ನನ್ನ ಏನೂ ಅಂತ ತಿಳಿದುಕೊಂಡಿದ್ದೀ..?
ಅಯ್ಯೋ ಎಲ್ಲ ಗೊತ್ತು ಸುಮ್ನಿರಿ ನನ್ನ ಏನೂ ಅಂತ ತಿಳಿದುಕೊಂಡಿದ್ದೀರಿ ಎಂದು ಮಾತು ಮಾತಿಗೂ ಅನ್ನುತ್ತಿದ್ದ ತಿಗಡೇಸಿಯನ್ನು ಎಲ್ಲರೂ ಏನಂತ ತಿಳಕೊಂಡೀರಿ ಅಂತ ಆಡಿಕೊಳ್ಳುತ್ತಿದ್ದರು. ಗೋಟಾಳ್ ಮಾಗರಾಜ್‌ನಿಗೂ ತಿಗಡೇಸಿಗೂ ಹತ್ತಿಬಿಟ್ಟರೆ ನಿಂತವರೆಲ್ಲ ಸುಸ್ತಾಗಿ ಬಿಡುತ್ತಿದ್ದರು. ಅವತ್ತು ಬೇವಿನ ಗಿಡದ ಕೆಳಗೆ ಇಬ್ಬರೂ ಭೇಟಿಯಾದರು. ಏನ್ ತಿಗಡೇಸಿ ಅವರೇ ಅರಾಮಾ.. ಎಂದು ಕೇಳಿದ. ಅದಕ್ಕೆ ತಿಗಡೇಸಿಯು ಏನು ಅರಾಮಾ ಎಂದು ಕೇಳುತ್ತಿದ್ದೀಯ ಯಾರಾದರೂ ನಿನಗೆ ವಾಟ್ಸಾಪ್‌ನಲ್ಲಿ ನನಗೆ ಅರಾಮಿಲ್ಲ ಎಂದು ಮೆಸೇಜ್ ಮಾಡಿದ್ದರಾ? ಅಂದ. ಅಯ್ಯೋ ಏನು ಅಂತ ಮಾತಾನಾಡುತ್ತಿ? ನಾನೇನು ಕೇಳಿದೆ ನೀನೇನು ಹೇಳುತ್ತಿದ್ದಿಯ? ಎಂದು ಕೇಳಿದ. ಹೀಗೆ ಮಾತಿಗೆ ಮಾತು ಬೆಳೆಯಿತು. ಅಲ್ಲಿ ನಿಂತವರೆಲ್ಲ ಗಾಬರಿಯಾಗಿ ಇವರ ಮಾತನ್ನು ತದೇಕ ಚಿತ್ತದಿಂದ ಕೇಳುತ್ತಿದ್ದರು. ಕೊನೆಗೆ ಗೋಟಾಳ್‌ಗೆ ಕಾಲ್ ಬಂದಾಗ ತಡಿ ಎಂದು ಕೈ ಮಾಡಿ… ಹಲೋ… ಹಲೋ.. ಏನೂ ಸ್ಟ್ರೇಕಾ? ಬರುತ್ತೇನೆ.. ಬರುತ್ತೇನೆ… ಕತ್ತೆ ತಂದಿದಿರಾ? ಹಂದಿ ಹೊಡೆದುಕೊಂಡು ಬನ್ನಿ ಎಂದು ಕರೆಕೊಟ್ಟು ನಾನು ಆಮೇಲೆ ಬಂದು ಜಗಳವಾಡುತ್ತೇನೆ ಈಗ ಟೈಮಿಲ್ಲ ಎಂದು ಅಲ್ಲಿಂದ ಹೋದ. ಅದಕ್ಕೆ ತಿಗಡೇಸಿ ನನ್ನ ಏನೂ ಅಂತ ತಿಳಿದಿದ್ದಾನೆ ಅವನು ಎಂದು ಅನ್ನುತ್ತ ಜಾಗ ಖಾಲಿ ಮಾಡಿದ. ತಿಗಡೇಸಿ ಬರೀ ಹೊರಗಷ್ಟೇ ಅಲ್ಲ. ಮನೆಯಲ್ಲಿಯೂ ಸಹ ಇಂಥದ್ದೇ ಎಡವಟ್ಟು ಮಾತುಗಳನ್ನಾಡಿ ಹೆಂಡತಿಯ ಜತೆ ಮಾತು ಬಿಟ್ಟಿದ್ದ. ಪಕ್ಕದ ಮನೆಯ ಪದ್ದಕ್ಕ ತಿಗಡೇಸಿಗೆ ಬುದ್ಧಿ ಹೇಳಲು ಹೋಗಿ ಬಾಯಿಗೆ ಸಿಕ್ಕಂತೆ ಅನ್ನಿಸಿಕೊಂಡು ಬಂದಳು. ಕ್ವಾಟಿಗ್ವಾಡಿ ಸುಂದ್ರವ್ವಳು ಅವತ್ತು ಮನೆಗೆ ಬಂದು ಯಾಕೆ ತಿಗಡೇಸಿ ಹಿಂಗ್ಯಾಕೆ? ತಲೆ ಬರೋಬ್ಬರಿ ಇದೆಯಾ ಅಂದದ್ದಕ್ಕೆ ಬಾ ನಿನಗೆ ಅಲ್ಲಿ ಸೇರಿಸುತ್ತೇನೆ. ಸೇರಿಸಿದರೆ ನನಗೆ ನಾಲ್ಕು ಕಾಸಾದರೂ ಬರುತ್ತದೆ ಎಂದು ಅಂದ. ಆಕೆಯೂ ಸುಮ್ಮನಾದಳು. ಅವತ್ತು ತನ್ನ ಪಾಡಿಗೆ ತಾನು ಹೊರಟಿದ್ದ ಕರಿಭೀಮವ್ವನನ್ನು ನಿಲ್ಲಿಸಿ ಏಯ್ ನನ್ನ ಏನೂ ಅಂತ ತಿಳಿದುಕೊಂಡಿದ್ದೀಯ ಅಂದ. ಅದಕ್ಕೆ ಕಕ್ಕಾಬಿಕ್ಕಿಯಾದ ಕರಿಭೀಮವ್ವಳು… ನೋಡು.. ಇಷ್ಟು ದಿನ ನಿನ್ನ ತಿಗಡೇಸಿ ಅಂತ ತಿಳಿದಿದ್ದೆ. ನೀನು ಹೀಗೆ ಅಂತ ಗೊತ್ತಾದ ಮೇಲೆ ಇವತ್ತಿನಿಂದ ನಿನಗೆ ತಲೆಕೆಟ್ಟ ತಿಗಡೇಸಿ ಅನ್ನುತ್ತೇನೆ… ಎಂದು ಹೇಳಿ ಹೋದಳು. ಇನ್ನು ಈಕೆ ಊರತುಂಬ ತಲೆಕೆಟ್ಟ ತಿಗಡೇಸಿ ಅಂತ ಸುದ್ದಿ ಮಾಡುತ್ತಾಳೆ ಎಂದು ಅಂದಿನಿಂದ ಯಾರಾದರೂ ಭೇಟಿಯಾದರೆ.. ಹೆಂಗಿದ್ದೀರಿ ಮಾಮಾ… ಅತ್ತೆ… ಕಾಕಾ.. ಅಣ್ಣಾ ಅಂತ ಮಾತನಾಡತೊಡಗಿದ.