ನನ್ ಮಾತ್ ಕೇಳಿ…
ಸಂದರ್ಭ ಇರಲಿ, ಬಿಡಲಿ ಮಾತು ಮಾತಿಗೂ ನನ್ ಮಾತು ಕೇಳಿ ಅನ್ನುತ್ತಿದ್ದ ಕುಂಟ್ತಿರುಪ್ತಿಗೆ ಎಲ್ಲರೂ ಶಾರ್ಟ್ಕಟ್ಟಾಗಿ ನಮಾಕೇ ಅಂತ ಹೆಸರಿಟ್ಟಿದ್ದರು. ಅವತ್ತು ಹುಜುರೋಣಿ ಶಾಮ ಮತ್ತು ರಾಮನಿಗೆ ಯಾವುದೋ ಹಣಕಾಸಿನ ವಿಷಯಕ್ಕೆ ಜಗಳವಾಗುತ್ತಿತ್ತು. ಅದನ್ನು ನೋಡಿ ಮಧ್ಯ ಪ್ರವೇಶಿಸಿದ ಕುಂಟ್ತಿರುಪ್ತಿ ಶಾಮನನ್ನು ಆ ಕಡೆ ಕರೆದುಕೊಂಡು ಹೋಗಿ… ನೋಡು ನನ್ ಮಾತು ಕೇಳು ಅಂದ ಕೂಡಲೇ ಪಕ್ಕದ ಕಿಸೆಯಿಂದ ಸ್ವಲ್ಪ ಹಣಕೊಟ್ಟು ಬಗೆಹರಿಸಿ ಸ್ವಾಮೀ ಇನ್ನೂ ಕೇವಲ ಎರಡೇ ತಿಂಗಳು ಅಂದ. ಸ್ವಲ್ಪ ಹೊತ್ತಿನ ನಂತರ ರಾಮನನ್ನು ಹೆಗಲ ಮೇಲೆ ಕೈ ಹಾಕಿ ಕರೆದುಕೊಂಡು ಹೋಗಿ… ನೋಡಪ್ಪ ನನ್ ಮಾತು ಕೇಳು ಅಂದಾಗ… ಸ್ವಾಮೀ ನಾನು ನಿಮ್ಮ ಮಾತು ಮೀರುವುದಿಲ್ಲ. ನನಗೆ ಸ್ವಲ್ಪ ದಿನ ಕಾಲವಕಾಶ ಕೊಡಿಸಿ ಎಂದು ಒತ್ತಾಯ ಮಾಡಿ ಕಿಸೆಯಲ್ಲಿ ಇಟ್ಟ. ಅರೆ ಇಸ್ಕಿ ಒಂದ್ ಮಾತು ಕೇಳು ಅಂದಿದ್ದಕ್ಕೆ ಹಣ ಬರುತ್ತದೆ ಎಂದು ಕುಂಟ್ತಿರುಪ್ತಿ ತಿಳಿದುಕೊಂಡ. ಇರಪಾಪುರದಲ್ಲಿ ಗಂಡ-ಹೆಂಡಿರ ಜಗಳದಲ್ಲಿ ಮಧ್ಯ ಪ್ರವೇಶಿಸಿದ ಕು.ತಿ. ಆ ಹೆಣ್ಣುಮಗಳಿಗೆ ನನ್ ಮಾತು ಕೇಳು ಅಂದ. ಇವನ ಮಾತು ಕೇಳಿ ಇಷ್ಟಾಗಿದೆ. ಇನ್ನು ನಿನ್ನ ಮಾತು ಏನು ಕೇಳುವುದು ಎಂದು ಮತ್ತೆ ಗಂಡನ ಮೇಲೆ ಏರಿ ಹೋದಳು. ಅರೆ ಇದು ಆಗುವ ಕೆಲಸವಲ್ಲ ಎಂದು ಸುಮ್ಮನೇ ಬಂದ. ಅವತ್ತಿನಿಂದ ಹತ್ತು ಹರದಾರಿ ಗುಂಟ ಏನೇ ಕಾಂಟ್ರವರ್ಸಿ ಜಗಳ ಇದ್ದಾಗ ಮಧ್ಯೆ ಹೋಗಿ ನನ್ ಮಾತು ಕೇಳು ಅನ್ನುತ್ತಿದ್ದ. ಕೆಲವರು ಕೊಡುತ್ತಿದ್ದರು… ಇನ್ನೂ ಹಲವರು ನಿಮಪ್ಪನ ಮಾತೂ ಕೇಳುವುದಿಲ್ಲ ಎಂದು ಹೇಳಿ ಕಳುಹಿಸುತ್ತಿದ್ದರು. ಊರಲ್ಲಿ ಬಂದು ಅದನ್ನೇ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ. ಮದ್ರಾಮಣ್ಣನಿಗೆ ಒಂದೇ ಒಂದು ಮಾತು ನನ್ ಮಾತ್ ಕೇಳು ಅಂದೆ ಮರುದಿನವೇ ಸೈಟ್ ವಾಪಸ್ ಕೊಟ್ಟ. ಸೋದಿಮಾಮನಿಗೆ ನನ್ ಮಾತು ಕೇಳು ಅಂದೆ ರಷಿಯಾಗೆ ಹೋಗಿಬಂದ. ಸುಮಾರಣ್ಣನಿಗೆ ಹೀಗೆಯೇ ಅಂದೆ, ನನ್ನ ಮಾತು ಕೇಳಿದ. ಕೇಂದ್ರದಲ್ಲಿ ಮಂತ್ರಿಯಾದ ಎಂದು ಹೇಳುತ್ತಿದ್ದ. ಅಷ್ಟೊತ್ತಿಗಾಗಲೇ ಆಫ್‌ಮರ್ಡರ್ ಕೇಸಿನಲ್ಲಿ ವರ್ನಖ್ಯಾಡಾದ ಮೂವರನ್ನು ಹಿಡಿದುಕೊಂಡು ಹೋದ ಪೊಲೀಸರು ಚನ್ನಾಗಿ ರುಬ್ಬಿ ಯಾರ ಮಾತು ಕೇಳಿ ಹೀಗೆ ಮಾಡಿದಿರಿ ಎಂದು ಕೇಳಿದರು. ಸರ್ ಅವತ್ತು ಕು.ತಿ ಬಂದು ನನ್ ಮಾತು ಕೇಳಿ ಅಂದ. ಅವತ್ತೇ ರಾತ್ರಿ ಇದಾಯಿತು ಅಂದರು. ಓಹೋ ಇದರ ಹಿಂದೆ ಅವನಿದ್ದಾನೆ ಎಂದು ಅರ್ಥೈಸಿಕೊಂಡ ಪೊಲೀಸರು ಕುಂಟ್ತಿರುಪ್ತಿಯನ್ನು ಹಿಡಿದುಕೊಂಡು ಹೋದರು.