ಧಾರವಾಡ ಜಿಲ್ಲೆಯಲ್ಲೂ ರೈತನ ಪಹಣಿಯಲ್ಲಿ `ವಕ್ಫ್' ಹೆಸರು ದಾಖಲು!
ಉಪ್ಪಿನಬೆಟಗೇರಿ ಗ್ರಾಮದ ಸರ್ವೇ ನಂಬರ ೨೦ರ ಜಂಟಿ ಪಹಣಿ | ಸ.ನಂ. ೧೪೧ ರ ಹಿಸ್ಸಾ ೨,೩,೪ರ ಪಹಣಿಯಲ್ಲಿ ದಾಖಲು
ಸಿ.ವೈ. ಲಗಮಣ್ಣವರ
ಉಪ್ಪಿನಬೆಟಗೇರಿ: ದೇಶದೆಲ್ಲೆಡೆ ಸದ್ದು ಮಾಡುತ್ತಿರುವ ವಕ್ಫ್ ಕಾಯಿದೆಯ ಬಿಸಿ ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಕೆಲ ರೈತರಿಗೂ ತಟ್ಟಿದ್ದು, ರೈತರ ಜಮೀನಿನ ಪಹಣಿಯಲ್ಲಿ ಕೆಲ ವರ್ಷಗಳ ಹಿಂದೆಯೇ ವಕ್ಫ್ ಹೆಸರು ದಾಖಲಾಗಿದ್ದು ಬೆಳಕಿಗೆ ಬಂದಿದೆ!
ನೂರಾರು ವರ್ಷಗಳಿಂದ ಪಿತ್ರಾರ್ಜಿತವಾಗಿ ಬಂದಿದ್ದ ರೈತರ ಉಳುಮೆಯ ಹೊಲದ ಪಹಣಿಯ ೧೧ನೇ ಇತರ ಹಕ್ಕುಗಳು ಮತ್ತು ಋಣಗಳು ಕಾಲಂನಲ್ಲಿ ಸದರ ಜಮೀನು ವಕ್ಫ್ ಆಸ್ತಿಗೆ ಒಳಪಟ್ಟಿರುತ್ತದೆ' ಅಂತಾ ದಾಖಲಾಗಿದೆ. ತಮ್ಮ ಪಿತ್ರಾರ್ಜಿತ ಆಸ್ತಿಯಾದ ಜಮೀನಿನ ಪಹಣಿಯಲ್ಲಿ
ವಕ್ಫ್' ಹೆಸರು ದಾಖಲಾಗಿರುವುದು ಸಂಬಂಧಪಟ್ಟ ರೈತನಿಗೆ ದಿಗಿಲು ಹುಟ್ಟಿಸಿದೆ. ಮುಂದೇನು ಮಾಡಬೇಕು ಎಂದು ತೋಚದೇ ತೊಳಲಾಡುತ್ತಿದ್ದಾರೆ. ವಕ್ಫ್ ಎಂದರೇನು? ಅದೆಲ್ಲಿದೆ? ವಕ್ಫ್ ನಮ್ಮ ಜಮೀನಿನ ಪಹಣಿಯಲ್ಲಿ ಅದರ ಹೆಸರೇಕಿದೆ ಎಂದು ಮುಗ್ದ ರೈತರ ತಿಳಿದವರನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಏನಿದು ಪ್ರಕರಣ? : ಉಪ್ಪಿನಬೆಟಗೇರಿ ಗ್ರಾಮದ ಸರ್ವೆ ನಂಬರ್ ೨೦ ರಲ್ಲಿ ರೈತರಾದ ಮರಬಸಪ್ಪ ತಂದೆ ಮಲ್ಲಪ್ಪ ಮಸೂತಿ ಹಾಗೂ ಶ್ರೀಶೈಲ ತಂದೆ ಮಲ್ಲಪ್ಪ ಮಸೂತಿ ಇವರ ಜಮೀನಿನ ೩ ಎಕರೆ ೧೩ ಗುಂಟೆಯ ಜಂಟಿ ಪಹಣಿಯಲ್ಲಿ ಹಾಗೂ ಸರ್ವೆ ನಂಬರ್ ೧೪೧ ರ ಹಿಸ್ಸಾ ೨ ರಲ್ಲಿ ಜವಳಗಿ ಬಾಳಪ್ಪ ರುದ್ರಪ್ಪ ಇವರ ಹೆಸರಿನ ೨೬ ಗುಂಟೆ, ಇದೇ ಸರ್ವೆ ನಂಬರಿನ ಹಿಸ್ಸಾ ೩ ರಲ್ಲಿ ಜವಳಗಿ ಸರೋಜಾ ಕೋಂ. ಕರಬಸಪ್ಪ ಇವರ ಹೆಸರಿನ ೨ ಎಕರೆ ೧೨ ಗುಂಟೆ ಮತ್ತು ಹಿಸ್ಸಾ ೪ ರಲ್ಲಿ ಜವಳಗಿ ಗಂಗಪ್ಪ ರುದ್ರಪ್ಪ ಇವರ ಹೆಸರಿನ ೩ ಎಕರೆ ೨೧ ಗುಂಟೆ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿಗೆ ಒಳಪಟ್ಟಿರುವುದು ದಾಖಲಾಗಿರುವುದು ರೈತರ ಗಮನಕ್ಕೆ ಬಂದಿದೆ.
ಸಂಬಂಧಪಟ್ಟ ರೈತ ಹೇಳುವುದೇನು? : ಈ ಅವಾಂತರವನ್ನು ಸರಿಪಡಿಸುವ ಕುರಿತು ನಾನು ಈಗಾಗಲೇ ತಹಶೀಲ್ದಾರ ಅವರಿಗೆ ಹಾಗೂ ಧಾರವಾಡ ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ಲಿಖಿತವಾಗಿ ದಾಖಲೆ ಸಮೇತ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ತಹಶೀಲ್ದಾರ ಕಚೇರಿ ಸಂಪರ್ಕಿಸಿದರೆ ವಕ್ಫ್ ಕಚೇರಿಯಲ್ಲಿ ಕೇಳಿರಿ ಅಂತಾರೆ. ಜಿಲ್ಲಾ ವಕ್ಫ್ ಕಚೇರಿ ಸಂಪರ್ಕಿಸಿದರೆ ತಹಶೀಲ್ದಾರ ಕಚೇರಿಯಲ್ಲಿ ವಿಚಾರಿಸಿರಿ ಅಂತಾ ನನ್ನನ್ನು ಅಲೆದಾಡಿಸುತ್ತಿದ್ದಾರೆ. ತಲೆ ತಲಾಂತರದಿಂದ ಬಂದಿರುವ ನಮ್ಮ ಜಮೀನಿನ ಪಹಣಿಯಲ್ಲಿ ಈಗ ಏಕಾಏಕಿ ವಕ್ಫ್ ಹೆಸರು ನಮೂದಾದರೆ ಮುಂದೆ ನಾವು ಏನು ಮಾಡಬೇಕೆಂದು ತಿಳಿಯದಾಗಿದೆ ಎಂದು ರೈತ ಮರಬಸಪ್ಪ (ಮನು) ಮಸೂತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.