ನನ್ನೊಳಗೇ ಅವನಿದ್ದಾನೆ..
ಜೀವನದ ಕ್ಲೇಶಗಳಿಗೆ ಪರಮಾತ್ಮನ ದರ್ಶನವೇ ಆತ್ಯಂತಿಕ(ಶಾಶ್ವತ) ಪರಿಹಾರ. ಸಣ್ಣ ಪರಿಹಾರ ಉಪಾಯಗಳು ಎಲ್ಲರಿಗೂ ಗೊತ್ತಿವೆ. ಆರೋಗ್ಯ ಕೆಟ್ಟರೆ ವೈದ್ಯರ ಬಳಿ ಹೋಗಿ ಔಷಧೋಪಚಾರಗಳ ಮೂಲಕ ಕ್ಲೇಶವನ್ನು ಒಮ್ಮೆ ಪರಿಹರಿಸಿ ಕೊಳ್ಳುತ್ತೇವೆ. ಆರ್ಥಿಕ ಸಂಕಷ್ಟ ಬಂದರೆ ಬ್ಯಾಂಕಿನವರ ಸಹಾಯ ಪಡೆದು ತಜ್ಞರ ಸಲಹೆಯಂತೆ ಪರಿಹರಿಸಿಕೊಳ್ಳುತ್ತೇವೆ. ಇವೆಲ್ಲ ಸಣ್ಣ ಪರಿಹಾರ ಉಪಾಯಗಳು. ಇಂತಹ ಉಪಾಯಗಳಿಂದ ಆತ್ಯಂತಿಕವಾಗಿ ಕ್ಲೇಶಗಳು ಪರಿಹಾರವಾಗುವುದಿಲ್ಲ. ಅಂದರೆ ಮತ್ತೆ ಪುನಃ ಎಂದಿಗೂ ಕ್ಲೇಶಗಳು ಬಾರದ ರೀತಿಯಲ್ಲಿ ಮಾಡಿಕೊಳ್ಳಲು ಇವುಗಳಿಂದ ಸಾಧ್ಯವಿಲ್ಲ. ಹಸಿವಾದಾಗ ಊಟ ಮಾಡಿ ಪರಿಹರಿಸಿಕೊಳ್ಳುತ್ತೇವೆ. ಆದರೆ ಇದು ಹಸಿವಿನ ಆತ್ಯಂತಿಕ ಪರಿಹಾರವಲ್ಲ, ಮತ್ತೆ ಹಸಿವಾಗುತ್ತದೆ. ಹಾಗೆಯೇ ಜೀವನದ ದುಃಖಗಳ ಆತ್ಯಂತಿಕ ಪರಿಹಾರಕ್ಕೆ ಬೇರೆ ಉಪಾಯವೇ ಬೇಕು.
ಪರಮಾತ್ಮ ದರ್ಶನವೇ ಆತ್ಯಂತಿಕ ಪರಿಹಾರೋಪಾಯ. ಇದನ್ನು ಉಪನಿಷತ್ತು ಹೀಗೆ ಹೇಳುತ್ತದೆ. ಜುಷ್ಟಂ ಯದಾ ಪಶ್ಯತಿ ಅನ್ಯಮೀಶಮ್ ಅಸ್ಯ ಮಹಿಮಾನಮಿತಿ ವೀತಶೋಕಃ' ಈಶನನ್ನು ಅಂದರೆ ಪರಮಾತ್ಮನನ್ನು ಮತ್ತು ಅವನ ಮಹಿಮೆಗಳನ್ನು ಅನುಭವ ದೃಷ್ಟಿಯಿಂದ ನೋಡಿದಾಗ ಜೀವನು
ವೀತರೋಗ' ನಾಗುತ್ತಾನೆ. ಅವನನ್ನು ಎಲ್ಲಿ ನೋಡಬೇಕು? ಹೇಗೆ ನೋಡಬೇಕು? `ಸಮಾನೇ ವೃಕ್ಷೇ ಪುರುಷೋ ನಿಮಗ್ನ:'.
ಶರೀರವೆಂಬ ವೃಕ್ಷದಲ್ಲಿ ಜೀವಾತ್ಮ-ಪರಮಾತ್ಮರೆಂಬ ಎರಡು ಹಕ್ಕಿಗಳು ಹೊಕ್ಕಿಕೊಂಡಿವೆ. ಅಂದರೆ ಈಗ ನಾವಿರುವ ಈ ಶರೀರದಲ್ಲಿಯೇ ಪರಮಾತ್ಮನೆಂಬ ಮತ್ತೊಬ್ಬನಿದ್ದಾನೆ. ಅವನನ್ನು ಈ ಶರೀರದಲ್ಲಿಯೇ ಅಂದರೆ ನನ್ನ ಜೊತೆಯಲ್ಲಿಯೇ ಇದ್ದವನನ್ನಾಗಿ ನೋಡಬೇಕು. ಅಷ್ಟೇ ಅಲ್ಲ ಈ ಇಡೀ ಜಗತ್ತೇ ಅವನ ಮಹಿಮೆ. ಅಂತಹ ಮಹಿಮೆಯುಳ್ಳ ಪರಮಾತ್ಮನು ನನ್ನ ಜೊತೆ ನನಗೆ ಹಿನ್ನೆಲೆಯಾಗಿ ಇದ್ದಾನೆ ಎಂಬುದನ್ನು ಅರಿಯಬೇಕು.
ಪುಸ್ತಕ ಓದುವದರಿಂದ ಅವನನ್ನು ಈ ರೀತಿ ಅರಿಯಲು ಸಾಧ್ಯವಿಲ್ಲ. ಭಕ್ತಿಯ ಮೂಲಕ ಅವನನ್ನು ಅರಿಯಬೇಕು. ಭಕ್ತಿ ಚೆನ್ನಾಗಿ ಬೆಳೆದಾಗ ಅಂದರೆ ಪಕ್ವಗೊಂಡಾಗ ಅವನ ದರ್ಶನವಾಗುತ್ತದೆ. ಭಕ್ತಿ ಪಕ್ವಗೊಳ್ಳದಿರುವುದೇ ದರ್ಶನವಾಗದಿರುವುದಕ್ಕೆ ಕಾರಣ. ದೀರ್ಘಕಾಲ ಸತತ ಒಂದೇ ದೇವರನ್ನು ಕುರಿತಾಗಿ ಮಾಡುವ ಭಜನೆ, ಪೂಜೆ, ಪ್ರಾರ್ಥನೆಗಳು ಭಕ್ತಿಯನ್ನು ಬೆಳೆಸುತ್ತದೆ.