ನನ್ನ ಮನಸ್ಸು ಕನ್ನಡ ನನ್ನ ಕನಸು ಕನ್ನಡ
ನನ್ನ ಕನ್ನಡ ಜ್ಞಾನದ ಬಗ್ಗೆ ನಿಮಗೆ ಹೇಳಿದೆನೆಂದರೆ ಒಂದುಕ್ಷಣ ನಿಮ್ಮ ಜೀವವೇ ಹೋಗುತ್ತದೆ. ನನ್ನ ಬಾಯಲ್ಲಿ ಬರುವುದು ಕನ್ನಡ, ನನ್ನ ಮೈಯಲ್ಲಿನ ರಕ್ತ ಕನ್ನಡ, ನಮ್ಮ ನಾಡು ಕನ್ನಡ, ನಮ್ಮ ನುಡಿ ಕನ್ನಡ, ನಮ್ಮ ಮನೆ ಕನ್ನಡ ಹೀಗೆ ಕನ್ನಡ, ಕನ್ನಡ ಕನ್ನಡ ಎಂದು ತಿರುಬೋಕಿ ಎಲ್ಲರ ಮುಂದೆ ತನ್ನನ್ನು ತಾನು ಹೊಗಳಿಕೊಳ್ಳುತ್ತಿದ್ದ. ಆತನನ್ನು ಹತ್ತಿರದಿಂದ ಬಲ್ಲವರು, ಅಯ್ಯೋ ಇವನು ಬೊಗಳೆ ಬಾಬು ಕಣ್ರೀ… ಏನೂ ಇಲ್ಲ ಸುಳ್ಳೆ ಮಾತನಾಡುತ್ತಾನೆ ಎಂದು ಅಂದು ಸುಮ್ಮನಾಗುತ್ತಿದ್ದರು. ಆದರೆ ಸಿಕ್ಕಾಪಟ್ಟೆ ಪಾಸಿಟಿವ್ ಎಟಿಟ್ಯೂಡ್ ಪರ್ಸನ್ ತಿಗಡೇಸಿ ಮಾತ್ರ ಕನ್ನಡ ರಾಜ್ಯೋತ್ಸವಕ್ಕೆ ತಿರುಬೋಕಿಯೇ ಗೆಸ್ಟ್ ಎಂದು ನಿರ್ಧರಿಸಿ ತನ್ನ ತಂಡದವರಿಗೆ ಹೇಳಿದ್ದ. ತಿಗಡೇಸಿ ತಂಡದವರೆಲ್ಲ ತಿರುಬೋಕಿ ಅವರ ಮನೆಗೆ ತೆರಳಿ ಸಾಹೇಬರೆ ನೀವು ನಮ್ಮ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬರಬೇಕು ಅಂದಾಗ ತಿರಬೋಕೆ ಆಗಲಿ ಅಂದ. ರಾಜ್ಯೋತ್ಸವದ ದಿನ ಮೈದಾನದಲ್ಲಿ ದೊಡ್ಡ ಪೆಂಡಾಲ್ ಹಾಕಿಸಿದ್ದರು. ಮೈಕಿನಲ್ಲಿ ಜೋರಾಗಿ ಕನ್ನಡದ ಹಾಡುಗಳು ಕೇಳಿಬರುತ್ತಿತ್ತು. ಕಾರ್ಯಕ್ರಮ ಆರಂಭಕ್ಕೆ ಹತ್ತು ನಿಮಿಷ ಮುಂಚೆ ತಿರುಬೋಕಿ ಬಂದು ನಿಂತಿದ್ದ. ನಂತರ ಒಬ್ಬೊಬ್ಬರಾಗಿ ಎಲ್ಲರೂ ಬಂದರು. ತಿಗಡೇಸಿ ಪ್ರಾಸ್ತಾವಿಕ ಮಾತನಾಡಿದ. ಈಗ ಸಾಹೇಬರು ಮಾತಾಡುತ್ತಾರೆ ಎಂದು ಹೇಳಿ ಚಪ್ಪಾಳೆ ಹೊಡೆಯವಂತೆ ಸನ್ನೆ ಮಾಡಿದ. ಎಲ್ಲರೂ ಚಪ್ಪಾಳೆ ಹೊಡೆದರು. ತಿರುಬೋಕಿ ಮೈಕಿನ ಮುಂದೆ ಬಂದು ಕೆಮ್ಮಿ ಗಂಟಲು ಸರಿಮಾಡಿಕೊಂಡು ಮಹಾಜನಗಳೇ
