂಹಗಳನ್ನು ಸಮನಾಗಿ ಕಾಣುವ ಪ್ರತಿಜ್ಞಾವಿಧಿ ಸ್ವೀಕರಿಸುವಾಗ, ಇಂಥವರನ್ನು ಮುಖ್ಯಮಂತ್ರಿ ಮಾಡಿ ಎಂದು ಹೊರಗಿನ ವ್ಯಕ್ತಿ ಅದೂ ಪ್ರಭಾವಿ ಮಠಾಧೀಶರು ಸೂಚಿಸಿದಾಗ, ರಾಜಕಾರಣ ನಿಂತಲ್ಲೇ ನಿಲ್ಲಲು ಹೇಗೆ ಸಾಧ್ಯ? ಇದರ ಹಿನ್ನೆಲೆ ಮುನ್ನೆಲೆ, ಆಗು ಹೋಗು, ತಂತ್ರಗಾರಿಕೆ ಎಲ್ಲವೂ ಈಗ ಚರ್ಚೆಗೆ ಆಸ್ಪದ. ಮಠಾಧೀಶರು ಮತ್ತು ರಾಜಕಾರಣಿಗಳ ಸಂಬಂಧ ಈಗಿನದ್ದೇನಲ್ಲ. ರಾಜಕೀಯದಲ್ಲಿ ಧರ್ಮ ಇರಬೇಕು ಎಂದು ಗಾಂಧೀಜಿ ಹೇಳಿದ್ದರು. ಈಗ ರಾಜಕೀಯದಲ್ಲಿ ಧರ್ಮ ರಾಜಕಾರಣ ನಡೆಯುತ್ತಿದೆ. ಧಾರ್ಮಿಕ ಸಂಸ್ಥೆಗಳಲ್ಲಿ ರಾಜಕಾರಣ ನಡೆಯುತ್ತಿದೆ. ಮಠಗಳು ರಾಜಕಾರಣಿಗಳ, ಉದ್ಯಮಿಗಳ, ಮತಬ್ಯಾಂಕ್ ಜೊತೆ ಸುರಕ್ಷಿತ ವ್ಯವಹಾರ ಕೇಂದ್ರಗಳೂ ಆಗಿವೆ. ಅವುಗಳ ನಡುವಿನ ಅಪವಿತ್ರ, ಅನೈತಿಕ ಸಂಬಂಧ ಪರಾಕಾಷ್ಠೆಯ ಹಂತ ತಲುಪಿದಂತಿದೆ. ಸ್ವಾಮಿಗಳು ರಾಜಕೀಯದಲ್ಲಿ ಆಸಕ್ತಿ ವಹಿಸಬಾರದು ಎಂದೇನಿಲ್ಲ. ಜಾತಿ ಮತದ ಗಡಿ ದಾಟಿ, ಸರ್ವ ಜನಾಂಗದ ಏಳಿಗೆಗೆ ತುಡಿದ ಮಠಾಧೀಶರು ನಮ್ಮ ನಾಡಿನಲ್ಲಿದ್ದಾರೆ. ವೈಯಕ್ತಿಕ ನಿಲುವು ಅದುಮಿಟ್ಟುಕೊಂಡು ಸರ್ವರನ್ನೂ ಸಮಾನವಾಗಿ ಕಂಡು- ಬೆಳೆಸಿದ ಕರ್ನಾಟಕದ ಮಠಗಳದ್ದು. ಶಿಕ್ಷಣ, ದಾಸೋಹ, ಅನ್ನ- ಆಹಾರ, ಆರೋಗ್ಯ ಕ್ಷೇತ್ರಗಳಲ್ಲಿ ಸರ್ವರೂ ತಮ್ಮತ್ತ ನೋಡುವಂತೆ, ಅನುಕರಣೀಯ ಸೇವೆ ಸಲ್ಲಿಸಿದ ಕೀರ್ತಿ ರಾಜ್ಯದ ಬಹುಸಂಖ್ಯೆಯ ಮಠಗಳದ್ದು, ಮಠಾಧೀಶರದ್ದು. ನಾಡಿನ ನೆಲ- ಜಲ, ಗಡಿ, ಭಾಷೆ, ಸಮೃದ್ಧಿಗಾಗಿ ಹೋರಾಟ ಮಾಡಿದ ಕೀರ್ತಿ ಕೂಡ ಕರ್ನಾಟಕದ ಮಠಗಳದ್ದು. ಊಳುವವನೇ ಒಡೆಯ, ತಮ್ಮ ಸಂಸ್ಥೆಗಳಲ್ಲಿ ಮೀಸಲಾತಿ, ರೈತರ ಹಕ್ಕುಗಳ ಹೋರಾಟ ಮತ್ತು ದುಡಿಮೆಗೆ ತಕ್ಕ ಪ್ರತಿಫಲ ಇವೆಲ್ಲ ಸಾಧ್ಯವಾದದ್ದು ಹಲವು ಮಠಾಧೀಶರಿಂದ. ಯಾವಾಗ ಜಾತಿ, ಪ್ರಭುತ್ವ ಮತ್ತು ಲಾಬಿ ಪ್ರಬಲವಾಯಿತೋ ಆವಾಗ ಕರ್ನಾಟಕದ ರಾಜಕೀಯ ದಿಕ್ಕು, ರಾಜಕಾರಣದಗಣಿತ' ಬದಲಾಯಿತು.
ತೊಂಬತ್ತರ ದಶಕದವರೆಗೂ ರಾಜಕಾರಣಿಗಳು ಭಕ್ತಿ-ಭಾವಗಳ ಜೊತೆಗೆ ಪೂಜನೀಯ ಭಾವನೆಯಿಂದ ಮಠ ಮಂದಿರ, ಸ್ವಾಮಿಗಳ ಬಳಿ ತೆರಳುತ್ತಿದ್ದರು. ಆ ನಂತರ ತಮ್ಮವರು, ತಮ್ಮ ಜಾತಿಯವರು ಎನ್ನುವ ಭಾವನೆ ಪ್ರಬಲವಾಯಿತು. ಈಗ ಮಠಾಧೀಶರುಗಳೇ ಮಂತ್ರಿ, ಶಾಸಕರು, ಮುಖ್ಯಮಂತ್ರಿಗಳ ಮನೆ ಬಾಗಿಲಲ್ಲಿ ಕಾಯುತ್ತಿರುತ್ತಾರೆ.
ಮಠ, ಮಂದಿರ, ಮಸೀದಿ, ಚರ್ಚ್ಗಳಿಗೆ ಜಾತಿಗಳ ಆಧಾರದ ಮೇಲೆ ಕರ್ನಾಟಕದ ತೆರಿಗೆದಾರರ ಹಣ ಬಜೆಟ್ ಮೂಲಕವೇ ಕೊಡಲು ಆರಂಭವಾಯಿತಲ್ಲ, ಅಂದಿನಿಂದ ಮಠ ರಾಜಕಾರಣ ವಿಧಾನಸೌಧದ ಮುಖ್ಯದ್ವಾರದವರೆಗೆ ಬಂದಿದೆ. ಅದಕ್ಕೂ ಮೊದಲು ೧೯೯೦ರ ಪೂರ್ವ, ಅಂದಿನ ಮುಖ್ಯಮಂತ್ರಿಗಳು, ಮಂತ್ರಿಗಳು, ಜಾತಿ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ವೀರೇಂದ್ರ ಪಾಟೀಲ, ಗುಂಡೂರಾವ್, ರಾಮಕೃಷ್ಣ ಹೆಗಡೆ, ಅದಕ್ಕೂ ಪೂರ್ವ ನಿಜಲಿಂಗಪ್ಪ ಕೂಡ ಜಾತಿ ಸಮ್ಮೇಳನಗಳಿಂದ ದೂರವೇ ಉಳಿದಿದ್ದರು. ಬ್ರಾಹ್ಮಣ ಸಮ್ಮೇಳನಕ್ಕೆ ಗುಂಡೂರಾಯರನ್ನು ಆಹ್ವಾನಿಸಿದಾಗ ಅವರು ನಿರಾಕರಿಸಿದ್ದರು. ಅವರದ್ದೇ ಸಮುದಾಯ ಕೋಳಿ ತಿನ್ನುವ ಬ್ರಾಹ್ಮಣ' ಎಂದು ಅಣಕಿಸಿತ್ತು. ಹವ್ಯಕ ಸಮ್ಮೇಳನಕ್ಕೆ ರಾಮಕೃಷ್ಣ ಹೆಗಡೆಯವರನ್ನು ಆಹ್ವಾನಿಸಲು ಹೋದವರಿಗೆ, ಮುಖ್ಯಮಂತ್ರಿಯಾಗಿ ನಾನು ಭಾಗವಹಿಸಲು ಸಾಧ್ಯವಿಲ್ಲ ಎಂದು ನೇರವಾಗಿ ನಿರಾಕರಿಸಿದ್ದರು. ತುಮಕೂರಿನ ಸಿದ್ದಗಂಗಾ ಮಠಕ್ಕೆ ಅಥವಾ ತಮ್ಮ ಕ್ಷೇತ್ರದ ಮತ್ತು ಸಮುದಾಯದ ಇತರ ಮಠಗಳಿಗೆ ಹೋದರೂ ವೀರೇಂದ್ರ ಪಾಟೀಲರು ಖಾಸಗಿ ಸಭೆ- ಭೇಟಿ ಎಂದೇ ನಮೂದಿಸುತ್ತಿದ್ದರು. ಅಷ್ಟರ ಮಟ್ಟಿಗೆ ಅಂತರ ಕಾಯ್ದುಕೊಂಡಿದ್ದರು. ಹಾಗಂತ, ಅವರೆಲ್ಲರೂ ಕೂಡ ತಮ್ಮ ಸಮಾಜದ ಮಠ- ಸ್ವಾಮಿಗಳನ್ನು ಗೌರವದಿಂದ ಕಂಡವರೇ ! ಯಾವಾಗ ಮಠ- ಮಂದಿರ- ಮಸೀದಿ- ಚರ್ಚ್ಗಳಿಗೆ ತೆರಿಗೆ ಹಣವನ್ನು ಅನುದಾನವಾಗಿ ನೀಡಲಾಯಿತೋ ಅಲ್ಲಿಂದ ಮಠ, ಸ್ವಾಮೀಜಿ, ಧರ್ಮದ ಸಂತುಷ್ಟಿಯಲ್ಲಿ ಕರ್ನಾಟಕದ ರಾಜಕಾರಣ ಸಿಲುಕಿಕೊಂಡಿತು. ಚಿಕ್ಕಪುಟ್ಟ ಮಠಗಳು, ಮಂದಿರಗಳ ಮುಖ್ಯಸ್ಥರುಗಳೆಲ್ಲ ಬೆಳಿಗ್ಗೆಯೇ ಮಂತ್ರಿಗಳು, ಶಾಸಕರ ಮನೆ ಮುಂದೆ ಅನುದಾನಕ್ಕಾಗಿ ಅಲೆದಾಡಲು ಆರಂಭಿಸಿದರೆ, ದೊಡ್ಡ ದೊಡ್ಡ ಮಠಾಧೀಶರು ಧರ್ಮಭೀರುಗಳೆಲ್ಲ ಮಂತ್ರಿಗಳನ್ನೇ ಆಹ್ವಾನಿಸಲಾರಂಭಿಸಿದರು. ಕ್ರಮೇಣ ಸರ್ಕಾರವನ್ನೇ, ಶಾಸಕಾಂಗವನ್ನೇ ನಿಯಂತ್ರಿಸುವ ಮಟ್ಟಕ್ಕೆ ಈಗ ಬೆಳೆದು ನಿಂತಿದ್ದಾರೆ. ಎಷ್ಟು ಬಲಾಢ್ಯರಾಗಿದ್ದರೆಂದರೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಹರಿಹರದ ಪಂಚಮಸಾಲಿ ಪೀಠದ ಸ್ವಾಮೀಜಿ,ಇಂತಿಂಥವರನ್ನು ಮಂತ್ರಿಗಳನ್ನಾಗಿ ಮಾಡದಿದ್ದರೆ, ಸಮಾಜ ನಿಮ್ಮ ಮುಖ್ಯಮಂತ್ರಿ ಸ್ಥಾನ ಬದಲಿಸಬೇಕಾಗುತ್ತದೆ' ಎಂಬ ಧಮಕಿಯ ಮಾತನ್ನಾಡಿದ್ದರು. ಯಡಿಯೂರಪ್ಪನವರು ಪ್ರತಿಭಟಿಸಿ ವೇದಿಕೆಯಲ್ಲಿ ಪ್ರತಿರೋಧ ವ್ಯಕ್ತಪಡಿಸಿದರೆಂಬುದು ಬೇರೆ ಮಾತು.
