ನಡು ರಸ್ತೆಯಲ್ಲಿಯೇ ಶವ ಸಂಸ್ಕಾರ
ಧಾರವಾಡ: ಶವ ಸಂಸ್ಕಾರಕ್ಕೆ ಜಾಗ ನೀಡದ ಕಾರಣ ಶವವನ್ನು ನಡು ರಸ್ತೆಯಲ್ಲೇ ಅಂತ್ಯಸಂಸ್ಕಾರ ಮಾಡಿರುವ ಘಟನೆ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಸಪ್ಪ ಅಂದಾಕಾರ ಎಂಬುವವರು ಬುಧವಾರ ನಿಧನರಾಗಿದ್ದರು. ಅವರ ಅಂತ್ಯ ಸಂಸ್ಕಾರ ಮಾಡಲು ಗ್ರಾಮದಲ್ಲಿಯ ಹೊಲದ ಮಾಲೀಕರು ಜಾಗ ನೀಡದ ಹಿನ್ನೆಲೆಯಲ್ಲಿ ನೊಂದ ಕುಟುಂಬದವರು ಮತ್ತು ಗ್ರಾಮಸ್ಥರು ನವಲಗುಂದ ರಸ್ತೆಯಲ್ಲಿಯೇ ಶವವನ್ನು ಸುಟ್ಟು ಅಂತ್ಯಸಂಸ್ಕಾರ ಮಾಡಿದ್ದಾರೆ.
ಏಕೆ ರಸ್ತೆಯಲ್ಲಿ ಅಂತ್ಯಸಂಸ್ಕಾರ…?
ಗ್ರಾಮದಲ್ಲಿ ಯಾರೇ ಮೃತಪಟ್ಟರೂ ಅಂತ್ಯಸಂಸ್ಕಾರಕ್ಕಾಗಿ ನಾಗರಾಜ ಹಳಕಟ್ಟಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಜಾಗೆ ನೀಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ನಾಗರಾಜ ಅವರು ಬೇರೆಯವರಿಗೆ ತಮ್ಮ ಹೊಲವನ್ನು ಮಾರಾಟ ಮಾಡಿದ್ದರು. ಹೊಸದಾಗಿ ಬಂದ ಮಾಲೀಕರು ತಮ್ಮ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡಲು ನಿರಾಕರಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಹೊಲದಲ್ಲಿ ಶವಸಂಸ್ಕಾರ ಮಾಡಲು ಜಾಗ ನೀಡದ ಹಿನ್ನೆಲೆಯಲ್ಲಿ ಗೋವನಕೊಪ್ಪ ಗ್ರಾಮಸ್ಥರು ಪರದಾಡುತ್ತಿದ್ದರು. ಬುಧವಾರವೂ ಇದೇ ಮರುಕಳಿಸಿದ ಹಿನ್ನೆಲೆಯಲ್ಲಿ ಬಸಪ್ಪ ಅವರ ಅಂತ್ಯ ಸಂಸ್ಕಾರವನ್ನು ನಡು ರಸ್ತೆಯಲ್ಲಿಯೇ ಮಾಡಿ ಪ್ರತಿಭಟನೆ ನಡೆಸಿದರು.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿದ ತಹಶೀಲ್ದಾರ ಕಚೇರಿಯ ಸಿಬ್ಬಂದಿ ಶವ ಸಂಸ್ಕಾರಕ್ಕಾಗಿ ನೀಡಿದ್ದ ಜಾಗೆಯ ಸರ್ವೇ ಕಾರ್ಯ ನಡೆಸಿದರು. ಅಲ್ಲದೇ ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ಈ ಹಿಂದೆ ಶವ ಸಂಸ್ಕಾರಕ್ಕೆ ನೀಡಿದ ಜಾಗೆಯನ್ನು ಮರಳಿ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿಯೂ ರಸ್ತೆಯಲ್ಲಿಯೇ ಶವ ಸಂಸ್ಕಾರ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.