ತಿರುಬೋಕಿ ಭಾಷಣ: ``ಹೀವತ್ತು ಖನ್ನಡದ ಅಬ್ಬ. ಖನ್ನಡವನ್ನು ನಾವೆಲ್ಲ ಕಡ್ಡಾಯವಾಗಿ ಭಳಸಲೇಬೇಕು. ಹಿಂದು ಹೇನಾಗಿದೆ ಹಂದರೆ ಮನೆಯಲ್ಲಿ ಎಣ್ಣುಮಕ್ಕಳು ಮನೆಯಲ್ಲಿ ಮಕ್ಕಳಿಗೆ ಖನ್ನಡ ಖಲಿಸುವುದನ್ನು ರೂಡಿ ಮಾಡಿಕೊಳ್ಳಬೇಕು ಹಂದಾಗ ಮಾತ್ರ ಖನ್ನಡ ಬಧುಖುತ್ತದೆ ಭಾಳುತ್ತದೆ. ಅಬ್ಬ ಅರಿದಿನಗಳು ಬಂಧಾಗ ಹವುಗಳ ಬಗ್ಗೆ ಏಳಿಖೊಡಬೇಕು. ಹಿವತ್ತು ಏಗಾಗಿದೆಯಂದರೆ ಮನೆಯಲ್ಲಿ ಎಣ್ಣುಮಕ್ಕಳು ತಮ್ಮ ಮಕ್ಕಳಿಗೆ ಒಂದು ಕೆಜಿ ಹುಳ್ಳಾಗಡ್ಡಿ ತಗೊಂಡು ಬಾ ಅನ್ನುವುದನ್ನು ಬಿಟ್ಟು ಕೆಜಿ ಹಾನಿಹನ್ ತಗಂಬಾ ಹಂತಾರೆ… ಹದರ ಬದಲು ಹುಳ್ಳಾಗಡ್ಡಿ ಹನ್ನಬಾರದೇ ಎಂದು ಹೇಳಿದ. ನೆರೆದ ಜನರು ಮುಖ ಮುಖ ನೋಡಿಕೊಂಡರು. ಇಂದೆ ಹವರು ಖನ್ನಡ.. ಖನ್ನಡ ಭನ್ನಿ ನಮ್ಮ ಸಂಗಡ ಅಂದರು ಹೀಗ ಹ್ಯಾರು ಹವರ ಇಂದೆ ಓಗುತ್ತಾರೆ ಏಳಿ ಅಂದ… ಆಗಲೇ ಜನರಲ್ಲಿ ಗುಜುಗುಜು ಅನ್ನುತ್ತ ದೊಡ್ಡದಾಗಿ ಗದ್ದಲ ಶುರುವಾಯಿತು… ಮಧ್ಯೆ ಎದ್ದ ಒಬ್ಬ… ಸುಮ್ನೆ ಹೋಗಪಾ ಸಾಕು ಎಂದು ಒದರಿದ. ಈತ ಅದಕ್ಕೆ ಏನೋ ಅಂದ… ಎಲ್ಲರೂ ವೇದಿಕೆಯತ್ತ ನುಗ್ಗಿದರು. ಆದರೆ ತಿರುಬೋಕಿಗೆ ಅವರು ಏನೂ ಮಾಡಲಿಲ್ಲ…. ಆತನನ್ನು ಕರೆದುಕೊಂಡು ಬಂದಿದ್ದ ತಿಗಡೇಸಿಗೆ ಹಿಗ್ಗಾಮುಗ್ಗಾ ಝಾಡಿಸಿ ಅಂಗಿ ಹರಿದು ತೂರಾಡಿದರು.