`ಸಿದ್ದರಾಮಯ್ಯನವರನ್ನು ಅವಹೇಳನ ಮಾಡಿದರೆ ಸುಮ್ಮನಿರಕ್ಕಾಗಲ್ಲ' ಎಂದು ಕಾಗಿನೆಲೆ ಪೀಠದ ಸ್ವಾಮೀಜಿ ಕನಕ ಸಮ್ಮೇಳನದಲ್ಲೇ ಎಚ್ಚರಿಸಿದರೆ, ವಾಲ್ಮೀಕಿ ಸಮುದಾಯದವರನ್ನು ಡಿಸಿಎಂ- ಮಂತ್ರಿಗಳಾಗಿ ಪ್ರಾತಿನಿಧ್ಯ ನೀಡದಿದ್ದರೆ ಬಂಡಾಯ ಏಳಬೇಕಾಗುತ್ತದೆ ಎಂದು ವಾಲ್ಮೀಕಿ ಸಮಾಜದ ಮಠಾಧೀಶರು ಬೆದರಿಸಿದ್ದರು.. ಪಂಚಮಸಾಲಿ, ವೀರಶೈವ- ಲಿಂಗಾಯತ ಹೋರಾಟದಲ್ಲಂತೂ ಸರ್ಕಾರವನ್ನೇ ಬೆದರಿಸುವ ತಂತ್ರ ಜೋರಾಗಿತ್ತು.
ರಾಜಕಾರಣಿಗಳಿಗೆ ಮತ್ತು ಆಡಳಿತ ಚುಕ್ಕಾಣಿ ಹಿಡಿದವರಿಗೆ ಧರ್ಮ- ಮಠ- ಜಾತಿಗಳು ಖಾಸಗಿಯಾಗಿ ಉಳಿಯಬೇಕೇ ಹೊರತು, ಸಾರ್ವತ್ರಿಕ- ಸಾರ್ವಜನಿಕ ಪ್ರದರ್ಶನವಾಗಿ ಉಳಿಯಬಾರದು. ಆದರೆ ಈಗ ಧರ್ಮ ಮತ್ತು ರಾಜಕಾರಣ ಎರಡೂ ತಮ್ಮ ಲಕ್ಷ್ಮಣ ರೇಖೆಯನ್ನು ದಾಟಿ ಬಹಳ ಮುಂದೆ ಹೋಗಿಬಿಟ್ಟಿವೆ. ಒಂದರ ಮೇಲೋಂದು ನಿಯಂತ್ರಣ ಸಾಧಿಸುವ ಪ್ರಯತ್ನ ನಡೆಯುತ್ತಿದೆ. ಈ ಮಧ್ಯೆ ಮಂದಿರ, ಮಸೀದಿ, ಜಾತಿ ತುಷ್ಟೀಕರಣಗಳ ಆಡಂಬೋಲ ನಡೆದುಬಿಟ್ಟಿದೆ.
ಮಠ ಸಂಸ್ಕೃತಿ ಕೇವಲ ವಿಧಾನಸೌಧಕ್ಕೆ ಸೀಮಿತವಾಗಿ ಉಳಿದಿಲ್ಲ. ಕೇವಲ ಒಂದು ಪಕ್ಷಕ್ಕೂ ಸೀಮಿತವಾಗಿಲ್ಲ. ನೂರ ಮೂವತ್ತಾರು ಸ್ಥಾನ ಪಡೆದಿದ್ದರೂ ಕಾಂಗ್ರೆಸ್ ಈಗ ಡಿಸಿಎಂ, ಸಿಎಂ ಸ್ಥಾನ ರಾಜಕೀಯದಲ್ಲಿ ತೊಡಗಿದೆ. ಧರ್ಮದಲ್ಲಿ ರಾಜಕೀಯ ಇರಬಾರದು. ರಾಜಕಾರಣದಲ್ಲಿ ಧರ್ಮ ಇರಬೇಕು ಎನ್ನುವ ಗಾಂಧೀಜಿ ಅವರ ಮಾತು ಕಾಣೆಯಾಗಿದೆ. ಪ್ರಸಕ್ತ ರಾಜಕಾರಣದ ಪರಿಸ್ಥಿತಿ ಪ್ರತಿಕೂಲವಾದಂತಿದೆ.
ಕರ್ನಾಟಕದ ರಾಜಕಾರಣವೇ ಹೀಗೇ. ಎರಡು ಬಲಾಢ್ಯ ಜಾತಿಗಳು, ಜೊತೆಗೆ ಈಗೀಗ ಅಹಿಂದ. ಈ ತ್ರಿಕೋನ ಸ್ಪರ್ಧೆಯ ಪೈಪೋಟಿಯಲ್ಲಿ ಕಾವಿ ಮುನ್ನೆಲೆಗೆ ಬಂದು ಪ್ರಥಮ ಸ್ಥಾನವನ್ನು ಪಡೆಯುತ್ತಿರುವುದು ವಿಪರ್ಯಾಸ. ಸ್ವಾಮಿಗಳೆಲ್ಲ ರಾಜಕಾರಣಕ್ಕೆ ಬರುವುದಾದರೆ ಕಾವಿ ಬಿಟ್ಟು ಬನ್ನಿ ಎಂದು ಈ ಹಿಂದೆಯೇ ಈಗಿನ ಸಭಾಪತಿ ಬಸವರಾಜ ಹೊರಟ್ಟಿ ನೇರವಾಗಿಯೇ ಹೇಳಿದ್ದರು. ಹೊರಟ್ಟಿಯವರಿಂದ ಮಾತ್ರ ಇಂತಹ ಹೇಳಿಕೆ ಸಾಧ್ಯ.
ಪ್ರತಿ ಸಮುದಾಯಕ್ಕೊಂದು ಮಠ ಇರುವಾಗ ಪ್ರತಿ ಸಮುದಾಯದವರೂ ತಮ್ಮವರ ಏಳ್ಗೆ ಮತ್ತು ಹಿಡಿತ ಹೊಂದುವಲ್ಲಿ ಪ್ರಯತ್ನಿಸುವುದು ಸಹಜ. ಆದರೆ ಜನಪ್ರತಿನಿಧಿ ತನ್ನ ಸಮಾಜ- ನಾಡನ್ನು ಎಲ್ಲ ಜಾತಿ- ಜನಾಂಗ, ಮತಗಳ, ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಲು ಬದ್ಧತೆ ಹೊಂದಿರಬೇಕು. ಇಲ್ಲವಾದರೆ ಜನಪ್ರತಿನಿಧಿತ್ವವೇ ಜನಸತ್ತೆಯ ಬಹುದೊಡ್ಡ ಅಣಕವಾದಂತಾಗುತ್ತದೆ !!